ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಫಾ: ಜನಪ್ರಿಯತೆಗೆ ಮಣೆ!

Last Updated 6 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ
ದಕ್ಷಿಣ ಭಾರತ ಚಿತ್ರರಂಗದ ನಟ–ನಟಿಯರು ಮತ್ತು ದಿಗ್ಗಜರ ಸಂಗಮ ಅದು. ತಾರೆಯರ ನೃತ್ಯ, ಅಭಿಮಾನಿಗಳ ಚಪ್ಪಾಳೆ–ಶಿಳ್ಳೆ ಬೆರೆತಿದ್ದ 2ನೇ ವರ್ಷದ ‘ಐಫಾ’ (ಐಐಎಫ್‌ಎ: ಅಂತರರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡೆಮಿ) ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಹೈದರಾಬಾದ್ ಸಾಕ್ಷಿಯಾಯಿತು.
 
ಬಣ್ಣದ ದೀಪಗಳಿಂದ ಜಗಮಗಿಸುತ್ತಿದ್ದ ವೇದಿಕೆಯಲ್ಲಿ–ಯುಗಾದಿ ಹಬ್ಬದ ಸಂದರ್ಭದಲ್ಲಿ–ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ಸಿನಿಮಾಗಳಿಗೆ ಹದಿನಾಲ್ಕು ವಿಭಾಗಗಳಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
 
ಕನ್ನಡದ ‘ಕಿರಿಕ್ ಪಾರ್ಟಿ’ ತಂಡ, ಅತ್ಯುತ್ತಮ ಚಿತ್ರ ಸೇರಿ ಒಟ್ಟು 9 ವಿಭಾಗಗಳಲ್ಲಿ ಪ್ರಶಸ್ತಿ ತನ್ನದಾಗಿಸಿಕೊಂಡಿತು. ರಕ್ಷಿತ್ ಶೆಟ್ಟಿ 4 ಪ್ರಶಸ್ತಿಗಳಿಗೆ (ನಟ, ಪೋಷಕ ನಟ, ನೃತ್ಯ ನಿರ್ದೇಶನ ಹಾಗೂ ಸಾಹಿತ್ಯ) ಭಾಜನರಾದರು.

ಉಳಿದಂತೆ, ‘ಯೂ ಟರ್ನ್’ ಚಿತ್ರಕ್ಕಾಗಿ ನಿರ್ದೇಶನ ಮತ್ತು ಕಥೆ ವಿಭಾಗದ ಪ್ರಶಸ್ತಿ ಪವನ್‌ ಕುಮಾರ್‌ ಅವರದಾಯಿತು. ಹಿರಿಯ ನಟ ಹಾಗೂ ನಿರ್ಮಾಪಕ ದ್ವಾರಕೀಶ್ ಅವರಿಗೆ ‘ಭಾರತೀಯ ಚಲನಚಿತ್ರರಂಗಕ್ಕೆ ನೀಡಿದ ಅಭೂತಪೂರ್ವ ಕೊಡುಗೆ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪಾರೂಲ್ ಯಾದವ್ ಅತ್ಯುತ್ತಮ ನಟಿ ಹಾಗೂ ಬಿ. ಅಜನೀಶ್ ಲೋಕನಾಥ್‌ಗೆ ಸಂಗೀತ ನಿರ್ದೇಶನ ಪ್ರಶಸ್ತಿ ಸಿಕ್ಕಿತು.
 
ನಟ ರವಿಚಂದ್ರನ್ ಅವರು ತಮ್ಮದೇ ಚಿತ್ರದ ಹಾಡುಗಳಿಗೆ ಹೆಜ್ಜೆ ಹಾಕುವ ಮೂಲಕ ಪ್ರೇಕ್ಷಕರನ್ನು ರಂಜಿಸಿದರು. ನಟಿಯರಾದ ರಚಿತಾ ರಾಮ್, ಮೇಘನಾ ಗಾಂವ್ಕರ್, ಲಕ್ಷ್ಮೀ ರೈ, ನಿಕ್ಕಿ ಗಲ್ರಾನಿ, ರಾಶಿ ಖನ್ನಾ, ರಿತಿಕಾ ಸಿಂಗ್, ಅಖಿಲ್, ಸಾಯಿ ಧರಂ ತೇಜ್ ಮುಂತಾದವರು ಹಾಡುಗಳಿಗೆ ಹೆಜ್ಜೆ ಹಾಕಿದರು.
 
‘ಕಿರಿಕ್ ಪಾರ್ಟಿ’ ಚಿತ್ರತಂಡಕ್ಕೆ ಅತ್ಯುತ್ತಮ ಚಿತ್ರ ಪ್ರಶಸ್ತಿ ನೀಡಿದ ತೆಲುಗು ನಟ ಜೂನಿಯರ್ ಎನ್‌ಟಿಆರ್‌ (ನಂದಮೂರಿ ತಾರಕ ರಾಮರಾವ್) – ‘ನನ್ನ ತಾಯಿ ಕರ್ನಾಟಕದ ಕರಾವಳಿಯ ಕುಂದಾಪುರದವರು. ನನಗೂ ಕನ್ನಡ ಮಾತನಾಡಲು ಬರುತ್ತದೆ’ ಎಂದು ಕನ್ನಡದಲ್ಲೇ ಮಾತನಾಡಿದರು. ಪುನೀತ್ ರಾಜಕುಮಾರ್ ನಟನೆಯ ‘ಚಕ್ರವ್ಯೂಹ’ ಚಿತ್ರಕ್ಕಾಗಿ ತಾವು ಹಾಡಿದ ‘ಗೆಳೆಯಾ ಗೆಳೆಯಾ’ ಹಾಡಿನ ಸಾಲುಗಳನ್ನು ಗುನುಗಿದರು.
 
ಕನ್ನಡ ಚಿತ್ರರಂಗದ ಶಾನ್ವಿ ಶ್ರೀವಾಸ್ತವ್, ರಶ್ಮಿಕಾ ಮಂದಣ್ಣ, ಮಾನ್ವಿತಾ ಹರೀಶ್, ಶುಭ್ರಾ ಅಯ್ಯಪ್ಪ, ಐಂದ್ರಿತಾ ರೇ, ದಿಗಂತ್, ನಭಾ ನಟೇಶ್, ಕಾರುಣ್ಯ ರಾಮ್, ಶ್ರೀನಾಥ್, ದೇವರಾಜ್, ಪ್ರಜ್ವಲ್ ದೇವರಾಜ್, ಆರ್‌ಜೆ ರೋಹಿತ್, ತಿಲಕ್ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿದ್ದರು.
 
ಸಮಂತಾ ರುತ್ ಪ್ರಭು, ರಾಕುಲ್ ಪ್ರೀತ್‌ ಸಿಂಗ್, ಪ್ರಗ್ಯಾ ಜೈಸ್ವಾಲ್, ಶ್ರೀಯಾ ಶರಣ್, ಅಧಿತಿ ರಾವ್, ಪ್ರಣೀತಾ, ಶ್ರೀದೇವಿ, ಜಯಪ್ರದಾ, ಏಂಜೆಲಾ ಕ್ರಿಸ್ಲಿಂಜ್‌ಕಿ, ದೇವರಾಜ್, ಶ್ರೀನಾಥ್, ವಿಕ್ಟರಿ ವೆಂಕಟೇಶ್, ಜಯಂ ರವಿ ಸೇರಿದಂತೆ ದಕ್ಷಿಣ ಭಾರತದ ಖ್ಯಾತ ನಟರು ಸಭಾಂಗಣ ಅಲಂಕರಿಸಿದ್ದರು.
 
ಕನ್ನಡ ಚಿತ್ರರಂಗ ವಿಭಾಗದ ಪ್ರಶಸ್ತಿ ಪ್ರದಾನ ಸಮಾರಂಭದ ನಿರೂಪಣೆಯನ್ನು ನಟಿ ಮೇಘನಾ ಗಾಂವ್ಕರ್ ಹಾಗೂ ನಿರೂಪಕ ಅಕುಲ್ ಬಾಲಾಜಿ ನಡೆಸಿಕೊಟ್ಟರು.
 
ಶ್ರದ್ಧಾಗೆ ನಿರಾಸೆ
‘ಯೂ ಟರ್ನ್‌’ನಲ್ಲಿನ ನಟನೆಯ ಮೂಲಕ ಸಹೃದಯರ ಗಮನ ಸೆಳೆದಿದ್ದ ನಟಿ ಶ್ರದ್ಧಾ ಶ್ರೀನಾಥ್‌ಗೆ ಕನ್ನಡದ ಅತ್ಯುತ್ತಮ ನಟಿ ಪ್ರಶಸ್ತಿ ಸಿಗಲಿದೆ ಎಂಬ ಮಾತುಗಳು ಕೇಳಿಬರುತ್ತಿದ್ದವು. ಆದರೆ, ‘ಕಿಲ್ಲಿಂಗ್ ವೀರಪ್ಪನ್‌’ ಚಿತ್ರದ ನಟನೆಗಾಗಿ ಪಾರೂಲ್ ಯಾದವ್‌ಗೆ ಆ ಪ್ರಶಸ್ತಿ ಒಲಿಯಿತು.

2016ರಲ್ಲಿ ಗಮನ ಸೆಳೆದಿದ್ದ ‘ಕರ್ವ’ ಚಿತ್ರತಂಡ ಹಲವು ವಿಭಾಗಗಳ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡಿದ್ದರೂ, ಒಂದೇ ಒಂದು ವಿಭಾಗದ ಪ್ರಶಸ್ತಿ ಸಿಗಲಿಲ್ಲ. ಇದರಿಂದಾಗಿ, ತಮ್ಮ ಚಿತ್ರತಂಡದೊಂದಿಗೆ ಸಮಾರಂಭಕ್ಕೆ ಬಂದಿದ್ದ ನಿರ್ದೇಶಕ ನವನೀತ್ ಮತ್ತು ತಂಡದವರಿಗೆ ನಿರಾಸೆಯಾಯಿತು.
 
ಅತ್ಯುತ್ತಮ ನಟ ವಿಭಾಗದ ಪ್ರಶಸ್ತಿಗೆ ನಾಮನಿರ್ದೇಶನಗೊಂಡವರ ಸಾಲಿನಲ್ಲಿ ‘ತಿಥಿ’ ಚಿತ್ರದ ಚನ್ನೇಗೌಡ (ಗಡ್ಡಪ್ಪ) ಕೂಡ ಇದ್ದರು. ಆದರೆ, ಅಂತಿಮವಾಗಿ ಆ ಪ್ರಶಸ್ತಿ ‘ಕಿರಿಕ್‌ ಪಾರ್ಟಿ’ ಚಿತ್ರಕ್ಕಾಗಿ ರಕ್ಷಿತ್ ಶೆಟ್ಟಿ ಪಾಲಾಯಿತು.
 
‘ರಾಮ ರಾಮಾ ರೇ...’ ಸದ್ದಿಲ್ಲ
ಕಳೆದ ವರ್ಷ ಕನ್ನಡದಲ್ಲಿ ಮೂಡಿಬಂದ ಅತ್ಯುತ್ತಮ ಚಿತ್ರಗಳ ಪೈಕಿ, ‘ರಾಮಾ ರಾಮಾ ರೇ...’ ಕೂಡ ಒಂದು. ಆದರೆ, ಪ್ರಶಸ್ತಿಗೆ ಸಂಬಂಧಿಸಿದ ಯಾವುದೇ ಹಂತದಲ್ಲೂ ಆ ಚಿತ್ರದ ಹೆಸರು ಕೇಳಿಬರಲಿಲ್ಲ.
(ಲೇಖಕರು ‘ಐಐಎಫ್‌ಎ’ ಆಹ್ವಾನದ ಮೇರೆಗೆ ಹೈದರಾಬಾದ್‌ಗೆ ಭೇಟಿ ನೀಡಿದ್ದರು)
 
ಮಲಯಾಳಂನ ‘ಚಾರ್ಲಿ’ಗೆ ಆರು ಪ್ರಶಸ್ತಿ
ಮಲಯಾಳಂ ಚಿತ್ರರಂಗದ ವಿಭಾಗದ ಪ್ರಶಸ್ತಿಗಳ ಪೈಕಿ, ಸೂಪರ್ ಹಿಟ್ ಚಿತ್ರ ‘ಚಾರ್ಲಿ’ ಚಿತ್ರ ಆರು ಪ್ರಶಸ್ತಿಗಳನ್ನು ಬಾಚಿಕೊಂಡಿತು. ಅತ್ಯುತ್ತಮ ಕಥೆ (ಆರ್‌. ಉನ್ನಿ), ನಿರ್ದೇಶನ (ಮಾರ್ಟಿನ್ ಪ್ರಕಟ್), ನಟ (ದುಲ್ಕರ್ ಸಲ್ಮಾನ್), ಪೋಷಕ ಪಾತ್ರ (ಅಪರ್ಣಾ ಗೋಪಿನಾಥ್), ಹಾಸ್ಯ ನಟ (ಶೋಬಿನ್ ಶಬೀರ್) ಹಾಗೂ ಸಂಗೀತ ನಿರ್ದೇಶನ (ಗೋಪಿ ಸುಂದರ್) ವಿಭಾಗದ ಪ್ರಶಸ್ತಿಗಳು ‘ಚಾರ್ಲಿ’ ಪಾಲಾದವು.

ತೆಲುಗಿನಲ್ಲಿ ‘ಜನತಾ ಗ್ಯಾರೇಜ್‌’ ಅಬ್ಬರ
ತೆಲುಗಿನ ‘ಜನತಾ ಗ್ಯಾರೇಜ್’– ಅತ್ಯುತ್ತಮ ಚಿತ್ರ ಸೇರಿದಂತೆ ತೆಲುಗು ಚಿತ್ರರಂಗ ವಿಭಾಗದ ಪೈಕಿ ಆರು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿತು. ಅತ್ಯುತ್ತಮ ನಿರ್ದೇಶನ (ಕೊರಟಾಲ ಶಿವ), ನಟ (ಜೂನಿಯರ್ ಎನ್‌ಟಿಆರ್‌), ಸಾಹಿತ್ಯ (ರಾಮಜೋಗಯ್ಯ ಶಾಸ್ತ್ರಿ), ಸಂಗೀತ ನಿರ್ದೇಶನ (ದೇವಿಶ್ರೀ ಪ್ರಸಾದ್) ಹಾಗೂ ಹಿನ್ನೆಲೆ ಗಾಯಕಿ (ಗೀತಾ ಮಾಧುರಿ) ವಿಭಾಗದ ಪ್ರಶಸ್ತಿಗಳನ್ನು ಈ ಚಿತ್ರ ಮುಡಿಗೇರಿಸಿಕೊಂಡಿತು.

‘ಇರುದಿ ಸುಟ್ರು’ ಮತ್ತು ‘ತೇರಿಗೆ’ ಪ್ರಶಸ್ತಿ ಯುಗಳ
‘ಇರುದಿ ಸುಟ್ರು’ ಹಾಗೂ ‘ತೇರಿ’ ಚಿತ್ರಗಳು ತಮಿಳು ಚಿತ್ರರಂಗದ ತಲಾ ಮೂರು ವಿಭಾಗದ ಪ್ರಶಸ್ತಿಗಳಿಗೆ ಭಾಜನವಾದವು. ‘ಇರುದಿ ಸುಟ್ರು’  ಅತ್ಯುತ್ತಮ ಚಿತ್ರ, ಅದೇ ಚಿತ್ರದ ನಟನೆಗಾಗಿ ಮಾಧವನ್‌ಗೆ ಅತ್ಯುತ್ತಮ ನಟ ಹಾಗೂ ನಟಿ ಪ್ರಶಸ್ತಿಗೆ ರಿಕ್ತಾ ಸಿಂಗ್ ಪಾತ್ರರಾದರು.

‘ತೇರಿ’ ಚಿತ್ರಕ್ಕಾಗಿ ಅತ್ಲಿಗೆ ಅತ್ಯುತ್ತಮ ನಿರ್ದೇಶನ, ಖಳನಟ ಪ್ರಶಸ್ತಿಗೆ ಮಹೇಂದ್ರನ್ ಹಾಗೂ ಪೋಷಕ ನಟಿ ಪ್ರಶಸ್ತಿ ನಟಿ ಮೀನಾ ಪುತ್ರಿ ಬೇಬಿ ನೈನಿಕಾಗೆ ದಕ್ಕಿತು. ‘ತೋಜ’ ಚಿತ್ರದ ನಟನೆಗಾಗಿ ನಾಗಾರ್ಜುನ ಅಕ್ಕಿನೇನಿಗೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಸಿಕ್ಕಿತು. ಸಂಗೀತ ನಿರ್ದೇಶಕ ಎ.ಆರ್‌. ರೆಹಮಾನ್ ಅತ್ಯುತ್ತಮ ಸಂಗೀತ ನಿರ್ದೇಶನ (ಅಚ್ಚಂ ಎಂಬದು ಮದಮೈಯಾದ) ಪ್ರಶಸ್ತಿಗೆ ಪಾತ್ರರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT