ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರದ ಸುತ್ತೋಲೆ:ನಗರಸಭೆ ಆದಾಯಕ್ಕೆ ಕತ್ತರಿ

Last Updated 8 ಏಪ್ರಿಲ್ 2017, 6:23 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ರಾಜ್ಯ ಸರ್ಕಾರ ಹೊರಡಿಸಿರುವ ಸುತ್ತೋಲೆಯಿಂದ ನಗರಸಭೆಗೆ ಬರಬೇಕಾಗಿರುವ ಲಕ್ಷಾಂತರ ರೂಪಾಯಿ ಆದಾಯಕ್ಕೆ ಕತ್ತರಿ ಬಿದ್ದಿದೆ. ಇದು ಅಕ್ರಮ ವಾಣಿಜ್ಯ ಕಟ್ಟಡಗಳ ನಿರ್ಮಾಣಕ್ಕೆ ದಾರಿ ಮಾಡಿಕೊಟ್ಟಿದೆ ಎಂಬ ಆಕ್ಷೇಪ ಕೇಳಿಸಿದೆ.

8 ತಿಂಗಳಿಂದ ನಗರಸಭೆ ವತಿಯಿಂದ ನಗರದಲ್ಲಿ ಯಾವುದೇ  ವಾಣಿಜ್ಯ ಕಟ್ಟಡ ನಿರ್ಮಾಣಕ್ಕೆ ಹಾಗೂ ಮೂರು ಅಂತಸ್ತಿನ ಮನೆಗಳ ನಿರ್ಮಾಣಕ್ಕೆ ಪರವಾನಗಿ ನೀಡುತ್ತಿಲ್ಲ. ಇದರಿಂದ ನಗರಸಭೆಗೆ ಕಟ್ಟಡ ಪರವಾನಗಿಯಿಂದ ಬರಬೇಕಾಗಿದ್ದ ಆದಾಯ ನಿಂತಿದೆ. ಅಕ್ರಮವಾಗಿ ಕಟ್ಟಡಗಳು ನಿರ್ಮಾಣವಾಗಲು ದಾರಿ ಮಾಡಿಕೊಟ್ಟಂತಾಗಿದೆ ಎಂದು ನಗರಸಭೆ ಸದಸ್ಯರಾದ ಆರ್‌.ಕೆಂಪರಾಜ್‌, ವಿ.ಎಸ್‌.ರವಿಕುಮಾರ್‌ ತಿಳಿಸಿದ್ದಾರೆ.

ಮಾರ್ಚ್‌ 3 ರಂದು ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ. ಅದರಂತೆ ಕಟ್ಟಡ ವಿನ್ಯಾಸಕ್ಕೆ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯ ಅನುಮೋದನೆ ಪಡೆಯುವುದು ಕಡ್ಡಾಯವಾಗಿದೆ. ಇಂಥ  ಅನುಮೋದನೆ ಪಡೆಯುವ ಮೊದಲೇ ನಿವೇಶನಗಳಿಗೆ ಖಾತೆಗಳನ್ನು ನೀಡಬೇಕಾಗಿದೆ.

ನಗರ ಪ್ರದೇಶಗಳಲ್ಲಿ ಭೂ ಪರಿವರ್ತಿಸಿದ, ಭೂ ಪರಿವರ್ತಿಸದ ಜಮೀನುಗಳಿಗೆ ವಿನ್ಯಾಸ ಅನುಮೋದನೆ ಪಡೆಯದೇ ಅನಧಿಕೃತ, ಬಡಾವಣೆ, ರೆವೆನ್ಯೂ ಬಡಾವಣೆಗಳನ್ನು ನಿರ್ಮಿಸಿ ನಿವೇಶನ ನೋಂದಣಿ ಮಾಡಿಕೊಂಡು ಕಟ್ಟಡಗಳನ್ನು ಅಕ್ರಮವಾಗಿ ನಿರ್ಮಿಸುತ್ತಿದ್ದಾರೆ. ಇದರಿಂದ ಪ್ರತಿಕೂಲ ಪರಿಣಾಮಗಳು ಉಂಟಾಗುತ್ತಿವೆ. ನಗರ ಪ್ರದೇಶಗಳಲ್ಲಿ ಉದ್ಯಾನವನ, ಬಯಲು ಜಾಗೆಗಳ ಕೊರತೆ, ನಾಗರಿಕ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ವಿಫಲವಾಗಿದೆ. ವ್ಯವಸ್ಥಿತವಾದ ರಸ್ತೆ ಪರಿಕಲ್ಪನೆ, ಮೂಲಸೌಕರ್ಯದ ಕೊರತೆ ಹಾಗೂ ಯೋಜಿತ ಬೆಳವಣಿಗೆಗಳಲ್ಲಿ ತೊಡಕುಗಳಿವೆ. ಇಂತಹ ಬೆಳವಣಿಗೆಗಳಿಗೆ ಅವಕಾಶ ಕಲ್ಪಿಸದೆ ಅಭಿವೃದ್ಧಿ ಬೆಳವಣಿಗೆಗಳಲ್ಲಿ ಪಾರದರ್ಶಕತೆ, ಸಾರ್ವಜನಿಕ ಹಿತದೃಷ್ಟಿ ಹಾಗೂ ನಾಗರಿಕ ಸ್ನೇಹಿ ಸುಧಾರಣೆಗಳನ್ನು ತರಲು ಸರ್ಕಾರದ ಹಂತದಲ್ಲಿ ಕಾಯ್ದೆಗಳಿಗೆ ತಿದ್ದುಪಡಿ, ಆಡಳಿತ ವ್ಯವಸ್ಥೆಯಲ್ಲಿ ಸುಧಾರಣೆಗಳನ್ನು ಅಳವಡಿಸಿಕೊಳ್ಳಲಾಗುತ್ತಿದೆ. ಇದಕ್ಕೆ ಪೂರಕವಾಗುವಂತೆ ವಿನ್ಯಾಸಗಳಿಗೆ ನಗರಾಭಿವೃದ್ಧಿ ಪ್ರಾಧಿಕಾರಗಳಿಂದ ಅನುಮೋದನೆ ಪಡೆಯದೇ ನಿವೇಶನಗಳನ್ನು ರಚಿಸಿ ಪರಭಾರೆ ಮಾಡುವ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ತಡೆಯಲಾಗುತ್ತಿದೆ. ನಗರ ಸ್ಥಳೀಯ ಸಂಸ್ಥೆಗಳು ಇನ್ನು ಮುಂದೆ ಸಕ್ಷಮ ಪ್ರಾಧಿಕಾರಗಳಿಂದ ವಿನ್ಯಾಸ ಅನುಮೋದನೆ ಪಡೆಯದೇ ಇರುವ ನಿವೇಶನಗಳಿಗೆ ಖಾತೆಯನ್ನು ನೀಡಬಾರದು, ನಿಯಮಬಾಹಿರವಾಗಿ ಖಾತೆಗಳನ್ನು ವಿತರಿಸಿದಲ್ಲಿ ಸ್ಥಳೀಯ ಆಯುಕ್ತರು, ಪೌರಾಯುಕ್ತರನ್ನು ನೇರ ಹೊಣೆಗಾರರನ್ನಾಗಿ ಮಾಡಿ ಶಿಸ್ತು ಕ್ರಮ ಕೈಗೊಳ್ಳುವ ಸೂಚನೆ ನೀಡಲಾಗಿದೆ.

ಇದರಿಂದಾಗಿ ಬೆಂಗಳೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನಾ ಪ್ರಾಧಿಕಾರದಿಂದ ಅನುಮೋದನೆಯಾಗದೇ ನಿರ್ಮಾಣವಾದ ಬಡಾವಣೆಗಳಲ್ಲಿನ ನಿವೇಶನಗಳ ಖಾತೆಗಳನ್ನು ವಜಾ ಮಾಡಲಾಗಿದೆ. ನಗರಸಭೆ ವತಿಯಿಂದ ಇ–ಖಾತೆ ಸೇರಿದಂತೆ ಖಾತಾ ನಕಲನ್ನು ನೀಡುವುದಿಲ್ಲ. ಇದರಿಂದಾಗಿ ಅಕ್ರಮವಾಗಿ ನಿರ್ಮಾಣವಾಗಿರುವ ಬಡಾವಣೆಗಳಲ್ಲಿನ ನಿವೇಶನಗಳಿಗೆ ನಗರಸಭೆ ವತಿಯಿಂದ ಯಾವುದೇ ಅನುಕೂಲ ದೊರೆಯದಂತಾಗಿದೆ. ಅಲ್ಲದೆ ಸಾರ್ವಜನಿಕರು ಸಂಕಷ್ಟಕ್ಕೆ ಸಿಲುಕುವಂತಾಗಿದೆ ಎಂದು ನಿವೇಶನ ಖರೀದಿಸಿದವರು ದೂರಿದ್ದಾರೆ. 

ಪ್ರಾಧಿಕಾರ ರಚಿಸಿ: ಈ ಎಲ್ಲ ಸಮಸ್ಯೆಗಳನ್ನು ಪರಿಹರಿಸಲು ದೊಡ್ಡಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರ ರಚನೆ ಮಾಡಬೇಕು ಎಂದು ವಿ.ಎಸ್‌.ರವಿಕುಮಾರ್‌, ಆರ್‌.ಕೆಂಪರಾಜ್‌ ಆಗ್ರಹಿಸಿದ್ದಾರೆ. ಇದರಿಂದ ಜನರ ಅಲೆದಾಟ ತಪ್ಪಿಸಲು ಸಾಧ್ಯ ಎಂದು ಅವರು ಹೇಳಿದ್ದಾರೆ.

**

ನಗರಸಭೆ ಮಾನ್ಯತೆ ಇಲ್ಲ

ನಗರಸಭೆ ವ್ಯಾಪ್ತಿಯಲ್ಲಿನ ಕರ ನಿರ್ಧಾರವಾಗದ ಅನಧಿಕೃತ ಖಾತೆಗಳಿಗೆ (ಎಸ್‌ಎಎಸ್‌) ರಾಜ್ಯ ಸರ್ಕಾರದ ಅಕ್ರಮ ಸಕ್ರಮ ಯೋಜನೆಯಲ್ಲಿ ಸಕ್ರಮವಾಗದ ಹೊರತು ನಗರಸಭೆಯಿಂದ ಖಾತೆ ವರ್ಗಾವಣೆ, ಇ–ಖಾತೆ, ಮನೆ ಅಥವಾ ವಾಣಿಜ್ಯ ಕಟ್ಟಡ ನಿರ್ಮಾಣಕ್ಕೆ ಪರವಾನಗಿ ನೀಡುವುದನ್ನು ರದ್ದುಗೊಳಿಸಲಾಗಿದೆ.

ರಾಜ್ಯ ಸರ್ಕಾರ ಅಕ್ರಮ ಸಕ್ರಮ ಯೋಜನೆ ಜಾರಿಗೆ ತಂದ ನಂತರ ಸರ್ಕಾರ ನಿಗದಿ ಪಡಿಸುವ ತೆರಿಗೆಯನ್ನು ಪಾವತಿ ಮಾಡಿದ ನಂತರ ಇಂತಹ ಖಾತೆಗಳು ಅಧಿಕೃತವಾಗಲಿವೆ ಎಂದು ನಗರಸಭೆ ಪೌರಾಯುಕ್ತ ಡಾ.ಬಿಳಿಕೆಂಚಪ್ಪ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT