ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾರಿ ಮುಷ್ಕರದಿಂದ ತುತ್ತು ಅನ್ನಕ್ಕೂ ಕುತ್ತು

Last Updated 6 ಏಪ್ರಿಲ್ 2017, 19:53 IST
ಅಕ್ಷರ ಗಾತ್ರ

ಬೆಂಗಳೂರು: ‘ದಿನದ ದುಡಿಮೆಯೇ ಅನ್ನಕ್ಕೆ ಆಧಾರ. ನಸುಕಿನಿಂದ ತಡರಾತ್ರಿವರೆಗೆ ದುಡಿದರೆ ₹500 ಸಿಗುತ್ತೆ.  ಲಾರಿ ಮುಷ್ಕರ ಆರಂಭವಾದಾಗಿನಿಂದ  ₹100 ಸಿಗೋದು ಕಷ್ಟವಾಗಿದ್ದು, ತುತ್ತು ಅನ್ನಕ್ಕೂ ಕುತ್ತು ಬಂದಿದೆ’

– ಇದು ಯಶವಂತಪುರ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ (ಎಪಿಎಂಸಿ) ಹಮಾಲಿ ಕೆಲಸ ಮಾಡುವ ಪಿ.ಮೋಹನ್ ಅವರ ಅಳಲು.

ಇದು ಅವರೊಬ್ಬರ ಮಾತಲ್ಲ. ಹಮಾಲಿ ಕೆಲಸ ಮಾಡುವ ಸಾವಿರಾರು ಮಂದಿಯ ಸದ್ಯದ ಪರಿಸ್ಥಿತಿ. ಅವರೆಲ್ಲ ಎಪಿಎಂಸಿಯಲ್ಲಿ ಕೆಲಸಕ್ಕಾಗಿ ಮಳಿಗೆಯಿಂದ ಮಳಿಗೆಗೆ ಅಲೆಯುತ್ತಿದ್ದಾರೆ. ಈರುಳ್ಳಿ, ಆಲೂಗಡ್ಡೆ ಸೇರಿದಂತೆ ಹಲವು ಕೃಷಿ ಉತ್ಪನ್ನಗಳನ್ನು ಹೊತ್ತ ಲಾರಿಗಳು ಮಾರುಕಟ್ಟೆಗೆ ಬಾರದಿದ್ದರಿಂದ ವರ್ತಕರು ಸಹ ಟೀಗಷ್ಟೇ ದುಡ್ಡು ಕೊಟ್ಟು ಕಾರ್ಮಿಕರನ್ನು ವಾಪಸ್‌ ಕಳುಹಿಸುತ್ತಿದ್ದಾರೆ. ಹೀಗಾಗಿ  ಹಮಾಲಿ ಕೆಲಸ ಮಾಡುವವರು ಗುಂಪಾಗಿ ನಿಂತು ‘ಮುಂದೇನು?’ ಎಂದು ಚರ್ಚಿಸುವ ದೃಶ್ಯಗಳು ಸಾಮಾನ್ಯವಾಗಿವೆ.

‘ಮಾರುಕಟ್ಟೆಯಲ್ಲಿ 30 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಮುಷ್ಕರ ಇದ್ದಾಗಲೆಲ್ಲ ಇದೇ ಸ್ಥಿತಿ. ಅವಾಗೆಲ್ಲ ನಾನು ಹಾಗೂ ಮನೆಯವರು ಒಂದೇ ಹೊತ್ತು ಊಟ ಮಾಡುತ್ತೇವೆ’ ಎಂದು  ಮೋಹನ್ ಹೇಳುತ್ತಾರೆ.

‘ಪತ್ನಿ, ಪುತ್ರ ಹಾಗೂ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಪರಿಮಳನಗರ ಬಾಡಿಗೆ ಮನೆಯಲ್ಲಿ ವಾಸವಿದ್ದೇನೆ. ಫ್ಯಾಕ್ಟರಿ ಕೆಲಸಕ್ಕೆ ಹೋಗುವ ಪತ್ನಿಗೆ ತಿಂಗಳಿಗೆ ₹5,000 ಹಾಗೂ ಕೂಲಿಯಿಂದ ನನಗೆ ₹10,000 ಬರುತ್ತದೆ.  ಅಷ್ಟರಲ್ಲೇ ಮನೆ ನಡೆಸಬೇಕು. ಈಗ ಐದು ದಿನದಿಂದ ಕೂಲಿಯೇ ಇಲ್ಲ. ₹50ರಿಂದ ₹100 ಬಂದರೂ ನಮ್ಮ ದಿನನಿತ್ಯದ ಖರ್ಚಿಗೆ ಖಾಲಿಯಾಗುತ್ತಿದೆ’ ಎಂದು ತಿಳಿಸಿದರು.

‘ಬೆಳಿಗ್ಗೆಯಿಂದ ಕೆಲಸ ಸಿಕ್ಕಿಲ್ಲ’ ಎನ್ನುತ್ತಲೇ ಮಾತು ಆರಂಭಿಸಿದ ಇನ್ನೊಬ್ಬ ಕಾರ್ಮಿಕ ವೆಂಕಟರಮಣ, ‘ಪ್ರತಿದಿನ ಒಂದೇ ಮಳಿಗೆಯಲ್ಲಿ ಮೂಟೆ ಹೊರುತ್ತಿದ್ದೆವು. ಕುಟುಂಬ ನಿರ್ವಹಣೆಗೆ ಸಾಕಾಗುವಷ್ಟು ಕೂಲಿ ಸಿಗುತ್ತಿತ್ತು. ಈಗ ಆ ಮಳಿಗೆಯೂ ನಮ್ಮ ಪಾಲಿಗೆ ಮುಚ್ಚಿದಂತಾಗಿದೆ. ಬೆಳಿಗ್ಗೆಯಿಂದ ಎಲ್ಲ ಮಳಿಗೆ ಅಲೆದರೂ ಹೊರಲು ಮೂಟೆಗಳೇ ಸಿಕ್ಕಿಲ್ಲ. ಕೊನೆಯದಾಗಿ ಇಲ್ಲಿ (ಹೋಟೆಲ್‌) ಬಂದು ಕುಳಿತಿದ್ದೇವೆ’ ಎಂದು ಹೇಳಿದರು.

‘ಒಂದು ಟೀಗೆ ₹7, ಊಟ ₹50. ದಿನಕ್ಕೆ ಐದು ಬಾರಿ ಟೀ ಹಾಗೂ 2 ಬಾರಿ ಊಟ ಮಾಡಿದರೆ ₹135 ಬೇಕು. ಮೊದಲೆಲ್ಲ ಬಂದ ಹಣದಲ್ಲೇ ಟೀ, ಊಟ  ಆಗುತ್ತಿತ್ತು. ಈಗ ಮುಷ್ಕರದಿಂದ ಒಂದೇ ಬಾರಿ ಟೀ ಹಾಗೂ ಒಂದು ಊಟವೇ ಗತಿ. ಜತೆಗಿದ್ದವರ ಹತ್ತಿರ ಸಾಲ ಕೇಳೋಣ ಅಂದರೆ, ಅವರಿಗೂ ಕೆಲಸವಿಲ್ಲ’ ಎಂದು ತಮ್ಮ ಪಡಿಪಾಟಲು ತೆರೆದಿಟ್ಟರು.

‘ಮುಳಬಾಗಿಲು ನಮ್ಮೂರು. ನನಗೆ ಪತ್ನಿ, ಮೂವರು ಮಕ್ಕಳಿದ್ದು ಬಾಡಿಗೆ ಮನೆ ಮಾಡಿದ್ದೇನೆ. ಕೂಲಿಗೆಂದೇ ಬೆಂಗಳೂರಿಗೆ ಬಂದಿದ್ದೇನೆ. ದುಡಿದ ಹಣದಲ್ಲಿ ನನ್ನ ಖರ್ಚು ನೋಡಿಕೊಂಡು ₹10 ಸಾವಿರವನ್ನಾದರೂ ಪ್ರತಿ ತಿಂಗಳು ಊರಿಗೆ ಕಳುಹಿಸಬೇಕು. ಈಗ ಮುಷ್ಕರ ಎಷ್ಟು ದಿನ ನಡೆಯುತ್ತೋ ಗೊತ್ತಿಲ್ಲ. ಅಷ್ಟು ದಿನ ಕೆಲಸ ಸಿಗೋದು ಗ್ಯಾರಂಟಿ ಇಲ್ಲ. ಊರಿಗೂ ಹಣ ಕಳುಹಿಸಲು ಆಗಲ್ಲ’ ಎಂದು ವೆಂಕಟರಮಣ ಅಳಲು ತೋಡಿಕೊಂಡರು..

ಮತ್ತೊಬ್ಬ ಕಾರ್ಮಿಕ ಬೆಟ್ಟಸ್ವಾಮಿ ಮಾತನಾಡಿ, ‘ಪತ್ನಿ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಅವರ ಔಷಧಕ್ಕೆ ದಿನಕ್ಕೆ ₹200 ಬೇಕು. ದುಡಿಮೆ ಇಲ್ಲದಿದ್ದರಿಂದ ಔಷಧದ್ದೇ ಚಿಂತೆಯಾಗಿದೆ. ವರ್ತಕರನ್ನೇ ಕಾಡಿ ಬೇಡಿ ಸಾಲ ಪಡೆಯುವಂತಾಗಿದೆ’ ಎಂದು ನೋವು ತೋಡಿಕೊಂಡರು.

‘ದೊಡ್ಡ ಮಾರುಕಟ್ಟೆ ಅಂತಾ ಹೆಚ್ಚು  ಮಂದಿ ಇಲ್ಲಿ ಹಮಾಲಿ ಕೆಲಸ ಮಾಡುತ್ತಿದ್ದಾರೆ. ಈಗ ಇದ್ದಿದ್ದರಲ್ಲೇ ಹಂಚಿಕೊಂಡು ಮೂಟೆ ಹೊರುತ್ತಿದ್ದೇವೆ. ಐದು ದಿನದಿಂದ ಮೂಟೆಗಳ ಸಂಖ್ಯೆ ತೀರಾ ಕಡಿಮೆಯಿದ್ದು, ನಾನು ದಿನಕ್ಕೆ ₹80 ದುಡಿದಿದ್ದು ಹೆಚ್ಚು’ ಎಂದು ತಿಳಿಸಿದರು.

ಲಘು ವಾಹನಗಳಿಗೂ ದುಡಿಮೆ ಇಲ್ಲ: ಯಶವಂತಪುರ ಎಪಿಎಂಸಿಯಿಂದ ಕೃಷಿ ಉತ್ಪನ್ನಗಳನ್ನು ನಗರದ ವಿವಿಧ ಭಾಗಗಳಿಗೆ ಸಾಗಣೆ ಮಾಡಲು ಲಘು ವಾಹನಗಳಿದ್ದು, ಮುಷ್ಕರಿಂದ ಅವುಗಳಿಗೂ ದುಡಿಮೆ ಇಲ್ಲದಂತಾಗಿದೆ.

‘ಪ್ರತಿದಿನ ₹1,000 ಸಂಪಾದನೆ ಆಗುತ್ತಿತ್ತು. ಈಗ ಡೀಸೆಲ್‌ಗೂ ಕೈಯಿಂದ ಹಣ ಹೋಗುತ್ತಿದೆ. ಮುಷ್ಕರದಿಂದ ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದೇವೆ’ ಎಂದು ಚಾಲಕ ವಿ.ಎಸ್‌.ರವಿ ಹೇಳಿದರು.

ಬಿಡಿ ಮಾರಾಟಗಾರರಿಗೂ ಸಂಕಷ್ಟ:  ಎಪಿಎಂಸಿಗೆ ಬರುತ್ತಿದ್ದ ಈರುಳ್ಳಿ, ಆಲೂಗಡ್ಡೆ, ಬೆಳ್ಳುಳ್ಳಿ ಸೇರಿ ಹಲವು ಉತ್ಪನ್ನಗಳನ್ನು ಸಗಟು ದರದಲ್ಲಿ ಖರೀದಿಸುತ್ತಿದ್ದ ನೂರಾರು ಮಹಿಳೆಯರು, ನಗರದ ವಿವಿಧೆಡೆ ಬಿಡಿಯಾಗಿ ಮಾರಾಟ ಮಾಡುತ್ತಿದ್ದರು. ಮುಷ್ಕರದಿಂದ ಅವರು ಸಹ ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದಾರೆ.

ಮಾರುಕಟ್ಟೆಗೆ ಬಂದಿದ್ದೇ 17 ಸಾವಿರ ಮೂಟೆ: ‘ಪ್ರತಿದಿನವೂ ಮಾರುಕಟ್ಟೆಗೆ 50 ಸಾವಿರಕ್ಕೂ ಹೆಚ್ಚು ಮೂಟೆಗಳು ಬರುತ್ತಿದ್ದವು. ಐದು ದಿನಗಳಿಂದ 10ರಿಂದ 17 ಸಾವಿರ ಮೂಟೆಗಳು ಮಾತ್ರ ಬರುತ್ತಿವೆ’ ಎಂದು ಯಶವಂತಪುರ ಎಪಿಎಂಸಿ ಅಧಿಕಾರಿಯೊಬ್ಬರು ತಿಳಿಸಿದರು.

ಜಮೀನಿನಲ್ಲೇ ಈರುಳ್ಳಿ ಕೊಳೆಯುವ ಆತಂಕ

ರಾಜ್ಯದ ಕೊಪ್ಪಳ, ಗದಗ, ಧಾರವಾಡ, ದಾವಣಗೆರೆ, ಬಳ್ಳಾರಿ, ರಾಯಚೂರು, ಬಾಗಲಕೋಟೆ ಜಿಲ್ಲೆ ಹಾಗೂ ಮಹಾರಾಷ್ಟ್ರದ ನಾಸಿಕ್‌, ಔರಂಗಾಬಾದ್ ನಗರಗಳಲ್ಲಿ ಈಗ ಈರುಳ್ಳಿ ಹಾಗೂ ಆಲೂಗಡ್ಡೆ ಫಸಲು ಬರುವ ಕಾಲ. ಮುಷ್ಕರದಿಂದ ಈ ಉತ್ಪನ್ನಗಳ ಸಾಗಣೆ ಕಷ್ಟವಾಗಿದೆ.

ಈರುಳ್ಳಿ ಮಾರಾಟ ಮಾಡಲು ಬಂದಿದ್ದ ದಾವಣಗೆರೆಯ ರೈತ ಎಂ. ರಾಮಚಂದ್ರಪ್ಪ, ‘ಈರುಳ್ಳಿ ಬೆಳೆ ಕಟಾವಿಗೆ ಬಂದಿದೆ. ಅದನ್ನು ವಿಲೇವಾರಿ ಮಾಡದಿದ್ದರೆ ಜಮೀನಿನಲ್ಲೇ ಕೊಳೆಯುವ ಆತಂಕವಿದೆ’ ಎಂದು ಅಳಲು ತೋಡಿಕೊಂಡರು.

‘ವರ್ತಕರೇ ಲಾರಿಗಳನ್ನು ಜಮೀನಿಗೆ ಕಳುಹಿಸಿ ಈರುಳ್ಳಿ ಒಯ್ಯುತ್ತಿದ್ದರು. ಈ ಬಾರಿ ಕಳಿಸಿಲ್ಲ. ಅವರನ್ನು ವಿಚಾರಿಸಲೆಂದು ಬೆಳಿಗ್ಗೆಯೇ ಮಾರುಕಟ್ಟೆಗೆ ಬಂದಿದ್ದೇನೆ’ ಎಂದರು.

ಮೂಟೆಗೆ ₹5 ಕೂಲಿ
ಯಶವಂತಪುರ ಎಪಿಎಂಸಿ ಮಾರುಕಟ್ಟೆಯಲ್ಲಿ 300ಕ್ಕೂ ಹೆಚ್ಚು ವರ್ತಕರ ಮಳಿಗೆಗಳಿದ್ದು, 5 ಸಾವಿರಕ್ಕೂ ಹೆಚ್ಚು ಕೂಲಿ ಕಾರ್ಮಿಕರಿದ್ದಾರೆ.
ಮಾರುಕಟ್ಟೆಗೆ ಬರುವ ಲಾರಿಗಳಲ್ಲಿರುವ ಮೂಟೆಗಳನ್ನು ಕೆಳಗೆ ಇಳಿಸಲು ಹಾಗೂ ತುಂಬುವ ಕೆಲಸವನ್ನು ಕೂಲಿ ಕಾರ್ಮಿಕರು ಮಾಡುತ್ತಾರೆ. ಒಂದು ಮೂಟೆ ಹೊತ್ತರೆ ಅವರಿಗೆ ₹5 ಸಿಗುತ್ತದೆ. ಈಗ ಮುಷ್ಕರದಿಂದ ಹೊರಲು ಮೂಟೆಗಳೇ ಇಲ್ಲದಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT