ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯ ಲಾಭಗಳಿಗಾಗಿ ಸಾಲ ಮನ್ನಾ ಕ್ರಮ ಸರಿಯಲ್ಲ

Last Updated 7 ಏಪ್ರಿಲ್ 2017, 20:34 IST
ಅಕ್ಷರ ಗಾತ್ರ

ಉತ್ತರಪ್ರದೇಶ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ನಡೆಸಿದ ಮೊದಲ ಸಚಿವ ಸಂಪುಟ ಸಭೆಯಲ್ಲಿ ಆದಿತ್ಯನಾಥ ಯೋಗಿ ಅವರು ಕೃಷಿ ಸಾಲವನ್ನು ಮನ್ನಾ ಮಾಡಿದ್ದಾರೆ. ಅಂತೂ ಉತ್ತರಪ್ರದೇಶ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ನೀಡಿದ್ದ ಭರವಸೆಯನ್ನು ಮುಖ್ಯಮಂತ್ರಿ ಈಡೇರಿಸಿದಂತಾಯಿತು.

ರೈತರ ₹1 ಲಕ್ಷದವರೆಗಿನ ಕೃಷಿ ಸಾಲ ಮನ್ನಾ ಮಾಡುವ ಈ ಯೋಜನೆಯಿಂದ ರಾಜ್ಯದ ಬೊಕ್ಕಸಕ್ಕೆ ₹ 36,359 ಕೋಟಿ ಹೊರೆ ಬಿದ್ದಿದೆ. ಹೀಗಿದ್ದೂ ಕೃಷಿ ವಲಯವನ್ನು ಸುಧಾರಿಸಲು ದೊಡ್ಡ ಯೋಜನೆಗಳನ್ನೇನೂ ಉತ್ತರಪ್ರದೇಶ ಸರ್ಕಾರ ಪ್ರಕಟಿಸಿಲ್ಲ ಎಂಬುದನ್ನು ಗಮನಿಸಬೇಕು.

2016–17ರಲ್ಲಿ ಉತ್ತರಪ್ರದೇಶ ಸರ್ಕಾರದ ಒಟ್ಟು ವೆಚ್ಚದಲ್ಲಿ ಶೇ 2.3ರಷ್ಟು ಮಾತ್ರ ಕೃಷಿ ವಲಯಕ್ಕೆ ನೀಡಲಾಗಿದೆ. ಈಗ ಕೃಷಿ ಸಾಲ ಮನ್ನಾ ಯೋಜನೆ ಅಸಾಧಾರಣವಾದ ಕ್ರಮ ಎಂದೇ ಹೇಳಬೇಕು. ಆದರೆ ಇಂತಹ ಕ್ರಮ ಕೈಗೊಳ್ಳಲಾಗುತ್ತಿರುವುದು ಇದೇ ಮೊದಲೇನಲ್ಲ.

2007–08ರಲ್ಲಿ ಕೇಂದ್ರದಲ್ಲಿ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ₹60 ಸಾವಿರ ಕೋಟಿಗೂ ಹೆಚ್ಚಿನ ಕೃಷಿ ಸಾಲ ಮನ್ನಾ  ಮಾಡಲಾಗಿತ್ತು. ಕೃಷಿ ಸಾಲ ಮನ್ನಾ ನಿರ್ಧಾರವನ್ನು ಉತ್ತರಪ್ರದೇಶ ಸರ್ಕಾರ ಪ್ರಕಟಿಸಿದ ನಂತರ ಕರ್ನಾಟಕ ಸೇರಿದಂತೆ ಪಂಜಾಬ್, ಮಹಾರಾಷ್ಟ್ರ ಹಾಗೂ ತಮಿಳುನಾಡು ಸರ್ಕಾರಗಳ ಮೇಲೂ ಒತ್ತಡ ಬಿದ್ದಿದೆ.

ಈ ಮಧ್ಯೆಯೇ ‘ಐದು ಎಕರೆಗಿಂತ ಹೆಚ್ಚು ಜಮೀನು ಇರುವ ರೈತರ ಸಾಲವನ್ನೂ ಮನ್ನಾ ಮಾಡಬೇಕು’ ಎಂದು ತಮಿಳುನಾಡು ಸರ್ಕಾರಕ್ಕೆ ಮದ್ರಾಸ್ ಹೈಕೋರ್ಟ್ ನೀಡಿರುವ ಆದೇಶ ಅತಿರೇಕದ್ದು. ‘2016ರಲ್ಲಿ ತಮಿಳುನಾಡಿನಲ್ಲಿ ಹೊರಡಿಸಿದ ಕೃಷಿ ಸಾಲ ಮನ್ನಾ ಯೋಜನೆಯು ಐದು ಎಕರೆಗಿಂತ ಹೆಚ್ಚು ಜಮೀನು ಹೊಂದಿರುವ ರೈತರಿಗೆ ಅನ್ವಯ ಆಗುತ್ತಿರಲಿಲ್ಲ.

ಹೀಗಾಗಿ ಸಣ್ಣ ರೈತರಷ್ಟೇ ಅಲ್ಲ ಐದು ಎಕರೆಗಿಂತ ಹೆಚ್ಚು ಜಮೀನು ಇರುವವರೂ ಸೇರಿದಂತೆ ಎಲ್ಲ ರೈತರಿಗೆ ಈ ಯೋಜನೆ ವಿಸ್ತರಿಸಬೇಕು’ ಎಂದು ಸಹಕಾರ, ಆಹಾರ ಮತ್ತು ಗ್ರಾಹಕ ಹಿತರಕ್ಷಣೆ ಇಲಾಖೆ ಹಾಗೂ ಸಹಕಾರ ಸಂಘಗಳ ರಿಜಿಸ್ಟ್ರಾರ್‌ಗೆ ಹೈಕೋರ್ಟ್‌ ತಾಕೀತು ಮಾಡಿದೆ. 

ರೈತರಿಂದ ಸಾಲ ವಸೂಲಿಗೆ ಸಹಕಾರ ಸಂಘಗಳು ಮುಂದಾಗಬಾರದು ಎಂದು ಅದು ಸೂಚಿಸಿರುವುದಂತೂ ತನ್ನ ಕಾರ್ಯವ್ಯಾಪ್ತಿಯನ್ನು ಮೀರಿ ಕಾರ್ಯಾಂಗದ ಮೇಲೆ ನಡೆಸಿದ  ಅತಿಕ್ರಮಣವಾಗಿದೆ ಎನ್ನಬಹುದು .

2022ರ ಒಳಗೆ ರಾಷ್ಟ್ರದಲ್ಲಿ ಕೃಷಿ ಆದಾಯವನ್ನು ದ್ವಿಗುಣಗೊಳಿಸುವ ಮಾತನಾಡುತ್ತಿದೆ ಕೇಂದ್ರ ಸರ್ಕಾರ. ಇಂತಹ ಸಂದರ್ಭದಲ್ಲಿ ಈ ಬಗೆಯಲ್ಲಿ ಸಾಲ ಮನ್ನಾ ಪ್ಯಾಕೇಜ್‌ಗಳಿಗಾಗಿ ಒತ್ತಾಯಿಸುವ ಪ್ರವೃತ್ತಿ ಹೆಚ್ಚಾಗುವುದು ಒಳ್ಳೆಯದಲ್ಲ. ಇಂತಹ ಕ್ರಮ ಮುಂದಿನ ದಿನಗಳಲ್ಲಿ ಸಾಲಗಾರರು ಸುಸ್ತಿದಾರರಾಗಲು ಉತ್ತೇಜನ ನೀಡುವಂತಹದ್ದು. ಆರ್ಥಿಕ ಸಿದ್ಧಾಂತದಲ್ಲಿ ಇದನ್ನು ‘ನೈತಿಕ ಅಶಿಸ್ತು’ ಎಂದು ಕರೆಯಲಾಗುತ್ತದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಉರ್ಜಿತ್ ಪಟೇಲ್ ಅವರು ಹೇಳಿರುವುದು ಸರಿಯಾಗಿಯೇ ಇದೆ. 

ಈಗಾಗಲೇ ಸರ್ಕಾರಿ ಕ್ಷೇತ್ರದ ಬ್ಯಾಂಕ್‌ಗಳು ಕಷ್ಟದಲ್ಲಿವೆ. 2015–16ರಲ್ಲಿ ₹ 17,993 ಕೋಟಿಯಷ್ಟು ನಿವ್ವಳ ನಷ್ಟವನ್ನು ಈ ಬ್ಯಾಂಕ್‌ಗಳು ಅನುಭವಿಸಿವೆ. ವಸೂಲಾಗದ ಸಾಲದ ದೊಡ್ಡ ಹೊರೆಯಿಂದ ರಾಷ್ಟ್ರದ ಆರ್ಥಿಕತೆ ಮೇಲೆ ಬೀರಬಹುದಾದ ಕೆಟ್ಟ ಪರಿಣಾಮಗಳನ್ನು ಕಡೆಗಣಿಸುವುದು ಸಲ್ಲದು.

ರಾಷ್ಟ್ರದ ಒಟ್ಟು ಆಂತರಿಕ ಉತ್ಪನ್ನಕ್ಕೆ (ಜಿಡಿಪಿ) ಕೃಷಿ ವಲಯ ನೀಡುವ ಕೊಡುಗೆ ಶೇ 14ರಷ್ಟು ಮಾತ್ರ. ಆದರೆ ಭಾರತದ ಔದ್ಯೋಗಿಕ ವಲಯದ ಅರ್ಧದಷ್ಟು ಮಂದಿ ಕೃಷಿಯನ್ನೇ ನೆಚ್ಚಿಕೊಂಡಿದ್ದಾರೆ ಎಂಬ ವಾಸ್ತವವನ್ನೂ ನಾವು ಮರೆಯಲಾಗದು. ಹೀಗಾಗಿ ಈ ಸವಾಲು ಅತ್ಯಂತ ದೊಡ್ಡದು.

ಅಗ್ಗದ ದರಗಳಲ್ಲಿ ಕೃಷಿ ಸಾಮಗ್ರಿಗಳು ರೈತರಿಗೆ ದೊರೆಯುವಂತೆ ನೀತಿಗಳನ್ನು ರೂಪಿಸುವ ಮೂಲಕ ರೈತರಿಗೆ ಸರ್ಕಾರ ನೆರವಾಗಬಹುದು. ಜೊತೆಗೆ, ರೈತ ಬೆಳೆದದ್ದಕ್ಕೆ ಲಾಭದಾಯಕವಾದ ಹೆಚ್ಚಿನ ಬೆಲೆ ಸಿಗಲು ಅನುವು ಮಾಡಿಕೊಡುವಂತಹ ನೀತಿಗಳನ್ನು ರೂಪಿಸಲೂ ಸರ್ಕಾರ ಮುಂದಾಗಬೇಕು.

ಚುನಾವಣೆಗಳು ರಾಷ್ಟ್ರದಲ್ಲಿ ನಿಯಮಿತವಾಗಿ ನಡೆಯುತ್ತಿರುತ್ತವೆ. ಹೀಗಾಗಿ ಸಾಲ ಮನ್ನಾ ನಿರೀಕ್ಷೆಗಳೂ ನಿರಂತರವಾಗಿರುತ್ತವೆ. ಚುನಾವಣೆಗಳಲ್ಲಿ ರಾಜಕೀಯ ಲಾಭಗಳಿಗಾಗಿ ರಾಷ್ಟ್ರದ ಹಿತ ಬಲಿ ಕೊಡಬಾರದು. ಕೃಷಿ ಕ್ಷೇತ್ರವನ್ನು ಸುಸ್ಥಿರ ಆರ್ಥಿಕ ಚಟುವಟಿಕೆಯಾಗಿಸುವುದಕ್ಕೆ ಸರ್ಕಾರಗಳು ಗಮನ ನೀಡಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT