ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೆವಿಲ್ಸ್ ಮಣಿಸುವ ಛಲದಲ್ಲಿ ರಾಯಲ್ಸ್

ನೆಟ್ಸ್‌ನಲ್ಲಿ ಬ್ಯಾಟ್ ಬೀಸಿದ ವಿರಾಟ್; ಎ.ಬಿ.ಡಿ ಆಡುವುದು ಅನುಮಾನ
Last Updated 7 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ದಿನವಿಡೀ ಉರಿಬಿಸಿಲಿನಲ್ಲಿ ಬೇಯುತ್ತಿರುವ ಬೆಂಗಳೂರಿನಲ್ಲಿ ಕಳೆದ ಎರಡು ದಿನಗಳಿಂದ ಸಂಜೆ ಮಳೆ ಮೋಡಗಳು ನಾಲ್ಕು ಹನಿ ಉದುರಿಸಿ ಮರೆಯಾಗುತ್ತಿವೆ.

ಅದರಿಂದ ಹೆಚ್ಚುತ್ತಿರುವ ಧಗೆಗೆ ಕಿಚ್ಚು ಹಚ್ಚಲು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಗರಕ್ಕೆ ಮರಳಿ ಬಂದಿದೆ. ಬೇಸಿಗೆಯ ಬೇಗೆಯನ್ನು ಮರೆತ ಕ್ರೀಡಾಪ್ರೇಮಿಗಳು ಕ್ರಿಕೆಟ್‌ ಧ್ಯಾನದಲ್ಲಿ ತೊಡಗಿದ್ದಾರೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶುಕ್ರವಾರ ಸಂಜೆ ವಿರಾಟ್ ಕೊಹ್ಲಿ ಬ್ಯಾಟ್ ಹಿಡಿದು ಬಂದಾಗ ಅಭ್ಯಾಸ ವೀಕ್ಷಣೆಗೆ ಬಂದಿದ್ದ ಅಭಿಮಾನಿಗಳ ಸಂತಸಕ್ಕೆ ಪಾರವೇ ಇರಲಿಲ್ಲ. ಒಂದು ನೆಟ್ಸ್‌ನಲ್ಲಿ ವಿರಾಟ್, ಇನ್ನೊಂದರಲ್ಲಿ ಕ್ರಿಸ್ ಗೇಲ್ ಚೆಂಡನ್ನು ಬೌಂಡರಿಗೆರೆ ದಾಟಿಸುತ್ತಿದ್ದರೆ ಜನರ ಉತ್ಸಾಹವೂ ಇಮ್ಮಡಿಗೊಳ್ಳುತ್ತಿತ್ತು. ಶನಿವಾರ ರಾತ್ರಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಡೆಲ್ಲಿ ಡೇರ್‌ಡೆವಿಲ್ಸ್‌ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕಣಕ್ಕಿಳಿಯುವ ಭರವಸೆ ಚಿಗುರಿತ್ತು.

ಗಾಯ ಮಾಯವಾಗುವುದೇ?: ಗಾಯದಿಂದ ಬಳಲುತ್ತಿರುವ ಪ್ರಮುಖ ಆಟಗಾರರ ಕೊರತೆಯನ್ನು ಎರಡೂ ತಂಡಗಳು ಅನುಭವಿಸುತ್ತಿವೆ.
ವೇಗದ ಬೌಲರ್‌ ಮಿಷೆಲ್ ಸ್ಟಾರ್ಕ್, ನಾಯಕ ವಿರಾಟ್ ಕೊಹ್ಲಿ , ಎ.ಬಿ. ಡಿವಿಲಿಯರ್ಸ್, ಕೆ.ಎಲ್. ರಾಹುಲ್ ಮತ್ತು ಸರ್ಫರಾಜ್ ಖಾನ್ ಅವರು ಮೊದಲ ಪಂದ್ಯದಲ್ಲಿ ಕಣಕ್ಕಿಳಿದಿರಲಿಲ್ಲ. ಅದರಿಂದಾಗಿ ಆರ್‌ಸಿಬಿಯು ಟೂರ್ನಿಯ ಮೊದಲ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ತಂಡದ ಎದುರು 35 ರನ್‌ಗಳಿಂದ ಪರಾಭವಗೊಂಡಿತ್ತು.  

ಬೆಂಗಳೂರು ಪಂದ್ಯದಲ್ಲಿಯೂ ಎ.ಬಿ. ಡಿವಿಲಿಯರ್ಸ್ ಆಡುವುದು ಖಚಿತವಿಲ್ಲ. ಅವರು ಅಭ್ಯಾಸಕ್ಕೆ ಬಂದಿರಲಿಲ್ಲ. ಆಸ್ಟ್ರೇಲಿಯಾ ಎದುರಿನ ಟೆಸ್ಟ್ ಸರಣಿಯಲ್ಲಿ ಭುಜದ ಗಾಯದಿಂದ ಬಳಲಿದ್ದ ವಿರಾಟ್ ಆಡುವುದು ಪಂದ್ಯದ ಸ್ವಲ್ಪ ಹೊತ್ತು ಮೊದಲು ನಿರ್ಧಾರವಾಗಲಿದೆ. ಒಂದೊಮ್ಮೆ ಅವರು ಆಡದಿದ್ದರೆ ಶೇನ್ ವಾಟ್ಟನ್ ಅವರೇ ನಾಯಕತ್ವ ವಹಿಸುವ ಸಾಧ್ಯತೆ ಇದೆ.

ಸನ್‌ರೈಸರ್ಸ್‌ ಎದುರಿನ ಪಂದ್ಯದಲ್ಲಿ ಆರಂಭಿಕ ಮತ್ತು ಮಧ್ಯಮಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಉತ್ತಮವಾಗಿ ಆಡಿದ್ದರು. ಕ್ರಿಸ್‌  ಗೇಲ್, ಮನದೀಪ್ ಸಿಂಗ್, ಟ್ರಾವಿಸ್ ಹೆಡ್, ಕೇದಾರ್ ಜಾಧವ್, ವಾಟ್ಸನ್ ಅವರು ಉತ್ತಮವಾಗಿ ಆಡಿದ್ದರು. ಆದರೆ ಸ್ಥಳೀಯ ಆಲ್‌ರೌಂಡರ್ ಸ್ಟುವರ್ಟ್ ಬಿನ್ನಿ ಸೇರಿದಂತೆ ಕೆಳಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಅಂತಿಮ ಹಂತದ ಓವರ್‌ಗಳಲ್ಲಿ ವೈಫಲ್ಯ ಅನುಭವಿಸಿದ್ದು, ತಂಡದ ಸೋಲಿಗೆ ಒಂದು ಕಾರಣವಾಯಿತು.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ತಂಡದ ಬೌಲರ್‌ಗಳು ಹೆಚ್ಚು ಪರಿಣಮಕಾರಿ ದಾಳಿ ನಡೆಸಲಿಲ್ಲ. ಫೀಲ್ಡಿಂಗ್ ಕೂಡ  ಉತ್ತಮವಾಗಿರಲಿಲ್ಲ.
ಸ್ಟಾರ್ಕ್ ಇಲ್ಲದ ಬೌಲಿಂಗ್ ದಾಳಿಯು ತುಸು ಮಂಕಾಗಿತ್ತು. ಇದೇ ಮೊದಲ ಬಾರಿ ಐಪಿಎಲ್‌ನಲ್ಲಿ ಆಡುತ್ತಿರುವ ಟೈಮಲ್ ಮಿಲ್ಸ್‌ ದಾಳಿ ಅಷ್ಟೊಂದು ಪರಿಣಾಮಕಾರಿಯಾಗಿರಲಿಲ್ಲ.



ಆದರೆ ಪದಾರ್ಪಣೆ ಪಂದ್ಯದಲ್ಲಿ ಉತ್ತಮ ದಾಳಿ ಮಾಡಿದ ಮಧ್ಯಮವೇಗಿ ಅನಿಕೇತ್ ಚೌಧರಿ, ಸ್ಥಳೀಯ ಹುಡುಗ ಎಸ್. ಅರವಿಂದ್ ಅವರು ಮತ್ತು ಏಕೈಕ ಸ್ಪಿನ್ನರ್ ಯಜುವೇಂದ್ರ ಚಹಲ್ ಅವರು ನಿರ್ಣಾಯಕ ಪಾತ್ರ ವಹಿಸುವುದು ಅನಿವಾರ್ಯ.

ಡೆಲ್ಲಿ ಮುಂದೆ ಸಂಕಷ್ಟದ ಸಾಲು: ಈ ಆವೃತ್ತಿಯಲ್ಲಿ ಡೆಲ್ಲಿ ತಂಡಕ್ಕೆ ಮೊದಲ ಪಂದ್ಯ ಇದು. ಜಹೀರ್ ಖಾನ್ ನಾಯಕತ್ವದ ಬಳಗವೂ  ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ.

ಶ್ರೇಯಸ್ ಅಯ್ಯರ್ ಮತ್ತು ಏಂಜೆಲೊ ಮ್ಯಾಥ್ಯೂಸ್ ಅವರು  ದಡಾರದಿಂದ ಬಳಲುತ್ತಿದ್ದು (ಚಿಕನ್‌ಪಾಕ್ಸ್‌)  ವಿಶ್ರಾಂತಿ ಪಡೆದಿದ್ದಾರೆ. ವೈಯಕ್ತಿಕ ಕಾರಣಗಳಿಂದ ದಕ್ಷಿಣ ಆಫ್ರಿಕಾದ  ಕ್ವಿಂಟನ್ ಡಿ ಕಾಕ್ ಮತ್ತು ಕೈಬೆರಳು ಮುರಿತಕ್ಕೆ ಒಳಗಾಗಿರುವ  ಜೆ.ಪಿ. ಡುಮಿನಿ  ಅವರು ಕೂಡ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ.

ಇದರಿಂದಾಗಿ ಯುವ ಆಟಗಾರರ ಮೇಲೆಯೇ ತಂಡವು ಹೆಚ್ಚು ಅವಲಂಬಿತವಾಗಿದೆ. ಕರ್ನಾಟಕದ ಕರುಣ್ ನಾಯರ್, ಇಂಗ್ಲೆಂಡ್‌ನ ಸ್ಯಾಮ್ ಬಿಲ್ಲಿಂಗ್ಸ್‌, ವಿಂಡೀಸ್ ಆಟಗಾರ ಕಾರ್ಲೋಸ್ ಬ್ರಾಥ್‌ವೈಟ್ ಅವರು ಬ್ಯಾಟಿಂಗ್ ವಿಭಾಗದ ಪ್ರಮುಖ ಶಕ್ತಿಯಾಗಿದ್ದಾರೆ.

ಬೌಲಿಂಗ್‌ನಲ್ಲಿ ದಕ್ಷಿಣ ಆಫ್ರಿಕಾದ ವೇಗಿ ಕಗಿಸೊ ರಬಾಡ, ಆಸ್ಟ್ರೇಲಿಯಾದ ಪ್ಯಾಟ್‌ ಕಮಿನ್ಸ್‌, ಮೊಹಮ್ಮದ್ ಶಮಿ, ನಾಯಕ ಜಹೀರ್ ಖಾನ್ ಮತ್ತು ಸ್ಪಿನ್ನರ್ ಮುರುಗನ್ ಅಶ್ವಿನ್ ಅವರ ಹೋರಾಟವೇ ಪ್ರಮುಖ ಪಾತ್ರ ವಹಿಸಲಿದೆ.

ಕಳೆದ ಒಂಬತ್ತು ಐಪಿಎಲ್‌ಗಳಲ್ಲಿ ಅನುಭವಿ ಆಟಗಾರರಿದ್ದರೂ ಡೆಲ್ಲಿ ತಂಡವು ಕಳಪೆ ಆಟವಾಡಿತ್ತು. ಹೋದ ವರ್ಷ 14 ಪಂದ್ಯಗಳಲ್ಲಿ ಏಳರಲ್ಲಿ ಗೆದ್ದು ಉಳಿದಿದ್ದರಲ್ಲಿ ಸೋತಿತ್ತು. ಅದರಿಂದಾಗಿ ಎಲಿಮಿನೇಟರ್‌ಗೂ ಪ್ರವೇಶಿಸಿರಲಿಲ್ಲ. ಈ  ಬಾರಿ ಸವಾಲುಗಳ ನಡುವೆಯೂ ಶುಭಾರಂಭ ಪಡೆಯುವ ವಿಶ್ವಾಸದಲ್ಲಿದೆ. 

ಗಾಯಗೊಂಡ ಹುಲಿಯಂತಾಗಿರುವ  ಆರ್‌ಸಿಬಿಯು ತವರಿನ ಅಂಗಳದಲ್ಲಿ  ಟೂರ್ನಿಯ ಮೊದಲ ಜಯದ ಸವಿ ಅನುಭವಿಸುವ ಛಲದಲ್ಲಿದೆ.

ರಾಹುಲ್ ಬದಲಿಗೆ ವಿಷ್ಣುಗೆ ಸ್ಥಾನ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಕೆ.ಎಲ್. ರಾಹುಲ್ ಬದಲಿಗೆ ಕೇರಳದ ವಿಕೆಟ್‌ಕೀಪರ್–ಬ್ಯಾಟ್ಸ್‌ಮನ್ ವಿಷ್ಣು ವಿನೋದ್ ಸ್ಥಾನ ಪಡೆದಿದ್ದಾರೆ.

ಭುಜದ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿರುವ ರಾಹುಲ್ ಐಪಿಎಲ್‌ನ ಕೆಲವು ಪಂದ್ಯಗಳಲ್ಲಿ ಆಡುತ್ತಿಲ್ಲ. ಅವರ ಬದಲಿಗೆ ಸ್ಥಾನ ನೀಡಲು ಈಚೆಗೆ ನಾಲ್ವರು ಆಟಗಾರರ ಟ್ರಯಲ್ಸ್‌ ನಡೆಸಲಾಗಿತ್ತು. ತಮಿಳುನಾಡಿನ ಟಿ. ನಟರಾಜನ್, ಕರ್ನಾಟಕದ ಪವನ್ ದೇಶಪಾಂಡೆ ಮತ್ತು  ವಿಷ್ಣು ಟ್ರಯಲ್ ನೀಡಿದ್ದರು.

ಡೆಲ್ಲಿ ಡೇರ್‌ಡೆವಿಲ್ಸ್‌ ತಂಡದಲ್ಲಿ ಜೆ.ಪಿ. ಡುಮಿನಿ ಬದಲಿಗೆ ಆಸ್ಟ್ರೇಲಿಯಾದ ಬೆನ್ ಹಿಲ್ಫೆನೋಸ್, ಪುಣೆ ಸೂಪರ್‌ ಜೈಂಟ್ಸ್‌ ತಂಡವು ರವಿಚಂದ್ರನ್ ಅಶ್ವಿನ್ ಬದಲಿಗೆ  ವಾಷಿಂಗ್ಟನ್ ಸುಂದರ್ ಮತ್ತು ಕಿಂಗ್ಸ್‌ ಇಲೆ ವನ್ ಪಂಜಾಬ್‌ನಲ್ಲಿ ಮುರಳಿ ವಿಜಯ್ ಬದಲಿಗೆ ಇಶಾಂತ್ ಶರ್ಮಾ ಸ್ಥಾನ ಪಡೆದುಕೊಂಡಿದ್ದಾರೆ.

*
ಎಬಿಡಿ, ಕೊಹ್ಲಿ ಆಡುವ ಕುರಿತು ನನಗೆ ಗೊತ್ತಿಲ್ಲ. ಪಂದ್ಯದ ಮುನ್ನ ತಂಡದ ಆಡಳಿತವು ಈ ಕುರಿತು ನಿರ್ಧಾರ ಕೈಗೊಳ್ಳಲಿದೆ.
-ಟೈಮಲ್ ಮಿಲ್ಸ್‌,
ಆರ್‌ಸಿಬಿ ಆಟಗಾರ

*
ಜಹೀರ್ ಖಾನ್ ತಮ್ಮನ್ನು ಆರೋಗ್ಯ ಮತ್ತು ದೈಹಿಕ ಕ್ಷಮತೆಯನ್ನು ಕಾಪಾಡಿಕೊಂಡಿದ್ದಾರೆ. ಅವರು ಉತ್ತಮ ಬೌಲಿಂಗ್ ಮಾಡುವ ಸಮರ್ಥರಾಗಿದ್ದಾರೆ.
-ಪ್ಯಾಡಿ ಆಪ್ಟನ್,
ಡಿಡಿ ಮುಖ್ಯ ಕೋಚ್

ತಂಡಗಳು ಇಂತಿವೆ
ರಾಯಲ್ ಚಾಲೆಂಜರ್ಸ್ ಬೆಂಗಳೂರು: ವಿರಾಟ್ ಕೊಹ್ಲಿ (ನಾಯಕ), ಶ್ರೀನಾಥ್ ಅರವಿಂದ್, ಆವೇಶ್ ಖಾನ್, ಸ್ಯಾಮುಯೆಲ್ ಬದ್ರಿ, ಸ್ಟುವರ್ಟ್ ಬಿನ್ನಿ, ಯಜುವೇಂದ್ರ ಚಹಲ್ ಅನಿಕೇತ್ ಚೌಧರಿ, ಎ.ಬಿ. ಡಿವಿಲಿಯರ್ಸ್, ಪ್ರವೀಣ್ ದುಬೆ, ಕ್ರಿಸ್ ಗೇಲ್, ಟ್ರಾವಿಸ್ ಹೆಡ್, ಇಕ್ಬಾಲ್ ಅಬ್ದುಲ್ಲಾ, ಕೇದಾರ್ ಜಾಧವ್ ಮನದೀಪ್ ಸಿಂಗ್, ಸಚಿನ್ ಬೇಬಿ, ತಬ್ರೇಜ್ ಶಮ್ಸಿ, ಬಿಲ್ಲಿ ಸ್ಟಾನ್‌ಲೇಕ್, ಶೇನ್ ವಾಟ್ಸನ್, ಸರ್ಫರಾಜ್ ಖಾನ್, ಟೈಮಲ್ ಮಿಲ್ಸ್, ಆ್ಯಡಮ್ ಮಿಲ್ನೆ, ಪವನ್ ನೇಗಿ, ಹರ್ಷಲ್ ಪಟೇಲ್

ಡೆಲ್ಲಿ ಡೇರ್‌ಡೆವಿಲ್ಸ್: ಜಹೀರ್ ಖಾನ್ (ನಾಯಕ), ಅಂಕಿತ್ ಭಾವ್ನೆ, ಖಲೀಲ್ ಅಹಮದ್, ರಿಷಬ್ ಪಂತ್, ಕೋರಿ ಆ್ಯಂಡರ್ಸನ್, ಮುರುಗನ್ ಅಶ್ವಿನ್, ಸ್ಯಾಮ್ ಬಿಲ್ಲಿಂಗ್ಸ್‌, ಕಾರ್ಲೋಸ್ ಬ್ರಾಥ್‌ವೈಟ್, ಮೊಹಮ್ಮದ್ ಶಮಿ, ಅಮಿತ್ ಮಿಶ್ರಾ, ಪ್ಯಾಟ್ ಕಮಿನ್ಸ್,  ಸಿ.ವಿ. ಮಿಲಿಂದ್,  ಕ್ರಿಸ್ ಮೊರಿಸ್, ಶಹಬಾಜ್ ನದೀಂ, ಕರುಣ್ ನಾಯರ್, ಪ್ರತ್ಯುಷ್ ಸಿಂಗ್, ಕಗಿಸೊ ರಬಾಡ, ನವದೀಪ್ ಸೈನಿ, ಶಶಾಂಕ್ ಸಿಂಗ್, ಆದಿತ್ಯ ತಾರೆ, ಜಯಂತ್ ಯಾದವ್.
ಪಂದ್ಯದ ಸಮಯ: ರಾತ್ರಿ 8
ನೇರ ಪ್ರಸಾರ; ಸೋನಿ ನೆಟ್‌ವರ್ಕ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT