ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಲಿಪ, ಜೋಶಿ, ಐರೋಡಿ, ಕುರುಪ್‌ ಆಯ್ಕೆ

Last Updated 7 ಏಪ್ರಿಲ್ 2017, 6:46 IST
ಅಕ್ಷರ ಗಾತ್ರ

ಮುಡಿಪು: ಮಂಗಳೂರು ವಿಶ್ವವಿದ್ಯಾಲ ಯದ ಡಾ.ಪಿ.ದಯಾನಂದ ಪೈ ಮತ್ತು ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ 2016ನೇ ಸಾಲಿನ ‘ಯಕ್ಷ ಮಂಗಳ ಪ್ರಶಸ್ತಿ’ಗೆ ತೆಂಕುತಿಟ್ಟಿನ ಪ್ರಸಿದ್ಧ ಭಾಗವತರಾದ ಬಲಿಪ ನಾರಾಯಣ ಭಾಗವತ, ತಾಳಮದ್ದಳೆ ಅರ್ಥಧಾರಿ, ಸಂಶೋಧಕ ಡಾ.ಪ್ರಭಾಕರ ಜೋಶಿ, ಬಡಗುತಿಟ್ಟಿನ ಹಿರಿಯ ಕಲಾವಿದ ಐರೋಡಿ ಗೋವಿಂದಪ್ಪ ಮತ್ತು ಹಿಮ್ಮೇಳ ತಜ್ಞ ಗೋಪಾಲಕೃಷ್ಣ ಕುರುಪ್ ಆಯ್ಕೆಯಾಗಿದ್ದಾರೆ. ‘ಯಕ್ಷಮಂಗಳ ಕೃತಿ ಪ್ರಶಸ್ತಿ’ಗೆ ಡಾ.ಕಬ್ಬಿನಾಲೆ ವಸಂತ ಭಾರ ದ್ವಾಜ ಅವರ ‘ಯಕ್ಷಗಾನ ಕವಿ ಕಾವ್ಯ ವಿಹಾರ’ ಕೃತಿ ಆಯ್ಕೆಯಾಗಿದೆ.

ಯಕ್ಷಮಂಗಳ ಪ್ರಶಸ್ತಿಯು ತಲಾ ₹ 25 ಸಾವಿರ ನಗದು, ಪ್ರಶಸ್ತಿ ಪತ್ರ, ಸ್ಮರ ಣಿಕೆ ಮತ್ತು ಸನ್ಮಾನಗಳನ್ನು ಒಳ ಗೊಂಡಿದೆ. ಕೃತಿ ಪ್ರಶಸ್ತಿಯು ₹ 10 ಸಾವಿರ ನಗದು, ಪ್ರಶಸ್ತಿ ಪತ್ರವನ್ನು ಸನ್ಮಾನವನ್ನು ಒಳಗೊಂಡಿದೆ.

ಪ್ರೊ.ಎಂ.ಎಲ್. ಸಾಮಗ, ಪ್ರೊ. ಪಾದೇಕಲ್ಲು ವಿಷ್ಣು ಭಟ್, ಪ್ರೊ.ಕೆ.ಚಿನ್ನಪ್ಪ ಗೌಡ, ಯಕ್ಷಗಾನ ಅಧ್ಯಯನ ಕೇಂದ್ರದ ಸಂಯೋಜಕ ಡಾ.ಧನಂಜಯ ಕುಂಬ್ಳೆ ಅವರನ್ನೊಳಗೊಂಡ ಆಯ್ಕೆ ಸಮಿತಿಯು ಈ ಹೆಸರುಗಳನ್ನು ಆಯ್ಕೆ ಮಾಡಿದೆ.

ಬಲಿಪ ನಾರಾಯಣ ಭಾಗವತ:  ತೆಂಕುತಿಟ್ಟು ಯಕ್ಷಗಾನದ ಅಗ್ರಮಾನ್ಯ ಭಾಗವತರಾದ ಬಲಿಪ ನಾರಾಯಣ ಭಾಗವತರು ಕಳೆದ ಆರು ದಶಕಗಳಿಂದ ಯಕ್ಷಗಾನವನ್ನೇ ಬದುಕಾಗಿಸಿದ ಕಲಾವಿದರು. ಭಾಗವತರಾಗಿ ಸುಮಾರು ಐವತ್ತು ವರ್ಷಗಳ ತಿರುಗಾಟವನ್ನು ಮಾಡಿದ್ದಾರೆ. ರಕ್ತರಾತ್ರಿ, ಶಿವಪ್ರಭಾ ಪರಿಣಯ, ಕಾಳಿಂದಿ ವಿವಾಹ, ಮತ್ಸ್ಯಾವತಾರ – ಕೇತಕಿ ಶಾಪ, ನವಗ್ರಹ ಮಹಾತ್ಮೆ ಮೊದ ಲಾದ ಮೂವತ್ತಕ್ಕೂ ಅಧಿಕ ಯಕ್ಷಗಾನ ಪ್ರಸಂಗಗಳನ್ನು ಇವರು ರಚಿಸಿದ್ದಾರೆ.

ಡಾ.ಎಂ.ಪ್ರಭಾಕರ ಜೋಶಿ: ಯಕ್ಷ ಗಾನ ತಾಳಮದ್ದಳೆಯ ಪ್ರಸಿದ್ಧ ಅರ್ಥ ಧಾರಿ, ಸಂಶೋಧಕ, ವಿಮರ್ಶಕ, ವಾಗ್ಮಿ ಜೋಶಿಯವರು ಕಾರ್ಕಳ ತಾಲ್ಲೂಕಿನ ಮಾಳದವರು. ವಸ್ತುನಿಷ್ಠ ವಿಮರ್ಶ ಕರಾಗಿ, ಒಳನೋಟವುಳ್ಳ ಸೂಕ್ಷ್ಮ ಸಂವೇ ದನೆಯ ಆಕರ್ಷಕ ಮಾತುಗಾರರಾಗಿ ಜೋಶಿಯವರು ಪ್ರಸಿದ್ಧರು.

ಐರೋಡಿ ಗೋವಿಂದಪ್ಪ: ಇವರು ಬಡಗುತಿಟ್ಟಿನ ಸಾಂಪ್ರದಾಯಿಕ ಶೈಲಿಯ ಹೆಸರಾಂತ ಕಲಾವಿದರು.

ಗೋಳಿಗರಡಿ, ಸಾಲಿಗ್ರಾಮ, ಮೂಲ್ಕಿ, ಕುಂಬಳೆ, ಇರಾ, ಪೆರ್ಡೂರು, ಅಮೃತೇಶ್ವರಿ, ಹಿರಿಯಡ್ಕ ಹೀಗೆ ವಿವಿಧ ಮೇಳಗಳಲ್ಲಿ ಮುಖ್ಯ ವೇಷಧಾರಿಯಾಗಿ ಮಿಂಚಿದ ಇವರು ಐವತ್ತಕ್ಕೂ ಹೆಚ್ಚು ವರ್ಷಗಳ ಕಲಾಯಾನವನ್ನು ನಡೆಸಿದ್ದಾರೆ.

ಗೋಪಾಲಕೃಷ್ಣ ಕುರುಪ್: ಇವರು ತೆಂಕುತಿಟ್ಟು ಯಕ್ಷಗಾನದ ಹಿಮ್ಮೇಳ ತಜ್ಞ ಹಾಗೂ ಯಕ್ಷಗಾನ ಗುರುಗಳು. ಯಕ್ಷ ಗಾನ ಭಾಗವತಿಕೆ, ಮದ್ದಳೆವಾದನ, ಪೂರ್ವರಂಗ ಕ್ರಮ ಮತ್ತು ಸಾಂಪ್ರ ದಾಯಿಕ ನೃತ್ಯದಲ್ಲಿ ಕರಾರುವಾಕ್ಕಾದ ಪಾಂಡಿತ್ಯವುಳ್ಳವರು. ಧರ್ಮಸ್ಥಳ ಯಕ್ಷಗಾನ ಕೇಂದ್ರದ ಗುರುವಾಗಿ, ದಕ್ಷಿಣ ಕನ್ನಡ ಜಿಲ್ಲೆಯ 28ಕ್ಕೂ ಅಧಿಕ ಕೇಂದ್ರಗಳಲ್ಲಿ ಯಕ್ಷಗಾನ ಕಲಿಕೆಯ ಗುರುವಾಗಿ ಸೇವೆ ಸಲ್ಲಿಸಿದ್ದಾರೆ.

‘ಯಕ್ಷಗಾನ ಕವಿ ಕಾವ್ಯ ವಿಹಾರ’ಕ್ಕೆ ಕೃತಿ ಪ್ರಶಸ್ತಿ: ಯಕ್ಷಗಾನ ವಿಮರ್ಶಕ, ಸಂಶೋಧಕ ಡಾ. ಕಬ್ಬಿನಾಲೆ ವಸಂತ ಭಾರದ್ವಾಜ ಇವರು ರಚಿಸಿದ ‘ಯಕ್ಷಗಾನ ಕವಿ ಕಾವ್ಯ ವಿಹಾರ’ ಎಂಬ ಕೃತಿಯು ಯಕ್ಷಗಾನ ಕವಿಗಳನ್ನು ಕುರಿತ ಅಧ್ಯಯನ ಗ್ರಂಥವಾಗಿದ್ದು, 2016ನೇ ಸಾಲಿನ ಯಕ್ಷಮಂಗಳ ಕೃತಿ ಪ್ರಶಸ್ತಿಗೆ ಆಯ್ಕೆ ಯಾಗಿದೆ.

ಪ್ರಶಸ್ತಿ ಪ್ರದಾನ ಸಮಾರಂಭ ಇದೇ 17ರಂದು ಪೂರ್ವಾಹ್ನ 11.30ಕ್ಕೆ ಮಂಗಳೂರು ವಿಶ್ವವಿದ್ಯಾಲಯದ ಮಂಗಳ ಸಭಾಂಗಣದಲ್ಲಿ ಮಂಗಳೂರು ವಿವಿ ಕುಲಪತಿ ಪ್ರೊ.ಕೆ.ಭೈರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಕುಲಸಚಿವರಾದ ಪ್ರೊ.ಕೆ.ಎಂ.ಲೋಕೇಶ್ ಹಾಗೂ ಯಕ್ಷಗಾನ ಅಧ್ಯಯನ ಕೇಂದ್ರದ ಸಂಯೋಜಕರಾದ ಡಾ.ಧನಂಜಯ ಕುಂಬ್ಳೆ ಅವರು ಪ್ರಕಟಣೆಯಲ್ಲಿ ತಿಳಿಸಿ ದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT