ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದಲಾದರು ಕಾಲ, ಬದಲಾಗದು ಪಾತ್ರ!

Last Updated 7 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

* ಆರ್‌. ಇಳಾರಾಣಿ

ಸಂಗಾತಿಯ ಸಾಂಗತ್ಯಕ್ಕಾಗಿ ಹಪಹಪಿಸುವ ‘ಛೋಟಿ ಬಹು’ ಅವಳು. ಕೊನೆಕೊನೆಗೆ ಕುಡಿತದ ಗುಲಾಮಳಾಗುತ್ತಾಳೆ. ತನ್ನ  ಸಂಗಾತಿಯ ಸಾಹಚಾರ್ಯಕ್ಕಾಗಿ ಆ ಎಲ್ಲ ಚಟಗಳನ್ನೂ ಅವಳು ಅಪ್ಪುತ್ತಾಳೆ. ತನ್ನನ್ನೇ ಅರ್ಪಿಸಿಕೊಳ್ಳುತ್ತಾಳೆ.

ಹೀಗೆ 60ರ ದಶಕದ ಚಿತ್ರ ‘ಸಾಹಿಬ್‌ ಬೀವಿ ಔರ್‌ ಗುಲಾಂ’ ಚಿತ್ರದ ಕತೆಯನ್ನು ಒಂದೇ ಸಾಲಿನಲ್ಲಿ ಹೇಳಬಹುದು. ಬಂಗಾಳಿ ಸಮಾಜದ ಜಮೀನ್ದಾರಿ ಪದ್ಧತಿ ಇರುವ ಮನೆಯ ‘ಛೋಟಿ ಬಹು’ವಿನ ಕಥೆ ಅದು. ಈಗ 6 ದಶಕಗಳೇ ಕಳೆಯುತ್ತ ಬಂದಿವೆ. ಆದರೆ ಗಂಡ–ಹೆಂಡತಿಯ ಬಾಂಧವ್ಯದಲ್ಲಿ ಈಗಲೂ ‘ಸಾಹೀಬ್‌ ಬೀವಿ ಔರ್‌ ಗುಲಾಮ್‌’ ರೀತಿಯ ಮನೋಸ್ಥಿತಿಯೇ ಉಳಿದಿದೆ. ಅಲ್ಲಿ ಗುಲಾಮ ಒಂದು ಪಾತ್ರವಾಗಿತ್ತು. ಬಾಂಧವ್ಯದಲ್ಲಿ ಗುಲಾಮನ ಪಾತ್ರವನ್ನೂ ಬೀವಿಯೇ (ಹೆಂಡತಿಯೇ) ನಿರ್ವಹಿಸುವ ಅನಿವಾರ್ಯವನ್ನು ಅಲ್ಲಗಳೆಯುವಂತಿಲ್ಲ.

ಕೆಲವು ಮನೆಗಳಲ್ಲಿ ಔದ್ಯೋಗಿಕ ಮಹಿಳೆಯರು ತಮ್ಮ ಮೊದಲನೆಯ ಪೀಳಿಗೆಯಲ್ಲಿ ಇಂಥ ತರತಮಗಳನ್ನು ನಿರ್ವಹಿಸಬೇಕಾಗಿತ್ತು. ಆದರೆ ಆಧುನಿಕ ಜೀವನದ ಭರಾಟೆಯಲ್ಲಿ ಪರಿಸ್ಥಿತಿ ಬೇರೆಯಾಗಿದೆ. ಹೊಂದಾಣಿಕೆಯ ಅಚ್ಚಿನಲ್ಲಿ ಬಾಂಧವ್ಯಗಳು ಒಡಮೂಡುವ ದಿನಗಳಿವು.


ಈಗ ಏನಾಗಿದೆ ನೋಡಿ: ಕೆಲವು ಮನೆಗಳಲ್ಲಿ ಎರಡು ಅಥವಾ ಮೂರನೆಯ ಪೀಳಿಗೆ ಉದ್ಯೋಗಸ್ಥ ಮಹಿಳೆಯದ್ದಾಗಿದ್ದರೆ, ಅವರನ್ನು ಕೊಟ್ಟ ಮನೆಯಲ್ಲಿ ಅವರೇ ಮೊದಲ ತಲೆಮಾರಿನವರು. ಸ್ವತಂತ್ರ ಮತ್ತು ಸ್ವಾವಲಂಬಿ ಮಹಿಳೆ ಹಾಗೂ ಗಂಡು ಹೆತ್ತವರೆಂಬ ಒಂದೇ ಒಂದು ಗರ್ವವನ್ನು ಸಲಹಿಕೊಂಡ ಮಹಿಳೆಯರ ನಡುವೆ ಘರ್ಷಣೆ ಆಗುತ್ತಿದೆ. ಎಲ್ಲೆಡೆಯೂ ಸೈ ಎನಿಸಿಕೊಳ್ಳಬೇಕು ಎಂಬ ಅದಮ್ಯ ಬಯಕೆಯ ಸಂಘರ್ಷದಲ್ಲಿ ಸೊರಗುತ್ತಿರುವವರು ಉದ್ಯೋಗಸ್ಥ ಮಹಿಳೆಯರೇ!

ಹೆಂಡತಿಯನ್ನು ಕರೆತಂದಿರುವುದೇ ಮಗನ ಸೇವೆಗೆ. ಮಗನ ಎಲ್ಲ ತಪ್ಪುಗಳನ್ನೂ ಮನ್ನಿಸಲು ಹಾಗೂ ಮಗನ ಎಲ್ಲ ಬೇಡಿಕೆಗಳನ್ನು ಈಡೇರಿಸಲು! ಹೆಂಡತಿಯಾದವಳ ಮೊದಲ ಅರ್ಹತೆಯೆಂದರೆ – ಆತ್ಮಗೌರವವನ್ನು ಪಕ್ಕಕ್ಕಿಟ್ಟು ಬದುಕುವುದು. ಪ್ರತಿಯೊಂದಕ್ಕೂ ‘ಅವನು ಗಂಡಸು’ ಎನ್ನುವ ಸಮಜಾಯಿಷಿ ಸರಳವಾಗಿ ಬಂದಿರುತ್ತದೆ. ಇದು ಆತ್ಮಗೌರವ ಮತ್ತು ಸ್ವಾವಲಂಬನೆಯ ಸಂಸ್ಕಾರ ಹೊತ್ತು ಬೆಳೆದ ಹೆಣ್ಣುಮಕ್ಕಳಿಗೆ ತಡೆಯಲಾಗದ ಸಮಜಾಯಿಷಿ ಆಗಿರುತ್ತದೆ. ದುಡಿಯುವಾಗಲೂ ತರತಮ.

ಕಚೇರಿಯಲ್ಲಿ ದುಡಿದು ಹೈರಾಣಾಗಿ ಬರುವ ಹೆಣ್ಣುಮಕ್ಕಳಿಗೆ ಯಾವ ಬೆಚ್ಚನೆಯ ಸ್ವಾಗತವೂ ಮನೆಯಲ್ಲಿ ದೊರೆಯುವುದಿಲ್ಲ. ಕಚೇರಿಯಿಂದಾಚೆ ಕಾಲಿಟ್ಟೊಡನೆ ‘ಗೃಹವಾದಿನಿ ಭೂತ’ ಅವರನ್ನು ಆವರಿಸಿಕೊಂಡಿರುತ್ತದೆ. ಮನೆ ಹೊಸ್ತಿಲೊಳಗೆ ಕಾಲಿಟ್ಟೊಡನೆ, ಅಮ್ಮನನ್ನು ಬಿಟ್ಟಿರುವ ಮಕ್ಕಳು ಅಯಸ್ಕಾಂತದ ಆಕರ್ಷಣೆಗೆ ಒಳಗಾದಂತೆ ಅವಳ ವಲಯಕ್ಕೆ ಅಂಟಿಕೊಳ್ಳುತ್ತವೆ.

ಅಷ್ಟು ಹೊತ್ತು ಮನೆಯಲ್ಲಿ ನೋಡಿಕೊಂಡಿರುವ ಕೆಲಸದವರಾಗಲೀ, ಅಜ್ಜ ಅಜ್ಜಿಯರಾಗಲೀ ಒಂದು ಬಿಡುಗಡೆಯ ಉಸಿರು ಹೊರಹಾಕುತ್ತಾರೆ. ‘ಮಕ್ಕಳ ಅಮ್ಮ ಬಂದಳಲ್ಲ, ಆಯ್ತಿನ್ನು, ನಮ್ಮ ಜವಾಬ್ದಾರಿ ಮುಗಿಯಿತು’ ಎನ್ನುವ ನಿರಾಳ ಭಾವ ಅವರದ್ದು. ಆದರೆ ಅಮ್ಮನದು? ಎಷ್ಟೇ ಕಷ್ಟವಾದರೂ ತಾಯ್ತನ ಅನುಭವಿಸುವ ಖುಷಿಯಲ್ಲಿ ಉಳಿದದ್ದೆಲ್ಲ ಗೌಣವೆಂದು ಭಾವಿಸಿ ಅಪ್ಪುವ, ಧಾರಾಳತನ ಆಗ ತೋರಿಸಲೇಬೇಕು.

ಬೆಳಗಿನ ಎಲ್ಲ ಕೆಲಸಗಳನ್ನು ಮುಗಿಸುವ ಧಾವಂತ ಮಾತ್ರ ಮನೆಯಲ್ಲಿರುವ ಹಿರಿಯರಿಗೆ ಕಾಣಿಸುವುದೇ ಇಲ್ಲ. ‘ನೆರಿಗೆ ಚಿಮ್ಮಿಸಿಕೊಂಡು, ಬ್ಯಾಗೇರಿಸಿಕೊಂಡು, ಗಾಡಿ ಹತ್ತಿ ಹೊರಟರೆ ಆಯಿತು’ ಎನ್ನುವ ಸೂಜಿಮೊನೆಯ ಮಾತಿನಲ್ಲಿ ಅವರು ಗೃಹಬಂಧಿನಿಯಾಗಿರುವ ಅಸಮಾಧಾನದ ಎಳೆ ಇರುತ್ತದೆಯೇ? ಆಗ ಈ ‘ಸಾಹೇಬ್‌’ನ ಪಾಳೆಯಗಾರಿಕೆಯ ಬುದ್ಧಿ ಜಾಗೃತವಾಗುತ್ತದೆ. ಇದ್ದಕ್ಕಿದ್ದಂತೆ ಹೆಂಡತಿಯಾಗಿ ಮನೆಗೆ ಬಂದವಳು ‘ಆಳು’ – ಅವಳನ್ನು ಆಳುವುದೇ ತಮ್ಮ ಅಧಿಕಾರ ಮತ್ತು ಹಕ್ಕು ಎಂಬಂಥ ವರ್ತನೆ ಅದು. ಈ ಧೋರಣೆ, ಒಂದು ಬಾಂಧವ್ಯದಲ್ಲಿರಬೇಕಾದ ವಿಶ್ವಾಸ ಮತ್ತು ಗೌರವವನ್ನೇ ನುಂಗಿ ನೊಣೆದುಹಾಕುತ್ತದೆ. ‘ಅವಳು ನಮ್ಮವಳಲ್ಲ’ ಎಂಬ ತೀರ್ಮಾನವನ್ನು ಹೇರುವ ಕೆಲಸ ನೇರವಾಗಿಯೇ ನಡೆಯುತ್ತದೆ.

‘ಇದು ನನ್ನ ಮನೆ’ ಎನ್ನುವುದು ಭೌತಿಕವಾಗಿ, ಬೌದ್ಧಿಕವಾಗಿ ಒಪ್ಪಿಕೊಂಡರೂ ಭಾವನಾತ್ಮಕವಾಗಿ ಆ ಹುಡುಗಿಯೂ ಹೊರಗಿನವಳೇ ಎಂಬ ಭಾವ ಸ್ಥಾಯಿ ಆಗುತ್ತದೆ. ಆಗ ಕುಟುಂಬವೆನ್ನುವ ಪರಿಕಲ್ಪನೆ ಶಿಥಿಲಗೊಳ್ಳುವುದಿಲ್ಲವೇ? ಹಾಗಾದರೆ ‘ಸಾಹೀಬ್‌ ಬೀವಿ ಔರ್‌ ಗುಲಾಮ್‌’ ಮನೋಭೂಮಿಕೆಗೆ ಪರಿಹಾರ ಇಲ್ಲವೇ?

ಪರಿಹಾರ ಇದೆ. ಅದು ನೀರ್ಜಾ ಚಿತ್ರದಲ್ಲಿ. ‘ಬುರಾ ಕರ್‌ ಮತ್‌, ಬುರಾ ಸೆಹ ಮತ್‌ (ಕೆಟ್ಟದನ್ನು ಮಾಡಬೇಡ, ಕೆಟ್ಟದನ್ನು ಸಹಿಸಬೇಡ), ಆತ್ಮಗೌರವಕ್ಕೆ ಧಕ್ಕೆಯಾದಲ್ಲಿ ಇರಬೇಡ. ಇರುವುದೊಂದು ಜೀವ, ಜೀವನ. ಮಗನನ್ನು ಹೆತ್ತಿರುವಂತೆಯೇ ಮಗಳೂ ಹುಟ್ಟಿರುತ್ತಾಳೆ. ಅಷ್ಟೇ ಪ್ರೀತಿ, ವಾತ್ಸಲ್ಯ, ಮಮಕಾರವನ್ನು ಉಂಡಿರುತ್ತಾಳೆ. ಅವಳ ಕೂದಲು ಕೊಂಕಿದರೂ ಒಡಹುಟ್ಟಿದವರ ಎದೆಯೊಳಗೊಂದು ಕಿಚ್ಚು ಹೊಗೆಯಾಡುತ್ತದೆ. ಆ ಕಿಡಿ ಸಹೋದರಿಯ ಮನೆ ಸುಡಬಾರದೆಂಬ ಎಚ್ಚರಿಕೆಯಲ್ಲಿ ಎದೆ ಸುಡುತ್ತದೆ. ಹೆತ್ತವರ ಕರುಳು ಕುಯ್ಯುತ್ತದೆ.

ಅವಮಾನಗಳಿದ್ದಲ್ಲಿ, ಅನುಮಾನಗಳ ಕೂರಂಬು ಚುಚ್ಚುತ್ತಿದ್ದಲ್ಲಿ... ‘ನನ್ನ ಮನೆ’ ಎನ್ನುವುದಕ್ಕಿಂತ ಮುನ್ನ, ಬೆಚ್ಚನೆಯ ತಾವು ಬಯಸಿ ‘ನನ್ನ ಜೀವ, ನನ್ನ ಜೀವನ’ ಎಂಬುದಕ್ಕೆ ಹೆಚ್ಚು ಒತ್ತು ನೀಡಬೇಕು. ಗೌರವ, ಆದರ ಮತ್ತು ಪ್ರೀತಿಗಳಿದ್ದಲ್ಲಿ ‘ಸಾಹೀಬ್‌ ಬೀವಿ ಔರ್‌ ಗುಲಾಮ್‌’ನ ಮನೋಸ್ಥಿತಿ ಉಳಿಯುವುದೇ ಇಲ್ಲ. ಆದರೆ ತನ್ನ ಕರ್ತವ್ಯ, ತನ್ನನ್ನು ನೆಚ್ಚಿಕೊಂಡವರಿಗಾಗಿ ತಾನು ನವೆಯುವ, ಸವೆಯುವ ನೀರ್ಜಾ ಅಂತೂ ಖಂಡಿತವಾಗಿ ಹುಟ್ಟುತ್ತಾಳೆ.

‘ಒಂದು ಹೆಣ್ಣಿಗೊಂದು ಗಂಡು, ಹೇಗೋ ಸೇರಿ ಹೊಂದಿಕೊಂಡು, ಕಾಣದೊಂದು ಕನಸ ಕಂಡು, ಮಾತಿಗೊಲಿಯದಮೃತವುಂಡು, ದುಃಖ ಹಗುರವೆನುತಿರೆ, ಪ್ರೇಮವೆನಲು ಹಾಸ್ಯವೇ?’ ಎನ್ನುತ್ತಾರೆ ಕವಿ ಕೆ.ಎಸ್‌. ನರಸಿಂಹಸ್ವಾಮಿ. ನಿಜ, ಹೊಂದಾಣಿಕೆ ಸಾಧ್ಯವಾದರೆ ಬದುಕು ಅಮೃತಮಯವೇ! ಆದರೆ, ಹೀಗೆ ಹೊಂದಾಣಿಕೆಯನ್ನು ಸಮಾಜ ಹೆಣ್ಣಿನಿಂದಲೇ ಬಯಸುತ್ತದೆ ಹಾಗೂ ಅದನ್ನು ‘ಸಹಜ’ ಎಂದು ನಂಬುತ್ತದೆ. ಹಾಗಾಗಿಯೇ, ‘ಎಷ್ಟು ಕಷ್ಟವೋ ಹೊಂದಿಕೆ ಎಂಬುದು ನಾಲ್ಕು ದಿನದ ಈ ಬಾಳಿನಲಿ’ ಎನ್ನುವ ಕವಿಮಾತು ಹೆಣ್ಣಿನ ಪಾಲಿಗೆ ನಿತ್ಯಸತ್ಯ ಎನ್ನಿಸುತ್ತದೆ.



ವಜ್ರಾದಪಿ ಕಠಿಣರಾಗಿ...
ನಮ್ಮಲ್ಲಿ ಸಮಾಲೋಚನೆಗೆ ಬರುವ ಬಹುತೇಕ ಮಹಿಳೆಯರಲ್ಲಿ ಇಂಥವೇ ಸಂಘರ್ಷಗಳನ್ನು ಕಾಣುತ್ತೇವೆ. ಜೀವನ ಮೌಲ್ಯಗಳು ಹಾಗೂ ಬೌದ್ಧಿಕ ಮತ್ತು ಭೌತಿಕ ಜೀವನಗಳು ಒಟ್ಟೊಟ್ಟಿಗೆ ಸಾಗದೇ ಇದ್ದಾಗ ಅಪರಾಧಿ ಪ್ರಜ್ಞೆ ಬೆಳೆಯುತ್ತದೆ. ಅದು ತಾವೇ ಸರಿ ಇಲ್ಲ ಎಂಬ ತೀರ್ಮಾನ ತೆಗೆದುಕೊಳ್ಳುವಷ್ಟು ತೀವ್ರವಾಗಿರುತ್ತದೆ. ಆಗ ಜೀವನದಲ್ಲಿ ಬೇಸರವಷ್ಟೇ ಅಲ್ಲ, ತಮ್ಮ ಜೀವದ ಬಗ್ಗೆಯೇ ಜಿಗುಪ್ಸೆ ತಾಳುತ್ತಾರೆ. ಇದಕ್ಕೆ ಪರಿಹಾರವೆಂದರೆ ಮನೆಗಾಗಿ ಎಲ್ಲವನ್ನೂ ಸಹಿಸುವುದಷ್ಟೇ ಅಲ್ಲ, ಕೆಟ್ಟದ್ದು ಘಟಿಸುತ್ತಿರುವಾಗ ವಜ್ರಾದಪಿ ಕಠಿಣರಾಗಿ ತಡೆಯಲೇಬೇಕು. ಬಾಂಧವ್ಯದಲ್ಲಿ ಗೌರವ ಮತ್ತು ಪರಸ್ಪರ ಅವಲಂಬನೆಯೇ ಪ್ರೀತಿಯ ಜೀವಾಳವಾಗಿರುತ್ತದೆ. ಪ್ರೀತಿಯೂ ಕೊಡು – ಕೊಳ್ಳುವಿಕೆಯನ್ನು ಅವಲಂಬಿಸಿರುತ್ತದೆ. ಪ್ರೀತಿ ಕೊಟ್ಟರಷ್ಟೇ ಪಡೆಯಲು ಸಾಧ್ಯ. ಒಂದು ಬದಿಯಿಂದ ಬರೀ ತಿರಸ್ಕಾರವನ್ನೇ ಅನುಭವಿಸಿದಾಗ ಅವರಿಗೆ ನೀಡಲು ಪ್ರೀತಿ ತರುವುದೆಲ್ಲಿಂದ? ಪ್ರೀತಿ, ಗೌರವ ಮತ್ತು ಅವಲಂಬನೆ ಒಂದೇ ಒಂದು ತಪ್ಪಿದರೂ ಬಾಂಧವ್ಯದಲ್ಲಿ ಬಿರುಕು ಮೂಡಿ, ಕಂದರ ಬೀಳುತ್ತದೆ. ಹೀಗಾಗದಂತೆ ತಡೆಯಬೇಕು. ಕೆಟ್ಟದ್ದನ್ನು ಬಯಸಬಾರದು, ಮಾಡಬಾರದು ಅಷ್ಟೇ ಮುಖ್ಯವಾಗಿ ಸಹಿಸಬಾರದು.
ಡಿ. ಎಂ. ಹೆಗಡೆ,
ಆಪ್ತ ಸಮಾಲೋಚಕರು
ಸಮ್ಮೋಹನಶಾಸ್ತ್ರ ಚಿಕಿತ್ಸಕರು (ಹಿಪ್ನೊ ಥೆರಪಿಸ್ಟ್‌)
ಮಾಹಿತಿಗೆ: 9481405184

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT