ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೈಕ್ಷಣಿಕ ಸುಧಾರಣೆ: ಬಿಇಒಗೆ ನ್ಯೂಪಾ ಪ್ರಶಸ್ತಿ ಗರಿ

Last Updated 6 ಏಪ್ರಿಲ್ 2017, 11:16 IST
ಅಕ್ಷರ ಗಾತ್ರ

ಕೆಜಿಎಫ್‌: ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟರಾಮರೆಡ್ಡಿ ಅವರು ಶಿಕ್ಷಣ ಕ್ಷೇತ್ರದಲ್ಲಿ ನಡೆಸಿದ ಸುಧಾರಣೆ ಗುರುತಿಸಿ ನವದೆಹಲಿಯಲ್ಲಿ ‘ರಾಷ್ಟ್ರೀಯ ಶೈಕ್ಷಣಿಕ ಆಡಳಿತ ಮತ್ತು ಯೋಜನಾ ಸಂಸ್ಥೆ  (ನ್ಯೂಪಾ) ಸಂಸ್ಥೆ ಇತ್ತೀಚೆಗೆ ರಾಷ್ಟ್ರ ಮಟ್ಟದ ಪ್ರಶಸ್ತಿ ನೀಡಿದೆ. ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್‌ ಜಾವಡೇಕರ್‌ ಪ್ರಶಸ್ತಿ ಪ್ರದಾನ ಮಾಡಿದರು.

ಶೈಕ್ಷಣಿಕ ವಿಷಯಗಳ ಸುಧಾರಣೆಗೆ ಸಂಬಂಧಿಸಿದಂತೆ ನ್ಯೂಪಾ ಸಂಸ್ಥೆ ನವದೆಹಲಿಯಲ್ಲಿ ಸಂದರ್ಶನ ಮತ್ತು ಪ್ರಾತ್ಯಕ್ಷಿಕೆ ಪ್ರದರ್ಶನ ಹಮ್ಮಿಕೊಂಡಿತ್ತು. 24 ರಾಜ್ಯಗಳ ಶಿಕ್ಷಣ ಇಲಾಖೆಯ ಅಧಿಕಾರಿಗಳು ಇದರಲ್ಲಿ ಭಾಗವಹಿಸಿದ್ದರು. ಇವರಲ್ಲಿ 78 ಮಂದಿಯನ್ನು ಪ್ರಾತ್ಯಕ್ಷಿಕೆ ಪ್ರದರ್ಶನಕ್ಕೆ ಗುರುತಿಸಲಾ ಯಿತು. ಇವರು ಮಾನವ ಸಂಪನ್ಮೂಲ ಇಲಾಖೆಯ ಮೂವರು ಹಿರಿಯ ಶಿಕ್ಷಣ ತಜ್ಞರ ಎದುರು  ತಮ್ಮ ಸಾಧನೆ ಮತ್ತು ಸೃಜನಶೀಲತೆ ಪ್ರದರ್ಶಿಸಬೇಕಿತ್ತು. ಅಂತಿಮ ಸುತ್ತಿಗೆ 23 ಮಂದಿ ಶಿಕ್ಷಣ ಅಧಿಕಾರಿಗಳು ಆಯ್ಕೆಯಾದರು. ಇವರಲ್ಲಿ ವೆಂಕಟರಾಮರೆಡ್ಡಿ ಕೂಡ ಒಬ್ಬರು.

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಶಿಕ್ಷಣ ಮಟ್ಟದ ಸುಧಾರಣೆ ಮತ್ತು ಆ ದಿಸೆಯಲ್ಲಿ ಕೈಗೊಂಡ ಪ್ರಯತ್ನ ಕುರಿತು ವೆಂಕಟ ರಾಮರೆಡ್ಡಿ ನ್ಯೂಪಾ ಸಮ್ಮೇಳನದಲ್ಲಿ ಪ್ರಾತ್ಯಕ್ಷಿಕೆಯನ್ನು ಅಂಕಿ ಅಂಶಗಳ ಸಮೇತ ವಿವರಿಸಿದ್ದಾರೆ.

ಜನಪ್ರಿಯ ಬಿಇಒ: ವೆಂಕಟರಾಮ ರೆಡ್ಡಿ ಅವರು ಮಾಲೂರು ತಾಲ್ಲೂಕು ಬಿಇಒ ಆಗಿದ್ದ ಸಮಯದಲ್ಲಿ ಚಿಕ್ಕತಿರುಪತಿ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ತಳಮಟ್ಟದಲ್ಲಿ ಇತ್ತು. ಆ ಫಲಿತಾಂಶ ಸುಧಾರಣೆಗಾಗಿ ವೆಂಕಟರಾಮರೆಡ್ಡಿ ಅವಿರತವಾಗಿ ಶ್ರಮಿಸಿದ್ದರು. ಅಲ್ಲದೆ ಶೈಕ್ಷಣಿಕ ಸುಧಾರಣೆಗಳ ಕುರಿತು ಅವರು ಕೈಗೊಂಡ ನಿಲುವು ಸಾರ್ವಜನಿಕರಲ್ಲಿ ಮೆಚ್ಚುಗೆಗೆ ಪಾತ್ರವಾಗಿತ್ತು. ಮಾಲೂರು ತಾಲ್ಲೂಕಿನಲ್ಲಿ ಅವರು ಕೆಲಸ ನಿರ್ವಹಿಸುತ್ತಿದ್ದ ವೇಳೆ ಮಾಡಿದ ಸಾಧನೆ ಅವರನ್ನು ನವ ದೆಹಲಿಯವರೆಗೂ ಕರೆದು ಕೊಂಡು ಹೋಗಿದೆ.

ಸಮುದಾಯದ ಸಹಕಾರದಿಂದ ಹೊಸ ಶಾಲಾ ಕಟ್ಟಡ ನಿರ್ಮಾಣ, ಶಾಲೆ ಬಿಟ್ಟ ಮಕ್ಕಳ ಸಮೀಕ್ಷೆ, ದಾಖಲೆ ಪ್ರಮಾಣದ ಮಕ್ಕಳನ್ನು ಮರಳಿ ಶಾಲೆಗೆ ಕರೆತಂದಿದ್ದು, ಸ್ವಯಂ ಸೇವಾ ಸಂಘದ ಸಹಕಾರದಿಂದ ಹೊಸ ಶಾಲಾ ಕೊಠಡಿಗಳ ನಿರ್ಮಾಣ, ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆ ಸೇರಿದಂತೆ ಹಲವು ಕೆಲಸಗಳು ಅವರ ವೃತ್ತಿಯ ಪ್ರಮುಖ ಹೆಜ್ಜೆ ಗುರುತುಗಳಾಗಿವೆ.

ವಿದ್ಯಾರ್ಥಿಯನ್ನು ಆತನ ಮನೆ ಭಾಷೆಯಲ್ಲಿಯೇ ಮಾತನಾಡಿಸಿ, ಆತನ ದೌರ್ಬಲ್ಯ ಅರಿತುಕೊಳ್ಳಬೇಕು. ಅದಕ್ಕೆ ತಕ್ಕಂತೆ ಬೋಧಿಸಬೇಕು ಎನ್ನುವುದು ವೆಂಕಟರಾಮರೆಡ್ಡಿ ಅವರ ನಿಲುವು. ಅಧಿಕಾರಿ ಮತ್ತು ವಿದ್ಯಾರ್ಥಿ ನಡುವಿನ ಆತ್ಮೀಯ ಸಂಭಾಷಣೆ ಸಾಕಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎನ್ನುವ ಅಭಿಪ್ರಾಯ ಅವರದ್ದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT