‘ಒಕ್ಕೂಟ ತೊರೆಯೋಣ’ ಯುರೋಪ್ ನವಗಾನ

ಬ್ರಿಟನ್ ಒಕ್ಕೂಟ ತೊರೆದಿರುವುದರಿಂದ ಜರ್ಮನಿಯು ಒಕ್ಕೂಟದ ಮೇಲೆ ತನ್ನ ಹಿಡಿತವನ್ನು ಬಲಪಡಿಸಿಕೊಂಡಂತಾಗಿದೆ. ಮುಂದಿನ ಫ್ರಾನ್ಸ್ ಚುನಾವಣೆಯಲ್ಲಿ ಎಮ್ಯಾನುಯೆಲ್ ಮೇಕ್ರಾನ್ ಗೆದ್ದು ಅಧಿಕಾರ ಹಿಡಿದರೆ, ಜರ್ಮನಿಯಲ್ಲಿ ಏಂಜೆಲಾ ಮರ್ಕೆಲ್ ಅಥವಾ ಮಾರ್ಟಿನ್ ಶಲ್ಸ್ ಮೇಲುಗೈ ಸಾಧಿಸಿದರೆ ಒಕ್ಕೂಟದ ಪರ ಧ್ವನಿ ಗಟ್ಟಿಗೊಳ್ಳಬಹುದು, ಒಕ್ಕೂಟ ಉಳಿಸಿಕೊಳ್ಳುವ ಮಾರ್ಗ ಹುಡುಕಬಹುದು.

‘ಒಕ್ಕೂಟ ತೊರೆಯೋಣ’ ಯುರೋಪ್ ನವಗಾನ

ಮುಂದೇನು? ಎಂಬ ಪ್ರಶ್ನೆಗೆ ಯುರೋಪಿನಾದ್ಯಂತ ಹಲವು ಉತ್ತರಗಳು ಕೇಳಿ ಬರುತ್ತಿವೆ.  ನಮ್ಮ ಅರ್ಥ ವ್ಯವಸ್ಥೆಯನ್ನು ಮತ್ತಷ್ಟು ಸದೃಢಗೊಳಿಸುತ್ತೇವೆ ಎಂದು ಬ್ರಿಟನ್ ನಾಯಕರು ಹೇಳುತ್ತಿದ್ದರೆ, ಬ್ರೆಜಿಲ್‌ನಲ್ಲಿ ಕುಳಿತ ಐರೋಪ್ಯ ಒಕ್ಕೂಟದ ಮುಂದಾಳುಗಳು ‘ಐಕ್ಯ ಮಂತ್ರ’ ಪಠಿಸುತ್ತಿದ್ದಾರೆ. ಆದರೆ ಎರಡೂ ಕಡೆ ಆತ್ಮವಿಶ್ವಾಸದ ಕೊರತೆ ಕಾಣುತ್ತಿದೆ. ಈ ಅಧೀರತೆ ಎದ್ದು ಕಂಡದ್ದು ಮಾರ್ಚ್ 25ರಂದು ಇಟಲಿಯ ರಾಜಧಾನಿಯಲ್ಲಿ ನಡೆದ ಐರೋಪ್ಯ ಒಕ್ಕೂಟದ 60ನೇ ವರ್ಧಂತಿ ಸಭೆಯಲ್ಲಿ. ಅಂದು ಒಕ್ಕೂಟದ ಸದಸ್ಯ ರಾಷ್ಟ್ರಗಳ ನಾಯಕರು ಕೈಕೈ ಹಿಡಿದು ನಿಂತರಾದರೂ, ಯಾರ ಮುಖದಲ್ಲೂ ತುಂಬು ನಗೆ ಇರಲಿಲ್ಲ. ಅದಾಗಿ ನಾಲ್ಕು ದಿನ ಕಳೆದ ಮೇಲೆ ಒಕ್ಕೂಟದಿಂದ ಹೊರಬೀಳುವ ನಿರ್ಧಾರಕ್ಕೆ ಚಾಲನೆ ಕೊಟ್ಟ ಬ್ರಿಟನ್ ಪ್ರಧಾನಿ ತೆರೇಸಾ ಮೇ ಆ ಸಂಭ್ರಮ ಸಭೆಯಲ್ಲಿ ಭಾಗಿಯಾಗಿರಲಿಲ್ಲ.

ಆ ಐತಿಹಾಸಿಕ ಸಭೆಯಲ್ಲಿ, ಐರೋಪ್ಯ ಒಕ್ಕೂಟದ ಭಾಗವಾಗಿ ಏನೆಲ್ಲಾ ಸಾಧಿಸಿದೆವು, ಹೇಗೆ ಅವಘಡಗಳನ್ನು ಮೆಟ್ಟಿನಿಂತು, ಕಳೆಗುಂದಿದ್ದ ಯುರೋಪಿಗೆ ಹುರುಪು ತುಂಬಿದೆವು ಎಂಬ ಸಿಂಹಾವಲೋಕನದ ಮಾತುಗಳು ಕೇಳಿಬಂದವು. ನಿಜ, ಒಕ್ಕೂಟದ ಸಂಸ್ಥಾಪಕರು ಭಾವಿಸಿದ್ದಕ್ಕಿಂತ ಹೆಚ್ಚಿನ ಯಶಸ್ಸು ಒಕ್ಕೂಟಕ್ಕೆ ಲಭಿಸಿದೆ. ಎರಡನೇ ವಿಶ್ವಯುದ್ಧದ ಬಳಿಕ ತತ್ತರಿಸಿ ಹೋಗಿದ್ದ ಯುರೋಪ್, ಆರ್ಥಿಕ ಸಂಕಷ್ಟ, ಆಹಾರದ ಅಭಾವದಿಂದ ಕಂಗಾಲಾಗಿತ್ತು. ಜನ ಬೀದಿಗೆ ಬಿದ್ದಿದ್ದರು. ಯುದ್ಧದಿಂದ ರೋಸಿಹೋಗಿದ್ದ ಜನರಿಗೆ ಶಾಂತಿಯ ಅಗತ್ಯವಿತ್ತು. ನೆರೆಹೊರೆಯ ರಾಷ್ಟ್ರಗಳು ಪರಸ್ಪರ ಕಾದಾಡು ಬದಲು, ಒಂದುಗೂಡಿ ಬೆಳೆಯಬೇಕು ಎಂಬ ಯೋಚನೆ ಮೊಳಕೆಯೊಡೆದಿತ್ತು.

ಐರೋಪ್ಯ ಒಕ್ಕೂಟ ಸ್ಥಾಪನೆಯಲ್ಲಿ ಅಮೆರಿಕ ಮಹತ್ವದ ಪಾತ್ರ ವಹಿಸಿತು. ಅಮೆರಿಕಕ್ಕೆ ಸ್ವಹಿತಾಸಕ್ತಿ ಇತ್ತೆನ್ನಿ. 1945ರಲ್ಲಿ ನಡೆದ ಪೊಟ್ಸ್ ಡಾಮ್ ಸಭೆಯಲ್ಲಿ ನಿರ್ಧಾರವೊಂದನ್ನು ತಳೆಯಲಾಯಿತು. ಜರ್ಮನಿ ಮತ್ತೊಮ್ಮೆ ಸಬಲಗೊಂಡು ಯುದ್ಧಕ್ಕೆ ಸಜ್ಜಾಗದಂತೆ ತಡೆಯಲು, ಜರ್ಮನಿಯನ್ನು ನಾಲ್ಕು ವಿಭಾಗ ಮಾಡಲಾಯಿತು. ಅದನ್ನು ಕ್ರಮವಾಗಿ ಬ್ರಿಟನ್, ಫ್ರಾನ್ಸ್, ಅಮೆರಿಕ, ಸೋವಿಯತ್ ಯೂನಿಯನ್ ನಿಯಂತ್ರಿಸಬೇಕು ಎಂದು ಸಭೆ ನಿರ್ಧರಿಸಿತು. 1948ರಲ್ಲಿ ಅಮೆರಿಕದ ಅಂದಿನ ಅಧ್ಯಕ್ಷ ಹ್ಯಾರಿ ಟ್ರೂಮನ್, ತನ್ನ ವಿದೇಶಾಂಗ ಕಾರ್ಯದರ್ಶಿ ಜನರಲ್ ಜಾರ್ಜ್ ಮಾರ್ಷಲ್ ಅವರನ್ನು ಯುರೋಪಿಗೆ ಕಳುಹಿಸಿ, ಅಲ್ಲಿನ ಸ್ಥಿತಿಗತಿ ಪರಿಶೀಲಿಸಿ ವರದಿ ಸಲ್ಲಿಸುವಂತೆ ಆದೇಶಿಸಿದ್ದರು. ‘ಯುರೋಪಿನಲ್ಲಿ ಕಮ್ಯುನಿಸಂ ಪ್ರಭಾವ ಹೆಚ್ಚುತ್ತಿದೆ. ಅದಕ್ಕೆ ಕಾರಣ ರಷ್ಯಾ ಅಲ್ಲ. ಹೆಚ್ಚುತ್ತಿರುವ ಬಡತನ’ ಎಂಬ ಅಂಶವನ್ನು ತಮ್ಮ ವರದಿಯಲ್ಲಿ ಮಾರ್ಷಲ್ ಉಲ್ಲೇಖಿಸಿದ್ದರು. ಪಶ್ಚಿಮ ಜರ್ಮನಿಯಲ್ಲಿ ಅಮೆರಿಕದ ಸಿಗರೇಟುಗಳನ್ನೇ ಜನ, ಕರೆನ್ಸಿಯಾಗಿ ಕೊಡುಕೊಳ್ಳುವಿಕೆಗೆ ಬಳಸುತ್ತಿದ್ದರು.

ಮಾರ್ಷಲ್ ವರದಿಯ ಬಳಿಕ, ಅಮೆರಿಕ ದೊಡ್ಡ ಮೊತ್ತವನ್ನು ಪಶ್ಚಿಮ ಜರ್ಮನಿಯಲ್ಲಿ ತೊಡಗಿಸಿ ಕೈಗಾರಿಕೆಗಳನ್ನು ನವೀಕರಿಸುವ, ಮುಕ್ತ ವಹಿವಾಟು ಸೌಲಭ್ಯ ಕಲ್ಪಿಸುವ ವ್ಯವಸ್ಥೆ ಮಾಡಿತು. ‘ಯುರೋಪ್ ಬಗೆಗಿನ ನಮ್ಮ ಧೋರಣೆ ಯಾರ ವಿರುದ್ಧವೂ ಅಲ್ಲ, ಬದಲಿಗೆ ಹಸಿವು, ಬಡತನ, ಅರಾಜಕತೆಯನ್ನು ತಹಬಂದಿಗೆ ತರುವ ಪ್ರಯತ್ನ’ ಎಂಬ ಮಾರ್ಷಲ್ ಮಾತನ್ನು ಸೋವಿಯತ್ ಬೇರೊಂದು ಬಗೆಯಲ್ಲಿ ಗ್ರಹಿಸಿತು. ಇದು ‘ಡಾಲರ್ ಸಾರ್ವಭೌಮತ್ವ’ ಎಂದು ಬಣ್ಣಿಸಿತು. ಪ್ರತಿಯಾಗಿ ಪೋಲೆಂಡ್, ಹಂಗರಿ, ಸ್ಲೊವಾಕಿಯ ಮೇಲೆ ನಿಯಂತ್ರಣ ಸಾಧಿಸಲು ಸ್ಟಾಲಿನ್ ಮುಂದಾದರು. ಪೊಲೀಸ್, ಸೇನೆ, ನ್ಯಾಯಾಂಗ, ಮಾಧ್ಯಮಗಳ ಮೇಲೆ ಸೋವಿಯತ್ ಸವಾರಿ ಮಾಡಿತು. ಯುರೋಪ್ ಹೋಳಾಯಿತು.

ಚರ್ಚಿಲ್ ಅದನ್ನು ‘ಐರನ್ ಕರ್ಟನ್’ ಎಂದು ಬಣ್ಣಿಸಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ್ದ ಸ್ಟಾಲಿನ್, ಚರ್ಚಿಲ್ ಮಾತನ್ನು ‘ಯುದ್ಧಮೋಹಿಯ ಪ್ರಚೋದನೆ’ ಎಂದು ಜರೆದರು. ಈ ನಡುವೆ 1949ರಲ್ಲಿ ಅಮೆರಿಕ, ಕೆನಡಾ ಮತ್ತು ಪಶ್ಚಿಮ ಯುರೋಪ್ ದೇಶಗಳು, ಸಾಮರಿಕವಾಗಿ ಪರಸ್ಪರ ಸ್ಪಂದಿಸುವ ‘ನ್ಯಾಟೊ’ ಒಪ್ಪಂದಕ್ಕೆ ಸಹಿ ಹಾಕಿದವು. ಸ್ಟಾಲಿನ್ ಸುಮ್ಮನೆ ಕೂರಲಿಲ್ಲ. ಪೂರ್ವ ಯುರೋಪ್ ಜೊತೆಗೂಡಿ ಕಾಮಿಕಾನ್ (COMECON) ಒಕ್ಕೂಟ ರಚಿಸಿಕೊಂಡರು. ಅದೇ ವರ್ಷ ಮೊದಲ ಅಣುಬಾಂಬ್ ಪರೀಕ್ಷೆಯನ್ನು ಸೋವಿಯತ್ ನಡೆಸಿತು. ಪೂರ್ವ ಜರ್ಮನಿಯಲ್ಲಿ ಗೋಡೆಯೊಂದು ಎದ್ದಿತು. ಅದು ಅಮೆರಿಕ-ಸೋವಿಯತ್ ನಡುವಿನ ಶೀತಲ ಸಮರದ ಅಡಿಗಲ್ಲಾಯಿತು. ಹೀಗೆ ರಣೋತ್ಸಾಹ ಜಾಗೃತಿಗೊಳ್ಳುತ್ತಿದ್ದಂತೆ ಎಚ್ಚೆತ್ತ ಐರೋಪ್ಯ ದೇಶಗಳ ಮುಖಂಡರು, ಎರಡು ದೈತ್ಯ ಶಕ್ತಿಗಳನ್ನು ಪಕ್ಕಕ್ಕಿರಿಸಿ ತಮ್ಮದೇ ಆದ ಒಕ್ಕೂಟ ರಚನೆಗೆ ಮುಂದಾದರು. ‘ಆರ್ಥಿಕ ವಲಯದ ನಿಕಟ ಸ್ನೇಹ, ರಾಜಕೀಯವಾಗಿಯೂ ದೇಶ ದೇಶಗಳ ನಡುವೆ ಸಂಬಂಧವನ್ನು ಉತ್ತಮಗೊಳಿಸುತ್ತದೆ’ ಎಂಬುದು ಒಕ್ಕೂಟ ಸ್ಥಾಪಕರ ನಂಬಿಕೆಯಾಗಿತ್ತು. ಅದು ನಿಜವಾಯಿತು ಕೂಡ.

ಆರ್ಥಿಕತೆಯನ್ನು ಸಬಲಗೊಳಿಸುವುದನ್ನೇ ಮುಖ್ಯ ಗುರಿಯಾಗಿಸಿಕೊಂಡು ಸರತಿಯಲ್ಲಿ ಹಲವು ಒಪ್ಪಂದಗಳಾದವು. 1951ರಲ್ಲಿ ಫ್ರಾನ್ಸ್ ಮತ್ತು ಪಶ್ಚಿಮ ಜರ್ಮನಿ ವ್ಯಾಪಾರ ಸಂಬಂಧ ಒಡಂಬಡಿಕೆ ಮಾಡಿಕೊಂಡವು. ಈ ಎರಡರ ಜೊತೆ ಇಟಲಿ, ಬೆಲ್ಜಿಯಂ, ನೆದರ್‌ಲ್ಯಾಂಡ್‌ ದೇಶಗಳೂ ಕೈ ಜೋಡಿಸಿದಾಗ ‘ಉಕ್ಕು ಮತ್ತು ಕಲ್ಲಿದ್ದಲು ಒಕ್ಕೂಟ’ ಅಸ್ತಿತ್ವಕ್ಕೆ ಬಂತು. ನಂತರ ಅದು ‘ಯುರೋಪ್ ಎಕಾನಮಿಕ್ ಕಮ್ಯುನಿಟಿ’ಯಾಗಿ ಒಂದೊಂದೇ ದೇಶವನ್ನು ಜೋಡಿಸಿಕೊಳ್ಳುತ್ತಾ ‘ಐರೋಪ್ಯ ಒಕ್ಕೂಟ’ವಾಗಿ ಬಲಗೊಂಡಿತು. ಸುಮಾರು 23 ಅಧಿಕೃತ ಭಾಷೆಗಳನ್ನಾಡುವ ಜನರಿದ್ದಾಗ, ವಿವಿಧ ಸಂಸ್ಕೃತಿ, ಜೀವನಕ್ರಮ ಒಂದೇ ಚಾವಣಿಯಡಿ ಬಂದಾಗ ಏಕಾಭಿಪ್ರಾಯ ಅಸಾಧ್ಯ. ಅಂತೆಯೇ ಒಕ್ಕೂಟದ ನಿರ್ಧಾರಕ್ಕೆ ಸಂಬಂಧಿಸಿದಂತೆ ಮುನಿಸು, ತೀಕ್ಷ್ಣ ಮಾತುಗಳು ಒಕ್ಕೂಟದ ಸದಸ್ಯ ರಾಷ್ಟ್ರಗಳ ನಡುವೆ ಇದ್ದವು. ಮುಖ್ಯವಾಗಿ, ಒಂದು ಹಂತದಲ್ಲಿ ಜಗತ್ತನ್ನೇ ಅಡಿಯಾಳು ಮಾಡಿಕೊಂಡು ಸಿಂಹಾಸನದಲ್ಲಿ ಕುಳಿತಿದ್ದ ಬ್ರಿಟನ್, ತನ್ನ ಸಾರ್ವಭೌಮತ್ವಕ್ಕೆ ಒಕ್ಕೂಟ ವ್ಯವಸ್ಥೆಯಿಂದ ಧಕ್ಕೆಯಾಗುತ್ತಿದೆ ಎಂಬ ಭಾವವನ್ನು ಆಂತರ್ಯದಲ್ಲಿ ಪೋಷಿಸುತ್ತಿತ್ತು. ಆದರೆ ಯುದ್ಧೋತ್ತರ ಸಮಸ್ಯೆಗಳಿಗೆ ಪರಿಹಾರವಾಗಿ ರೂಪುಗೊಂಡ ಒಕ್ಕೂಟ ವ್ಯವಸ್ಥೆಯಿಂದ ಕಮ್ಯುನಿಸಮ್ ವಿಸ್ತರಣೆಗೆ ಲಗಾಮು ಬಿತ್ತು. ರಷ್ಯಾ ಪ್ರಭಾವಕ್ಕೆ ಒಳಪಟ್ಟಿದ್ದ ಯುರೋಪಿನ ಪೂರ್ವ ದೇಶಗಳು, ಸರ್ವಾಧಿಕಾರದಿಂದ ಬಿಡಿಸಿಕೊಂಡಿದ್ದ ದಕ್ಷಿಣ ಐರೋಪ್ಯ ರಾಷ್ಟ್ರಗಳು ಒಕ್ಕೂಟದ ಭಾಗವಾಗಿ ಅದರ ಧ್ಯೇಯೋದ್ದೇಶಗಳಿಗೆ ಬದ್ಧವಾದವು.

ಸರಕು ಸಾಗಣೆಯಷ್ಟೇ ಅಲ್ಲ, ಜನಸಂಚಾರ ಮತ್ತು ಸೇವಾ ವಲಯಕ್ಕೂ ಮುಕ್ತ ಅವಕಾಶ ದೊರೆಯಿತು. ವಿಶ್ವದ ಶೇಕಡ 20ರಷ್ಟು ವಹಿವಾಟು ಈ ಒಕ್ಕೂಟದ ಮೂಲಕವೇ ನಡೆಯುವಷ್ಟು ಐರೋಪ್ಯ ಒಕ್ಕೂಟ ಸಮರ್ಥವಾಯಿತು. ಒಕ್ಕೂಟದ ಸದಸ್ಯ ರಾಷ್ಟ್ರಗಳು ಶಕ್ತಿ ಪಡೆದುಕೊಂಡವು. ಆದರೆ ಕಾಲ ಸರಿದು ಜಾಗತಿಕ ಆರ್ಥಿಕ ತಲ್ಲಣದ ಬಿರುಗಾಳಿ ಬೀಸಿದಾಗ ಒಕ್ಕೂಟ ಜಡತ್ವ ತೋರಿತು. ಒಕ್ಕೂಟದ ಉದಾರ ಧೋರಣೆಗಳೇ ಸಂಕಷ್ಟಕ್ಕೂ ಕಾರಣವಾದವು. ಅರ್ಥ ವ್ಯವಸ್ಥೆ ಮ್ಲಾನಗೊಂಡಿತು. ಆರ್ಥಿಕ ಶಿಸ್ತು ಕ್ರಮದ ಬಳಿಕವೂ, ‘ಯುರೋ ವಲಯ’ ಸಮಸ್ಥಿತಿ ಸಾಧಿಸಲು ಸಾಧ್ಯವಾಗಲಿಲ್ಲ. ನಿರುದ್ಯೋಗ ಸಮಸ್ಯೆ ಹೆಚ್ಚಿತು. ವರ್ಷದ ಕೆಳಗೆ ಗ್ರೀಸ್ ದಿವಾಳಿ ಘೋಷಿಸಿದ ಬಳಿಕ ಆರ್ಥಿಕ ಹೊರೆ ಮತ್ತಷ್ಟು ಹೆಚ್ಚಿತು. ಮಾರುಕಟ್ಟೆಯ ತಳಮಳ ಮುಂದುವರೆಯಿತು. ಮೊದಲಿಗೆ ಅನುಕೂಲಕರವಾಗಿದ್ದ ಏಕ ಮಾರುಕಟ್ಟೆ ಹಲವು ಸಮಸ್ಯೆಗಳನ್ನು, ಮಿತಿಗಳನ್ನು ಇತ್ತೀಚಿನ ವರ್ಷಗಳಲ್ಲಿ ಒಡ್ಡಿತು. ಮುಕ್ತ ಗಡಿ ಹೊಂದಿರುವ ಕಾರಣ, ವಲಸೆ ತಲೆನೋವಾಗಿ ಪರಿಣಮಿಸಿತು.

ಟರ್ಕಿ ಮತ್ತು ಗ್ರೀಸ್ ನಡುವಿನ ಪ್ರಮುಖ ಸಂಚಾರ ಮಾರ್ಗವನ್ನು ಮುಚ್ಚಿದ ಬಳಿಕ ಮಧ್ಯಪ್ರಾಚ್ಯ ಮತ್ತು ಆಫ್ರಿಕಾದಿಂದ ಗುಳೆ ಬರುತ್ತಿದ್ದವರ ಸಂಖ್ಯೆ ಕಡಿಮೆಯಾದರೂ, ಸಂಪೂರ್ಣವಾಗಿ ವಲಸೆಯನ್ನು ತಡೆಯಲಾಗಲಿಲ್ಲ. ವಲಸಿಗರಿಗೆ ಪುನರ್ವಸತಿ ಕಲ್ಪಿಸುವ ಹೊರೆ ಒಕ್ಕೂಟದ ಹೆಗಲಿಗೆ ಬಿದ್ದಾಗ, ಸದಸ್ಯ ರಾಷ್ಟ್ರಗಳಲ್ಲಿದ್ದ ಭಿನ್ನ ನಿಲುವು ಬಲಗೊಂಡಿತು. ‘ನಮ್ಮ ಸಂಪತ್ತು, ಉದ್ಯೋಗ ಪರರ ಪಾಲಾಗುತ್ತಿದೆ’ ಎಂಬುದು ಇದೀಗ ಒಟ್ಟಾರೆ ಜಗತ್ತಿನ ಬಡಬಡಿಕೆ. ಸಾಂಕ್ರಾಮಿಕವಾಗಿರುವ ಘೋಷಣೆ. ಐರೋಪ್ಯ ರಾಷ್ಟ್ರಗಳಲ್ಲೂ ಅದು ಕೇಳಿಬಂತು. ಇಂಗ್ಲೆಂಡಿನಲ್ಲಿ ಜನಾಂದೋಲನವೇ ನಡೆಯಿತು. ಆಗಲೇ ಒಕ್ಕೂಟದಿಂದ ಹೊರಬರಬೇಕು ಎಂಬ ಪ್ರಸ್ತಾಪ ಮುಂದೆ ಬಂದದ್ದು. ಅದೇ ಪರಿಚ್ಛೇದ 50ನ್ನು ಬಳಸುವ ಹಂತಕ್ಕೆ ತಂದದ್ದು.

ಹಾಗಾದರೆ ಐರೋಪ್ಯ ಒಕ್ಕೂಟ ತೊರೆದಿರುವುದರಿಂದ ಬ್ರಿಟನ್ನಿಗೆ ಲಾಭವಿದೆಯೇ? ತೆರೇಸಾ ಮೇ ಮುಂದಿಡುತ್ತಿರುವ ಅಂಶಗಳೆಂದರೆ, ಒಕ್ಕೂಟದಿಂದ ಹೊರಹೋಗಿ ಸ್ಪರ್ಧಾತ್ಮಕ ಅರ್ಥವ್ಯವಸ್ಥೆಯನ್ನು ರೂಪಿಸಬಹುದು. ಒಕ್ಕೂಟದ ಹಲವು ಸದಸ್ಯ ರಾಷ್ಟ್ರಗಳಲ್ಲಿ ಅರಾಜಕತೆ, ಸರ್ವಾಧಿಕಾರದ ಸಮಸ್ಯೆ ಇದೆ. ಅದರ ಪರಿಣಾಮ ಬ್ರಿಟನ್ ಮೇಲೆ ಆಗದಂತೆ ನೋಡಿಕೊಳ್ಳಬಹುದು. ಯಾರೊಂದಿಗೆ ವ್ಯಾಪಾರ, ಒಪ್ಪಂದ ಮಾಡಿಕೊಳ್ಳಬೇಕು ಎಂಬ ನಿರ್ಧಾರ ಸ್ವಂತದ್ದಾಗಿರುತ್ತದೆ. ಒಕ್ಕೂಟದ ಸದಸ್ಯತ್ವ ಶುಲ್ಕವಾಗಿ ನೀಡುತ್ತಿರುವ ದೊಡ್ಡ ಮೊತ್ತವನ್ನು ರಚನಾತ್ಮಕ ಕಾರ್ಯಕ್ಕೆ ಬಳಸಬಹುದು. ಹೀಗೆ ಲಾಭದ ಮಾತುಗಳು ಸಾಗಿದರೆ, ಬ್ರಿಟನ್ ಮುಂದೆ ಸವಾಲುಗಳೂ ಇವೆ. ಒಕ್ಕೂಟದ ಮೂಲಕ ಸಿಗುತ್ತಿದ್ದ ಅನೇಕ ಸವಲತ್ತುಗಳನ್ನು ಇಂಗ್ಲೆಂಡ್ ಕಳೆದುಕೊಳ್ಳುತ್ತದೆ. ಸ್ವಯಂಶಕ್ತಿಯಿಂದ ತನ್ನ ವ್ಯವಸ್ಥೆಯನ್ನು ರೂಪಿಸಿಕೊಳ್ಳಬೇಕಾಗುತ್ತದೆ. ಈಗಾಗಲೇ ಒಕ್ಕೂಟದ ಪ್ರಬಲ ರಾಷ್ಟ್ರಗಳು ಒಕ್ಕೂಟ ತೊರೆಯುವ ಕರಾರಿಗೆ ಕೆಂಪು ಗೆರೆ ಎಳೆದು ಪ್ರಕ್ರಿಯೆಯನ್ನು ಜಟಿಲಗೊಳಿಸಿವೆ. ಪರಿಚ್ಛೇದ 50ರ ಅನ್ವಯ ವಿಚ್ಛೇದನ ಪ್ರಕ್ರಿಯೆಯನ್ನು ಎರಡು ವರ್ಷದಲ್ಲಿ ಮುಗಿಸಬೇಕಾದ ಅನಿವಾರ್ಯ ಇದೆ. ಆ ಕಾಲಾವಕಾಶ ತೀರಾ ಕಡಿಮೆ.

ಇನ್ನು, ಒಕ್ಕೂಟಕ್ಕೂ ಭವಿಷ್ಯದ ಚಿಂತೆ ಕಾಡುತ್ತಿದೆ. ಇದೀಗ ಬ್ರಿಟನ್ ಹೊರತುಪಡಿಸಿ 27 ರಾಷ್ಟ್ರಗಳು ಒಕ್ಕೂಟದಲ್ಲಿ ಉಳಿದಿದ್ದರೂ ಆ ದೇಶಗಳಲ್ಲೂ ಒಕ್ಕೂಟದ ಕಾರ್ಯವೈಖರಿಯ ಬಗ್ಗೆ ಅಸಮಾಧಾನವಿದೆ. ಹಲವು ಸದಸ್ಯ ರಾಷ್ಟ್ರಗಳಲ್ಲಿ ಈಗಾಗಲೇ ಒಕ್ಕೂಟ ವಿರೋಧಿ ನಿಲುವು ಜನಮನ್ನಣೆ ಪಡೆಯುತ್ತಿದೆ. ಒಕ್ಕೂಟದ ಸ್ಥಾಪಕ ರಾಷ್ಟ್ರ ಎನಿಸಿಕೊಂಡಿರುವ ಫ್ರಾನ್ಸ್ ಕೂಡ ‘ಫ್ರೆಕ್ಸಿಟ್’ಗೆ ಮುಂದಾಗಲಿದೆ ಎಂಬ ಬಗ್ಗೆ ಚರ್ಚೆಯಾಗುತ್ತಿದೆ. ಫ್ರಾನ್ಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಮರೀನ್ ಲೇ ಪೆನ್, ಒಕ್ಕೂಟ ವಿರೋಧಿ ಚಳವಳಿಯ ಪ್ರಮುಖ ಧ್ವನಿಯಾಗಿದ್ದಾರೆ. ಮುಂದಿನ ತಿಂಗಳು ನಡೆಯುವ ಚುನಾವಣೆಯಲ್ಲಿ ಅವರು ಗೆಲ್ಲದಿದ್ದರೂ, ಎರಡನೇ ಸ್ಥಾನವಂತೂ ಖಚಿತ ಎಂದು ಹೇಳಲಾಗುತ್ತಿದೆ. ಇತ್ತೀಚೆಗೆ ನಡೆದ ನೆದರ್‌ಲ್ಯಾಂಡ್‌ ಚುನಾವಣೆಯಲ್ಲಿ ಒಕ್ಕೂಟ ವಿರೋಧಿ ನಿಲುವನ್ನು ಪ್ರತಿಪಾದಿಸಿದ್ದ ಗೀರ್ಟ್ ವೈಲ್ಡರ್ಸ್ ಹೆಚ್ಚು ಸ್ಥಾನ ಗಳಿಸಲು ವಿಫಲವಾದರೂ, ಒಕ್ಕೂಟದಿಂದ ಹೊರಬರಬೇಕೆನ್ನುವ ನಿಟ್ಟಿನಲ್ಲಿ ಜನಾಭಿಪ್ರಾಯ ರೂಪಿಸುವಲ್ಲಿ ಸಫಲರಾಗಿದ್ದಾರೆ.

ಜರ್ಮನಿ ಈ ವರ್ಷದ ಸೆಪ್ಟೆಂಬರ್ ವೇಳೆಗೆ ಚುನಾವಣೆಗೆ ಹೋಗಲಿದೆ. ಅಲ್ಲೂ ಒಕ್ಕೂಟ ವಿರೋಧಿ ಧ್ವನಿ ಚಿಗುರಿದೆ. ಇಟಲಿಯಲ್ಲಿ ಮುಂದಿನ ವರ್ಷ ಚುನಾವಣೆ ನಡೆಯುತ್ತದೆ. ಅಲ್ಲಿನ ಎರಡು ಪ್ರಮುಖ ಪಕ್ಷಗಳು ಈಗಾಗಲೇ ಅಪಸ್ವರ ತೆಗೆದಿವೆ. ಜಾಗತಿಕವಾಗಿ ಬಲಾಢ್ಯ ಎನಿಸಿಕೊಂಡಿರುವ ರಷ್ಯಾ ಮತ್ತು ಅಮೆರಿಕ, ಒಕ್ಕೂಟದ ಬಗ್ಗೆ ಆಸಕ್ತಿ ಕಳೆದುಕೊಂಡಿವೆ. ಅತ್ತ ಪುಟಿನ್ ಮತ್ತು ಇತ್ತ ಡೊನಾಲ್ಡ್ ಟ್ರಂಪ್ ಐರೋಪ್ಯ ಒಕ್ಕೂಟ ಮತ್ತು ನ್ಯಾಟೊ ಬಗ್ಗೆ ಅಸಡ್ಡೆಯ ಮಾತುಗಳನ್ನೇ ಆಡುತ್ತಾ ಬಂದಿದ್ದಾರೆ. ಇದು ಒಕ್ಕೂಟವನ್ನು ಮತ್ತಷ್ಟು ಅಧೀರಗೊಳಿಸಿದೆ.

ಹಾಗೆ ನೋಡಿದರೆ ಒಕ್ಕೂಟ ಸ್ಥಾಪನೆಯ ಮುಖ್ಯ ಆಶಯ, ಯುರೋಪಿನಲ್ಲಿ ಜರ್ಮನಿ ಮತ್ತೊಮ್ಮೆ ತನ್ನ ಪ್ರಾಬಲ್ಯ ಮೆರೆಯುವಂತಾಗಬಾರದು ಎಂಬುದಾಗಿತ್ತು. ಇದೀಗ ಚಕ್ರ ಒಂದು ಸುತ್ತು ಬಂದಂತೆ ಕಾಣುತ್ತಿದೆ. ಬ್ರಿಟನ್ ಒಕ್ಕೂಟ ತೊರೆದಿರುವುದರಿಂದ ಜರ್ಮನಿಯು ಒಕ್ಕೂಟದ ಮೇಲೆ ತನ್ನ ಹಿಡಿತವನ್ನು ಬಲಪಡಿಸಿಕೊಂಡಂತಾಗಿದೆ. ಮುಂದಿನ ಫ್ರಾನ್ಸ್ ಚುನಾವಣೆಯಲ್ಲಿ ಎಮ್ಯಾನುಯೆಲ್ ಮೇಕ್ರಾನ್ ಗೆದ್ದು ಅಧಿಕಾರ ಹಿಡಿದರೆ, ಜರ್ಮನಿಯಲ್ಲಿ ಏಂಜೆಲಾ ಮರ್ಕೆಲ್ ಅಥವಾ ಮಾರ್ಟಿನ್ ಶಲ್ಸ್ ಮೇಲುಗೈ ಸಾಧಿಸಿದರೆ ಒಕ್ಕೂಟದ ಪರ ಧ್ವನಿ ಗಟ್ಟಿಗೊಳ್ಳಬಹುದು, ಒಕ್ಕೂಟ ಉಳಿಸಿಕೊಳ್ಳುವ ಮಾರ್ಗ ಹುಡುಕಬಹುದು.

ಒಂದೊಮ್ಮೆ, ಒಕ್ಕೂಟ ತನ್ನ ಆರಂಭಿಕ ಉದ್ದೇಶಗಳಿಗೆ ಅಂಟಿಕೊಂಡು, ಸದಸ್ಯ ರಾಷ್ಟ್ರಗಳಿಗೆ ಅದರಿಂದ ಆಗುತ್ತಿರುವ ಪ್ರಯೋಜನವನ್ನು ಮನವರಿಕೆ ಮಾಡಿಕೊಡದಿದ್ದರೆ, ಶಿಸ್ತು ಕ್ರಮಗಳಿಂದ ಆರ್ಥಿಕ ಕುಸಿತ, ವಲಸೆ, ನಿರುದ್ಯೋಗ ಸಮಸ್ಯೆಗಳಿಗೆ ಉತ್ತರ ಹುಡುಕದಿದ್ದರೆ, 60ರ ಪ್ರಾಯದ ಒಕ್ಕೂಟ ಇತಿಹಾಸ ಪುಟಗಳಲ್ಲಿ ಮಾತ್ರ ಉಳಿಯುತ್ತದೆ. ಯುದ್ಧೋನ್ಮಾದದ ಸಮಯದಲ್ಲಿ, ಶಾಂತಿ ಸ್ಥಾಪನೆಗಾಗಿ ರಚನೆಯಾದ ಒಕ್ಕೂಟ, ಸಮೃದ್ಧ ಯುರೋಪಿಗೆ ಕಾರಣವಾಯಿತು. ಇದೀಗ ಅಪಸ್ವರಗಳಿಂದ ಕುಸಿಯುತ್ತಿದೆ. ಯುರೋಪಿನ ಏಕತೆಗೆ ಧಕ್ಕೆ ಉಂಟಾದರೆ, ಅದರ ಸಾರ್ವಭೌಮತ್ವ ನಾಶವಾಗುತ್ತದೆ. ಜಾಗತಿಕವಾಗಿ ಯುರೋಪಿನ ಶಕ್ತಿ ಕುಂದುತ್ತದೆ. ಹಾಗಾದರೆ ಮುಂದೇನು? ಕಾದು ನೋಡಬೇಕಷ್ಟೆ.

Comments
ಈ ವಿಭಾಗದಿಂದ ಇನ್ನಷ್ಟು
ವೇಲ್ಸ್ ರಾಜಕುಮಾರನಿಗೆ ಸಿಕ್ಕಳಲ್ಲ ಸಿಂಡ್ರೆಲಾ!

ಸೀಮೋಲ್ಲಂಘನ
ವೇಲ್ಸ್ ರಾಜಕುಮಾರನಿಗೆ ಸಿಕ್ಕಳಲ್ಲ ಸಿಂಡ್ರೆಲಾ!

29 Dec, 2017
ಗೋಳು ಗೋಡೆಯ ಊರಿಗೆ ಒಡೆಯನ್ಯಾರು?

ಸೀಮೋಲ್ಲಂಘನ
ಗೋಳು ಗೋಡೆಯ ಊರಿಗೆ ಒಡೆಯನ್ಯಾರು?

15 Dec, 2017
ನೂರರ ಇಂದಿರಾಗೆ ಇಂತಿ ನಮಸ್ಕಾರ

ಸೀಮೋಲ್ಲಂಘನ
ನೂರರ ಇಂದಿರಾಗೆ ಇಂತಿ ನಮಸ್ಕಾರ

1 Dec, 2017
ತೈಲದ ಥೈಲಿಯಾಚೆ ಸೌದಿ ಸಲ್ಮಾನ್ ಕನಸು

ಸೀಮೋಲ್ಲಂಘನ
ತೈಲದ ಥೈಲಿಯಾಚೆ ಸೌದಿ ಸಲ್ಮಾನ್ ಕನಸು

17 Nov, 2017
ಕೆನಡಿ ಹತ್ಯೆ: ಇದು ಹೂಟದ ಕತೆಗಳ ಜೂಟಾಟ

ಸೀಮೋಲ್ಲಂಘನ
ಕೆನಡಿ ಹತ್ಯೆ: ಇದು ಹೂಟದ ಕತೆಗಳ ಜೂಟಾಟ

3 Nov, 2017