ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಂಗ್ಲಾದೇಶಕ್ಕೆ ₹ 30,600 ಕೋಟಿ ಸಾಲ: ಪ್ರಧಾನಿ ಮೋದಿ ಘೋಷಣೆ

Last Updated 8 ಏಪ್ರಿಲ್ 2017, 9:33 IST
ಅಕ್ಷರ ಗಾತ್ರ

ನವದೆಹಲಿ: ಮೂಲಸೌಕರ್ಯ ಯೋಜನೆಗಳಿಗಾಗಿ ಬಾಂಗ್ಲಾದೇಶಕ್ಕೆ ಭಾರತ ₹ 30,600 ಕೋಟಿ ಸಾಲ ನೀಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಘೋಷಿಸಿದ್ದಾರೆ.

ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರ ಜತೆ ದೆಹಲಿಯಲ್ಲಿ ಮಾತುಕತೆ ನಡೆಸಿದ ಬಳಿಕ ಮೋದಿ ಈ ಘೋಷಣೆ ಮಾಡಿದ್ದಾರೆ. ಇದರೊಂದಿಗೆ, ಕಳೆದ ಕೆಲ ವರ್ಷಗಳಲ್ಲಿ ಬಾಂಗ್ಲಾದೇಶಕ್ಕೆ ಭಾರತದ ಹಣಕಾಸು ನೆರವು ₹ 51,000 ಕೋಟಿ ದಾಟಿದಂತಾಗಿದೆ.‌ ರಕ್ಷಣಾ ಉಪಕರಣಗಳ ಖರೀದಿಗಾಗಿ ₹ 3,200 ಕೋಟಿ ಸಾಲ ನೀಡುವುದಾಗಿಯೂ ಅವರು ಘೋಷಿಸಿದ್ದಾರೆ.

ಉಭಯ ದೇಶಗಳು 22 ಒಪ್ಪಂದಗಳಿಗೆ ಸಹಿ ಹಾಕಿವೆ.

ಆದರೆ, ತೀಸ್ತಾ ನದಿ ನೀರು ಹಂಚಿಕೆ ವಿಷಯಕ್ಕೆ ಸಂಬಂಧಿಸಿ ಯಾವುದೇ ಒಮ್ಮತಕ್ಕೆ ಬರದಿರುವುದು ಬಾಂಗ್ಲಾದೇಶಕ್ಕೆ ನಿರಾಸೆ ಮೂಡಿಸಿದೆ. ನದಿ ನೀರು ಹಂಚಿಕೆಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರೋಧ ಸೂಚಿಸಿದ್ದಾರೆ. ಹಂಚಿಕೆಯಿಂದ ರಾಜ್ಯಕ್ಕೆ ಅನ್ಯಾಯವಾಗಲಿದೆ ಎಂದಿದ್ದಾರೆ. ಉಭಯ ರಾಷ್ಟ್ರಗಳು ಒಪ್ಪಂದಗಳಿಗೆ ಸಹಿ ಹಾಕುವ ಸಂದರ್ಭ ಮಮತಾ ಸಹ ಹಾಜರಿದ್ದರು.

‘ತೀಸ್ತಾ ಸಮಸ್ಯೆ ಬಗೆಹರಿಸಲು ಶೀಘ್ರ ಭಾರತದ ಬೆಂಬಲ ದೊರೆಯುವ ನಿರೀಕ್ಷೆಯಲ್ಲಿದ್ದೇನೆ’ ಎಂದು ಬಾಂಗ್ಲಾ ಪ್ರಧಾನಿ ಹೇಳಿದ್ದಾರೆ.

ಭಯೋತ್ಪಾದನೆ ಬಗ್ಗೆಯೂ ಚರ್ಚೆ: ಭಯೋತ್ಪಾದನೆ ವಿಷಯಕ್ಕೆ ಸಂಬಂಧಿಸಿಯೂ ಇಬ್ಬರೂ ನಾಯಕರು ಮಾತುಕತೆ ನಡೆಸಿದ್ದಾರೆ. ‘ಭಯೋತ್ಪಾದನೆ ನಿಗ್ರಹಕ್ಕೆ ಸಂಬಂಧಿಸಿ ಹಸೀನಾ ವ್ಯಕ್ತಪಡಿಸಿರುವ ದೃಢ ನಿಲುವಿನಿಂದ ಸಂತಸವಾಗಿದೆ. ಭಯೋತ್ಪಾದಯನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಅವರು ತಿಳಿಸಿದ್ದಾರೆ’ ಎಂದು ಮೋದಿ ಹೇಳಿದ್ದಾರೆ.

ಕೋಲ್ಕತ್ತಾ ಮತ್ತು ಢಾಕಾ ನಡುವಣ ಬಸ್‌ ಸೇವೆಗೆ ಮೋದಿ ಮತ್ತು ಹಸೀನಾ ವಿಡಿಯೊ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದರು. ಕೋಲ್ಕತ್ತಾ–ಖುಲ್ನಾ ನಡುವಣ ಮೈತ್ರೀ ಎಕ್ಸ್‌ಪ್ರೆಸ್ ರೈಲು ಸೇವೆಗೂ ಚಾಲನೆ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT