ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುದ್ಧತೆಯ ಅನಾಹುತಗಳು ಮತ್ತು ಆರೋಗ್ಯದ ಸೂಕ್ಷ್ಮ ವ್ಯತ್ಯಾಸಗಳು

Last Updated 7 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಅಲರ್ಜಿ ಮತ್ತು ಅಸ್ತಮಾ ಇತ್ತೀಚಿನ ದಿನಗಳಲ್ಲಿ ಜಗತ್ತಿನಾದ್ಯಂತ ಹೆಚ್ಚು ಹೆಚ್ಚು ಜನರನ್ನು ಕಾಡತೊಡಗಿವೆ. ಕಳೆದ ಒಂದೇ ದಶಕದಲ್ಲಿ ಶೇ.10ರಷ್ಟು ಈ ಕಾಯಿಲೆಗಳು ಏರಿಕೆಯಾಗಿರುವುದು ಕಂಡುಬರುತ್ತದೆ. ‘ಮಂಗಳಾರತಿ ತಗೊಂಡರೆ ಉಷ್ಣ, ತೀರ್ಥ ತಗೊಂಡರೆ ಶೀತ’ ಎನ್ನುವಂತಾಗುತ್ತಿದೆ.

ಈ ಕಾಯಿಲೆಗಳು ನಮ್ಮನ್ನು ಹೆಚ್ಚು ಆವರಿಸಿಕೊಳ್ಳುತ್ತಿರುವುದಕ್ಕೆ ಕಾರಣ ಹೆಚ್ಚುತ್ತಿರುವ ಸ್ವಚ್ಛತೆ! ಹಿಂದೆ ನೈರ್ಮಲ್ಯದ ಕೊರತೆಯಿಂದ ಭಯಾನಕ ಸಾಂಕ್ರಾಮಿಕ ರೋಗ ಮನುಕುಲಕ್ಕೆ ಮಾರಕವಾಗಿದ್ದು ಸತ್ಯ. ಇತ್ತ ಈಗ ಸ್ವಚ್ಛತೆ ತನ್ನ ಪಾರಾಕಾಷ್ಠತೆಯನ್ನು ತಲುಪಿದೆ. ತಮ್ಮ ಹಸ್ತ ನಮ್ಮನ್ನು ನಂಜಿನಿಂದ ನುಂಗೀತು ಎನ್ನುವ ಭಯಕ್ಕೆ ತಲುಪಿ, ಮೈ, ಮನೆಯಲ್ಲೆಲ್ಲಾ ರೋಗಾಣುಗಳಷ್ಟೇ ಅಲ್ಲದೇ ಎಲ್ಲಾ ಸೂಕ್ಷಜೀವಿಗಳನ್ನು ಕೊಂದು ಒಂದು ರೀತಿಯ ಸ್ಟೆರೈಲ್ ವಾತಾವರಣಕ್ಕೆ ಕಾಲಿಡುತ್ತಿದ್ದೇವೆ. ಈಗ ಯಾವುದೇ ಹೋಟೆಲ್, ಕಚೇರಿ, ಆಸ್ಪತ್ರೆ ಪರಿಶುದ್ಧವಾಗಿದ್ದರೆ ಬೆಳಗ್ಗೆ ಕೀಟನಾಶಕ ಹೊಡೆದಿದ್ದಾರೆ ಎನ್ನುವುದು ವಾಸ್ತವವಾಗಿದೆ.

ಮೊನ್ನೆ ಆಸ್ಪತ್ರೆ ಕ್ಯಾಂಟೀನ್‌ನಲ್ಲಿ ತಿಂಡಿ ತಿನ್ನುತ್ತಿದ್ದಾಗಲೇ ಕೀಟನಾಶಕ ಕ್ಯಾನ್ ಹೊತ್ತ ವ್ಯಕ್ತಿ ನಮ್ಮ ಸುತ್ತ ‘ಔಷಧಿ’ ಹೊಡೆದು ಹೋದರು. ಅವರ ಕರ್ತವ್ಯ ದಿನಕ್ಕೆ ಮೂರು ಬಾರಿ ಈ ರೀತಿ ‘ಔಷಧಿ’ ಹೊಡೆಯುವುದು ಎಂದು ಅವರೇ ಹೇಳಿದರು. ಅದು ಅವರ ತಪ್ಪಲ್ಲ. ‘ನಾಗರಿಕ’ ಸಮಾಜದಲ್ಲಿ ಅಂತಹ ವ್ಯವಸ್ಥೆ ನಾವು ಅಂಟಿಕೊಂಡಿದ್ದೇವೆ. ಜೊತೆಗೆ ಆ್ಯಂಟಿಬ್ಯಾಕ್ಟಿರಿಯಲ್ ಸೋಪು, ಶ್ಯಾಂಪು, ಹ್ಯಾಂಡ್ ಸ್ಯಾನಿಟೈಸರ್ ಮಾತ್ರವಲ್ಲದೆ, ಆ್ಯಂಟಿಬಾಯಾಟಿಕ್ ‘ಟ್ರೈಕ್ಲೋಸಾನ್’ ಇರುವ ಪೇಸ್ಟ್ ಕೂಡ ಬಳಕೆಯಾಗುತ್ತಿವೆ! ಅಮೆರಿಕ ಇತ್ತೀಚೆಗೆ ಸೋಪು, ಶ್ಯಾಂಪುಗಳಲ್ಲಿ ಈ ರೀತಿ ಆ್ಯಂಟಿಬಯಾಟಿಕ್‌ಗಳನ್ನು ರದ್ದುಪಡಿಸಿದೆ.  ಈ ರೀತಿಯ ಸ್ವಚ್ಛತೆಯಿಂದ ನಮ್ಮ ದೇಹ ಪ್ರಕೃತಿಯೊಂದಿಗೆ ಪಳಗದೆ, ಪಕ್ವವಾಗದೇ ಸುಲಭವಾಗಿ ರೋಗಗಳಿಗೆ ತುತ್ತಾಗುವಂತಾಗುತ್ತದೆ.

An easy prey for all pestilence with sickening sanitation. ಇದನ್ನು ವೈದ್ಯಕೀಯ ಕ್ಷೇತ್ರದಲ್ಲಿ ಹೈಜೀನ್ ಹೈಪಾಥಿಸಿಸ್ (Hygiene Hypothesis) ‘ಶುದ್ದತೆಯ’ ಖಾಯಿಲೆಗಳು ಎಂದು ಗುರುತಿಸುತ್ತಾರೆ. 

ದೇಹ ಎಲ್ಲಾ ರೀತಿಯ ಸೂಕ್ಷಜೀವಿಗಳನ್ನು ಪರಿಚಯಿಸಿಕೊಂಡು ಮಿತ್ರರನ್ನು, ಶತ್ರುಗಳನ್ನು ಗುರುತಿಸಿ ತನ್ನ ಆರೋಗ್ಯ ಕವಚವನ್ನು ಭದ್ರಗೊಳಿಸುವಂತದ್ದು. ಲಸಿಕೆ ಕೂಡ ಇದೇ ಕೆಲಸಕ್ಕೆ ನಮ್ಮನ್ನು ಒಗ್ಗಿಸುವುದು. ನಮ್ಮ ಒಟ್ಟು ರೋಗಾಣುಗಳ ಹೋರಾಟವನ್ನು 3R ಎನ್ನುವುದುಂಟು. ಅಂದರೆ ಗುರುತಿಸುವುದು (recognize),  ಪ್ರತಿಕ್ರಿಯಿಸುವುದು (react), ಮತ್ತು ಮತ್ತೆ ಕುದುರುವುದು (recover). ರೋಗಾಣುಗಳನ್ನು– ಸೂಕ್ಷಜೀವ ಜಗತ್ತನ್ನು ಗುರುತಿಸುವುದಕ್ಕೆ ಅವುಗಳ ಪರಿಚಯವಿರಬೇಕು. ಪರಿಚಯಕ್ಕೆ ನಮ್ಮ ಸುತ್ತಮುತ್ತ ಸಿಗಬೇಕು. ಗುರುತಿಸಲು ತಿಳಿಯದೇ ಹೋದರೆ ಶತ್ರುವನ್ನು ಮಿತ್ರರಂತೆ ಕಾಣುವುದಾಗುತ್ತದೆ. ಜೊತೆಗೆ ಅಲ್ಲಿ ಇಲ್ಲಿ ಆಗಾಗ ಕಾಣುವ  ಶತ್ರುವಿಗೆ ಯಾವ ಆಯುಧ ಎಂಬುದು ದೇಹಕ್ಕೆ ಗೊತ್ತಾಗಬೇಕು.

ಇದು ಚಿಕ್ಕ ವಯಸ್ಸಿನಲ್ಲಿ ಒಗ್ಗಿದ ದೇಹ ತನ್ನ ನೆನಪಿನೊಂದಿಗೆ ತನ್ನ ತೆಕ್ಕೆಯಲ್ಲಿ ಸಮರ್ಥವಾದ ಆಯುಧಗಳನ್ನು ಅಳವಡಿಸಿಕೊಳ್ಳುವಂತಾಗುತ್ತದೆ.
ಮಕ್ಕಳು ಚಿಕ್ಕ ವಯಸ್ಸಿನಲ್ಲಿ ಮಣ್ಣಿನಲ್ಲಿ ಆಡುವುದು, ರೈತ ಕುಟುಂಬದಲ್ಲಿ ಸುತ್ತಮುತ್ತ ಸಾಕು ಪ್ರಾಣಿ ಪಕ್ಷಿಗಳೊಂದಿಗೆ ಬೆರೆಯುವುದರಿಂದ ಅಲರ್ಜಿ, ಅಸ್ತಮಾದಂತಹ ಕಾಯಿಲೆಗಳಿಗೆ ಕಡಿಯಾಣ ಹಾಕಬಹುದು ಎನ್ನುತ್ತಾರೆ. ಇದರ ಅರ್ಥ ನಮ್ಮ ಸುತ್ತ ಕೊಳಕು ತುಂಬಿಕೊಳ್ಳಬೇಕು, ಗಲೀಜು ಹರಡಿಕೊಳ್ಳಬೇಕು ಎನ್ನುವ ಅರ್ಥವಲ್ಲ. ಆದರೆ ಸುತ್ತ ರಾಸಾಯನಿಕ ಸಮರ ಸಾರಿ ಶುದ್ಧತೆ ಸಾಧಿಸುವುದರಿಂದ ಉಂಟಾಗುವ ಅನಾಹುತದ ಎಚ್ಚರಿಕೆ ಕೂಡಾ ಅಗತ್ಯ.

ಟೈಪ್ ಒನ್ ಮಧುಮೇಹ, ಖಿನ್ನತೆ, ಹಲವು ಬಗೆಯ ಕ್ಯಾನ್ಸರ್, ಮಲ್ಟಿಪಲ್ ಸ್ಕ್ಲೇರೊಸಿಸ್.. ಹೀಗೆ ಅನೇಕ ಕಾಯಿಲೆಗಳು ಅತಿ ಸ್ವಚ್ಛತೆಯಿಂದ ಉಂಟಾಗುವುದನ್ನು ಗುರುತಿಸಲಾಗಿದೆ.

ಯಾವುದೇ ಹೊಸ ಔಷಧ ಕಂಡುಕೊಳ್ಳುವಾಗ ಅದನ್ನು ಇಲಿಗಳ ಮೇಲೆ ಪ್ರಯೋಗ ಮಾಡುತ್ತಾರೆ. ಆದರೆ ಇದನ್ನು ಕಾಡಿನಲ್ಲೋ, ನಗರಗಳಲ್ಲೋ, ಮನೆಗಳಲ್ಲಿರುವ ಇಲಿಗಳ ಮೇಲೆ ಪರೀಕ್ಷಿಸುವುದಿಲ್ಲ. ಔಷಧ ಪರೀಕ್ಷಿಸಲು  ಕೃತಕ ವಾತವರಣದಲ್ಲಿ, ಎಲ್ಲಾ ರೀತಿಯ ಸೋಂಕು, ಸೂಕ್ಷ್ಮಜೀವಿಗಳಿಂದ ತೆರೆದುಕೊಳ್ಳದೇ ರಕ್ಷಿಸಲ್ಪಟ್ಟ ಇಲಿಗಳನ್ನು ಬಳಸುತ್ತಾರೆ. ಈ ಪ್ರಯೋಗಾಲಯದ ಇಲಿಗಳಿಗೂ, ಬೇರೆ ಇಲಿಗಳಿಗೂ ತಮ್ಮ ರೋಗ ನಿರೋಧಕ ಶಕ್ತಿಯಲ್ಲಿ ಅಜಗಜಾಂತರ ವ್ಯತ್ಯಾಸವಿರುತ್ತದೆ.

ಪ್ರಯೋಗಾಲಯದ ಇಲಿಗಳು ‘ಸ್ಟೆರೈಲ್’ ವಾತಾವರಣದಲ್ಲಿ ಬದುಕುವಂತವು. ಇಂತಹ ಶುದ್ಧ ಇಲಿಗಳ ಮೇಲೆ ಔಷಧಗಳನ್ನು ಪರೀಕ್ಷಿಸಲು ಸಾಧ್ಯ. ಆದರೆ ಔಷಧ ರಕ್ಷಿಸಲ್ಪಟ್ಟ ಇಲಿಗಳ ಮೇಲೆ ಕೆಲಸ ಮಾಡಿದರೆ, ಕಾಡಿನ ಊರಿನ ಇಲಿಗಳಲ್ಲಿಯೂ ಹಾಗೆಯೇ ಕೆಲಸ ಮಾಡುತ್ತದೆ ಎಂದು ಗ್ರಹಿಸುವುದು ತಪ್ಪಾಗುತ್ತದೆ. ಗರಡಿ ಮನೆಯಲ್ಲಿ ಪಳಗಿದವರನ್ನು ಗೆಲ್ಲುವುದು ಬೇರೆ, ಯಾವುದೇ ರೀತಿಯಲ್ಲೂ ತರಬೇತಿ ಇಲ್ಲದವರೊಂದಿಗೆ ಕುಸ್ತಿ ಆಡುವುದು ಬೇರೆ.

ಇತ್ತೀಚಿಗೆ ಯೂನಿವರ್ಸಿಟಿ ಆಫ್‌ ಟೆಕ್ಸಸ್ ಸೌಥ್‌ವೆಸ್ಟರ್ನ್ ಮೆಡಿಕಲ್ ಸೆನ್ಟರ್‌ನ ವಿಜ್ಞಾನಿಗಳಾದ ಲಿಲ್ಲಿ ತಾವೊ ಮತ್ತು ಟಿಫನಿ ರೀಸ್ ಪ್ರಕಟಿಸಿರುವ ಮೆಟಾನಲಿಸಿಸ್ ಪ್ರಕಾರ ಪ್ರಯೋಗಾಲಯದ ಇಲಿಗಳು ರೋಗಾಣುಗಳಿಂದ ತನ್ನನ್ನು ರಕ್ಷಿಸಿಕೊಳ್ಳುವ ಸಾಮಾರ್ಥ್ಯ ಪಡೆದಿರುವುದಿಲ್ಲ. ಸಾಧಾರಣ ರೋಗಾಣುಗಳು ಈ ಇಲಿಗಳ ರೋಗನಿರೋಧಕ ಶಕ್ತಿಯನ್ನು ಸುಲಭವಾಗಿ ಕೆಡುವಬಲ್ಲವು. ಅದೇ ಕಾಡಿನ ಇಲಿಗಳು ಇಂತಹ ರೋಗಾಣುಗಳ ವಿರುದ್ಧ ತಮ್ಮಲ್ಲಿ ತಕ್ಕ ನಿರೋಧಕ ಶಕ್ತಿಯನ್ನು ಹೊಂದಿರುತ್ತವೆ. ಪ್ರಾಯೋಗಾಲಯದ ಇಲಿಗಳಿಗೆ ಸ್ವಚ್ಛತೆಯೇ ರೋಗಾಣುಗಳಿಗಿಂತ ಮಾರಕ! ತನ್ನ ಕೃತಕ ವಾತಾವರಣ ಬಿಟ್ಟು ಬೇರೆ ಕಡೆ ಅವು ಬದುಕಲಾರವು.

ನಮ್ಮಲ್ಲಿ ಪಟ್ಟಿ ಮಾಡಿರುವ ಸುಮಾರು 30,000 ಕಾಯಿಲೆಗೆ 30,000 ಲಸಿಕೆ ಹಾಕಲು ಸಾಧ್ಯವಿಲ್ಲ. ದೇಹ ತನ್ನನ್ನು ಪ್ರಕೃತಿಯೊಂದಿಗೆ ಬೆರೆತು ಬೆಳಸಿಕೊಳ್ಳುವ ರೋಗನಿರೋಧಕ ಶಕ್ತಿ ಬಹುಮುಖ್ಯ. ಹಾಗೆಯೇ ಇಂದಿನ ಔಷಧ, ಲಸಿಕೆ ಪರೀಕ್ಷಿಸುವ ವಿಧಾನಗಳೂ ಬದಲಾಗಬೇಕಾಗಬಹುದು. ಇಲಿಗಳ ಮೇಲೆ ಔಷಧಗಳ ಯಶಸ್ಸು ಕಂಡ ಮೇಲೆ ಮನುಷ್ಯರ ಮೇಲೆ ಕೂಡ ಕ್ಲಿನಿಕಲ್ ಪ್ರಯೋಗ ಮಾಡುತ್ತಾರೆ. ಇಲ್ಲಿ ಹೆಚ್ಚಿನವರು ಗಂಡಸರೇ ಆಗಿರುತ್ತಾರೆ. ಹೃದ್ರೋಗ, ಮಧುಮೇಹದಂಥ ಕಾಯಿಲೆಗೆ ಗಂಡು ಹೆಣ್ಣು ಒಂದೇ ಎಂದು ಊಹಿಸಿ ಪ್ರಯೋಗ ಮಾಡುವುದಾಗಿದೆ. ಮಹಿಳೆಯಯರ ದೇಹ ಪ್ರಕೃತಿ ಮತ್ತು ಹಾರ್ಮೊನ್‌ಗಳ ವ್ಯತ್ಯಾಸ ಕಾರಣಗಳಿಂದ ಅವರ ಮೇಲೆ ಪರೀಕ್ಷಿಸುವುದು ಕಡಿಮೆ. ಅಲ್ಲದೇ ಅನೇಕ ಔಷದಗಳು ಲಿಂಗ ತಾರತಮ್ಯವಿಲ್ಲದೇ ಪರೀಕ್ಷಿಸುವುದು ಮತ್ತು ಬಳಸುವುದರ ಬಗ್ಗೆ ಇತ್ತೀಚಿಗೆ ಬಹಳಷ್ಟು ತಕರಾರುಗಳಿವೆ.

ಒಂದು ಅಧ್ಯಾಯನದ ಪ್ರಕಾರ ಪ್ರಯೋಗಾಲಯದ ಇಲಿಗಳಿಗೆ ಔಷದ ಕೊಟ್ಟವರು ಗಂಡೋ, ಹೆಣ್ಣೊ ಎನ್ನುವುದರ ಮೇಲೆ ಔಷಧದ ಫಲಿತಾಂಶ ಬದಲಾಗುವುದುಂಟು! ಕಾರಣ ವ್ಯಕ್ತಿಯ ಹಾರ್ಮೊನ್ ಪ್ರಭಾವ!

ಇತ್ತೀಚಿಗೆ ಪ್ರಕಟವಾದ ‘ಜಂಡರ್ ಮೆಡಿಸಿನ್’ ಎಂಬ ಪುಸ್ತಕದಲ್ಲಿ ಮಾರೆಕ್ ಗ್ಲೆಂಜರ್ಮನ್ ಔಷದ ತಯಾರಿಕೆಯಲ್ಲಿ ಲಿಂಗ ತಾರತಮ್ಯದ ಬಗ್ಗೆ ಬರಬೇಕಾದ ಅವಶ್ಯಕತೆಯನ್ನು ತೋರಿಸುತ್ತಾರೆ.

ಹೀಗೆ ಸಾರಸಗಟಾಗಿ ಒಂದೇ ಎಂದು ಊಹಿಸಿ ಇಂದು ಔಷಧ ಪರೀಕ್ಷಿಸುವುದರತ್ತ ಪುನರ್‌ಪರಿಶೀಲನೆ ಅವಶ್ಯಕವಾಗಿದೆ. ಜೊತೆಗೆ ಕವಿ ಎ.ಹೆಚ್. ಆಡನ್‌ನ ಮಾತು ಜ್ಞಾಪಿಸಿಕೊಳ್ಳೂವುದು ಸೂಕ್ತವಾಗಬಹುದು: Healing, Papa would tell me, is not a science, but the intuitive art of wooing nature.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT