ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಲೈ ಲಾಮಾ ಅರುಣಾಚಲ ಭೇಟಿಗೆ ಚೀನಾ ವಿರೋಧ ಅಸಮರ್ಥನೀಯ

Last Updated 6 ಏಪ್ರಿಲ್ 2017, 20:00 IST
ಅಕ್ಷರ ಗಾತ್ರ

ಟಿಬೆಟಿಯನ್‌ ಧರ್ಮಗುರು ದಲೈ ಲಾಮಾ ಈಗ ಅರುಣಾಚಲ ಪ್ರದೇಶದ ಪ್ರವಾಸದಲ್ಲಿದ್ದಾರೆ. ಆದರೆ ಅವರ ಈ ಭೇಟಿಗೆ ಚೀನಾದಿಂದ ಪ್ರತಿಭಟನೆ ವ್ಯಕ್ತವಾಗಿದೆ. ಭಾರತದ ಜತೆಗಿನ ದ್ವಿಪಕ್ಷೀಯ ಬಾಂಧವ್ಯಕ್ಕೆ ಇದು ಭಾರಿ ಧಕ್ಕೆ ಮಾಡಲಿದೆ ಎಂಬ ಎಚ್ಚರಿಕೆಯ ಮಾತುಗಳನ್ನೂ ಅದು ಆಡಿದೆ. ಇದರಲ್ಲೇನೂ ಹೊಸತಿಲ್ಲ. ಏಕೆಂದರೆ ದಲೈ ಲಾಮಾ ಈ ಹಿಂದೆಯೂ ಅರುಣಾಚಲ ಪ್ರದೇಶಕ್ಕೆ ಅನೇಕ ಸಲ ಭೇಟಿ ಕೊಟ್ಟಿದ್ದಾರೆ. ಅವರ ಪ್ರತಿಯೊಂದು ಭೇಟಿಗೂ  ಚೀನಾದ ಆಕ್ಷೇಪಣೆ ಇದ್ದೇ ಇದೆ. ‘ಅರುಣಾಚಲ ಪ್ರದೇಶದ ಬಹುಪಾಲು ಭೂಭಾಗ ನಮಗೆ ಸೇರಿದ್ದು; ಆದ್ದರಿಂದ ಅದು ವಿವಾದಾತ್ಮಕ’ ಎಂಬುದು ಚೀನಾ ನಿಲುವು. ಅರುಣಾಚಲವನ್ನು ಅದು ಈಗಲೂ ಕರೆಯುವುದು ‘ದಕ್ಷಿಣ ಟಿಬೆಟ್‌’ ಎಂದು.  ಅರುಣಾಚಲ ಮೂಲದ ಭಾರತೀಯ ನಾಗರಿಕರ ವೀಸಾ ಅರ್ಜಿಗಳ ಬಗ್ಗೆಯೂ ಅದರದು ವಿತಂಡ ವಾದ. ಪಾಸ್‌ಪೋರ್ಟ್‌ನಲ್ಲಿ ಮೊಹರು ಹಾಕುವ ಬದಲು ಪ್ರತ್ಯೇಕ ಕಾಗದದಲ್ಲಿ ವೀಸಾ ನೀಡುತ್ತದೆ. ಹಿಂದೆ ಇದೇ ಕಾರಣಕ್ಕಾಗಿ ಭಾರತೀಯ ನಿಯೋಗದಲ್ಲಿದ್ದ ಅರುಣಾಚಲದ ಅಧಿಕಾರಿಯೊಬ್ಬರ ಚೀನಾ ಪ್ರವಾಸ ರದ್ದಾಗಿತ್ತು. ಚೀನಾದ ವಾದಕ್ಕೆ ನಮ್ಮ ಸರ್ಕಾರಗಳು ಮೊದಲಿನಿಂದಲೂ ಸೊಪ್ಪು ಹಾಕಿಲ್ಲ. ಹಾಗೆ ನೋಡಿದರೆ ನಮ್ಮ ನೆಲವನ್ನೇ ಅದು ಆಕ್ರಮಿಸಿದೆ. ಬಿಟ್ಟು ಕೊಡುತ್ತಿಲ್ಲ.

ಅರುಣಾಚಲದ ಬೌದ್ಧರನ್ನು ದಲೈ ಲಾಮಾ ಅವರು ತನ್ನ ವಿರುದ್ಧ ಎತ್ತಿಕಟ್ಟಬಹುದು ಎಂಬುದು ಚೀನಾಕ್ಕೆ ಇರುವ ಭಯ. ತನಗೆ ಆ ಉದ್ದೇಶ ಇಲ್ಲ ಎಂದು ದಲೈ ಲಾಮಾ ಅನೇಕ ಸಲ ಹೇಳಿದ್ದಾರೆ. ಭಾರತಕ್ಕೆ ಮುಜುಗರ ತರುವಂತೆ ಅವರು ಎಂದೂ ನಡೆದುಕೊಂಡಿಲ್ಲ. ‘ಟಿಬೆಟ್‌, ಪ್ರತ್ಯೇಕ ದೇಶವೇ ಹೊರತು ಚೀನಾದ ಭಾಗವಲ್ಲ’ ಎಂಬ ತಮ್ಮ ಹಳೆಯ ನಿಲುವನ್ನು ಬದಲಿಸಿಕೊಂಡಿದ್ದಾರೆ. ‘ಟಿಬೆಟ್‌ಗೆ ಪೂರ್ಣ ಸ್ವಾತಂತ್ರ್ಯ ಕೇಳುತ್ತಿಲ್ಲ. ಅದು ಚೀನಾದಲ್ಲೇ ಉಳಿಯಲಿದೆ. ಆದರೆ  ಸ್ವಯಂ ಆಡಳಿತದ ಅವಕಾಶ ಕೊಡಿ’ ಎಂದು ಚೀನಾಕ್ಕೆ ಅನೇಕ ಸಲ ಮನವಿ ಮಾಡಿದ್ದಾರೆ. ಅದಕ್ಕೆ ಚೀನಾ ಸ್ಪಂದಿಸಿಲ್ಲ. ತನ್ನೊಳಗಿನ ಈ ಸಮಸ್ಯೆ ಪರಿಹರಿಸಿಕೊಳ್ಳುವುದು ಬಿಟ್ಟು ಎಲ್ಲಕ್ಕೂ ಭಾರತದ ಮೇಲೆ ಗೂಬೆ ಕೂರಿಸುವ ಚಾಳಿಯನ್ನು ಬಿಟ್ಟಿಲ್ಲ.

1962ರ ಯುದ್ಧದಲ್ಲಿ ನಮ್ಮನ್ನು ಸೋಲಿಸಿದ ಗುಂಗಿನಿಂದ ಅದು ಇನ್ನೂ ಹೊರಬಂದಂತಿಲ್ಲ.  ಅದಕ್ಕಾಗಿಯೇ ಗಡಿ ಇರಬಹುದು, ವ್ಯಾಪಾರ– ವಹಿವಾಟು ಇರಬಹುದು...  ಎಲ್ಲದರಲ್ಲೂ ನಮ್ಮ ಜತೆ ಅದರದು ಇಬ್ಬಗೆಯ ನೀತಿ. ಅರುಣಾಚಲಕ್ಕೆ ದಲೈ ಲಾಮಾ ಭೇಟಿಯನ್ನು ಆಕ್ಷೇಪಿಸುವ ಅದು, ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ರಸ್ತೆ ನಿರ್ಮಾಣ ಮತ್ತು ಮೂಲ ಸೌಕರ್ಯಕ್ಕಾಗಿ ಪಾಕ್‌ ಸರ್ಕಾರದ ಜತೆ ಕೈಜೋಡಿಸಿದೆ. ದೊಡ್ಡ ಮೊತ್ತದ ಬಂಡವಾಳ ಹೂಡಿದೆ.  ಪಾಕಿಸ್ತಾನದ ಜೈಷ್‌ ಇ ಮೊಹ್ಮದ್‌ ಉಗ್ರಗಾಮಿ ಸಂಘಟನೆ ಮುಖ್ಯಸ್ಥ ಮಸೂದ್‌ ಅಝರ್‌ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದ ಭಾರತದ ಆಗ್ರಹಕ್ಕೆ ವಿಶ್ವಸಂಸ್ಥೆಯಲ್ಲಿ ಅಡ್ಡಗಾಲು ಹಾಕಿದೆ.  ಹಾಗೆಯೇ   ಪರಮಾಣು ಪೂರೈಕೆದಾರ ರಾಷ್ಟ್ರಗಳ ಗುಂಪು (ಎನ್‌ಎಸ್‌ಜಿ) ಸೇರಲು ಭಾರತವನ್ನು ಬೆಂಬಲಿಸಬೇಕೆಂಬ ಮನವಿಗೆ ಚೀನಾ ಓಗೊಟ್ಟಿಲ್ಲ. ಅದಕ್ಕೆ ಬದಲಾಗಿ, ‘ದಲೈ ಲಾಮಾ ಅವರನ್ನು ಭಾರತ ರಾಜತಾಂತ್ರಿಕ ಪ್ರತೀಕಾರದ ಅಸ್ತ್ರವಾಗಿ ಬಳಸುತ್ತಿದೆ’ ಎಂದು ವಿನಾಕಾರಣ ಆರೋಪಿಸುತ್ತಿದೆ.  ಯಾವುದೇ ಎರಡು ದೇಶಗಳ ನಡುವೆ  ಸುಮಧುರ  ಬಾಂಧವ್ಯ ಏಕಪಕ್ಷೀಯ ತಳಹದಿಯ ಮೇಲೆ ಬೆಳೆಯಲು ಸಾಧ್ಯವಿಲ್ಲ. ಕೊಡುಕೊಳ್ಳುವಿಕೆ, ಪರಸ್ಪರರ ಭಾವನೆಗಳನ್ನು ಗೌರವಿಸುವುದು ಮುಖ್ಯ. ಅದು ಚೀನಾಕ್ಕೂ ಅನ್ವಯಿಸುತ್ತದೆ. ಭಾರತ ಮತ್ತು ಚೀನಾ ವಿಶ್ವದ ಎರಡು ದೊಡ್ಡ ಆರ್ಥಿಕ ಶಕ್ತಿಗಳು. ಒಟ್ಟಾಗಿ ಕೆಲಸ ಮಾಡಿದರೆ ವಿಶ್ವದಲ್ಲಿ ಮಹತ್ವದ ಬದಲಾವಣೆ ತರುವ ಸಾಮರ್ಥ್ಯ ಹೊಂದಿವೆ. ಅತ್ತ ಕಡೆ ಲಕ್ಷ್ಯ ಹರಿಸಬೇಕು.

ನಮ್ಮಂತೆ ಚೀನಾ ಕೂಡ ಉತ್ತರದ ಪ್ರಾಂತ್ಯದಲ್ಲಿ ಉಗ್ರರ ಸಮಸ್ಯೆ ಎದುರಿಸುತ್ತಿದೆ.   ಆದ್ದರಿಂದ ಧರ್ಮ ಗುರುವೊಬ್ಬರ ಧಾರ್ಮಿಕ ಉದ್ದೇಶದ ಭೇಟಿಯನ್ನೇ ನೆಪ ಮಾಡಿಕೊಂಡು ಸಂಬಂಧ ಕೆಡಿಸಿಕೊಳ್ಳುವುದು ಬುದ್ಧಿವಂತಿಕೆ ಅಲ್ಲ. ಹಾಗೆಯೇ ಚೀನಾ, ರಷ್ಯಾ ಹಾಗೂ ಪಾಕಿಸ್ತಾನದ ಮಧ್ಯೆ ಹೆಚ್ಚುತ್ತಿರುವ ಬಾಂಧವ್ಯ ಭಾರತದ ಹಿತಾಸಕ್ತಿಗೆ ಬೆದರಿಕೆ ಒಡ್ಡುವಂತಹದ್ದು ಎಂಬುದನ್ನೂ ಅರ್ಥ ಮಾಡಿಕೊಳ್ಳಬೇಕು. ಹೀಗಾಗಿ, ಉಭಯ ದೇಶಗಳ ಮಧ್ಯದ ಆರ್ಥಿಕ ಸಹಕಾರದ ಸಾಧ್ಯತೆಗಳನ್ನು ವಿಸ್ತರಿಸಿಕೊಳ್ಳಲು ನಮ್ಮ ಕಡೆಯಿಂದಲೂ ರಾಜತಾಂತ್ರಿಕ ಪ್ರಯತ್ನಗಳು ಮುಂದುವರಿಯಬೇಕು. ಮುಂಬರುವ ದಿನಗಳಲ್ಲಿ ಹಲವು ಶೃಂಗಸಭೆಗಳಲ್ಲಿ ಭಾರತ ಹಾಗೂ ಚೀನಾ ಮುಖಾಮುಖಿಯಾಗಲಿವೆ. ಗಡಿ ಭದ್ರತಾ  ವಿವಾದಗಳನ್ನು ನಿರ್ವಹಣೆಯ ಮಟ್ಟದಲ್ಲಿ ಇರಿಸಿಕೊಂಡು ಹೊಸ ಕ್ಷೇತ್ರಗಳಲ್ಲಿ ಪಾಲುದಾರಿಕೆಯ ಅವಕಾಶಗಳಿಗೆ ತೆರೆದುಕೊಳ್ಳಲು ಉಭಯದೇಶಗಳೂ ಯತ್ನಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT