‘ದಕ್ಷಿಣಾಯನ’: ಅರ್ಥಪೂರ್ಣ ವಿಶ್ಲೇಷಣೆ ನಡೆಯಲಿ

ಶಿವಮೊಗ್ಗದ ಸಮಾವೇಶದಲ್ಲಿ ಕರ್ನಾಟಕದ ಲೇಖಕರು ಮತ್ತು ಕಲಾವಿದರು ವರ್ತಮಾನದ ವಾಸ್ತವದ ಬಗ್ಗೆ ಸಿದ್ಧ ಸೂತ್ರಗಳ ಉತ್ತರಗಳನ್ನು ದಾಟಿ, ಅರ್ಥಪೂರ್ಣ ವಿಶ್ಲೇಷಣೆಯಲ್ಲಿ ತೊಡಗಿಸಿಕೊಳ್ಳಲಿ. ನಮಗಿಂದು ಅಗತ್ಯವಿರುವುದು ವಸ್ತುನಿಷ್ಠ, ಚೈತನ್ಯಶೀಲ ವೈಚಾರಿಕತೆ ಮತ್ತು ನಿರ್ದಾಕ್ಷಿಣ್ಯವಾದ ನೈತಿಕತೆ.

‘ದಕ್ಷಿಣಾಯನ’: ಅರ್ಥಪೂರ್ಣ ವಿಶ್ಲೇಷಣೆ ನಡೆಯಲಿ

ಶಿವಮೊಗ್ಗದಲ್ಲಿ ನಾಳೆ (ಏ. 8) ‘ದಕ್ಷಿಣಾಯನ- ಕರ್ನಾಟಕ’ದ ಸಮಾವೇಶ ನಡೆಯಲಿದೆ. ಕನ್ನಡದ ಲೇಖಕರು ಮತ್ತು ಕಲಾವಿದರು ಒಂದೆಡೆ ಸೇರಿ, ಭಾರತದಲ್ಲಿ ಇಂದು ಚಾಲ್ತಿಯಲ್ಲಿರುವ ದ್ವೇಷ ರಾಜಕಾರಣದ ಸ್ವರೂಪವನ್ನು, ಅದಕ್ಕೆ ಪರ್ಯಾಯಗಳನ್ನು ಹುಡುಕುವ ಪ್ರಯತ್ನವನ್ನು ಮಾಡಲಿದ್ದಾರೆ. ಕಲಬುರ್ಗಿಯವರ ಹತ್ಯೆಯ ನಂತರ ಪ್ರಾರಂಭವಾದ ಅಭಿವ್ಯಕ್ತಿ ಸ್ವಾತಂತ್ರ್ಯದ ಕುರಿತಾದ ಚರ್ಚೆ- ಸಂಘರ್ಷಗಳನ್ನು ಭಾರತೀಯ ನಾಗರಿಕತೆಯ ಬಹುಸಂಸ್ಕೃತಿ ನೆಲೆಗಳನ್ನು ಉಳಿಸಿಕೊಳ್ಳುವ ವಿಶಾಲ ನೆಲೆಯ ನವ ಹೋರಾಟವೊಂದಾಗಿ ಪರಿವರ್ತಿಸುವ ಮಹತ್ವಾಕಾಂಕ್ಷಿ ಪ್ರಯತ್ನವಿದು. ಈ ಪ್ರಯತ್ನದಲ್ಲಿ ತೊಡಗಿರುವ ಲೇಖಕರು ಮತ್ತು ಕಲಾವಿದರ ಮುಂದಿರುವ ಸವಾಲುಗಳ ಬಗ್ಗೆ ಕೆಲವು ಟಿಪ್ಪಣಿಗಳನ್ನು ಓದುಗರೊಡನೆ ಹಂಚಿಕೊಳ್ಳಲು ಬಯಸುತ್ತೇನೆ.

ಎರಡು ಪರಸ್ಪರ ಸಂಬಂಧಿತ ಬೆಳವಣಿಗೆಗಳು ದಕ್ಷಿಣಾಯನ- ಕರ್ನಾಟಕ ಸಮಾವೇಶಕ್ಕೆ ಅದರ ಪ್ರಸ್ತುತತೆ ಮತ್ತು ತುರ್ತನ್ನು ಒದಗಿಸಿವೆ. ಮೊದಲನೆಯದು, 2014ರ ಲೋಕಸಭಾ ಚುನಾವಣೆ ನಂತರ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಭಾರತೀಯ ಜನತಾ ಪಕ್ಷವು ದೇಶದ ಪ್ರಧಾನ ರಾಜಕೀಯ ಶಕ್ತಿಯಾಗಿ ಹೊರಹೊಮ್ಮಿದೆ. ಕಳೆದ ತಿಂಗಳು ಐದು ರಾಜ್ಯಗಳಲ್ಲಿ ನಡೆದ ವಿಧಾನಸಭಾ ಚುನಾವಣೆಗಳ ಫಲಿತಾಂಶವು ಮತ್ತೊಮ್ಮೆ ಬಿಜೆಪಿಯ ಉದಯೋನ್ಮುಖ ಪ್ರಾಬಲ್ಯವನ್ನು ಖಚಿತಪಡಿಸಿವೆ. ರಾಷ್ಟ್ರಪತಿ ಸ್ಥಾನವನ್ನು ಮತ್ತು ರಾಜ್ಯಸಭೆಯಲ್ಲಿ ಬಹುಮತವನ್ನು ಬಿಜೆಪಿ ಪಡೆಯುವುದು ಔಪಚಾರಿಕವಾಗಿ ಮಾತ್ರ ಬಾಕಿಯಿದೆ. ಅಂದರೆ ಭಾರತದ ಎಲ್ಲ ಸಂಸ್ಥೆಗಳು- ಅಧಿಕಾರ ಸ್ಥಾನಗಳು ಬಿಜೆಪಿಯ ನಿಯಂತ್ರಣದಲ್ಲಿರುತ್ತವೆ. ಆ ಸಂಸ್ಥೆಗಳಿಗೆ ಇದೊಂದು ಅಗ್ನಿಪರೀಕ್ಷೆಯೆಂದರೆ ತಪ್ಪಾಗಲಾರದು. ಹೀಗೆ ಬಿಜೆಪಿಗೆ ಅಧಿಕಾರದ ರಾಜಕಾರಣದಲ್ಲಿ ದೊರಕಿರುವ ಯಶಸ್ಸು ನಾಗರಿಕ ಸಮಾಜದೊಳಗಿನ ಅದರ ಬೆಂಬಲಿಗರಿಗೆ ಹಿಂಸೆಯನ್ನು ಒಂದು ಅಸ್ತ್ರವಾಗಿ ಬಳಸಲು ಧೈರ್ಯ ತುಂಬಿದೆ. ಆ ಕಾರಣದಿಂದಲೆ ತಮ್ಮ ಮೌಲ್ಯಗಳು ಮತ್ತು ನಂಬಿಕೆಗಳನ್ನು ಯಾರು ಹಂಚಿಕೊಳ್ಳುತ್ತಿಲ್ಲವೋ ಅವರ ವಿರುದ್ಧ ಹಿಂಸಾತ್ಮಕ ದಾಳಿಗಳು ನಿರ್ದಯವಾಗಿ ನಡೆಯುತ್ತಿವೆ. ಅಪಾರ ವೈವಿಧ್ಯವಿರುವ ನಮ್ಮ ಆಹಾರ ಪದ್ಧತಿಗಳು, ನಂಬಿಕೆಗಳು, ಭಾಷೆಗಳು ಮತ್ತಿತರ ನಾಗರಿಕ ಸಂಸ್ಕೃತಿಯ ಆಯಾಮಗಳ ಮೇಲೆ ನಾಗರಿಕ ಸಮಾಜದೊಳಗಿನಿಂದಲೇ ದಾಳಿಗಳಾಗುತ್ತಿವೆ. ಅಲ್ಲದೆ ಇಂತಹ ದ್ವೇಷದ ರಾಜಕಾರಣದ ಸಾಕಾರಮೂರ್ತಿಯಾಗಿ ಕಳೆದೆರಡು ದಶಕಗಳಿಂದ ಉತ್ತರಪ್ರದೇಶದಲ್ಲಿ ಸಕ್ರಿಯರಾಗಿದ್ದ ಮಹಂತ ಆದಿತ್ಯನಾಥರು ಅಲ್ಲಿನ ಮುಖ್ಯಮಂತ್ರಿಯಾದುದನ್ನು ಇಲ್ಲಿ ಮರೆಯುವಂತಿಲ್ಲ. ಇಂತಹ ಹಿಂಸಾತ್ಮಕ ಕೃತ್ಯಗಳನ್ನು ತಡೆಯುವ ಜವಾಬ್ದಾರಿಯನ್ನು ಹೊಂದಿರುವ ಪ್ರಭುತ್ವವು- ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಸೇರಿದಂತೆ- ತನ್ನ ಹೊಣೆಗಾರಿಕೆಯನ್ನು ನಿರ್ವಹಿಸುತ್ತಿಲ್ಲ. ಶಿವಮೊಗ್ಗದ ಸಮಾವೇಶಕ್ಕೆ ಪ್ರಸ್ತುತತೆಯನ್ನು ಒದಗಿಸುತ್ತಿರುವ ಎರಡನೆಯ ವಿದ್ಯಮಾನವಿದು. ಇದಿಷ್ಟು ನಮ್ಮ ಕಣ್ಣ ಮುಂದಿರುವ ವಾಸ್ತವವೆನ್ನುವುದನ್ನು ಬಹುಶಃ ಯಾರೂ ಅಲ್ಲಗಳೆಯುವುದಿಲ್ಲ.

ಶಿವಮೊಗ್ಗ ಸಮಾವೇಶದ ಸಂಘಟಕರು ಈ ಮೇಲಿನ ವಾಸ್ತವವನ್ನು ಫ್ಯಾಸಿಸಂ ಎನ್ನುವ ಚೌಕಟ್ಟಿನೊಳಗೆ ಹಿಡಿದಿಡಲು ಬಯಸುತ್ತಾರೆ. ಭಾರತವು ಇಂದು ನೋಡುತ್ತಿರುವ ಬಹುಸಂಖ್ಯಾತ ಕೇಂದ್ರಿತ ಹಿಂದುತ್ವದ ರಾಜಕಾರಣ ಫ್ಯಾಸಿಸ್ಟೊ ಅಲ್ಲವೊ ಎನ್ನುವ ಚರ್ಚೆಯನ್ನು ನಾನಿಲ್ಲಿ ಪ್ರಾರಂಭಿಸಲು ಇಚ್ಛಿಸುತ್ತಿಲ್ಲ. ರಹಮತ್ ತರೀಕೆರೆಯವರು ‘ಪ್ರಜಾವಾಣಿ’ಯಲ್ಲಿ ಬುಧವಾರ ಪ್ರಕಟವಾದ ತಮ್ಮ ಲೇಖನದಲ್ಲಿ ಹೇಳಿದಂತೆ ‘ಸಮುದಾಯದ ಆಶೋತ್ತರಗಳ ಜೊತೆಗೆ ಮಿಡಿಯುವ, ಅವರೊಡನೆ ಸಂವಾದ ಮಾಡುವ ಹೊಸ ನುಡಿಗಟ್ಟನ್ನು ಕಂಡುಕೊಳ್ಳುವ’ ಪ್ರಯತ್ನವನ್ನು ಈ ಸಮಾವೇಶವು ಮಾಡುವುದಾದರೆ, ಬಿಜೆಪಿಯ ರಾಜಕಾರಣವನ್ನು ಸರಳವಾಗಿ ಫ್ಯಾಸಿಸ್ಟ್ ಎಂದು ಕರೆಯದೆ, ಸ್ವಲ್ಪ ಭಿನ್ನವಾಗಿ ನೋಡಬೇಕಾದ ಅಗತ್ಯವಿದೆ.

ಈ ಮಾತುಗಳನ್ನು ಬರೆಯುವಾಗ ನಾನು ಇಂದಿರುವ ಆತಂಕದ ವಾತಾವರಣವನ್ನು, ಹಿಂಸೆಯ ಭಯವನ್ನು ಸ್ವಲ್ಪವೂ ಮರೆಮಾಚುವ ಪ್ರಯತ್ನ ಮಾಡುತ್ತಿಲ್ಲ. ಬದಲಿಗೆ, 1990ರ ದಶಕದ ರಾಮಜನ್ಮಭೂಮಿ ಕೇಂದ್ರಿತ ಹಿಂದುತ್ವದ ರಾಜಕಾರಣಕ್ಕೂ ಇಂದು ಬಿಜೆಪಿ ಸಾಧಿಸಿರುವ ರಾಜಕೀಯ ಪ್ರಾಬಲ್ಯಕ್ಕೂ ಒಂದು ಸರಳರೇಖೆಯನ್ನು ಎಳೆದು, ಫ್ಯಾಸಿಸಂನ ಹಣೆಪಟ್ಟಿ ಕಟ್ಟಿದರೆ, ಆಗ ಇಂದಿನ ವಾಸ್ತವಕ್ಕೆ ಹಾಗೂ ಅದನ್ನು ನಮ್ಮ ಸಹ ನಾಗರಿಕರು ಹೇಗೆ ಗ್ರಹಿಸುತ್ತಿದ್ದಾರೆ ಎನ್ನುವುದನ್ನು ತಪ್ಪಾಗಿ ಅರ್ಥೈಸಿಕೊಂಡಂತೆ ಆಗುತ್ತದೆ. ಹೀಗೆ ಹೇಳಲು ಮುಖ್ಯ ಕಾರಣವೆಂದರೆ, ಕಳೆದ ಮೂರು-ನಾಲ್ಕು ವರ್ಷಗಳಲ್ಲಿ ನರೇಂದ್ರ ಮೋದಿಯವರು ಬೆಳೆದಿರುವ ಬಗೆ. ಮೋದಿಯವರ ಕಟು ವಿಮರ್ಶಕರಾದ ರಾಮಚಂದ್ರ ಗುಹಾ ಮತ್ತು ಪ್ರತಾಪಭಾನು ಮೆಹ್ತಾರು ಇತ್ತೀಚಿನ ವಾರಗಳಲ್ಲಿ ಸಾರ್ವಜನಿಕವಾಗಿ ಗುರುತಿಸಿರುವಂತೆ, ಮೋದಿಯವರು ಭಾರತದ ರಾಜಕಾರಣದಲ್ಲೊಂದು ಅಭೂತಪೂರ್ವ ವಿದ್ಯಮಾನ. ರಾಷ್ಟ್ರೀಯ ನಾಯಕರಾಗಿ ಅವರು ಹೊರಹೊಮ್ಮಿರುವ ರೀತಿ ರಾಜಕಾರಣದ ಸಾಂಪ್ರದಾಯಿಕ ವಿವೇಕಕ್ಕೆ ಸವಾಲು ಹಾಕುವಂತಿದೆ. ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ ಅವರಿಗೆ ದೊರಕಿದ್ದ ಹಣೆಪಟ್ಟಿಗಳಿಗಿಂತ (ಉದಾಹರಣೆಗೆ, ಕೋಮುವಾದಿ ರಾಜಕಾರಣಿ, ಬಂಡವಾಳಶಾಹಿ ಹಾಗೂ ಉದ್ಯಮಸ್ನೇಹಿ) ಭಿನ್ನವಾದ ರಾಜಕಾರಣದ ನುಡಿಕಟ್ಟನ್ನು, ಅಭಿವೃದ್ಧಿ ಕೇಂದ್ರಿತ ಪಾಪ್ಯುಲಿಸಂ ಒಂದನ್ನು ಭಾರತದ ರಾಜಕಾರಣಕ್ಕೆ ಮೋದಿಯವರು ತಂದಿದ್ದಾರೆ. ಅವರ ವಿರೋಧಿಗಳನ್ನು ಭ್ರಷ್ಟರಂತೆ, ಸೋತವರಂತೆ ಕಾಣುವಂತೆ ಮಾಡುತ್ತ, ತನ್ನನ್ನು ಭವಿಷ್ಯದ ಬಗ್ಗೆ ಕಾಳಜಿಯಿರುವ ಸ್ವಚ್ಛ ಮತ್ತು ಕ್ರಿಯಾಶೀಲ ನಾಯಕನೆಂದು ತೋರಿಸಿಕೊಳ್ಳುವಲ್ಲಿ ಗಣನೀಯ ಯಶಸ್ಸನ್ನು ಗಳಿಸಿದ್ದಾರೆ. ರಾಷ್ಟ್ರೀಯತೆ, ಭ್ರಷ್ಟಾಚಾರವನ್ನು ತಡೆಯುವುದು ಮತ್ತು ಬಡತನ ನಿರ್ಮೂಲನೆ ಇವುಗಳ ಬಗೆಗಿನ ಚರ್ಚೆಗಳನ್ನು ಮೋದಿ ನಿಯಂತ್ರಿಸುತ್ತಿದ್ದಾರೆ. ಅವರು ಅಧಿಕಾರ ಗಳಿಸಿರುವುದು ನ್ಯಾಯಸಮ್ಮತವಾಗಿಲ್ಲ (ಇಲ್ಲೆಜಿಟಿಮೇಟ್) ಎಂದು ಅವರ ವಿರೋಧಿಗಳು ವಾದಿಸುವಂತಿಲ್ಲ. ಜಾತಿ ರಾಜಕಾರಣವನ್ನು ರಾಷ್ಟ್ರೀಯತೆಯ ಕಥನಕ್ಕೆ ತಳಕು ಹಾಕಿ, ಬಿಜೆಪಿಯ ಸಾಮಾಜಿಕ ಸಮುದಾಯಗಳ ಅಡಿಪಾಯವನ್ನು ಹಿಂದೆಂದೂ ಇಲ್ಲದಷ್ಟು ಪ್ರಮಾಣದಲ್ಲಿ ವಿಸ್ತರಿಸಿದ್ದಾರೆ. ಇದು ಬಹುಸಂಖ್ಯಾತರ ಬಲವರ್ಧನೆಯಂತೆ ಕಾಣಬಹುದು. ಆದರೆ ಅದೇ ಸಂದರ್ಭದಲ್ಲಿ ಸ್ವಚ್ಛ ಭಾರತ ಅಥವಾ ನೋಟು ಅಮಾನ್ಯೀಕರಣದಂತಹ ಕ್ರಮಗಳ ಮೂಲಕ ನಾಗರಿಕ ವರ್ಚಸ್ಸನ್ನು ಅವರು ಸೃಷ್ಟಿಸಿದ್ದಾರೆ.

ರಾಷ್ಟ್ರೀಯ ನಾಯಕನಾಗಿ ಮೋದಿಯವರು ಬೆಳೆದಿರುವ ರೀತಿ, ಅವರ ಹೊಸ ಇಮೇಜ್ ಮತ್ತು ಅವರಿಂದು ಗಳಿಸಿರುವ ಅಧಿಕೃತತೆಯನ್ನು ಕರ್ನಾಟಕದ ಲೇಖಕರು ಮತ್ತು ಕಲಾವಿದರು ಕಡೆಗಣಿಸುವಂತಿಲ್ಲ, ತಂತ್ರಗಾರಿಕೆಯೆಂದು ನಿರಾಕರಿಸುವಂತಿಲ್ಲ. ಹಾಗೆ ಮಾಡಿದಲ್ಲಿ, ಇಂದಿನ ವಾಸ್ತವವನ್ನು ಅರಿಯುವಲ್ಲಿಯೇ ಸೋತಂತಾಗುತ್ತದೆ. ಇನ್ನೂ ಮುಖ್ಯವಾಗಿ ಹಾಗೂ ಈ ಸೋಲಿನ ಪರಿಣಾಮವಾಗಿ, ನಮ್ಮ ಸಮುದಾಯದೊಡನೆಯ ಸಂಭಾಷಣೆಯನ್ನು ಅದು ಪ್ರಾರಂಭವಾಗುವುದಕ್ಕೆ ಮೊದಲೇ ನಿಲ್ಲಿಸಿದಂತಾಗುತ್ತದೆ. ಆಗ ಸಮುದಾಯಕ್ಕೆ ಕಾಣುತ್ತಿರುವ ಮೋದಿಯವರಿಗೆ ನಾವು ಕುರುಡಾಗಿಬಿಡುತ್ತೇವೆ. ಆಗ ಕನ್ನಡದ ಲೇಖಕ ಮತ್ತು ಕಲಾವಿದರು ಕಳೆದುಕೊಳ್ಳುವುದು ತಮ್ಮ ನ್ಯಾಯಸಮ್ಮತತೆಯನ್ನು, ಅಧಿಕೃತತೆಯನ್ನು. ಇಂದು ನಾವು ತೀವ್ರ ಬಿಕ್ಕಟ್ಟಿನ ಕಾಲದಲ್ಲಿದ್ದೇವೆ ಎಂದು ಕರ್ನಾಟಕದ ಲೇಖಕರು ಮತ್ತು ಕಲಾವಿದರು ವಾದಿಸುವುದಾದರೆ, ಆ ಬಿಕ್ಕಟ್ಟಿನ ವಾಸ್ತವ ಕೇವಲ ಬಹುಸಂಖ್ಯಾತರನ್ನು ಸಂಘಟಿಸಬಯಸುವ ಸಂಘ ಪರಿವಾರದ ರಾಜಕಾರಣದಿಂದ ಮಾತ್ರ ಉದ್ಭವಿಸುತ್ತಿಲ್ಲ.

ಜಾಗತೀಕರಣ, ಹವಾಮಾನ ವೈಪರೀತ್ಯಗಳು, ಅಭಿವೃದ್ಧಿ ಮಾದರಿಗಳ ವೈಫಲ್ಯ, ಐಡೆಂಟಿಟಿ ರಾಜಕಾರಣ, ಸಾರ್ವಜನಿಕ ನೈತಿಕತೆಯ ಕೊರತೆ ಇತ್ಯಾದಿ ಹಲವಾರು ಆಯಾಮಗಳಿರುವ ವಿಶಾಲನೆಲೆಯಲ್ಲಿ ಸಾಗಬೇಕಿರುವ ಈ ಚರ್ಚೆಯನ್ನು ನಡೆಸಲು ಅಂಕಣದ ವ್ಯಾಪ್ತಿಯೊಳಗೆ ಅಸಾಧ್ಯ. ಈ ಹಿನ್ನೆಲೆಯಲ್ಲಿ ಕನ್ನಡದ ಲೇಖಕರು ಮತ್ತು ಕಲಾವಿದರ ಸಂದರ್ಭದಲ್ಲಿ ಪ್ರಸ್ತುತವಾಗುವ ಕೆಲವು ಅಂಶಗಳನ್ನು ಪ್ರಸ್ತಾಪಿಸಬಯಸುತ್ತೇನೆ.

ಶಿವಮೊಗ್ಗದ ಸಮಾವೇಶ ಕನ್ನಡದ ಲೇಖಕರು ಮತ್ತು ಕಲಾವಿದರಿಗೆ ಆತ್ಮಪರೀಕ್ಷೆಗೊಂದು ಅವಕಾಶ. ಕಳೆದ ಮೂರು ದಶಕಗಳಲ್ಲಿ ಕನ್ನಡದ ಬೌದ್ಧಿಕತೆ ಹೊರಗಿನ ಪ್ರಪಂಚದೊಡನೆ ಅನುಸಂಧಾನ ಮಾಡುವಲ್ಲಿ ಸೋತಿದೆ. ಮನುಷ್ಯನ ಇತಿಹಾಸದಲ್ಲಿಯೇ ಅತ್ಯಂತ ಕ್ಷಿಪ್ರಗತಿಯಲ್ಲಿ ಬದಲಾವಣೆಗಳಾಗುತ್ತಿದ್ದ ಕಾಲಘಟ್ಟದಲ್ಲಿ ಕರ್ನಾಟಕಕ್ಕೆ ಅಗತ್ಯವಾದ ಹೊಸ ಲೋಕಜ್ಞಾನವನ್ನು, ವೈಚಾರಿಕತೆಯನ್ನು ಒದಗಿಸುವಲ್ಲಿ ನಾವು ವಿಫಲರಾಗಿದ್ದೇವೆ. ಇದು ನಮ್ಮ ಸಾರ್ವಜನಿಕ ಜೀವನದ ಮೇಲೆ ಸಹ ಪರಿಣಾಮ ಬೀರಿದೆ. ಚೈತನ್ಯಶೀಲ ಸಾಮಾಜಿಕ ಚಳವಳಿಗಳು ಇತ್ತೀಚಿನ ದಶಕಗಳಲ್ಲಿ ನಮ್ಮಲ್ಲಿ ಹುಟ್ಟಲಿಲ್ಲ. ಅಲ್ಲದೆ ಇದ್ದ ಚಳವಳಿಗಳೂ ಸೊರಗಿದವು, ತಮ್ಮ ವೈಚಾರಿಕತೆ, ನೈತಿಕ ಶಕ್ತಿ ಮತ್ತು ಸಾಮಾಜಿಕ ಪ್ರಸ್ತುತತೆಗಳನ್ನು ಕಳೆದುಕೊಂಡವು. ಅಧಿಕಾರಸ್ಥರ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳತೊಡಗಿದವು.

ಈ ನಡುವೆ ಕಡಿಮೆ ಕೆಡುಕನ್ನು ಮಾಡುವವರ ಹುಡುಕಾಟದಲ್ಲಿ, ಸಾರ್ವಜನಿಕ ಒಳಿತಿನ ಬಗೆಗಿನ ಕಾಳಜಿಯನ್ನೇ ಕಳೆದುಕೊಂಡಿದ್ದೇವೆಯೇ ಎನ್ನುವ ಅನುಮಾನ ಕಾಡುತ್ತದೆ. ಅಧಿಕಾರದಲ್ಲಿರುವವರು ಮತ್ತು ಅವರ ಕುಟುಂಬದವರು ಸ್ವಯಂ ಬಡತನವನ್ನು ಅಳವಡಿಸಿಕೊಳ್ಳಬೇಕು ಎಂದು ನಾವು ಒತ್ತಾಯಿಸಿದ್ದು ಯಾವಾಗ? ರಾಜಕಾರಣದಲ್ಲಿರುವವರು ಉದ್ದಿಮೆದಾರರಾಗಬಾರದು, ಸರ್ಕಾರದ ಗುತ್ತಿಗೆಗಳನ್ನು ನಿರೀಕ್ಷಿಸಬಾರದು ಎನ್ನುವ ಸಾರ್ವಜನಿಕ ಮೌಲ್ಯವನ್ನು ಮಹಂತ ಆದಿತ್ಯನಾಥ ಉತ್ತರಪ್ರದೇಶದ ಮುಖ್ಯಮಂತ್ರಿಯಾದ ಕೂಡಲೇ ಹೇಳಿದಾಗ, ಇದೊಂದು ಅಪೇಕ್ಷಣೀಯ ಮೌಲ್ಯವೆಂದು ನಾವ್ಯಾರೂ ಹೇಳಲಿಲ್ಲವೇಕೆ? ಮುಂದುವರೆದು ಹೇಳುವುದಾದರೆ, ಲೇಖಕರು ಮತ್ತು ಕಲಾವಿದರು ಅಂಗವಾಗಿದ್ದ ಸಂಸ್ಥೆಗಳು ಇತ್ತೀಚಿನ ದಶಕಗಳಲ್ಲಿ ಭ್ರಷ್ಟತೆಯ, ಜಾತಿ ರಾಜಕಾರಣದ ಕೂಪಗಳಾದಾಗ, ಆ ಬೆಳವಣಿಗೆಗಳನ್ನು ಪ್ರತಿಭಟಿಸಲಿಲ್ಲ. ಉದಾಹರಣೆಗೆ, ಶಿವಮೊಗ್ಗದಲ್ಲಿ ಭಾಗವಹಿಸುವ ಹಲವರು ಕೆಲಸ ಮಾಡುವ ಕರ್ನಾಟಕದ ವಿಶ್ವವಿದ್ಯಾಲಯಗಳನ್ನೇ ಉದಾಹರಣೆಯಾಗಿ ಪರಿಗಣಿಸಿ. ಅವುಗಳ ನೈತಿಕ ಹಾಗೂ ಬೌದ್ಧಿಕ ವೈಫಲ್ಯಗಳ ಕುರಿತಾಗಿ ಈ ಅಂಕಣದಲ್ಲಿ ಹಲವಾರು ಬಾರಿ ಬರೆದಿದ್ದೇನೆ. ಇದನ್ನು ಸಹಿಸುತ್ತ, ಮೌನವಾಗಿರುತ್ತ ಬಂದಿರುವ ನಾವು ಹೇಳುವ ಬೇರೆ ಯಾವ ಬಿಕ್ಕಟ್ಟುಗಳ ಬಗ್ಗೆ ನಮ್ಮ ಸಮುದಾಯಗಳು ಸಹಾನುಭೂತಿಯಿಂದ ನಮ್ಮ ಮಾತುಗಳನ್ನು ಕೇಳುತ್ತವೆ?

ಶಿವಮೊಗ್ಗದ ಸಮಾವೇಶದಲ್ಲಿ ಕರ್ನಾಟಕದ ಲೇಖಕರು ಮತ್ತು ಕಲಾವಿದರು ವರ್ತಮಾನದ ವಾಸ್ತವದ ಬಗ್ಗೆ ಸಿದ್ಧ ಸೂತ್ರಗಳ ಉತ್ತರಗಳನ್ನು ದಾಟಿ, ಅರ್ಥಪೂರ್ಣ ವಿಶ್ಲೇಷಣೆಯಲ್ಲಿ ತೊಡಗಿಸಿಕೊಳ್ಳಲಿ. ನಮಗಿಂದು ಅಗತ್ಯವಿರುವುದು ವಸ್ತುನಿಷ್ಠ, ಚೈತನ್ಯಶೀಲ ವೈಚಾರಿಕತೆ ಮತ್ತು ನಿರ್ದಾಕ್ಷಿಣ್ಯವಾದ ನೈತಿಕತೆ. ಇವುಗಳಿಲ್ಲದೆ ನಮ್ಮ ಕಾಲದ ಅಗತ್ಯವಾದ ಹೊಸ ಪ್ರಗತಿಪರ ವೈಚಾರಿಕತೆ ಮತ್ತು ಸಾಂಸ್ಕೃತಿಕ ರಾಜಕಾರಣವು ಹುಟ್ಟುವುದು ಕಷ್ಟಸಾಧ್ಯ.

Comments
ಈ ವಿಭಾಗದಿಂದ ಇನ್ನಷ್ಟು
ಸಂವಿಧಾನದ ಕೇಂದ್ರದಲ್ಲಿರುವುದು ವ್ಯಕ್ತಿ ಸ್ವಾತಂತ್ರ್ಯ

ನಿಜದನಿ
ಸಂವಿಧಾನದ ಕೇಂದ್ರದಲ್ಲಿರುವುದು ವ್ಯಕ್ತಿ ಸ್ವಾತಂತ್ರ್ಯ

26 Jan, 2018

ನಿಜದನಿ
ಮಹಾರರು ಎದುರಿಸುವ ಪರೀಕ್ಷೆ ರಾಜ ಮನೆತನಗಳಿಗಿಲ್ಲ

ರಾಷ್ಟ್ರಪ್ರೇಮವನ್ನು ‘ದುರ್ಜನರು ಕಡೆಯಲ್ಲಿ ಆಶ್ರಯಿಸುವ ವಿದ್ಯಮಾನ’ ಎನ್ನುತ್ತಾನೆ ಸ್ಯಾಮ್ಯುಯೆಲ್ ಜಾನ್ಸನ್. ನಾವು ಆ ಅತಿಗೆ ಹೋಗಬೇಕಿಲ್ಲ....

12 Jan, 2018
ಹೆಗಡೆ ಮಾತುಗಳು ಮನದಾಳದ ಅಭಿವ್ಯಕ್ತಿ

ನಿಜದನಿ
ಹೆಗಡೆ ಮಾತುಗಳು ಮನದಾಳದ ಅಭಿವ್ಯಕ್ತಿ

29 Dec, 2017
ಬಹು ಸಾಂಸ್ಕೃತಿಕತೆ ಮತ್ತು ಹಿಂದೂ ರಾಷ್ಟ್ರೀಯವಾದ

ನಿಜದನಿ
ಬಹು ಸಾಂಸ್ಕೃತಿಕತೆ ಮತ್ತು ಹಿಂದೂ ರಾಷ್ಟ್ರೀಯವಾದ

15 Dec, 2017
ಸಾಹಿತ್ಯ ಸಮ್ಮೇಳನದಲ್ಲಿ ರಾಜಕೀಯ ನಿಲುವು: ತಪ್ಪೇನಿದೆ?

ನಿಜದನಿ
ಸಾಹಿತ್ಯ ಸಮ್ಮೇಳನದಲ್ಲಿ ರಾಜಕೀಯ ನಿಲುವು: ತಪ್ಪೇನಿದೆ?

30 Nov, 2017