ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲಕ್ಷಾಮಕ್ಕೆ ಕಂಗೆಟ್ಟ ಜನ, ಜಾನುವಾರು

Last Updated 7 ಏಪ್ರಿಲ್ 2017, 6:00 IST
ಅಕ್ಷರ ಗಾತ್ರ

ಜಗಳೂರು: ಹಿಂದೆಂದೂ ಕಂಡರಿಯದ ಬಿರು ಬಿಸಿಲಿಗೆ ತಾಲ್ಲೂಕಿನ ಜನ, ಜಾನುವಾರು ತ್ತರಿಸಿ ಹೋಗಿದೆ. ಹನಿ ನೀರೂ ಇಲ್ಲದೇ ಎಲ್ಲ ಕಡೆ ಕೆರೆ– ಕಟ್ಟೆಗಳು ಬತ್ತಿ ಹೋಗಿವೆ. ಭೀಕರ ಜಲಕ್ಷಾಮ ಎದುರಾಗಿದೆ.

ಸುಮಾರು 12 ಅತಿ ದೊಡ್ಡ ಕೆರೆಗಳು ಹಾಗೂ 30 ಮಧ್ಯಮ ಗಾತ್ರದ ಕೆರೆಗಳು ಬಣಗಿ ಬಿರುಕು ಬಿಟ್ಟಿರುವುದು ಬರದ ಭೀಕರತೆಗೆ ಸಾಕ್ಷಿಯಾಗಿದೆ. ಜಾನುವಾರು ಆಶ್ರಯ ಪಡೆಯುತ್ತಿದ್ದ ಪುರಾತನ ಕಾಲದ ಜಿನಿಗಿ ಹಳ್ಳ ಹಾಗೂ ಹಗರಿ ಹಳ್ಳಕ್ಕೆ ನಿರ್ಮಿಸಿರುವ ಬೃಹತ್‌ ಚೆಕ್‌ ಡ್ಯಾಂ ಸಹ ಭಣಗುಟ್ಟುತ್ತಿವೆ.

ಜಿಲ್ಲೆಯ ಅತಿದೊಡ್ಡ ಕೆರೆಗಳಲ್ಲಿ ಒಂದಾಗಿರುವ ಸಂಗೇನಹಳ್ಳಿ ಕೆರೆ ಕೆಲ ದಶಕಗಳಲ್ಲಿ ಇದೇ ಮೊದಲ ಬಾರಿ ಸಂಪೂರ್ಣ ಒಣಗಿ ನಿಂತಿದೆ. ಸುತ್ತಲಿನ ಹತ್ತಾರು ಹಳ್ಳಿಗಳ ಜೀವನಾಡಿಯಾಗಿದ್ದ ಕೆರೆ ಬತ್ತಿರುವುದರಿಂದ ಜಲಮೂಲಗಳೇ ಬರಿದಾಗಿ ಅಂತರ್ಜಲ ಪಾತಾಳಕ್ಕೆ ಕುಸಿದಿದೆ.

ತಾಲ್ಲೂಕಿನ 100ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಈಗಾಗಲೇ ಕುಡಿಯುವ ನೀರಿನ ಸಮಸ್ಯೆ ತಾರಕಕ್ಕೇರಿದೆ. ಬಿಸಿಲಿನ ಪ್ರಖರತೆ ದಿನೇ ದಿನೇ ಹೆಚ್ಚುತ್ತಿದ್ದು, ನೀರಿಗಾಗಿ ಹಾಹಾಕಾರ ಎದುರಾಗಿದೆ.

ಎರಡು ವರ್ಷಗಳ ಸತತ ಬರ ದಿಂದಾಗಿ ಸಾವಿರಾರು ಖಾಸಗಿ ಕೊಳವೆ ಬಾವಿಗಳ ಸರಣಿ ವೈಫಲ್ಯ ಮುಂದುವರಿ ದಿದೆ. ಯಾವುದೇ ನದಿ ಮೂಲಗಳು ಇಲ್ಲದಿದ್ದರೂ ದಶಕಗಳಿಂದ ಜತನದಿಂದ ಬೆಳೆಸಿದ್ದ ಸಮೃದ್ಧ ಅಡಿಕೆ ತೋಟಗಳು ನೂರಾರು ಎಕರೆಯಲ್ಲಿ ಒಣಗಿ ನಿಂತಿವೆ. ಕುಟುಂಬದ ಜೀವನಾಧಾರವಾಗಿದ್ದ ತೋಟಗಳು ಕಣ್ಣೆದುರೇ ನಾಶವಾಗುತ್ತಿ ರುವುದನ್ನು ಕಂಡು ರೈತರು ಮಮ್ಮಲ ಮರುಗುತ್ತಿದ್ದಾರೆ.

ಹೊಸಕೆರೆ, ಕೆಚ್ಚೇನಹಳ್ಳಿ, ದೊಣೆ ಹಳ್ಳಿ, ಮುಗ್ಗಿದರಾಗಿಹಳ್ಳಿ, ಬೆಂಚಿಕಟ್ಟೆ, ಬಿಳಿಚೋಡು, ಸೊಕ್ಕೆ ಮುಂತಾದೆಡೆ ದಶಕಗಳಷ್ಟು ಹಳೆಯದಾದ ಅಡಿಕೆ ಮತ್ತು ತೆಂಗಿನ ತೋಟಗಳು ಸಾಲು ಸಾಲಾಗಿ ನೆಲಕ್ಕೊರಗಿವೆ. ಇನ್ನು ಕೆಲವೆಡೆ ರೈತರೇ ಜೆಸಿಬಿ ಯಂತ್ರಗಳಿಂದ ಬುಡ ಸಮೇತ ಕಿತ್ತು ಹಾಕಿ ಬೆಂಕಿ ಹಾಕುತ್ತಿರುವುದು ಸಾಮಾನ್ಯವಾಗಿದೆ.

‘ಮೂರುವರೆ ಎಕರೆಯಲ್ಲಿ 10 ವರ್ಷಗಳಿಂದ ಮಕ್ಕಳಂತೆ ಜೋಪಾನವಾಗಿ ಅಡಿಕೆ ತೋಟ ಬೆಳೆಸಿದ್ದೆ. ಇದ್ದ ಮೂರು ಕೊಳವೆಬಾವಿಗಳು ಏಕಾಏಕಿ ಕೈಕೊಟ್ಟಿತು. ತೋಟ ಉಳಿಸಿಕೊಳ್ಳಲು 600 ಅಡಿವರೆಗೆ ಕೊಳವೆಬಾವಿ ಕೊರೆಸಿದರೂ ಹನಿ ನೀರು ಸಿಗಲಿಲ್ಲ. ಅರ್ಧ ತೋಟ ಒಣಗಿ ಹೋಗಿದೆ. ಸಾಲ ಮೈಮೇಲೆ ಬಂದಿದೆ. ಮುಂದಿನ ಜೀವನದ ಬಗ್ಗೆ ಯೋಚಿಸಿದರೆ ಆತಂಕ ವಾಗುತ್ತದೆ’ ಎಂದು ಬಿಳಿಚೋಡು ಗ್ರಾಮದ ರೈತ ಮಹಿಳೆ ಕೊಟ್ರಮ್ಮ ಶ್ರೀನಿವಾಸ ನಾಯ್ಕ ‘ಪ್ರಜಾವಾಣಿ’ ಬಳಿ ಅಳಲು ತೋಡಿಕೊಂಡರು.

ಇತ್ತ ಗ್ರಾಮಗಳಲ್ಲಿ ಕುಡಿಯುವ ನೀರಿಗಾಗಿ ಜನರ ನಡುವೆ ಜಗಳ, ಘರ್ಷಣೆಗಳು ನಿತ್ಯ ನಡೆಯುವುದು ಸಾಮಾನ್ಯವಾಗಿವೆ. ಬಿಳಿಚೋಡು ಗ್ರಾಮದಲ್ಲಿ ಟ್ಯಾಂಕರ್‌ ನೀರು ಹಿಡಿಯುವ ಸಮಯದಲ್ಲಿ ಜಗಳವಾಡಿ ಮೂವರು ಜೈಲು ಸೇರಿದ್ದರು.

ಕೆರೆಗಳಿಗೆ ಹರಿಯದ ತುಂಗಭದ್ರೆ: ಶಾಶ್ವತ ಬರಪೀಡಿತ ಪ್ರದೇಶ ಎನಿಸಿರುವ ತಾಲ್ಲೂಕಿನ ಕೆರೆಗಳನ್ನು ತುಂಬಿಸುವ ಬಗ್ಗೆ ಆಗಾಗ ಪ್ರಸ್ತಾಪ ಆಗುತ್ತಲೇ ಇರುತ್ತದೆ. ಆದರೆ, ಇದುವರೆಗೂ ಯಾವುದೇ ಯೋಜನೆ ಸಮರ್ಪಕವಾಗಿ ಅನುಷ್ಠಾನ ಆಗದಿರುವುದರಿಂದ ಜಲಕ್ಷಾಮಕ್ಕೆ ಪರಿಹಾರ ಸಿಕ್ಕಿಲ್ಲ. ಅಕ್ರಮ ಮರಳುಗಾರಿಕೆ, ಒತ್ತುವರಿ, ಸಣ್ಣ ನೀರಾವಾರಿ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿ ಮತ್ತು ನಿರ್ವಹಣಾ ಕೊರತೆಯಿಂದ ಬಹುತೇಕ ಕೆರೆಗಳು ಅಪಾಯದ ಸ್ಥಿತಿಯಲ್ಲಿವೆ.

ಸರ್ಕಾರದಿಂದ ಕೋಟಿಗಟ್ಟಲೆ ಅನುದಾನ ಹರಿದು ಬಂದರೂ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಶಾಮೀಲಾಗಿ ಹಣ ಕೊಳ್ಳೆ ಹೊಡೆಯುತ್ತಿದ್ದಾರೆ. ಚೆಕ್‌ಡ್ಯಾಂಗಳು ಕಳಪೆಯಾಗಿದ್ದು, ಭಾರಿ ಪ್ರಮಾಣದಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಬಿಜೆಪಿ ಮುಖಂಡರು ಈಚೆಗೆ ಹೋರಾಟ ನಡೆಸಿದ್ದರು.

ಹೀಗಿದ್ದರೂ ಇಲಾಖೆಯು ಕೆರೆಗಳತ್ತ ಮುಖ ಮಾಡುತ್ತಿಲ್ಲ. ಇದರಿಂದಾಗಿ ಮಳೆಗಾಲದಲ್ಲಿ ಬೀಳು ಮಳೆ ನೀರು ವ್ಯರ್ಥವಾಗಿ ಬೇರೆ ಕಡೆಗೆ ಹರಿದು ಹೋಗುತ್ತದೆ ಎಂದು ಭರಮಸಮುದ್ರ ಗ್ರಾಮದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT