ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು ನಗರದಲ್ಲಿ ಹೆಚ್ಚಿದ ಮರಗಳ ಕಳವು

Last Updated 6 ಏಪ್ರಿಲ್ 2017, 10:42 IST
ಅಕ್ಷರ ಗಾತ್ರ

ತುಮಕೂರು: ‘ನಗರದ ರಸ್ತೆಗಳಲ್ಲಿ ಬೆಳೆದಿರುವ ಮರಗಳ ಕಳ್ಳತನ ಹೆಚ್ಚುತ್ತಿದೆ. ನಗರದ ಹಸಿರೀಕರಣ ಕಾಪಾಡಲು ಶಾಸಕರಿಗೂ ಜವಾಬ್ದಾರಿ ಇದೆ. ಶಾಸಕರು ಬುದ್ಧಿವಂತಾಗಿದ್ದರೂ ಮೌನ ವಹಿಸಿರುವುದು ಸರಿ ಅಲ್ಲ’ ಎಂದು ಬಿಜೆಪಿ ಅಭಿವೃದ್ಧಿ ರಾಜ್ಯ ಪ್ರಕೋಷ್ಠಕದ ಸಂಚಾಲಕ ಜಿ.ಎಸ್‌.ಬಸವರಾಜ್‌ ಕಿಡಿಕಾರಿದರು.

ಬುಧವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಸ್ತೆ ಬದಿಯ ಮರಗಳನ್ನು ಕಡಿಯಲು ಅರಣ್ಯ ಇಲಾಖೆಯಿಂದ ಅನುಮತಿ ಪಡೆಯಲಾಗುತ್ತಿದೆ. ಒಂದೆರಡು ಮರಗಳಿಗೆ ಅನುಮತಿ ಪಡೆದು ಏಳೆಂಟು ಮರಗಳನ್ನು ಕಡಿಯುತ್ತಿದ್ದಾರೆ. ಇದರಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ಕೈವಾಡವೂ ಇದೆ’ ಎಂದು ಆರೋಪಿಸಿದರು.

‘ನಗರದ ಎಚ್‌ಎಂಟಿ ಆವರಣದಲ್ಲಿರುವ ಬೃಹತ್ ಮರಗಳನ್ನು ಮರಗಳ್ಳರು ಕಡಿದಿದ್ದಾರೆ. ಇದರಲ್ಲಿ ಅಧಿಕಾರಿಗಳು ಶಾಮೀಲಾಗಿದ್ದಾರೆ. ಈ ಬಗ್ಗೆ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದರು.

ಸಂಭ್ರಮ: ಎಚ್‌ಎಂಟಿ ಜಾಗವನ್ನು ಇಸ್ರೋಗೆ ನೀಡಿದ ಕೇಂದ್ರ ಸರ್ಕಾರದ ಕ್ರಮವನ್ನು ಸ್ವಾಗತಿಸಿದ ಅವರು, ‘ಈ ಜಾಗವನ್ನು ಖಾಸಗಿ ಸಂಸ್ಥೆ/ ವ್ಯಕ್ತಿಗಳಿಗೆ ನೀಡದಂತೆ ಸಂಸದ ಬಿ.ಎಸ್‌.ಯಡಿಯೂರಪ್ಪ ಅವರ ಮೂಲಕ ಪ್ರಧಾನಿಗೆ ಪತ್ರ ಬರೆಸಿದ್ದೆ’ ಎಂದು ನೆನಪು ಮಾಡಿಕೊಂಡರು.

ಕೋ–ಸೆಝ್‌: ‘ದೇಶದಲ್ಲೆ ರಾಜ್ಯದಲ್ಲಿ ಅತಿ ಹೆಚ್ಚು ತೆಂಗು ಬೆಳೆಯಲಾಗುತ್ತಿದೆ. ತೆಂಗು ಮೌಲ್ಯವರ್ಧನೆ, ರಫ್ತು ಉದ್ದೇಶದಿಂದ ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಮಾರಶೆಟ್ಟಿಹಳ್ಳಿ ಬಳಿ ಕೋ– ಸೆಝ್‌ ( ತೆಂಗು ವಿಶೇಷ ಆರ್ಥಿಕ ವಲಯ) ಸ್ಥಾಪಿಸುವ ಬಗ್ಗೆ ರಾಜ್ಯ ಸರ್ಕಾರದ ತೋಟಗಾರಿಕೆ ಇಲಾಖೆ ಕಾರ್ಯದರ್ಶಿ ಎಂ.ಮಹೇಶ್ವರ್‌ ರಾವ್ ಅವರೊಂದಿಗೆ ಮಾತುಕತೆ ನಡೆಸಲಾಗಿದೆ. ಸಕಾರಾತ್ಮಕ ಸ್ಪಂದನೆಯೂ ಸಿಕ್ಕಿದೆ’ ಎಂದು ಹೇಳಿದರು.

‘ತಿನ್ನುವ ಕೊಬ್ಬರಿ ಉತ್ಪಾದಿಸುವಲ್ಲಿ ತುಮಕೂರು ಅಗ್ರಸ್ಥಾನದಲ್ಲಿದೆ. ತುಮಕೂರು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಉತ್ಪಾದಿಸುವ ತಿನ್ನುವ ಕೊಬ್ಬರಿ (ಬಾಲ್‌)  ಅತಿ ರುಚಿಯಾಗಿರುತ್ತದೆ. ಕೊಬ್ಬರಿ ರಫ್ತು ಉದ್ದೇಶದ ಕಾರಣ ಕೋ –ಸೆಝ್‌ ಅಗತ್ಯವಾಗಿದೆ’ ಎಂದು ಅಭಿಪ್ರಾಯಪಟ್ಟರು.

‘ ಜಿಲ್ಲಾಧಿಕಾರಿ, ತುಮಕೂರು ವಿ.ವಿ ಕುಲಪತಿ ತಾಂತ್ರಿಕ ವರದಿ ನೀಡಬೇಕಾಗಿದೆ. ಸೆಝ್‌ ಸ್ಥಾಪನೆಗೆ ಬೇಕಾಗುವ ಭೂಮಿಯನ್ನು ಜಿಲ್ಲಾಧಿಕಾರಿ ಶೀಘ್ರ ಗುರುತಿಸಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಬೇಕು’ ಎಂದು ಹೇಳಿದರು.
ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿರುವ ತೆಂಗು ಉತ್ಪಾದಕ ಕಂಪೆನಿಗಳು, ಒಕ್ಕೂಟಗಳು ಮತ್ತು ಸಂಘ–ಸಂಸ್ಥೆಗಳಿಗೆ ಹಣಕಾಸು ಮತ್ತು ತಾಂತ್ರಿಕ ನೆರವು ನೀಡಲು ಸರ್ಕಾರ ಅಪೆಕ್ಸ್‌ ಸಂಸ್ಥೆ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು

ಗೋಷ್ಠಿಯಲ್ಲಿ ‘ಅಭಿವೃದ್ಧಿ ಫೋರಂ’ನ ಕುಂದರನಹಳ್ಳಿ ರಮೇಶ್‌, ಜಿಲ್ಲಾ ಪಂಚಾಯಿತಿ ಸದಸ್ಯ ವೈ.ಎಚ್‌.ಹುಚ್ಚಯ್ಯ, ಬಿಜೆಪಿ ಜಿಲ್ಲಾ ಘಟಕದ ಕಾರ್ಯದರ್ಶಿ ರಂಗನಾಯ್ಕ್  ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT