ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತಿಯ ಸಾವಿನ ಬ್ರೇಕಿಂಗ್ ನ್ಯೂಸ್‌ ಓದಿದ ನಿರೂಪಕಿ

Last Updated 8 ಏಪ್ರಿಲ್ 2017, 13:52 IST
ಅಕ್ಷರ ಗಾತ್ರ

ರಾಯಪುರ: ಆ ನಿರೂಪಕಿ ತಾನು ಕಾರ್ಯನಿರ್ವಹಿಸುವ ಸುದ್ದಿವಾಹಿನಿಯಲ್ಲಿ ಎಂದಿನಂತೆ ಶನಿವಾರ ಬಳಿಗ್ಗೆ ಸುದ್ದಿ ವಾಚಿಸುತ್ತಿದ್ದರು. ಅಷ್ಟರಲ್ಲಿ ವರದಿಗಾರರೊಬ್ಬರು ದೂರವಾಣಿ ಕರೆ ಮಾಡಿ ಕಾರು ಅಪಘಾತದ ಬ್ರೇಕಿಂಗ್ ಸುದ್ದಿ ನೀಡಿದರು. ಅಪಘಾತದಲ್ಲಿ ಮೂವರು ಮೃತಪಟ್ಟಿರುವುದಾಗಿಯೂ ತಿಳಿಸಿದರು. ಆ ಸುದ್ದಿಯನ್ನು ನಿರೂಪಕಿ ವಾಚಿಸಿದರು. ವಿಪರ್ಯಾಸವೆಂದರೆ, ಮೃತಪಟ್ಟವರಲ್ಲಿ ಆ ನಿರೂಪಕಿಯ ಪತಿಯೂ ಇದ್ದರು.

ಆದರೂ ಒಂದಿನಿತೂ ವಿಚಲಿತರಾಗದ ಅವರು ಪತಿಯ ಮರಣವಾರ್ತೆಯನ್ನೂ ಓದಿದರು. ನ್ಯೂಸ್‌ ರೂಂನಿಂದ  ಹೊರ ಬಂದದ್ದೇ ತಡ, ಆಘಾತದಿಂದ ಬಂಧುಗಳಿಗೆ ದೂರವಾಣಿ ಕರೆ ಮಾಡಿ ಪತಿಯ ಬಗ್ಗೆ ವಿಚಾರಿಸುತ್ತಿದ್ದರು. ಇದನ್ನು ನೋಡಿದ ಸಹೋದ್ಯೋಗಿಗಳು ನಿರೂಪಕಿಯ ಕಾರ್ಯತತ್ಪರತೆಗೆ, ಕೆಲಸದ ಮೇಲಿನ ಬದ್ಧತೆಗೆ ಮೂಕವಿಸ್ಮಿತರಾದರು.

ಇಂಥದ್ದೊಂದು ಮನಕಲಕುವ ಘಟನೆ ನಡೆದದ್ದು ಛತ್ತೀಸ್‌ಗಢದಲ್ಲಿ. ಅಲ್ಲಿನ ಪ್ರಸಿದ್ಧ ಖಾಸಗಿ ಸುದ್ದಿವಾಹಿನಿ ಐಬಿಸಿ–24ರ ನಿರೂಪಕಿ ಸುಪ್ರೀತ್ ಕೌರ್ ಅವರೇ ಪತಿ ಮೃತಪಟ್ಟದ್ದನ್ನು ಬ್ರೇಕಿಂಗ್ ನ್ಯೂಸ್ ಆಗಿ ಓದಿ ಹೇಳಿದ ನತದೃಷ್ಟೆ.

ಬೆಳಿಗ್ಗೆ ಸುದ್ದಿಯ ನೇರಪ್ರಸಾರ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾಗ ಈ ವಿಷಯ ನಡೆದಿದೆ. ವರದಿಗಾರರು ದೂರವಾಣಿ ಕರೆ ಮಾಡಿ ಅಪಘಾತದ ವಿವರ ನೀಡಿದ್ದಾರೆ. ರೆನಾಲ್ಟ್ ಡಸ್ಟರ್ ಕಾರು ಅಪಘಾತಕ್ಕೀಡಾಗಿರುವುದಾಗಿಯೂ ಅದರಲ್ಲಿದ್ದ ಐವರ ಪೈಕಿ ಮೂವರು ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

ಅಪಘಾತದ ಸಮಯ, ಮಾರ್ಗ, ಕಾರು, ಅದರಲ್ಲಿದ್ದ ಜನರ ವಿವರ ಎಲ್ಲವನ್ನೂ ತಿಳಿದುಕೊಂಡಾಗ ಅದು ತನ್ನ ಪತಿ ಚಲಿಸುತ್ತಿರುವ ಕಾರೇ ಎಂಬುದು ಕೌರ್‌ಗೆ ಗೊತ್ತಾಗಿದೆ. ಆದರೂ ಅವರು ಧೃತಿಗೆಡದೆ ತಮ್ಮ ಕರ್ತವ್ಯ ಪೂರೈಸಿದ್ದಾರೆ.

28 ವರ್ಷ ವಯಸ್ಸಿನ ಕೌರ್ ಅವರು ರಾಯಪುರದ ಹರ್ಷದ್ ಕಾವಡೆ ಅವರನ್ನು ಕಳೆದ ವರ್ಷ ವಿವಾಹವಾಗಿದ್ದರು.

‘ಅವರೊಬ್ಬ ಅದ್ಭುತ ಧೈರ್ಯವಂತೆ ಮಹಿಳೆ. ಅವರನ್ನು ನಿರೂಪಕಿಯಾಗಿ ಪಡೆದಿರುವುದಕ್ಕೆ ನಾವು ಹೆಮ್ಮೆಪಡುತ್ತೇವೆ. ಆದರೆ, ಇಂದಿನ ಘಟನೆ ನಮ್ಮನ್ನು ಆಘಾತಕ್ಕೀಡುಮಾಡಿದೆ’ ಎಂದು ಕೌರ್ ಅವರ ಸಹೋದ್ಯೋಗಿಯೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.

‘ಸಹೋದ್ಯೋಗಿಗಳಿಗೆ ಆಕೆಯ ಪತಿ ಎಂಬುದು ತಿಳಿದಿತ್ತು. ಆದರೆ, ಆಕೆಗೆ ಹೇಳುವ ಧೈರ್ಯವಿರಲಿಲ್ಲ. ಆದರೂ ಆಕೆಗೆ ಸುದ್ದಿ ಓದುವಾಗಲೇ ಮೃತಪಟ್ಟಿರುವುದು ತಮ್ಮ ಪತಿಯೇ ಎಂಬುದರ ಅರಿವಾದಂತಿತ್ತು. ಆದರೆ, ಅದನ್ನು ತೋರಿಸಿಕೊಳ್ಳಲಿಲ್ಲ’ ಎಂದು ಸುದ್ದಿವಾಹಿನಿಯ ಹಿರಿಯ ಸಂಪಾದಕರೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT