ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಟ್ಟಿನ ದಿನಗಳ ಬಗ್ಗೆ ಅರಿವಿರಲಿ...

Last Updated 7 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಬಾಲ್ಯಾವಸ್ಥೆಯಿಂದ ಯೌವನಾವಸ್ಥೆಗೆ ಕಾಲಿಡುವ ಮುನ್ನ ಹುಡುಗಿಯರಲ್ಲಿ ಹಲವು  ದೈಹಿಕ ಹಾಗೂ ಮಾನಸಿಕ ಬದಲಾವಣೆಗಳಾಗುತ್ತದೆ. ಜೊತೆಗೆ ಋತುಚಕ್ರ ಪ್ರಾರಂಭ ಅತಿಮುಖ್ಯ ಘಟ್ಟ. ಶಾರೀರಿಕ, ಮಾನಸಿಕ ಬದಲಾವಣೆಗೆ ಹೊಂದಿಕೊಳ್ಳುವುದರ ಜೊತೆಗೆ ಋತುಚಕ್ರದ ನಿರ್ವಹಣೆಯೂ ಸೇರಿದರೆ, ಕೆಲವೊಮ್ಮೆ ಹರೆಯದ ಹೆಣ್ಣುಮಕ್ಕಳು ಒಮ್ಮೆಲೇ ಗೊಂದಲಕ್ಕೀಡಾಗಬಹುದು.

ಈಗಂತೂ ಬದಲಾಗುತ್ತಿರುವ ಜೀವನಶೈಲಿ ಹಾಗೂ ಕಡಿಮೆ ದೈಹಿಕ ಚಟುವಟಿಕೆಯಿಂದಾಗ ಹತ್ತು ಹನ್ನೊಂದರ ವಯಸ್ಸಿನಲ್ಲೇ ಋತುಪ್ರಾಪ್ತಿಯಾಗುತ್ತದೆ. 
ತನ್ನ ಸಂತಾನೋತ್ಪತ್ತಿ ಸಮಯದಲ್ಲಿ 2,300ಕ್ಕೂ ಅಧಿಕ ದಿನಗಳನ್ನು, ಸುಮಾರು 6 ವರ್ಷಗಳಿಗೂ ಹೆಚ್ಚಿನ ಅವಧಿಯನ್ನು ಕಳೆಯಬೇಕಾದ ಅನಿವಾರ್ಯತೆ ಪ್ರತಿ ಹೆಣ್ಣಿಗೂ ಇದೆ.  ನಮ್ಮ ಪೂರ್ವಜರು ಹೆಚ್ಚು ಹೆಚ್ಚು ಮಕ್ಕಳನ್ನು ಹೆರುತ್ತಿದ್ದರು. ಜೊತೆಗೆ ಮಗುವಿಗೆ ಹಾಲುಣಿಸುವಿಕೆಯಿಂದ ಋತುಸ್ರಾವದ ಅವಧಿ ಕಡಿಮೆ ಇರುತ್ತಿತ್ತು.

ಆದರೆ ಇಂದು ಹಾಗಲ್ಲ.  ಹೆಣ್ಣುಮಕ್ಕಳ ಸುದೀರ್ಘವಾದ ಹೆಣ್ತನದ ಪ್ರಯಾಣವು ಸುಖಕರವಾಗುವಂತೆ ಮಾಡುವಲ್ಲಿ, ಮುಟ್ಟಿನ ಸಂದರ್ಭ, ನೈರ್ಮಲ್ಯ ಕಾಪಾಡಿಕೊಳ್ಳುವ ಬಗೆಗೆ ತಾಯಂದಿರು ಹೇಗೆ ಅರಿವು ಮೂಡಿಸುತ್ತಾರೆ ಎನ್ನುವುದು ಮುಖ್ಯವಾಗುತ್ತದೆ. ಜೊತೆಗೆ ಕುಟುಂಬದ ಹಿರಿಯರು, ವೈದ್ಯರು-ವೈದ್ಯಕೀಯ ಸಿಬ್ಬಂದಿವರ್ಗ ಹಾಗೂ ಆಪ್ತಸಮಾಲೋಚಕರು ಎಲ್ಲರೂ ಹೇಗೆ ತರಬೇತಿ ನೀಡುತ್ತಾರೆಂಬುದೂ ಅತಿಮುಖ್ಯವಾಗುತ್ತದೆ.

ಹಲವು ಅಧ್ಯಯನಗಳಿಂದ ತಿಳಿದಿರುವ ಪ್ರಕಾರ ಹದಿವಯಸ್ಸಿನವರು (ಹೆಚ್ಚಿನ ಸಂದರ್ಭದಲ್ಲಿ ಮಹಿಳೆಯರು ಕೂಡ) ಮುಟ್ಟಿನ ತೊಂದರೆಗಳ ಬಗ್ಗೆ ಹೇಳಿಕೊಳ್ಳದೆ ಮುಚ್ಚಿಟ್ಟುಕೊಳ್ಳುತ್ತಾರೆ. ಇದು ಅವರನ್ನು ಹಲವು ದೈಹಿಕ ಹಾಗೂ ಮಾನಸಿಕ ಕಾಯಿಲೆಗೆ ಒಳಗಾಗುವಂತೆ ಮಾಡುತ್ತದೆ.

ಹಲವರು ಮುಟ್ಟಿನ ವಿಷಯದಲ್ಲಿ ಭಯಪಡುತ್ತಾರೆ. ಹೆದರಿಕೆಗೆ ಕಾರಣ ಅರೆಜ್ಞಾನ. ಶೇ.45ರಷ್ಟು ಮಹಿಳೆಯರಿಗೆ ಮುಟ್ಟು ಯಾಕೆ? ಎಲ್ಲಿಂದ ಬರುತ್ತದೆ  ಎಂಬುದು ತಿಳಿದಿಲ್ಲ. ತಮ್ಮ ಹೊರ ಹಾಗೂ ಒಳ ಜನನಾಂಗಗಳ ಕಾರ್ಯವೈಖರಿಯ ಬಗ್ಗೆ ತಿಳಿದಿರುವುದಿಲ್ಲ. ಇನ್ನು ಕೆಲವರಲ್ಲಿ ಸ್ಯಾನಿಟರಿ ಪ್ಯಾಡ್, ನೈರ್ಮಲ್ಯ ಕಾಪಾಡುವ ಬಗ್ಗೆ ಅರಿವಿರುವುದಿಲ್ಲ. ಇನ್ನು ಕೆಲ ಹೆಣ್ಣುಮಕ್ಕಳು ಹಾಗೂ ಮಹಿಳೆಯರು ಶಾಲಾ – ಕಾಲೇಜು ಮತ್ತು ತಾವು ಕೆಲಸ ಮಾಡುವ ಕಡೆಗಳಲ್ಲಿ ಬಟ್ಟೆ ತೊಳೆಯುವ, ಸ್ಯಾನಿಟರಿ ಪ್ಯಾಡ್‌ ವಿಲೇವಾರಿ ಮಾಡುವ ಸರಿಯಾದ ವ್ಯವಸ್ಥೆಗಳಿಲ್ಲದೆ ಶಾಲೆ ಅಥವಾ ಕೆಲಸ ಬಿಡುವ ಪರಿಸ್ಥಿತಿಯೂ ಎದುರಾಗುತ್ತದೆ.

ಮುಟ್ಟಿನ ದಿನಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಲಾಗದೆ ಗರ್ಭಕೋಶ ಅಥವಾ ಮೂತ್ರಕೋಶದ ಸೋಂಕಿಗೊಳಗಾಗಿ ಆರೋಗ್ಯ ಕೆಡಿಸಿಕೊಳ್ಳುವ ಸಂದರ್ಭ ಹೆಚ್ಚು. ಹೀಗೆ ಸಾಮಾಜಿಕ, ಸಾಂಪ್ರದಾಯಿಕ, ಆರೋಗ್ಯದ ಆಯಾಮಗಳುಳ್ಳ ಈ ಋತುಚಕ್ರದಲ್ಲಿ ನೈರ್ಮಲ್ಯತೆಯ ಬಗ್ಗೆ ಸೂಕ್ತ ಅರಿವು, ಜಾಗ್ರತಿ, ಎಚ್ಚರಿಕೆ ಸದಾ ಇರಲೇಬೇಕು.

ಮುಟ್ಟಾಗುವುದೆಂದರೆ?
ಮುಟ್ಟಾಗುವ ಪ್ರಕ್ರಿಯೆ ಎಂದರೆ ಹೈಪೋಥಲಾಮಸ್-ಪಿಟ್ಯುಟರಿ ಗ್ರಂಥಿ-ಅಂಡಾಶಯ ಅಕ್ಷೆ. ಅಂದರೆ ಅಲ್ಲಿನ ಹಾರ್ಮೋನುಗಳ ಪ್ರಭಾವದಿಂದ ಅಂಡಾಶಯಗಳು ಕ್ರಿಯಾಶೀಲವಾಗಿ ಹೆಣ್ತನದ ಹಾರ್ಮೋನುಗಳಾದ ಈಸ್ಟ್ರೋಜನ್ ಹಾಗೂ ಪ್ರೊಜಿಸ್ಟಿರಾನ್‌ಗಳಿಂದ ತಿಂಗಳಿಗೊಂದು ಅಂಡೋತ್ಪತ್ತಿಯಾಗುವುದು. 

ಗರ್ಭಕೋಶದ ಒಳಪದರವು ಬೆಳೆದು ಸಂತಾನೋತ್ಪತ್ತಿ ಕ್ರಿಯೆ ನಡೆಯದಿದ್ದಲ್ಲಿ ಗರ್ಭಾಶಯದ ಒಳಪದರವು ಕಳಚಲ್ಪಟ್ಟು ಯೋನಿ ಮುಖಾಂತರ ರಕ್ತಸ್ರಾವದ ರೂಪದಲ್ಲಿ ಹೊರಹೋಗುವುದು. ಇದನ್ನೇ ‘ಮಾಸಿಕ ಮುಟ್ಟು’ ಅಥವಾ ‘ಋತುಸ್ರಾವ’ ಎಂದು ಕರೆಯುತ್ತೇವೆ. ಋತುಚಕ್ರದ ಸಮಯದಲ್ಲಿ ಬರುವುದು ಕೆಟ್ಟ ರಕ್ತವಲ್ಲ. ಪುರುಷರಿಗೂ ಇದರ ಬಗ್ಗೆ  ಅರಿವಿದ್ದರೆ ಸಾಂಪ್ರದಾಯಿಕ ಕಟ್ಟಳೆಗಳಿಂದ ಹೊರಬರಬಹುದು.

ಆರಂಭದಲ್ಲಿ (ಒಂದೆರಡು ವರ್ಷ) ಮುಟ್ಟು ನಿಯಮಿತವಾಗಿ ಬರದೇ ಇರಬಹುದು. ಆದರೆ ನಂತರದ ದಿನಗಳಲ್ಲಿ ನಿಯಮಿತವಾಗಿ ಅಂದರೆ 22 ರಿಂದ35 ದಿನಗಳಿಗೊಳಗಾಗಿ ಬರುತ್ತದೆ. ಮತ್ತು ಎರಡರಿಂದ ಏಳು ದಿನಗಳವರೆಗೆ ರಕ್ತಸ್ರಾವವಾಗುತ್ತದೆ. ಇದಕ್ಕಿಂತ ಹೆಚ್ಚು ರಕ್ತಸ್ರಾವವಾದಲ್ಲಿ ಚಿಕಿತ್ಸೆ ಅಗತ್ಯ.

ನೈರ್ಮಲ್ಯ ಕಾಪಾಡಿಕೊಳ್ಳುವುದು...: ಋತುಚಕ್ರದ ಅವಧಿಯಲ್ಲಿ ಗರ್ಭಾಶಯದ ಒಳಾವರಣ ಕಳಚಿ ಹೊರಬರುವಾಗ ಗರ್ಭಕೋಶದ ಬಾಯಿ ತೆರೆದಿದ್ದು ಸೋಂಕು ಯೋನಿ ಮುಖಾಂತರ ಬೇಗನೆ ಹರಡುವ ಸಂಭವ ಹೆಚ್ಚುವುದರಿಂದ ಆ ಅವಧಿಯಲ್ಲಿ ನಿಯಮಿತವಾದ ಸ್ನಾನ ಅತ್ಯಗತ್ಯ. ಸಾಧ್ಯವಾದರೆ ದಿನಕ್ಕೆರಡು ಸಲ ಸ್ನಾನ ಮಾಡಬೇಕು.

* ಸೂರ್ಯನ ಬೆಳಕಿನಲ್ಲಿ ಒಣಗಿಸಿದ ಹತ್ತಿಬಟ್ಟೆಯ ಒಳಉಡುಪು ಹಾಗೂ ಹೊರಉಡುಪುಗಳನ್ನು ಧರಿಸುವುದು ಕ್ಷೇಮ.

* ಶೌಚಾಲಯ ಬಳಸಿದ ನಂತರ ಜನನಾಂಗ ಭಾಗವನ್ನು ಸ್ವಚ್ಛ ನೀರಿನಿಂದ ತೊಳೆದು ಒಣಬಟ್ಟೆಯಿಂದ ತೊಡೆಸಂದಿಗಳನ್ನು ಒರೆಸಿಕೊಳ್ಳಬೇಕು.

* ಬಟ್ಟೆ/ ಸ್ಯಾನಿಟರಿ ಪ್ಯಾಡ್/ ಟ್ಯಾಂಪೋನ್/ ಮೆನ್‌ಸ್ಟ್ರುವಲ್‌ ಕಪ್‌ ಉಪಯೋಗಿಸುವುದು ವೈಯಕ್ತಿಕ ನಿರ್ಣಯಕ್ಕೆ ಬಿಟ್ಟಿದ್ದು. ಋತುಚಕ್ರದ ಸಮಯದಲ್ಲಿ ಉಪಯೋಗಿಸುವ ವಿಶಿಷ್ಟವಾದ ಒಳಉಡುಪುಗಳು ಲಭ್ಯವಿದೆ. ಅಥವಾ ಸ್ವತಃ ಹೊಲಿಸಿಕೊಳ್ಳಬಹುದು. ಏನೇ ಇರಲಿ, ಅವುಗಳನ್ನು ದಿನಾಲು ಕನಿಷ್ಠ ನಾಲ್ಕರಿಂದ ಐದು ಗಂಟೆಗಳಿಗೊಮ್ಮೆ ನಾಲ್ಕರಿಂದ ಐದು ಬಾರಿ ಬದಲಾಯಿಸಬೇಕು. ಇಲ್ಲದಿದ್ದಲ್ಲಿ ಚರ್ಮದ ಕೆರಳಿಕೆ ಉಂಟಾಗುವುದು. ಗರ್ಭಕೋಶದ ಸೋಂಕುಂಟಾಗಬಹುದು.

* ಯೋನಿ ಕೂದಲುಗಳನ್ನು ನಿಯಮಿತವಾಗಿ ಮುಟ್ಟು ಬರುವ ಮೊದಲು ಕತ್ತರಿಯಿಂದ ಟ್ರಿಂ ಮಾಡಿ. ರೇಜರ್‌ನಿಂದ ಶೇವಿಂಗ್ ಮಾಡಬೇಡಿ. ರಾಸಾಯನಿಕ ಕ್ರೀಂಗಳನ್ನು ಬಳಸಬೇಡಿ, ಸುಗಂಧ ದ್ರವ್ಯಗಳು, ಬಿಸಿನೀರಿನ, ಸೋಪಿನ ಬಳಕೆ ಬೇಡ. ಹೆಚ್ಚೆಂದರೆ ಉಗುರು ಬೆಚ್ಚಗಿನ ನೀರನ್ನು ಉಪಯೋಗಿಸಬಹುದು.

* ಸ್ಯಾನಿಟರಿ ನ್ಯಾಪ್ಕಿನ್‌ ಕೊಳ್ಳಲಾಗದಿದ್ದಲ್ಲಿ ಹತ್ತಿಬಟ್ಟೆಗಳನ್ನು (ಗಟ್ಟಿಯಲ್ಲದ, ಅತಿ ದಪ್ಪವಲ್ಲದ) ಉಪಯೋಗಿಸಿ. ನಂತರ ಬೇರೆ ಬಟ್ಟೆಗಳ ಹಾಗೆ ಸೋಪು ಹಾಕಿ ಬ್ರಶ್ ಮಾಡಿ ಸ್ವಚ್ಛವಾಗಿ ತೊಳೆದು ಸೂರ್ಯನ ಬೆಳಕಿನಲ್ಲಿ ಒಣಗಿಸಿ ಉಪಯೋಗಿಸಬೇಕು. ಉಪಯೋಗಿಸುವ ಬಟ್ಟೆಗಳನ್ನು 3ರಿಂದ4ತಿಂಗಳಿಗೂ ಹೆಚ್ಚು ಬಳಸಬಾರದು.


* ಮೆನ್‌ಸ್ಟ್ರುವಲ್‌ ಕಪ್‌ ಉಪಯೋಗಿಸುವಾಗ ಸೂಕ್ತ ಮಾರ್ಗದರ್ಶನ ಹಾಗೂ ತರಬೇತಿ ಪಡೆದಿರಬೇಕು.

ಒಟ್ಟಾರೆ ಸ್ಯಾನಿಟರಿ ಪ್ಯಾಡ್ ಉಪಯೋಗಿಸಲಿ ಅಥವಾ ಬಟ್ಟೆ ಉಪಯೋಗಿಸಲಿ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು ಮುಖ್ಯ. ಜೊತೆಗೆ ಸಂತಾನೋತ್ಪತ್ತಿ ಹಾಗೂ ಸಮಗ್ರ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅಷ್ಟೇಮುಖ್ಯ. ಈ ಬಗ್ಗೆ ಹೆಚ್ಚು ಹೆಚ್ಚು ಜಾಗ್ರತಿ ಮೂಡಬೇಕು.

ಮುಟ್ಟಿನ ಬಗ್ಗೆ ರೋಸಿ ಹೋಗದೆ ಧನಾತ್ಮಕ ಭಾವನೆ ಬೆಳೆಸಿಕೊಳ್ಳುವುದು ಮುಖ್ಯ. ಬಟ್ಟೆಯನ್ನು ಉಪಯೋಗಿಸುವುದು ಹಳೆಯ ಸಂಪ್ರದಾಯವೆನಿಸಿದರೂ ಪ್ರಸ್ತುತ ಪರಿಸರ ರಕ್ಷಣೆಯ ಹೊಣೆ ನಮ್ಮೆಲ್ಲರ ಜವಾಬ್ದಾರಿಯಾಗಿರುವುದರಿಂದ ಸಾಧಕ ಬಾಧಕಗಳನ್ನು ಚರ್ಚಿಸಬೇಕು.

ಸ್ಯಾನಿಟರಿ ಪ್ಯಾಡ್ ಒಳ್ಳೆಯದೋ? ಬಟ್ಟೆ ಒಳ್ಳೆಯದೋ?
ಇತ್ತೀಚೆಗೆ ಸ್ಯಾನಿಟರಿ ಪ್ಯಾಡ್‌ಗಳ ಬಗ್ಗೆ ಹೆಚ್ಚುತ್ತಿರುವ ಅರಿವಿನ ನಡುವೆ, ಕೆಲವೊಮ್ಮೆ ಥರ ತರಹದ ಜಾಹೀರಾತುಗಳು ಹದಿವಯಸ್ಸಿನವರನ್ನು ದಿಕ್ಕುತಪ್ಪಿಸುತ್ತದೆ. ಹಾಗಾಗಿ ಈ ಬಗ್ಗೆ ಸೂಕ್ತ ಮಾರ್ಗದರ್ಶನ ಅಗತ್ಯ. ಸ್ಯಾನಿಟರ್ ನ್ಯಾಪ್ಕಿನ್‌ನಲ್ಲಿ ಉಪಯೋಗಿಸುವ ಪ್ಲಾಸ್ಟಿಕ್ ವಸ್ತುಗಳು ಮುಖ್ಯವಾಗಿ ಬಿಸ್ಪಿನಾಲ್‌ನಂತಹ ರಾಸಾಯನಿಕ ವಸ್ತುಗಳು, ಭ್ರೂಣದ ಬೆಳವಣಿಗೆ ಮತ್ತು ಮೆದುಳಿನ ಬೆಳವಣಿಗೆ ಹಾಗೂ ಥೈರಾಯಿಡ್ ಗ್ರಂಥಿಯ ಕಾರ್ಯದಲ್ಲಿ ವ್ಯತ್ಯಾಸವನ್ನು ಉಂಟುಮಾಡಿ ಹಾರ್ಮೋನ್‌ಗಳ ವ್ಯತ್ಯಾಸಕ್ಕೂ ಕಾರಣವಾಗಬಹುದು. ಇದರಿಂದ ಮಧುಮೇಹ, ಅಂಡಾಶಯದ ಕ್ಯಾನ್ಸರ್‌ನಂತಹ ಮಾರಕ ರೋಗಗಳಿಗೂ ತುತ್ತಾಗಬಹುದು.

ಪ್ಯಾಡ್‌ಗೆ ಉಪಯೋಗಿಸುವ ಹತ್ತಿಯಲ್ಲಿ ಕೀಟನಾಶಕಗಳು ಹಾಗೂ ಕಳೆನಾಶಕಗಳು ನಮ್ಮ ಶರೀರವನ್ನು ಸೇರುತ್ತವೆ. ಅವುಗಳಲ್ಲಿರುವ ಫ್ಯೂರಾನ್ ಕ್ಯಾನ್ಸರ್‌ಕಾರಕ ಅಂಶ. ಹತ್ತಿಯನ್ನು ಬಿಳಿಯಾಗಿಸಲು ‘ಡಯಾಕ್ಸಿನ್‌’ ಎಂಬ ರಾಸಾಯನಿಕವನ್ನು ಉಪಯೋಗಿಸುತ್ತಾರೆ. (ಪ್ರತಿ ಹೆಣ್ಣುಮಕ್ಕಳು ಪ್ಯಾಡ್‌ಗಳು ಬೆಳ್ಳಗೆ, ಶುಭ್ರವಾಗಿರಬೇಕೆಂದು ಬಯಸುತ್ತಾರೆ). ಡಯಾಕ್ಸಿನ್ ಅಂಶ ಚರ್ಮವನ್ನು ಕಪ್ಪಾಗಿಸಿ ಯಕೃತ್ತಿನ ಕಾರ್ಯ ಏರುಪೇರಾಗುವಂತೆ ಮಾಡುತ್ತದೆ. ಇದರ ದೀರ್ಘಾವಧಿ ಬಳಕೆಯಿಂದ ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತಾ ಹೋಗುತ್ತದೆ. ಒಂದೇ ಪ್ಯಾಡನ್ನು ದೀರ್ಘಾವಧಿಗೆ ಬಳಸಿದಾಗ ಅಥವಾ ಟ್ಯಾಂಪೋನ್ ಬಳಸಿ ಹಾಗೆಯೇ ಬಿಟ್ಟರೆ ತೇವಾಂಶ ಹೆಚ್ಚಾಗಿ ‘ಸ್ಟ್ಯಾಪ್ ಆರಿಯಸ್’ ಎನ್ನುವ ಬ್ಯಾಕ್ಟೀರಿಯಾ ಸೋಂಕು ಆಗುವ ಸಂಭವ ಹೆಚ್ಚು.

ಇತ್ತೀಚೆಗೆ ಸುರಕ್ಷಿತವಾದ ಅತ್ಯುತ್ತಮವಾಗಿ ವಿನ್ಯಾಸಗೊಂಡ ಮೆನ್‌ಸ್ಟ್ರುವಲ್‌ ಕಪ್ಸ್ ಸಿಗುತ್ತಿವೆಯಾದರೂ ಈ ಬಗ್ಗೆ ಇದನ್ನು ಸರಿಯಾಗಿ ಉಪಯೋಗಿಸುವ ಬಗ್ಗೆ ಜನಸಾಮಾನ್ಯರಿಗೆ ಹೆಚ್ಚು ತಿಳಿದಿಲ್ಲ. ಇದನ್ನು ಸ್ವಚ್ಛವಾಗಿಸಿ ಪುನಃ ಬಳಸಬಹುದು. ಈ ಬಗ್ಗೆ ಹೆಚ್ಚು ಅರಿವು ಉಂಟಾದಲ್ಲಿ ಕಡಿಮೆ ಪ್ಲಾಸ್ಟಿಕ್ ಹಾಗೂ ಹತ್ತಿ ಬಳಕೆಯಾಗಿ ಪರಿಸರ ರಕ್ಷಣೆಯು ಆಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT