ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೋಟದೂರು–ಹಳುವಳ್ಳಿ: ಇಲ್ಲದ ರಸ್ತೆ ಸಂಪರ್ಕ

Last Updated 7 ಏಪ್ರಿಲ್ 2017, 6:54 IST
ಅಕ್ಷರ ಗಾತ್ರ

ಕಳಸ: ಮಲೆನಾಡಿನಲ್ಲಿ ಪ್ರಮುಖ ರಸ್ತೆ ಗಳ ದುರಸ್ತಿಗೇ ಅನುದಾನ ಲಭ್ಯವಿಲ್ಲ. ಇಂತಹ ಸ್ಥಿತಿಯಲ್ಲಿ ಇತರೆ ಸಂಪರ್ಕ ರಸ್ತೆಗಳ ಅಭಿವೃದ್ಧಿಗೆ ಆಸಕ್ತಿಯೇ ಇಲ್ಲ. ತೋಟದೂರು ಗ್ರಾಮದಿಂದ ಹಳುವಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿಗೆ ರಾಜಕೀಯ ಇಚ್ಛಾಶಕ್ತಿಯ ಕೊರತೆ ಕಂಡು ಬರುತ್ತಿದೆ ಎಂದು ಸುತ್ತಮುತ್ತಲ ಗ್ರಾಮಸ್ಥರು ಆರೋಪಿ ಸಿದ್ದಾರೆ.

ತೋಟದೂರು–ಬಾಳೆಹೊಳೆ ಮೂಲಕ ಹಳುವಳ್ಳಿಗೆ ಈಗಿನ ಪ್ರಮುಖ ಜಿಲ್ಲಾ ರಸ್ತೆ ಬಳಸಿದರೆ 16 ಕಿ.ಮೀ ದೂರ. ಆದರೆ ತೋಟದೂರಿನಿಂದ ತಾರಿಕೊಂಡ –ಹಳ್ಳದಾಚೆ ಮೂಲಕ ಹಳುವಳ್ಳಿ ತಲುಪಿದರೆ ಈ ಅಂತರ ಕೇವಲ 8 ಕಿ.ಮೀ. ಆದರೆ ಚಿಕ್ಕನ ಕೊಡಿಗೆ, ನಲ್ಲಿಕೋಟ, ತಲಗೋಡು, ಬಾಳೆಹಿತ್ಲು, ಕೆಂಪನಮಕ್ಕಿ ಪ್ರದೇಶಗಳ ಮೂಲಕ ಸಾಗುವ ಈ ರಸ್ತೆ ಅಭಿವೃದ್ಧಿಗೆ ಈವರೆಗೂ ಬಲವಾದ ಪ್ರಯತ್ನವೇ ನಡೆದಿಲ್ಲ ಎನ್ನುತ್ತಾರೆ ತೋಟದೂರಿನ ಜನ.

‘ಈ ಪ್ರದೇಶಗಳ ಮೂಲಕ ಹಳುವಳ್ಳಿ ತಲುಪಲು ಈಗ ಕಿರಿದಾದ ಮಣ್ಣಿನ ರಸ್ತೆ ಇದ್ದು, ಆದರೆ ಆ ರಸ್ತೆಯನ್ನು ಸರ್ವ ಋತು ರಸ್ತೆಯನ್ನಾಗಿ ಮಾಡಿದರೆ ಮಾತ್ರ ಗ್ರಾಮಸ್ಥರಿಗೆ ಅನುಕೂಲ ಆಗುತ್ತದೆ’ ಎಂದು ತಾರಿಕೊಂಡ ಗ್ರಾಮದ ಅರುಣ್‌ ಹೇಳುತ್ತಾರೆ.

‘ಈ ರಸ್ತೆಯನ್ನು ಪ್ರಧಾನಮಂತ್ರಿ ಗ್ರಾಮ ಸಡಕ್‌ ಯೋಜನೆಯಲ್ಲಿ ಸೇರಿಸಿ ದರೆ ಮಾತ್ರ ಸಾಕಷ್ಟು ಅನುದಾನ ಸಿಗಲಿದ್ದು, ಆಗ ಮಾತ್ರ ಈ ಭಾಗದ ಎಲ್ಲ ಗ್ರಾಮಸ್ಥರ ಪ್ರಮುಖ ಸಮಸ್ಯೆಯಾದ ರಸ್ತೆಯ ಕೊರತೆ ನೀಗುತ್ತದೆ. ಆದರೆ ಈ ಬಗ್ಗೆ ಸಂಸದರಿಗೆ ಮನವಿ ನೀಡಿದರೂ ಅವರಿಂದ ಸೂಕ್ತ ಪ್ರತಿಸ್ಪಂದನೆ ಸಿಕ್ಕಿಲ್ಲ. ಆದ್ದರಿಂದ ಈ ರಸ್ತೆ ಅಭಿವೃದ್ಧಿಪಡಿಸಲು ಈಗ ನೇರವಾಗಿ ಪ್ರಧಾನಮಂತ್ರಿಗೆ ಪತ್ರ ಬರೆದಿದ್ದೇವೆ’ ಎಂದು ಚಿಕ್ಕನಕೊಡಿಗೆಯ ಸುಬ್ರಮಣ್ಯ ಹೇಳುತ್ತಾರೆ.

ರಸ್ತೆಯ ಅಭಿವೃದ್ಧಿ ಬಗೆಗಿನ ಪ್ರಯತ್ನ ಅಥವಾ ಪ್ರಕ್ರಿಯೆಯ ಅರಿವಿಲ್ಲದ ಪರಿಶಿಷ್ಟ ಜಾತಿ ಮತ್ತು ವರ್ಗದ ಜನರು ಮಾತ್ರ ಬೇಸಿಗೆಯಲ್ಲಿ ಇಲ್ಲಿನ ಕಚ್ಚಾ ರಸ್ತೆ ಬಳಸಿ ಹಳುವಳ್ಳಿ ಮೂಲಕ ಕಳಸ ತಲುಪುತ್ತಾರೆ. ಅಷ್ಟಕ್ಕೇ ತೃಪ್ತಿಪಡುತ್ತಾರೆ. ಆದರೆ ಮಳೆಗಾಲದ 4 ತಿಂಗಳು ಮಾತ್ರ ಇವರ ಪಾಲಿಗೆ ಈ ರಸ್ತೆ ಉಪಯೋಗಕ್ಕೆ ಬಾರದಂತಾಗುತ್ತದೆ. ಆಗ ಅನಾರೋಗ್ಯ ಕಾಣಿಸಿಕೊಂಡರೆ ಜನರು ದಿಕ್ಕು ತೋಚದಂತೆ ಆಡುತ್ತಾರೆ. ಜೊತೆಗೆ ಕೆಸರು ತುಂಬಿದ ರಸ್ತೆಯಲ್ಲಿ ಕಾಲ್ನಡಿಗೆಯಲ್ಲಿ ಸಾಗಿ ಶಾಲೆಗೆ ತಲುಪುವ ಮಕ್ಕಳ ಸ್ಥಿತಿಯಂತೂ ಶೋಚನೀಯ.

ತಲಗೋಡಿನ ಪರಿಶಿಷ್ಟ ಜಾತಿ ಯವರ ಕಾಲೊನಿ, ಬಾಳೆಹಿತ್ಲು ಮತ್ತು ನೆಲ್ಲಿಕೋಟದ ಪರಿಶಿಷ್ಟ ವರ್ಗದವರ ಕಾಲೊನಿಗಳೂ ಈ ರಸ್ತೆಯ ವ್ಯಾಪ್ತಿಗೆ ಸೇರಲಿದ್ದು,  ಏಳೆಂಟು ಗ್ರಾಮಗಳಿಗೆ ಪ್ರಮುಖ ಸಂಪರ್ಕ ಕೊಂಡಿ ಆಗಬಹುದಾದ ಈ ರಸ್ತೆಗೆ ಅನುದಾನ ಸಿಗಲಿದೆಯೇ ಎಂಬ ನಿರೀಕ್ಷೆ ಗ್ರಾಮಸ್ಥರಲ್ಲಿ ಬಲವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT