ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ಲ್ಯಾಟ್ ಖರೀದಿಯೂ… ರೇರಾ ಕಾಯ್ದೆಯೂ…

Last Updated 6 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ
ಮಹಾನಗರಗಳಲ್ಲಿ ಮನೆ ಕೊಳ್ಳುವುದು ಸವಾಲಿನ ಕೆಲಸವೇ ಸರಿ. ನಿವೇಶನ, ಫ್ಲ್ಯಾಟ್, ವಿಲ್ಲಾ ಖರೀದಿಸುವಾಗ ಎಚ್ಚರಿಕೆ ವಹಿಸುವುದು ಅಗತ್ಯ.
ರಿಯಲ್ ಎಸ್ಟೇಟ್ ಉದ್ಯಮದಲ್ಲಿ ವಂಚನೆ ಪ್ರಕರಣಗಳು ದಾಖಲಾಗುತ್ತಿರುವುದು ಹೊಸದೇನಲ್ಲ.

ಇದನ್ನು ಗಮನಿಸಿದ ಕೇಂದ್ರ ಸರ್ಕಾರ ಅಕ್ರಮ ಅಥವಾ ವಂಚನೆ ತಡೆಯಲು ‘ರಿಯಲ್ ಎಸ್ಟೇಟ್ ನಿಯಂತ್ರಣ ಮತ್ತು ಅಭಿವೃದ್ಧಿ ಕಾಯ್ದೆ’ಯನ್ನು (ರೇರಾ) ಜಾರಿಗೆ ತಂದಿದೆಯಾದರೂ ಇದು ಪರಿಣಾಮಕಾರಿಯಾಗಿ ಜಾರಿಯಾಗುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿವೆ.
 
ಈ ಕಾಯ್ದೆಯ ಕೆಲವು ಮುಖ್ಯ ಅಂಶಗಳನ್ನು ಗಮನಿಸೋಣ. ಮೊದಲನೆಯದಾಗಿ, ಅಪಾರ್ಟ್‌ಮೆಂಟ್ ನಿರ್ಮಾಣ ಅಥವಾ ನಿವೇಶನ ಅಭಿವೃದ್ಧಿಗೆ ಸಂಬಂಧಿಸಿದ ಇಲಾಖೆಗಳಿಂದ ಅನುಮತಿ ಪಡೆದಿರಬೇಕು. ಈ ಬಗ್ಗೆ ಗ್ರಾಹಕರಿಗೆ ಸಂಪೂರ್ಣ ಮಾಹಿತಿ ನೀಡಿದ ಬಳಿಕವೇ ಯೋಜನೆಯನ್ನು ಆರಂಭಿಸಬೇಕು. 
 
ಎರಡನೆಯದಾಗಿ, ಬಿಲ್ಡರ್‌ಗಳು ವಸತಿ ಯೋಜನೆಗಾಗಿ ಗ್ರಾಹಕರಿಂದ ಪಡೆದ ಮೊತ್ತದಲ್ಲಿ  ಶೇ. 70 ರಷ್ಟು ಹಣವನ್ನು ಉದ್ದೇಶಿತ ಯೋಜನೆಯ ಹೆಸರಿನಲ್ಲಿ ಬ್ಯಾಂಕ್‌ಗಳಲ್ಲಿ ಠೇವಣಿ ಇರಿಸಬೇಕು, ಆ ಹಣವನ್ನು ಅದೇ ಯೋಜನೆಗೆ ಮಾತ್ರ ಬಳಸಬೇಕು. 
 
ಮೂರನೆಯದಾಗಿ, ಗ್ರಾಹಕರ ಒಪ್ಪಿಗೆ ಇಲ್ಲದೇ ಉದ್ದೇಶಿತ ಯೋಜನೆಯ ನಕ್ಷೆ ಅಥವಾ ವಿನ್ಯಾಸವನ್ನು ಬದಲಾವಣೆ ಮಾಡುವಂತಿಲ್ಲ. ಗೃಹ ನಿರ್ಮಾಣ ಯೋಜನೆ ವಿಳಂಬವಾದರೆ, ಅಂದರೆ ಒಪ್ಪಂದದ ಪ್ರಕಾರ ನಿಗದಿತ ತಿಂಗಳಲ್ಲಿ ಹಸ್ತಾಂತರ ಮಾಡದೇ ಹೋದರೆ ಬಿಲ್ಡರ್‌ಗಳು ಗ್ರಾಹಕರ ಹೂಡಿಕೆಯ ಹಣಕ್ಕೆ ಬಡ್ಡಿ ನೀಡಬೇಕು.
 
ಆದರೆ ಕಾಯ್ದೆಯ ಜಾರಿಯಲ್ಲಿ ಹಲವು ಲೋಪಗಳಾಗುತ್ತಿವೆ. ಅದನ್ನು ರಿಯಾಲ್ಟಿ ಉದ್ಯಮದ ವಿಶ್ಲೇಷಕ ದೀಪಕ್ ಮಿಶ್ರ ವಿವರಿಸುವುದು ಹೀಗೆ...
‘ಬಿಲ್ಡರ್‌ಗಳು ಉದ್ದೇಶಿತ ವಸತಿ ಯೋಜನೆಗೆ ಸಂಬಂಧಪಟ್ಟ ಇಲಾಖೆ ಅಥವಾ ಸ್ಥಳೀಯ ಸಂಸ್ಥೆಗಳ ಮೂಲಕ ಎನ್ಓಸಿಯನ್ನು ಪಡೆದ ಮೇಲೆ ಗ್ರಾಹಕರಿಂದ ಹಣ ಪಡೆದು ಕಾಮಗಾರಿ ಆರಂಭಿಸುತ್ತಾರೆ.

12 ಅಥವಾ 18 ತಿಂಗಳ ಒಳಗಾಗಿ ಫ್ಲ್ಯಾಟ್‌ ಹಸ್ತಾಂತರ ಮಾಡುವುದಾಗಿ ಒಪ್ಪಂದ ಮಾಡಿಕೊಂಡು ಶೇ.70 ರಷ್ಟು ಕಾಮಗಾರಿ ಮುಗಿಸಿಬಿಡುತ್ತಾರೆ. ನಂತರ ಯಾವುದೇ ಸಮಸ್ಯೆಗಳು ಎದುರಾದರೂ ಸರ್ಕಾರದ ಮೇಲೆ ಹೊರಿಸುತ್ತಾರೆ.

‘ಸರ್ಕಾರವು ವಿದ್ಯುತ್, ನೀರು, ಚರಂಡಿ, ಪಾರ್ಕಿಂಗ್ ಪರವಾನಗಿ ನೀಡಿಲ್ಲ, ಸರ್ಕಾರದಿಂದ ಪರವಾನಗಿ ಪತ್ರ ಬಂದ ಕೂಡಲೇ ಉಳಿದ ಕಾಮಗಾರಿ ಪೂರ್ಣಗೊಳಿಸಿ ಫ್ಯ್ಲಾಟ್ ಕೊಡುತ್ತೇವೆ’ ಎಂದು ಸಬೂಬು ಹೇಳುತ್ತಾರೆ.
 
‘ರೇರಾ ಕಾಯ್ದೆಯ ಅನ್ವಯದಂತೆ ಕಳೆದೊಂದು ವರ್ಷದಲ್ಲಿ ವಿಳಂಬಕ್ಕಾಗಿ ಗ್ರಾಹಕರಿಗೆ ಬಡ್ಡಿ ನೀಡಿರುವ ಒಂದು ಉದಾಹರಣೆ ಕೂಡ ನನ್ನ ಗಮನಕ್ಕೆ ಬಂದಿಲ್ಲ.
 
‘ಉದ್ಯಮ ಅಥವಾ ಮಾರುಕಟ್ಟೆಯ ಏರಿಳಿತದಿಂದ ಅನೇಕ ಸಂದರ್ಭಗಳಲ್ಲಿ ಸಣ್ಣ ಮತ್ತು ಮಧ್ಯಮ ದರ್ಜೆಯ ಬಿಲ್ಡರ್ ಅಥವಾ ಡೆವಲಪರ್ಸ್‌ಗಳು ಹಣಕಾಸು ಮುಗ್ಗಟ್ಟಿಗೆ ಸಿಲುಕುತ್ತಾರೆ. ಇಂತಹ ಸಂದರ್ಭಗಳಲ್ಲಿ ಗ್ರಾಹಕರು ವಂಚನೆಗೆ ಒಳಗಾಗುತ್ತಾರೆ. ಇದಕ್ಕಾಗಿ ರೇರಾ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಮತ್ತಷ್ಟು ಬಲಿಷ್ಠಗೊಳಿಸಬೇಕಿದೆ.
 
‘ಹಸ್ತಾಂತರಿಸುವಲ್ಲಿ ವಿಳಂಬವಾದರೆ ಅಥವಾ ವಂಚನೆ ಮಾಡಿದರೆ ಭಾರೀ ಪ್ರಮಾಣದಲ್ಲಿ ದಂಡ ವಸೂಲಿ ಹಾಗೂ ಜೈಲು ಶಿಕ್ಷೆ ನೀಡುವಂತಹ ಕಠಿಣ ಕಾನೂನು ಜಾರಿಯಾದರೆ ಮಾತ್ರ ರಿಯಾಲ್ಟಿ ಉದ್ಯಮದಲ್ಲಿ ಪಾರದರ್ಶಕತೆ ಉಳಿಯುತ್ತದೆ’.
 
ವರ್ಷ ಕಳೆದರೂ ಫ್ಲ್ಯಾಟ್ ನೀಡಿಲ್ಲ
ನಾಗರಭಾವಿ ನಿವಾಸಿ ಚಂದ್ರಶೇಖರ್ ಎಂಬುವವರು ನಿರ್ಮಾಣ ಹಂತದ ಅಪಾರ್ಟ್‌ಮೆಂಟ್‌ ಒಂದರಲ್ಲಿ ಮುಂಗಡವಾಗಿ ಫ್ಲ್ಯಾಟ್ ಬುಕ್ ಮಾಡಿದ್ದರು. 2017ರ ಜನವರಿ ತಿಂಗಳಲ್ಲಿ ಫ್ಲ್ಯಾಟ್ ನೀಡುವುದಾಗಿ ಬಿಲ್ಡರ್ ಹೇಳಿದ್ದರು.

ಆದರೆ ವಿವಿಧ ಕಾರಣಗಳ ನೆಪವೊಡ್ಡಿ ಇಲ್ಲಿಯವರೆಗೂ ಫ್ಲ್ಯಾಟ್ ಕೊಟ್ಟಿಲ್ಲ. ಮುಂಬುರುವ ದಸರಾ ವೇಳೆಗೆ ನೀಡುವುದಾಗಿ ಮರು ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಚಂದ್ರಶೇಖರ್ ಅಳಲು ತೋಡಿಕೊಳ್ಳುತ್ತಾರೆ. ನಮಗೆ ಮೋಸ ಮಾಡದಂತೆ ಫ್ಲ್ಯಾಟ್ ನೀಡಿದರೆ ಸಾಕು ಎನ್ನುವ ನಿರೀಕ್ಷೆಯಲ್ಲಿದ್ದಾರೆ ಅವರು.
 
ಮುಂಬೈ ಮೂಲದ ಗ್ರೀನ್ ಕಂಟ್ರಿ ರಿಯಲ್ ಎಸ್ಟೇಟ್ ಕಂಪೆನಿ ಬೆಂಗಳೂರಿನಲ್ಲೂ ಹಲವಾರು ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಕೆಲವನ್ನು ಪೂರ್ಣಗೊಳಿಸಿ ಗ್ರಾಹಕರಿಗೆ ನಿಗದಿತ ವೇಳೆಗೆ ಹಸ್ತಾಂತರಿಸಿದೆ. 
 
ಈ ಕಂಪೆನಿಯ ಮಾರುಕಟ್ಟೆ ವಿಭಾಗದ ವಿಭಾ ಶರ್ಮಾ ಅವರು ಹೇಳುವಂತೆ, ‘ರೇರಾ ಕಾಯ್ದೆಯಿಂದ ರಿಯಾಲ್ಟಿ ಉದ್ಯಮದಲ್ಲಿ ಗ್ರಾಹಕರಿಗೆ ಬಲ ಸಿಕ್ಕಂತಾಗಿದೆ. ವಿಳಂಬ ಹಾಗೂ ಇನ್ನಿತರ ಸಮಸ್ಯೆಗಳನ್ನು ರೇರಾ ಕಾಯ್ದೆ ಮೂಲಕ ಗ್ರಾಹಕರು ಸುಲಭವಾಗಿ ಬಗೆಹರಿಸಿಕೊಳ್ಳಬಹುದು.
 
ನಮ್ಮ ಕಂಪೆನಿ ವಸತಿ ಯೋಜನೆಗೆ ಸಂಬಂಧಿಸಿದಂತೆ 6 ತಿಂಗಳು ಅಥವಾ ವರ್ಷಗಟ್ಟಲೆ ವಿಳಂಬ ಮಾಡಿಲ್ಲ. ತಾಂತ್ರಿಕ ಕಾರಣಗಳಿಂದ ಒಂದೆರಡು ತಿಂಗಳು ವಿಳಂಬವಾಗಿರಬಹುದು ಅಷ್ಟೇ. ಹಾಗಾಗಿ ರೇರಾ ಕಾಯ್ದೆ ಬಗ್ಗೆ ನಮ್ಮಲ್ಲಿ ಬರುವ ಗ್ರಾಹಕರು ಕೇಳುತ್ತಿಲ್ಲ’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT