ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಥಿಕತೆಗೆ ಮರ್ಮಾಘಾತ

Last Updated 7 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಹೆದ್ದಾರಿಗುಂಟ ಮದ್ಯ ಮಾರಾಟ ನಿಷೇಧಿಸಿ ಸುಪ್ರೀಂ ಕೋರ್ಟ್‌ ಹೊರಡಿಸಿರುವ ಫರ್ಮಾನು ಕರ್ನಾಟಕ ಮಾತ್ರವಲ್ಲದೆ ಇಡೀ ದೇಶದ ಆರ್ಥಿಕತೆಗೆ ಮರ್ಮಾಘಾತ ನೀಡಲಿದೆ ಎಂಬ ವಿಶ್ಲೇಷಣೆ ವಿತ್ತವಲಯದಲ್ಲಿ ಜೋರಾಗಿ ನಡೆದಿದೆ. ರಾಜ್ಯ ಸರ್ಕಾರದ ಸಂಪನ್ಮೂಲವನ್ನು ವರ್ಷದಿಂದ ವರ್ಷಕ್ಕೆ ದ್ವಿಗುಣಗೊಳಿಸುತ್ತಿರುವ ಅಬಕಾರಿ ಮೂಲದ ಆದಾಯ, ರಾಜ್ಯಾದಾಯದ ಪ್ರಮುಖ ಸ್ತಂಭ.

ಅಭಿವೃದ್ಧಿ ಹಾಗೂ ಜನಕಲ್ಯಾಣ ಕಾರ್ಯಕ್ರಮಗಳಿಗೆ ‘ಕುಡುಕ’ರ ಕೊಡುಗೆಯನ್ನು ಸರ್ಕಾರ ಬಳಸಿಕೊಳ್ಳುತ್ತಲೇ ಇದೆ. 2006–07ರವರೆಗೆ ಸಾರಾಯಿ ಮಾರಾಟದಿಂದ ಬರುವ ಆದಾಯ ಪ್ರಮುಖವಾಗಿತ್ತು. ಅದೇ ವರ್ಷ ರಾಜ್ಯದಲ್ಲಿ ಸಾರಾಯಿ ನಿಷೇಧಿಸಲಾಯಿತು. ಆದರೆ ಬೊಕ್ಕಸದ ಆದಾಯ ಕಡಿಮೆಯಾಗಲಿಲ್ಲ.

ಸಾರಾಯಿ ಕುಡಿಯುತ್ತಿದ್ದ ಜನ ಹೆಚ್ಚು ಬೆಲೆ ಕೊಟ್ಟು ವಿಸ್ಕಿ, ರಮ್‌, ಬ್ರ್ಯಾಂಡಿ ಕುಡಿಯಲು ಶುರುಮಾಡಿದರು. ಅಲ್ಲಿಂದೀಚೆಗೆ ಪ್ರತಿವರ್ಷ ಅಬಕಾರಿ ಮೂಲದ ಆದಾಯ ಹೆಚ್ಚಾಗುತ್ತಲೇ ಹೋಯಿತು. ಕಳೆದ 10 ವರ್ಷಗಳಲ್ಲಿ ಅಬಕಾರಿ ಮೂಲದಿಂದ ಕ್ರೋಡೀಕರಣವಾಗುವ ಸಂಪನ್ಮೂಲ ನಾಲ್ಕೂವರೆ ಪಟ್ಟು ಹೆಚ್ಚಳವಾಗಿದೆ.

ರಾಷ್ಟ್ರೀಯ ಹೆದ್ದಾರಿಯಿಂದ 500 ಮೀಟರ್‌ಗಳ ವ್ಯಾಪ್ತಿಯಲ್ಲಿ ಬಾರ್‌ಗಳು ಮತ್ತು ಮದ್ಯದ ಅಂಗಡಿಗಳು ಇರಬಾರದು ಎಂಬ ತನ್ನ ತೀರ್ಪಿನಲ್ಲಿ ಇತ್ತೀಚೆಗೆ ಮಾರ್ಪಾಟು ಮಾಡಿರುವ ಸುಪ್ರೀಂ ಕೋರ್ಟ್‌, 20,000 ಜನಸಂಖ್ಯೆಗಿಂತ ಕಡಿಮೆ ಇರುವ ಪ್ರದೇಶಗಳಲ್ಲಿ ಹೆದ್ದಾರಿ ಹಾದು ಹೋಗಿದ್ದರೆ 220 ಮೀಟರ್‌ ದೂರದ ಆಚೆಗೆ ಮದ್ಯ ಮಾರಾಟ ಮಾಡಬಹುದು ಎಂದು ಹೇಳಿದೆ. ಈ ಚೂರುಪಾರು ಬದಲಾವಣೆಯಿಂದ ದೊಡ್ಡ ಮಟ್ಟದ ಅನುಕೂಲವಾಗುವುದಿಲ್ಲ ಎಂದು ಅಬಕಾರಿ ಇಲಾಖೆ ಅಧಿಕಾರಿಗಳು ಹಾಗೂ ಮದ್ಯ ಮಾರಾಟಗಾರರು ಹೇಳುತ್ತಾರೆ.



ಮದ್ಯ ಮಾರಾಟದ ಅಂಗಡಿ ಅಥವಾ ಬಾರ್ ಅಂಡ್‌ ರೆಸ್ಟೊರೆಂಟ್‌ಗಳು ಇರುವುದೇ ನಗರ, ಪಟ್ಟಣ, ಹೋಬಳಿ ಕೇಂದ್ರ ಹಾಗೂ ದೊಡ್ಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ. ಇಲ್ಲಿನ ಜನಸಂಖ್ಯೆ ಏನಿಲ್ಲವೆಂದರೂ 25ರಿಂದ 30 ಸಾವಿರ ದಾಟುತ್ತದೆ.

ಹೆದ್ದಾರಿ ಬದಿಯಲ್ಲಿರುವ ಹೋಬಳಿ ಕೇಂದ್ರ ಅಥವಾ ಗ್ರಾಮ ಪಂಚಾಯಿತಿ ಕೇಂದ್ರಗಳು ವ್ಯಾಪಾರ ವಹಿವಾಟಿನ ಪ್ರದೇಶವಾಗಿ ಮಾರ್ಪಟ್ಟಿರುತ್ತವೆ.  ಹೀಗಾಗಿ ಇಲ್ಲೆಲ್ಲ  500 ಮೀಟರ್‌ ಪರಿಮಿತಿಯೊಳಗೆ ಇರುವ ಮದ್ಯ ಮಾರಾಟದ ಅಂಗಡಿ, ಹೋಟೆಲ್‌ಗಳನ್ನು ತೆರವು ಮಾಡಲೇಬೇಕಾದ ಅನಿವಾರ್ಯ ಇದೆ.

20 ಸಾವಿರಕ್ಕಿಂತ ಕಡಿಮೆ ಜನಸಂಖ್ಯೆ ಇರುವ ಪ್ರದೇಶಗಳಲ್ಲಿ ಬಾರ್‌ ಅಂಡ್‌ ರೆಸ್ಟೊರೆಂಟ್‌ ಸ್ಥಾಪಿಸಿದರೂ ಲಾಭದಾಯಕವಲ್ಲದೆ ಇರುವುದರಿಂದ ಅಲ್ಲಿ ಯಾರೂ ಸ್ಥಾಪನೆ ಮಾಡುವುದೇ ಇಲ್ಲ. ಇದರಿಂದಾಗಿ 220 ಮೀಟರ್‌ಗೆ ವ್ಯಾಪ್ತಿಯನ್ನು ಇಳಿಸಿದರೂ ಪ್ರಯೋಜನವೇನೂ ಆಗುವುದಿಲ್ಲ ಎನ್ನುತ್ತಾರೆ ಮದ್ಯ ಮಾರಾಟಗಾರರ ಸಂಘದ ಪದಾಧಿಕಾರಿಗಳು.



‘ಒಂದು ಅಂದಾಜಿನಂತೆ ರಾಜ್ಯದ ಮದ್ಯದಂಗಡಿಗಳ ಪೈಕಿ ಅರ್ಧಕ್ಕಿಂತ ಹೆಚ್ಚು  ಹೆದ್ದಾರಿಯಲ್ಲಿಯೇ ಇವೆ. ಇವೆಲ್ಲವನ್ನೂ ತೆರವು ಮಾಡಲೇಬೇಕಾದರೆ ಮದ್ಯದಂಗಡಿ, ರೆಸ್ಟೊರೆಂಟ್ ಮಾಲೀಕರು ಕನಿಷ್ಠ ₹ 2,000 ಕೋಟಿ ವೆಚ್ಚ ಮಾಡಬೇಕಾಗುತ್ತದೆ. ಈ ಹಣವನ್ನು ಯಾರು ಕೊಡುತ್ತಾರೆ’ ಎಂದು ಪ್ರಶ್ನಿಸುತ್ತಾರೆ ಮದ್ಯದಂಗಡಿ ಮಾಲೀಕರ ಪ್ರತಿನಿಧಿಯೊಬ್ಬರು.

‘ಬಹುತೇಕ ಬಾರ್‌ ಅಂಡ್‌ ರೆಸ್ಟೊರೆಂಟ್‌ಗಳ ಸನ್ನದು (ಲೈಸೆನ್ಸ್‌) ಯಾರ ಹೆಸರಿನಲ್ಲಿಯೋ ಇರುತ್ತದೆ. ಯಾರದೋ ಖಾಸಗಿ ಭೂಮಿಯನ್ನು 20–30 ವರ್ಷ ಭೋಗ್ಯದ ಆಧಾರದ ಮೇಲೆ ಪಡೆದು, ಅಲ್ಲಿ ಬಾರ್‌ ನಿರ್ಮಿಸಲಾಗಿರುತ್ತದೆ. ಸನ್ನದು, ಭೂಮಿ ಒಬ್ಬರದು, ಬಾರ್‌ ಅಂಡ್ ರೆಸ್ಟೊರೆಂಟ್ ನಡೆಸುವವರು ಮತ್ತೊಬ್ಬರು.

ಬಾರ್‌ ಸ್ಥಳಾಂತರ ಮಾಡಬೇಕಾದರೆ ಹೊಸ ಭೂಮಿ ಹುಡುಕಿ, ಭೋಗ್ಯಕ್ಕೆ ಪಡೆಯಬೇಕು, ಮತ್ತೆ ಮೂಲಸೌಕರ್ಯ ಕಲ್ಪಿಸಿ ಹೊಸದಾಗಿ ವ್ಯವಹಾರ ಆರಂಭಿಸಬೇಕು. ಇದು ದೊಡ್ಡ ತಲೆನೋವಾಗಿದೆ’ ಎನ್ನುತ್ತಾರೆ ನಾಲ್ಕು ಬಾರ್‌ ಅಂಡ್‌ ರೆಸ್ಟೊರೆಂಟ್‌ಗಳ ಮಾಲೀಕ ರಾಮಲಿಂಗೇಗೌಡ.

ಚಿಟ್ಟು ಹಿಡಿದ ಕೆಲಸ, ದೈನಂದಿನ ಒತ್ತಡಗಳನ್ನು ಕಳೆದು ಬದುಕಿನಲ್ಲಿ ಹೊಸ ಚೈತನ್ಯ ಪಡೆಯಲು ಪ್ರವಾಸ ಹೋಗುವವರ ಸಂಖ್ಯೆ ಹೆಚ್ಚು. ಧಾರ್ಮಿಕ ಕ್ಷೇತ್ರಗಳಿಗೆ ಪ್ರವಾಸ ಹೋಗುವವರು ಬಿಟ್ಟರೆ, ಉಳಿದವರು ಮೋಜು ಮಸ್ತಿಯ ಹಂಬಲದಿಂದಲೇ ಪ್ರವಾಸ ಹೋಗುತ್ತಾರೆ.

ಪ್ರವಾಸದ ಹಾದಿಗುಂಟ ಮದ್ಯ ಸಿಗುವುದಿಲ್ಲವೆಂದರೆ  ಪ್ರವಾಸೋದ್ಯಮದ ಮೇಲೆಯೂ ಸಹಜವಾಗಿಯೇ ಹೊಡೆತ ಬೀಳಲಿದೆ ಎನ್ನುತ್ತವೆ ಪ್ರವಾಸೋದ್ಯಮ ಇಲಾಖೆ ಮೂಲಗಳು. ಅದರಲ್ಲೂ ವಿದೇಶಿ ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸುವ ರಾಜ್ಯ ಕರ್ನಾಟಕ.  ಮದ್ಯ ಮಾರಾಟಕ್ಕೆ ನಿರ್ಬಂಧ ವಿಧಿಸುವುದರಿಂದ ವಿದೇಶಿ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಲಿದೆ  ಎಂದು ಹೇಳುತ್ತಾರೆ ಅಧಿಕಾರಿಗಳು.

‘500 ಮೀಟರ್‌ ವ್ಯಾಪ್ತಿಯಿಂದ ಹೊರಗೆ ಮದ್ಯದಂಗಡಿ ಇರಬಹುದು ಎಂದರೆ 501 ಮೀಟರ್‌ನಲ್ಲಿ ಸ್ಥಾಪಿಸಬಹುದು ಎಂದರ್ಥ. ಕುಡಿಯುವವರು ಇನ್ನೊಂದು ಸ್ವಲ್ಪ ದೂರ ಹೋಗಬೇಕಾಗುತ್ತದೆ ಅಷ್ಟೆ. ಇದರಿಂದ ಅಪಘಾತ ತಡೆಗಟ್ಟಲು ಹೆಚ್ಚಿನ ಅನುಕೂಲವಾಗುವುದಿಲ್ಲ.

ಇತ್ತೀಚಿನ ದಿನಗಳಲ್ಲಿ ಸಮಾಜದ ಎಲ್ಲಾ ಚಟುವಟಿಕೆಗಳನ್ನು ನ್ಯಾಯಾಂಗ ನಿಯಂತ್ರಿಸುತ್ತಿರುವುದು ಸರಿಯಲ್ಲ. ಮದ್ಯ ಮಾರಾಟಕ್ಕೆ ಕಾನೂನುಬದ್ಧ ಅವಕಾಶ ಇರುವಾಗ ಈ ರೀತಿ ನಿರ್ಬಂಧ ವಿಧಿಸುವುದು ಎಷ್ಟು ಸಮರ್ಥನೀಯ’ ಎಂದು ಪ್ರಶ್ನಿಸುತ್ತಾರೆ ರಾಜ್ಯ ಪ್ರವಾಸೋದ್ಯಮ ಸಚಿವ ಪ್ರಿಯಾಂಕ್‌ ಖರ್ಗೆ.

ಡಿನೋಟಿಫೈ ಸುತ್ತಮುತ್ತ
ಹೆದ್ದಾರಿಯನ್ನು ಡಿನೋಟಿಫೈ ಮಾಡಿ ಜಿಲ್ಲಾ ಮುಖ್ಯ ರಸ್ತೆ ಅಥವಾ ನಗರ–ಪಟ್ಟಣ ಪ್ರದೇಶ ವ್ಯಾಪ್ತಿಯಲ್ಲಿನ ಹೆದ್ದಾರಿಗಳನ್ನು ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಯ ರಸ್ತೆ ಎಂದು ಘೋಷಿಸಬೇಕು ಎಂಬ ಬೇಡಿಕೆ ಮಂಡನೆಯಾಗುತ್ತಿದೆ.

ಒಂದು ರಾಜ್ಯದಲ್ಲಿ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿ ಎಷ್ಟು ಕಿ.ಮೀ ಉದ್ದ ಹಾದು ಹೋಗುತ್ತದೆ ಎಂಬುದನ್ನು ಮೂಲಸೌಕರ್ಯ ಅಭಿವೃದ್ಧಿಯ ಸೂಚ್ಯಂಕ ಎಂದು ಪರಿಗಣಿಸಲಾಗುತ್ತಿದೆ. ಕೈಗಾರಿಕೆ, ಪ್ರವಾಸೋದ್ಯಮ, ಆರೋಗ್ಯ, ಆಹಾರ ಸಂಸ್ಕರಣೆ ಕ್ಷೇತ್ರದಲ್ಲಿ ಹೂಡಿಕೆ ಮಾಡುವ ಬಂಡವಾಳಿಗರು ಸರಕು ಸಾಗಣೆಗೆ ಹೆದ್ದಾರಿಯ ಸಂಪರ್ಕ ಇದೆಯೇ ಎಂಬುದನ್ನು ಪ್ರಮುಖವಾಗಿ ಪರಿಗಣಿಸುತ್ತಾರೆ.

ಜಿಲ್ಲಾ  ಮುಖ್ಯ ರಸ್ತೆಗಳನ್ನು ಹೆದ್ದಾರಿಯಾಗಿ ಮೇಲ್ದರ್ಜೆಗೆ ಏರಿಸಲು ಆಯಾ ರಾಜ್ಯ ಸರ್ಕಾರಗಳು ಪೈಪೋಟಿಗೆ ಬೀಳುತ್ತವೆ. ಅಂತಹ ಹೊತ್ತಿನಲ್ಲಿ ಡಿನೋಟಿಫೈ ಮಾಡುವುದು ಅಭಿವೃದ್ಧಿಯ ದೃಷ್ಟಿಯಿಂದ ಸಮರ್ಪಕ ನಿರ್ಧಾರವಲ್ಲ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು.

ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ (ಎಸ್‌ಎಚ್‌ಡಿಪಿ), ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ (ಕೆ–ಶಿಪ್‌) ಎರಡು ಪ್ರಮುಖ ಯೋಜನೆಗಳು ರಾಜ್ಯದಲ್ಲಿ ಚಾಲ್ತಿಯಲ್ಲಿವೆ. ಈಗಾಗಲೇ 1, 2, 3ನೇ ಹಂತದಲ್ಲಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಕೆ–ಶಿಪ್‌ಗೆ ವಿಶ್ವಬ್ಯಾಂಕ್‌ ಹಾಗೂ ಏಷ್ಯಾ ಅಭಿವೃದ್ಧಿ ಬ್ಯಾಂಕ್‌ ನೆರವು ನೀಡಿವೆ.

ಖಾಸಗಿ ಮತ್ತು ಸಾರ್ವಜನಿಕ ವಲಯದ ಸಹಭಾಗಿತ್ವದಲ್ಲಿ  ಹೆದ್ದಾರಿಗಳನ್ನು ಮೇಲ್ದರ್ಜೆಗೆ ಏರಿಸುವ ಯೋಜನೆಗಳನ್ನು ಎಸ್‌ಎಚ್‌ಡಿಪಿ ಕೈಗೆತ್ತಿಕೊಂಡಿದೆ. ಇದಕ್ಕೆ ಖಾಸಗಿಯವರು ಬಂಡವಾಳ ಹೂಡಿಕೆ ಮಾಡಿದ್ದಲ್ಲದೆ, ಟೋಲ್‌ ಕೂಡ ಸಂಗ್ರಹಿಸುತ್ತಿದ್ದಾರೆ.

ರಾಷ್ಟ್ರೀಯ ಹೆದ್ದಾರಿಯ ನಿರ್ವಹಣೆಗೆ ಕೇಂದ್ರ ಸರ್ಕಾರ ಅನುದಾನ ನೀಡುತ್ತದೆ ಹಾಗೂ ಕೆಲವು ಹೆದ್ದಾರಿಗಳನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಖಾಸಗಿ ನಿರ್ವಹಣೆಗೆ ವಹಿಸಿದೆ. ಪ್ರಮುಖ ನಗರ ಪ್ರದೇಶಗಳಲ್ಲಿ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿ ಹಾದುಹೋಗುತ್ತದೆ.

ಈ ಭಾಗವನ್ನು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಗೆ ಒಳಪಡಿಸಿದರೆ ಕೇಂದ್ರದಿಂದ ಹಣ ಸಿಗುವುದಿಲ್ಲ ಹಾಗೂ ಖಾಸಗಿ ಸಂಸ್ಥೆಯವರು ಒಪ್ಪುವುದಿಲ್ಲ. ಡಿನೋಟಿಫೈ ಮಾಡಲು ಇದು ಪ್ರಮುಖ ತೊಡಕಾಗಲಿದೆ ಎನ್ನುತ್ತಾರೆ ಅಧಿಕಾರಿಯೊಬ್ಬರು.

*
ಮದ್ಯದಂಗಡಿ, ಬಾರ್‌ ತೆರವು ಮಾಡುವುದರಿಂದ ಆದಾಯ ಸಂಗ್ರಹದ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎಂದು ಊಹೆಯ ಆಧಾರದಲ್ಲಿ ಹೇಳಲಾಗದು. ಎಷ್ಟು ಅಂಗಡಿ ತೆರವು ಮಾಡಬೇಕಾಗುತ್ತದೆ ಎಂಬ ಸಮೀಕ್ಷೆ ನಡೆಸಲಾಗುತ್ತಿದೆ.
-ಮಂಜುನಾಥ್‌ ನಾಯ್ಕ್,
ಆಯುಕ್ತ, ಅಬಕಾರಿ ಇಲಾಖೆ

*
ಸುಪ್ರೀಂ ಕೋರ್ಟ್‌ ತೀರ್ಪಿನಿಂದ ಪ್ರವಾಸೋದ್ಯಮಕ್ಕೆ ಹೊಡೆತ ಬೀಳಲಿದೆ. ಇಂತಹ ನಿಷೇಧ ವಿಧಿಸುವ ಬದಲು, ಕುಡಿದು ವಾಹನ ಚಲಾಯಿಸುವವರನ್ನು ನಿರ್ಬಂಧಿಸಲು ಕಠಿಣ ಕಾಯ್ದೆ ತರುವುದು ಸೂಕ್ತ.
ಪ್ರಿಯಾಂಕ್‌ ಖರ್ಗೆ
ಪ್ರವಾಸೋದ್ಯಮ ಸಚಿವ

*
ಹೆದ್ದಾರಿಗಳನ್ನು ಡಿನೋಟಿಫೈ ಮಾಡುವ ಕುರಿತು ಯಾವುದೇ ಚಿಂತನೆ ನಡೆದಿಲ್ಲ. ಸರ್ಕಾರದ ಮುಂದೆ ಅಂತಹ ಪ್ರಸ್ತಾಪ ಇಲ್ಲ.
-ಎಂ.ಲಕ್ಷ್ಮೀನಾರಾಯಣ,
ಪ್ರಧಾನ ಕಾರ್ಯದರ್ಶಿ ಲೋಕೋಪಯೋಗಿ ಇಲಾಖೆ

****

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT