ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯ ನೀತಿ: ಖಾಸಗಿ ಕ್ಷೇತ್ರಕ್ಕೆ ಮಣೆ

Last Updated 6 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

-ಪ್ರಸನ್ನ ಸಾಲಿಗ್ರಾಮ, ಡಾ. ಸುಶಿ ಕಾಡನಕುಪ್ಪೆ

ಸುಮಾರು ಎರಡು ವಾರಗಳ ಹಿಂದೆ ಕೇಂದ್ರ ಸರ್ಕಾರ ಹೊಸ ರಾಷ್ಟ್ರೀಯ ಆರೋಗ್ಯ ನೀತಿಯನ್ನು ಪ್ರಕಟಿಸಿತು. ಕಳೆದ ಸಲ ನೀತಿ ಹೊರಬಂದದ್ದು 2002ರಲ್ಲಿ. ಹಾಗಾಗಿ 15 ವರ್ಷಗಳ ನಂತರ ಇದು ಬಂದಿರುವುದು ಸ್ವಾಗತಾರ್ಹ. ಹೊಸ ನೀತಿಯಲ್ಲಿ ಕೆಲವು ಸಕಾರಾತ್ಮಕ ವಿಷಯಗಳಿವೆ. ಸರ್ಕಾರಿ ವ್ಯವಸ್ಥೆಯಲ್ಲಿ ಔಷಧಿ, ತಪಾಸಣೆ ಮತ್ತು ತುರ್ತು ಸೇವೆಗಳ ಲಭ್ಯತೆಯನ್ನು ಉಚಿತಗೊಳಿಸುವುದು, ಪ್ರಾಥಮಿಕ ಆರೋಗ್ಯ ಸೇವೆಗೆ ಆದ್ಯತೆ, ವೈದ್ಯಕೀಯ, ಅರೆವೈದ್ಯಕೀಯ ಸಿಬ್ಬಂದಿಯ ನೇಮಕಾತಿಯನ್ನು ಐ.ಪಿ.ಎಚ್.ಎಸ್ (Indian Public Health Standards) ಮಾನದಂಡಕ್ಕನುಗುಣವಾಗಿ ಹೆಚ್ಚಿಸುವುದು ಹಾಗೂ ಮೊದಲನೆಯ ಬಾರಿಗೆ ಪೌಷ್ಟಿಕ ಆಹಾರಕ್ಕೆ ಒತ್ತು, ಮಹಿಳಾ ಸುರಕ್ಷೆಗೆ ಮಹತ್ವ, ಕೆಲಸದೊತ್ತಡ ನಿಯಂತ್ರಣ, ವಾಯು ಮತ್ತು ನೀರಿನ ಮಾಲಿನ್ಯ ತಡೆಗಟ್ಟುವಿಕೆಗೆ ಆದ್ಯತೆ ನೀಡಿ ಇವುಗಳ ಕಾರ್ಯಾಚರಣೆಗೆ ಆರೋಗ್ಯ ಇಲಾಖೆಯು ಸಮನ್ವಯದಿಂದ ಕೆಲಸ ಮಾಡುವ ಜವಾಬ್ದಾರಿ ತೆಗೆದುಕೊಳ್ಳುವುದು ಸೇರಿವೆ.

ಆದರೆ ಬಿಜೆಪಿ ತನ್ನ 2014ರ ಚುನಾವಣಾ ಪ್ರಣಾಳಿಕೆಯಲ್ಲಿ ಹಾಗೂ 2015ರ ಆರೋಗ್ಯ ನೀತಿಯ ಕರಡು ಪ್ರತಿಯಲ್ಲಿ, ಜನರಿಗೆ ಆರೋಗ್ಯ ಸೇವೆಗಳನ್ನು ಮೂಲಭೂತ ಮಾನವ ಹಕ್ಕಾಗಿಸುವ ನಿಟ್ಟಿನಲ್ಲಿ ಮಸೂದೆ ತರುವುದಾಗಿ ಹೇಳಿದ್ದುದನ್ನು ಈ ನೀತಿ ಮರೆತಿದೆ.  ಆಸ್ಪತ್ರೆಗಳಲ್ಲಿ, ಅದರಲ್ಲೂ ವಿಶೇಷವಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಇತ್ತೀಚೆಗೆ ಹೆಚ್ಚಾಗಿರುವ ಅನೈತಿಕ, ಲಾಭಕೋರ ಪ್ರಕರಣಗಳಿಗೆ ಮಸೂದೆ ಕಡಿವಾಣ ಹಾಕಬಹುದಿತ್ತು. ಆದರೆ ಆರೋಗ್ಯ ವ್ಯವಸ್ಥೆಯಲ್ಲಿ ಮೂಲ ಸೌಕರ್ಯ ಹಾಗೂ ಸಿಬ್ಬಂದಿ ಕೊರತೆ ಇನ್ನೂ ಇರುವ ಕಾರಣ, ಆರೋಗ್ಯ ಸೇವೆಯನ್ನು ಹಕ್ಕಾಗಿ ಕೊಡಲು ಸಾಧ್ಯವಿಲ್ಲ ಎಂದು ಆರೋಗ್ಯ ನೀತಿಯು ನೆಪ ಹೇಳಿ ಜಾರಿಕೊಂಡಿರುವುದು ದುರದೃಷ್ಟಕರ.

ಕಳೆದ ಕೆಲ ದಶಕಗಳಿಂದ ನಮ್ಮ ಸರ್ಕಾರಗಳು ಆರೋಗ್ಯ ಕ್ಷೇತ್ರಕ್ಕೆ ಅತ್ಯಂತ ಕಡಿಮೆ ಹಣ ಹೂಡಿರುವುದೇ ಸಿಬ್ಬಂದಿ ಹಾಗೂ ಸೌಕರ್ಯಗಳ ಅಭಾವಕ್ಕೆ ಮೂಲ ಕಾರಣ. ಇದರಿಂದಾಗಿ ಬಹಳಷ್ಟು ಜನ ತಮ್ಮ ಆರೋಗ್ಯ ರಕ್ಷಣೆಗಾಗಿ ಖಾಸಗಿ ಸೇವೆಗಳಿಗೆ ಮೊರೆ ಹೋಗಬೇಕಾದ ಅನಿವಾರ್ಯವಿದೆ. ಇದಕ್ಕಾಗಿ ತಮ್ಮ ಜೇಬಿನಿಂದ ನೀಡಿ ಅಥವಾ ಸಾಲ ಮಾಡಿ ಅವರು ಆರೋಗ್ಯ ಸೇವೆ ಪಡೆಯುತ್ತಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆಯ ಅನುಸಾರ, ನಮ್ಮ ದೇಶದಲ್ಲಿ ಸರ್ಕಾರ ಆರೋಗ್ಯ ಕ್ಷೇತ್ರಕ್ಕೆ ದೇಶದ ಒಟ್ಟು ಆಂತರಿಕ ಉತ್ಪನ್ನದ  (ಜಿಡಿಪಿ) ಶೇ 5ರಷ್ಟು ಮುಡಿಪಿಡಬೇಕು. ಆದರೆ ಪ್ರಸ್ತುತ ಅದು ಕೇವಲ ಶೇ 1.10ಯಲ್ಲಿ ನಲುಗುತ್ತಿದೆ. ಆರೋಗ್ಯ ಕ್ಷೇತ್ರಕ್ಕೆ ಅತ್ಯಂತ ಕಡಿಮೆ ಹಣಕಾಸು ವ್ಯಯ ಮಾಡುವ ಕಡೆಯ 5 ರಾಷ್ಟ್ರಗಳಲ್ಲಿ ಭಾರತ ಒಂದು.

ನಮ್ಮ ಈಗಿನ ಆರೋಗ್ಯ ನೀತಿ ಈ ಅಂಶಗಳನ್ನು ಉಲ್ಲೇಖಿಸಿದೆಯಾದರೂ 2025ರಷ್ಟರಲ್ಲಿ ಆರೋಗ್ಯ ಸೇವೆಗಳಿಗೆ ಹೂಡಿಕೆಯನ್ನು ಜಿಡಿಪಿಯ ಶೇ 2.5ಕ್ಕೆ  ಹೆಚ್ಚಿಸಲಾಗುವುದೆಂಬ ಪರಿಹಾರವನ್ನು ಪ್ರಸ್ತಾಪಿಸುತ್ತದೆ. ದುರಂತವೆಂದರೆ, 2015ರ ಕರಡು ಪ್ರತಿಯಲ್ಲಿ ಇದೇ ಶೇ 2.5ರಷ್ಟು ಹೂಡಿಕೆಯನ್ನು 2020ರಷ್ಟರಲ್ಲೇ ತರಲಾಗುವುದೆಂದು ಹೇಳಲಾಗಿತ್ತು! 2002ರ ನೀತಿಯಲ್ಲೇ ಹೂಡಿಕೆಯನ್ನು ಶೇ 2ರ ಮಟ್ಟಕ್ಕೆ ತರಲಾಗುವುದೆಂದು ಘೋಷಿಸಲಾಗಿತ್ತು. ಹಾಗಾಗಿ ನಾವು ಪ್ರಗತಿ ಸಾಧಿಸುವುದಿರಲಿ ಹಿಂದಕ್ಕೆ ಹೆಜ್ಜೆ ಇಟ್ಟಂತಾಗಿದೆ.

ಒಂದು ವಿಷಯದಲ್ಲಿ ಈಗಿನ ನೀತಿಯು ಸ್ವಂತ ನಿಲುವನ್ನು ಬಿಂಬಿಸಿದೆ. ವಿಪರ್ಯಾಸವೆಂದರೆ, ಅದು ಆರೋಗ್ಯದ ಖಾಸಗೀಕರಣ ಹಾಗೂ ವ್ಯಾಪಾರೀಕರಣಕ್ಕೆ ಮತ್ತಷ್ಟು ಪುಷ್ಟಿ ನೀಡುತ್ತದೆ. ನೀತಿಪತ್ರವು ಪ್ರಾಥಮಿಕ ಸೇವೆಗಳಲ್ಲಿ ಸರ್ಕಾರಿ ವ್ಯವಸ್ಥೆಗೆ ಆದ್ಯತೆ ನೀಡಿದೆಯಾದರೂ, ದ್ವಿತೀಯ ಹಾಗೂ ತೃತೀಯ ಸೇವೆಗಳಲ್ಲಿ ‘ಸರ್ಕಾರೇತರ’ ಸಂಸ್ಥೆಗಳೊಡನೆ ಒಪ್ಪಂದ, ಒಡಂಬಡಿಕೆ ಮಾಡಿಕೊಳ್ಳುವುದರ ಬಗ್ಗೆ ಸ್ಪಷ್ಟವಾಗಿ ಹೇಳಿದೆ. ಅಂದರೆ ಪ್ರಸ್ತುತ ಇರುವ ಸರ್ಕಾರಿ- ಖಾಸಗಿ ಒಡಂಬಡಿಕೆಗಳು ಹಾಗೂ ವಿಮೆ ಆಧಾರಿತ ಕಾರ್ಯಕ್ರಮಗಳಿಗೆ ಕಡಿವಾಣ ಬೀಳುವ ಸಾಧ್ಯತೆ ಕಡಿಮೆ. ದೇಶದಾದ್ಯಂತ ಈ ಒಡಂಬಡಿಕೆಗಳು ಜನರಿಗೆ ಗುಣಮಟ್ಟ ಆಧಾರಿತ, ಉಚಿತ ಆರೋಗ್ಯ ಸೇವೆಗಳನ್ನು ಒದಗಿಸುವಲ್ಲಿ ವಿಫಲವಾಗಿವೆ ಎಂದು ವಿವಿಧ ಅಧ್ಯಯನಗಳು ಸ್ಪಷ್ಟವಾಗಿ ಪುರಾವೆಗಳನ್ನು ತೋರಿಸಿವೆ. ಹೀಗಿದ್ದರೂ ಖಾಸಗಿ ಆರೋಗ್ಯ ವ್ಯವಸ್ಥೆಗೆ ಮಣೆ ಹಾಕುವುದನ್ನು ಕೈ ಬಿಡಲು ಸರ್ಕಾರ ತಯಾರಿಲ್ಲ. ಇದಕ್ಕೆ ಒಂದು ಮುಖ್ಯ ಹಿನ್ನೆಲೆ, 90ರ ದಶಕದಿಂದ ಸರ್ಕಾರಗಳು ಪಾಲಿಸುತ್ತಿರುವ ನವ ಉದಾರೀಕರಣ ನೀತಿ, ಸರ್ಕಾರಗಳು ತಮ್ಮ ಸಾಮಾಜಿಕ ಜವಾಬ್ದಾರಿಗಳಿಂದ ಹಿಮ್ಮೆಟ್ಟಿರುವುದು ಹಾಗೂ ವ್ಯಾಪಾರೀಕರಣವನ್ನು ಸಕ್ರಿಯವಾಗಿ ಪ್ರೋತ್ಸಾಹಿಸುತ್ತಿರುವುದು.

ಈ ನೀತಿಯಲ್ಲಿ ಕೆಲವು ವಿಶೇಷ ಪರಿಕಲ್ಪನೆಗಳನ್ನು ಹಾಗೂ ಪದಗಳನ್ನು ಬಳಸಲಾಗಿದೆ. ಇದರಲ್ಲಿರುವ ಮುಖ್ಯ ಪದ strategic purchasing. ಇದರ ಅರ್ಥ ಸರ್ಕಾರವು ಇನ್ನು ಮುಂದೆ ಆರೋಗ್ಯ ಸೇವೆಗಳ ಮುಖ್ಯ ಪ್ರದಾತನಾಗದೆ ಕೇವಲ ಸೇವೆಗಳನ್ನು ಮಾರುಕಟ್ಟೆಯಲ್ಲಿ ಖಾಸಗಿ ವ್ಯವಸ್ಥೆಗಳಿಂದ ಖರೀದಿಸುವ ದಲ್ಲಾಳಿಯಾಗಲಿದೆ. ಖಾಸಗೀಕರಣವೇ ಇದರಲ್ಲಿ ಅಡಗಿರುವ ಕೌಶಲ. ಇದಕ್ಕೆ ಲಗತ್ತಾಗಿ ಮತ್ತೊಂದು ಮುಖ್ಯ ಪದ ‘ಆಶ್ವಾಸನೆ’ (assurance). ಇದು ಶಬ್ದಗಳ ಮುಖೇನ ಜನರ ವಿರುದ್ಧ ನಡೆಸಿರುವ ಪಿತೂರಿ. ವಿಮೆ (insurance) ಎಂದು ಹೇಳಿದಲ್ಲಿ ಅದರ ಬಂಡವಾಳ ಬಹಿರಂಗವಾಗುವುದೆಂದು ‘ಆಶ್ವಾಸನೆ’ ಎಂಬ ಪದವನ್ನು ಪ್ರಯೋಗಿಸಲಾಗಿದೆ. ಏಕೆಂದರೆ ವಿಶ್ವದಾದ್ಯಂತ ವಿಮೆಯ ಮೂಲಕ ಖಾಸಗಿಗೆ ಹೆಚ್ಚು ಒತ್ತು ಕೊಟ್ಟಿರುವ ಯಾವುದೇ ದೇಶಕ್ಕೂ (ಉದಾಹರಣೆ ಅಮೆರಿಕ) ತನ್ನ ಜನರಿಗೆ ಸಮಂಜಸ ಆರೋಗ್ಯ ಸೇವೆಗಳನ್ನು ನ್ಯಾಯಯುತವಾಗಿ, ಸಮತೆಯ ಆಧಾರದ ಮೇಲೆ ತಲುಪಿಸಲು ಸಾಧ್ಯವಾಗಿಲ್ಲ. ಅಂದಹಾಗೆ ‘ಆಶ್ವಾಸನೆ ಪದಕ್ಕೆ ನಾವು ನಿಘಂಟಿನಲ್ಲಿ ಅನುವಾದ ಹುಡುಕಿದಲ್ಲಿ ಅದು ‘ವಿಮೆ’ ಎಂದೇ ತೋರಿಸುತ್ತದೆ!

ದೇಶಕ್ಕೆ ಈ ಒಂದು ವಂಚನೆಯ ಶಬ್ದದ ಕೊಡುಗೆ ನಮ್ಮ ಕರ್ನಾಟಕ ಸರ್ಕಾರದ್ದೇ ಆಗಿದೆ! ದೇಶದಲ್ಲಿ ಕರ್ನಾಟಕದ ‘ಆರೋಗ್ಯಶ್ರೀ’ ಯೋಜನೆಯಲ್ಲಿ ಖಾಸಗಿಯವರಿಂದ ಸೇವೆಗಳನ್ನು ಖರೀದಿಸಲು ಉಪಯೋಗಿಸಿದ ‘ಕೌಶಲ’. ಕರ್ನಾಟಕ ಸರ್ಕಾರವು ಖಾಸಗಿ ಕ್ಷೇತ್ರದೊಡನೆ ಮಾಡಿಕೊಂಡಿರುವ ಒಡಂಬಡಿಕೆ ದೇಶದಲ್ಲೇ ಮಾದರಿ. ಇತ್ತೀಚೆಗೆ ಹೆಚ್ಚು ಸುದ್ದಿ ಮಾಡಿರುವ ಗರ್ಭಕೋಶದ ಅನೈತಿಕ ಶಸ್ತ್ರಚಿಕಿತ್ಸೆಗಳು ಈ ‘ಆಶ್ವಾಸನೆ’ಯ ಒಂದು ಪರಿಣಾಮ. ಇನ್ನೊಂದು ವಿಶೇಷವೆಂದರೆ, ನೀತಿಯಲ್ಲಿ ಅತ್ಯಂತ ವಿಸ್ತಾರವಾಗಿ ಉಲ್ಲೇಖವಾಗಿರುವ ವಿಭಾಗ ಖಾಸಗಿ ಕ್ಷೇತ್ರದೊಡನೆಯ ಒಡಂಬಡಿಕೆ.
1946ರ ಭೋರೆ ಸಮಿತಿಯ ಶಿಫಾರಸುಗಳನ್ನೇ ಇನ್ನೂ ಸಂಪೂರ್ಣ ಕಾರ್ಯಾಚರಣೆಗೆ ತರದ ಸರ್ಕಾರಗಳು ಹಾಗೂ 2002ರ ನೀತಿಯ ಘೋಷಣೆಗಳನ್ನೇ ಅನುಷ್ಠಾನಕ್ಕೆ ತರದೆ, ಅದೇ ಗುರಿಯನ್ನು ಪುನರುಚ್ಚರಿಸುವ 2017ರ ನೀತಿಯಿಂದ ಹೆಚ್ಚಿನ ಅಪೇಕ್ಷೆ ಇಟ್ಟುಕೊಳ್ಳುವುದು ಮೂರ್ಖತನ.

ಆದರೆ ಈ ನೀತಿಯನ್ನು ಹಾಲಿ ಸರ್ಕಾರದ ಮಿಕ್ಕ ಮಾರುಕಟ್ಟೆಪರ ಧೋರಣೆಗಳು, ಕಳೆದ ಮೂರು ವರ್ಷಗಳಿಂದ ಆರೋಗ್ಯ ಮತ್ತು ಇತರ ಸಾಮಾಜಿಕ ಕ್ಷೇತ್ರಗಳಿಗೆ ಬಜೆಟ್‌ನಲ್ಲಿ ಹಣಕಾಸು ಕಡಿಮೆ ಮಾಡಿರುವುದು, ನಿಮ್ಹಾನ್ಸ್‌ನಂತಹ ಸಂಸ್ಥೆಗಳಿಗೆ ಕೇವಲ ಶೇ 70ರಷ್ಟು ಹಣ ಕೊಡುವುದಾಗಿ ಹಾಗೂ ಮಿಕ್ಕ ಶೇ 30ರಷ್ಟು ಹಣಕಾಸನ್ನು ಸಂಸ್ಥೆಯೇ ಖಾಸಗಿಯಾಗಿ ಒದಗಿಸಿಕೊಳ್ಳಬೇಕು ಎಂಬ ಸುತ್ತೋಲೆ ಹೊರಡಿಸಿರುವ ಬೆಳವಣಿಗೆಗಳನ್ನು ಗಮನದಲ್ಲಿರಿಸಿ ವಿಶ್ಲೇಷಿಸಿದಾಗ, ಖಾಸಗಿ ಕ್ಷೇತ್ರಕ್ಕೆ ಮಣೆ ಹಾಕುವ ಪರಿಪಾಠ ಯಾವುದೇ ಲಗಾಮಿಲ್ಲದೇ ಮುಂದುವರಿದಿರುವುದು ಕಾಣುತ್ತದೆ. ಇಂದು ಆಚರಿಸಲಾಗುವ (ಏ. 7) ವಿಶ್ವ ಆರೋಗ್ಯ ದಿನಾಚರಣೆಯ ಹಿನ್ನೆಲೆಯಲ್ಲಿ, ಜನರ ಆರೋಗ್ಯಕ್ಕೆ ಈ ಬೆಳವಣಿಗೆಗಳು ಹೇಗೆ ಹಾನಿಕಾರಕ ಎನ್ನುವುದನ್ನು ವಿಶೇಷವಾಗಿ ಗಮನಿಸಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT