ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿ ಪದ್ಧತಿ ವಿನಾಶಕ್ಕೆ ಯುವಕರು ಮುಂದಾಗಲಿ

Last Updated 6 ಏಪ್ರಿಲ್ 2017, 10:02 IST
ಅಕ್ಷರ ಗಾತ್ರ


ತುಮಕೂರು: ‘ದೇಶವನ್ನು ಅಮಾನವೀಯಗೊಳಿಸಿರುವ ಜಾತಿ ಪದ್ಧತಿ ವಿನಾಶಕ್ಕೆ ಯುವಕರು ಮುಂದಾಗಬೇಕು’ ಎಂದು ಹಿರಿಯ ಸಾಹಿತಿ ಸಿದ್ದಲಿಂಗಯ್ಯ ಸಲಹೆ ನೀಡಿದರು.

ನಗರದಲ್ಲಿ ಬುಧವಾರ ತುಮಕೂರು ವಿಶ್ವವಿದ್ಯಾಲಯ ಕಲಾ ಕಾಲೇಜು ಹಮ್ಮಿಕೊಂಡಿದ್ದ ‘ಕಲಾಸಿರಿ– 2017’ ಜನಪದ ಪ್ರದರ್ಶನ ಕಲಾ ಮೇಳದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಜಾತಿ ಪದ್ಧತಿಯಿಂದ ಮೇಲ್ವರ್ಗ ಹಾಗೂ ಕೆಳವರ್ಗ ಎರಡಕ್ಕೂ ಸಮಾಧಾನವಿಲ್ಲ.  ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಎಲ್ಲ ಹಿರಿಯ ಧೀಮಂತ ನಾಯಕರು ಜಾತಿ ವಿನಾಶಕ್ಕೆ ಒತ್ತು ನೀಡಿದ್ದರು. ಅಲ್ಲದೇ, ಜಾತಿ ರಹಿತ  ಸಮಾಜ ಕಟ್ಟುವ ಆಸೆ ಇಟ್ಟುಕೊಂಡಿದ್ದರು. ಆದರೆ, ಇತ್ತೀಚೆಗೆ ಜಾತಿ ಮತ್ತು ಕೋಮು ಭಾವನೆ ಬೆಳೆಯುತ್ತಿರುವುದನ್ನು ನೋಡಿದರೆ ಆತಂಕವಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಬಸವಣ್ಣ ಅವರು 12ನೇ ಶತಮಾನದಲ್ಲಿ ಜಾತಿ ಪದ್ಧತಿ ಹೋಗಲಾಡಿಸಲು ಅಂತರ್ಜಾತಿ ವಿವಾಹಕ್ಕೆ ಪ್ರೋತ್ಸಾಹ ನೀಡಿದ್ದರು. ಆದರೆ ಅಂತರ್ಜಾತಿ ವಿವಾಹವಾದ ಮಕ್ಕಳಿಗೆ ತಮ್ಮ ತಂದೆ ತಾಯಂದಿರೇ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ತಮ್ಮ ಹೆಣ್ಣು ಮಕ್ಕಳನ್ನು ಕೊಲ್ಲುತ್ತಿದ್ದಾರೆ. ಆದ್ದರಿಂದ ಸರ್ಕಾರ ಮತ್ತು ಸಮಾಜ ಅಂತರ್ಜಾತಿ ವಿವಾಹಕ್ಕೆ ಹೆಚ್ಚು ಪ್ರೋತ್ಸಾಹ ನೀಡಬೇಕು’ ಎಂದು ತಿಳಿಸಿದರು.

‘ದಾರಿ ದೀಪವಾಗಿ ಅಳವಡಿಸಿಕೊಳ್ಳಬೇಕಿದ್ದ ಮೌಲ್ಯಗಳನ್ನು ಇಂದು ಕೈ ಬಿಟ್ಟಿದ್ದೇವೆ. ಸ್ವಾತಂತ್ರ್ಯ ಬಂದ ನಂತರ ಗಾಂಧೀಜಿ, ಅಂಬೇಡ್ಕರ್‌, ಲೋಹಿಯಾ ಅವರ ಚಿಂತನೆಗಳನ್ನು ಕೈಬಿಟ್ಟಿರುವುದು ದೊಡ್ಡ ದುರಂತ. ಮುಂದಿನ ದಿನಗಳಲ್ಲಾದರೂ ಜನರು ಜಾತಿಯನ್ನು ಮೀರಿ ಪ್ರಜಾಸತ್ತಾತ್ಮಕ ಭಾವವನ್ನು ಬೆಳೆಸಿಕೊಳ್ಳಬೇಕು’ ಎಂದು ತಿಳಿಸಿದರು.

‘ಮೂಢನಂಬಿಕೆಗಳ ವಿರುದ್ಧ ಹೋರಾಟ  ನಡೆಸಬೇಕಾದ ಪರಿಸ್ಥಿತಿ ಬಂದಿದೆ. ದೇವರು ಮತ್ತು ಧರ್ಮದ ಹೆಸರಿನಲ್ಲಿ ಶೋಷಣೆ ಮಾಡುವುದು ನಿಲ್ಲಬೇಕು’ ಎಂದು ಹೇಳಿದರು.

‘ಜನಪದ ಕಲೆಗೆ ವಿಶಿಷ್ಟ ಶಕ್ತಿ ಇದೆ. ಜನಪದರು ಶ್ರಮಿ ಜೀವಿಗಳು. ಜನಪದ ಕಲೆಗೆ ಜೀವಂತಿಕೆ ಹಾಗೂ ಆಕರ್ಷಣೆ ಇದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT