ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಚ್ಚಾ ಬಿಂಬಗಳಿಗೆ ಮುಕ್ತ ಮುಕ್ತ...

Last Updated 8 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ
‘ರ್ಯಾನ್ ಎಂಬ ಆರು ವರ್ಷದ ಹುಡುಗ 2016ರಲ್ಲಿ 140 ಕೋಟಿ ಹಣ ಸಂಪಾದಿಸಿದ’. ಕನ್ನಡದ ಸಿನಿಮಾ ನಿರ್ದೇಶಕ ಪವನ್ ಕುಮಾರ್ ಸೋಜಿಗದಿಂದ ಹೇಳಿದ ಮಾತಿದು.
 
ಮಕ್ಕಳಿಗೆ ‘ಯೂಟ್ಯೂಬ್’ನಲ್ಲಿ ವಿಡಿಯೊಗಳನ್ನು ತೋರಿಸುವ ಅನೇಕರಿಗೆ ‘ರ್‍ಯಾನ್ ಟಾಯ್ಸ್‌ರಿವ್ಯೂ’ (Ryan ToysReview) ಪರಿಚಯ ಇರುತ್ತದೆ. ಅಮೆರಿಕದ ಮಗು ರ್‍ಯಾನ್ ನಮ್ಮ ದೇಶದ ಮಕ್ಕಳಂತೆ ಶಾಲೆಗೆ ಹೋಗುತ್ತಾನೆ. ಹೋಂವರ್ಕ್ ಮಾಡುತ್ತಾನೆ.
 
ಕಾರುಗಳ ಸೆಟ್ ತಂದು ಆಟವನ್ನೂ ಆಡುತ್ತಾನೆ. ಅವರಮ್ಮ ಮಗನ ಆಟದ ವಿಡಿಯೊ ರೆಕಾರ್ಡ್ ಮಾಡುತ್ತಾರೆ. ವಾರಕ್ಕೆ ಎರಡು ದಿನ ಈ ಶೂಟಿಂಗ್ ನಡೆಯುತ್ತದೆ. 2015ರ ಮಾರ್ಚ್‌ನಲ್ಲಿ ಶುರುವಾದ ಅಮ್ಮನ ಈ ಚಾಳಿ ಅನೂಚಾನ ನಡೆಯತೊಡಗಿತು.

ಪ್ರತಿದಿನ ರ್ಯಾನ್ ಆಟದ ಒಂದು ವಿಡಿಯೊವನ್ನು ಯೂಟ್ಯೂಬ್‌ ಚಾನೆಲ್‌ಗೆ ಹಾಕುವುದು ಅವರಿಗೆ ಅಭ್ಯಾಸವಾಯಿತು. ವಿಡಿಯೊ ಎಡಿಟ್ ಮಾಡಿ, ಯೂಟ್ಯೂಬ್‌ಗೆ ಅಪ್‌ಲೋಡ್ ಮಾಡಲೆಂದೇ ಅವರು ವಿಜ್ಞಾನ ಶಿಕ್ಷಕಿಯ ಕೆಲಸಕ್ಕೆ ರಾಜೀನಾಮೆ ಕೊಟ್ಟರು. ಅಮ್ಮನ ದೆಸೆಯಿಂದ ಮಗರಾಯ ಈಗ ಯೂಟ್ಯೂಬ್ ಚಾನೆಲ್‌ನಲ್ಲಿ ಸೂಪರ್‌ಸ್ಟಾರ್!
 
‘ಲೈಫು ಇಷ್ಟೇನೆ’, ‘ಲೂಸಿಯಾ’, ‘ಯೂ ಟರ್ನ್’ ಸಿನಿಮಾಗಳನ್ನು ನಿರ್ದೇಶಿಸಿರುವ ಪವನ್ ಕುಮಾರ್, ಸಾಮಾಜಿಕ ಜಾಲತಾಣಗಳಲ್ಲಿ ‘ಕೆಇಬಿ’ ಎಂಬ ಯೂಟ್ಯೂಬ್ ವಿಡಿಯೊಗಳ ಮೂಲಕವೂ ಜನಪ್ರಿಯರು. ಈಗ ಎಡಿಟ್ ಆಗದ ವಸ್ತು ವಿಷಯಗಳೇ (ಅನ್‌ಎಡಿಟೆಡ್ ಕಂಟೆಂಟ್) ಜನಪ್ರಿಯ ಅಲ್ಲವೇ ಎಂಬ ಪ್ರಶ್ನೆ ಕೇಳಿದಾಗ, ಅವರು ನೆನಪಿಸಿಕೊಂಡಿದ್ದು ರ್‍ಯಾನ್ ಯಶೋಗಾಥೆಯನ್ನು.
 
ನಮ್ಮ ಸುತ್ತಮುತ್ತಲಿನ ಎಳೆಯರನ್ನೂ ಯುವಜನರನ್ನೂ ಗಮನಿಸಿನೋಡಿ. ಮೆಟ್ರೊ ರೈಲಿನೊಳಗೆ ಕುಳಿತ ಬಾಲಕನೊಬ್ಬನ ಎಡಗೈ ಮೇಲೆ ‘ಬುಧವಾರ ಪ್ರಾಜೆಕ್ಟ್’ ಎಂದು ಬರೆದಿದೆ. ತುಸು ಕೆಳಭಾಗದಲ್ಲಿ ‘ಗಿಟಾರ್ ಕ್ಲಾಸ್ ಮಂಗಳವಾರ’ ಎಂಬ ಬರಹ. ‘ಮಲ್ಟಿಟಾಸ್ಕಿಂಗ್’ಗೆ ಆ ಬಾಲಕನನ್ನು ದೂಡಿದ ಅಪ್ಪ–ಅಮ್ಮನ ಇಶಾರೆಯಿಂದಾಗಿ ಮೂಡಿದ ಬರಹಗಳವು.
 
ಠಾಕುಠೀಕಾಗಿದ್ದ ಬಾಲಕ ತನ್ನ ಸಣ್ಣ ಬ್ಯಾಗ್‌ನಿಂದ ಐ–ಪಾಡ್ ಹೊರತೆಗೆದು ಒಂದಿಷ್ಟು ಓದಿಕೊಂಡ. ಅವನ ಮುಖದ ತುಂಬ ಟಾಸ್ಕುಗಳ ನೆರಿಗೆಗಳು ದಟ್ಟವಾಗಿದ್ದವು. ಹಾಲುಗಲ್ಲ ಹೌದೇ ಆದರೂ ಮುಗ್ಧತೆಯ ಪಸೆಯನ್ನೂ ಆ ಗೆರೆಗಳು ಮುಚ್ಚಿಹಾಕಿದ್ದವು.
 
ಅವನು ಕೂಡ ‘ವಿಷುಯಲ್ ವ್ಯಸನಿ’ ಅರ್ಥಾತ್‌ ಡಿಜಿಟಲ್ ಲೋಕ ಸೃಷ್ಟಿಸಿರುವ ಪರದೆಗಳ ಮೇಲೆ ಕಣ್ಣು ಕೀಲಿಸುವವರ ಪೈಕಿ. ‘ಕೇಳು ಪರಂಪರೆ’ಯಿಂದ ‘ನೋಡು ಪರಂಪರೆ’ಗೆ ಪಲ್ಲಟಗೊಂಡಿರುವ ಆಧುನಿಕ ಮನಸ್ಸುಗಳ ಸಂಖ್ಯೆ ವೃದ್ಧಿಸುತ್ತಲೇ ಇದೆ.

ಟಿ.ವಿ ಪರದೆ, ಬಸ್‌ನ ಬೋರ್ಡು, ಅಂಗೈಯಲ್ಲಿ ಸದಾ ಬೆಳಕ ಬೀರುವ ಮೊಬೈಲ್, ಓದಲೊಂದು ಐ–ಪಾಡ್, ‘ಲೈಕು–ಶೇರ್‌’ಗಳ ವಿಹಂಗಮ ನೋಟದಲ್ಲಿ ಮಂಥನಕ್ಕೆ ಒಡ್ಡಿಕೊಂಡ ಫೇಸ್‌ಬುಕ್, ಟ್ವಿಟರ್, ಬಸ್‌ ನಿಲ್ದಾಣದಲ್ಲಿ, ರೈಲು ನಿಲ್ದಾಣದಲ್ಲಿ ಅಡಿಗಡಿಗೆ ಸಿಗುವ ಪರದೆಗಳು, ಕಚೇರಿಗಳಲ್ಲಿ ‘ಪ್ರೆಸೆಂಟೇಷನ್‌’ ಮೂಡುವ ಪ್ರೊಜೆಕ್ಟರ್‌ ಪರದೆ... ಹೀಗೆ ಕಣ್ಣ ಪಾಪೆಗಳ ಮೇಲೆ ಬೀಳುತ್ತಿರುವ ದೃಶ್ಯಗಳ ವ್ಯಾಪ್ತಿಗೆ ಎಗ್ಗೇ ಇಲ್ಲ.
 
ಹೀಗೆ ಕಾಣುವ ವಸ್ತುವಿಷಯಗಳು ಮುಕ್ತವಾದಷ್ಟೂ ಕುತೂಹಲದ ಗರಿ ಬಿಚ್ಚಿಕೊಳ್ಳುತ್ತದೆ. ಅದಕ್ಕೇ ‘ಅನ್‌ಎಡಿಟೆಟ್’ ವಸ್ತುವಿಷಯಗಳಿಗೆ ಇದು ಸಕಾಲ. ನೋಡು ಪರಂಪರೆಯ ಸಂಕ್ರಮಣದ ಬೇವು–ಬೆಲ್ಲ ಈ ಸರಕು.
 
ನಿರ್ದೇಶಕ ಪವನ್ ಅವರ ವಿಷಯಕ್ಕೆ ಮತ್ತೆ ಬರೋಣ. ಅವರು ತಮ್ಮ ಮೂರೂವರೆ ವರ್ಷದ ಮಗಳಿಗೆ ಟೀವಿ ನೋಡಗೊಡುವುದಿಲ್ಲ. ಅವರ ಮನೆಯಲ್ಲಿ ಟೀವಿ ಚಾಲೂ ಆಗುವುದೇ ಇಲ್ಲವಂತೆ. ಊಟ ಮಾಡಿಸುವಾಗ ಅರ್ಧ ಗಂಟೆ ಯೂಟ್ಯೂಬ್‌ನಲ್ಲಿ ಯಾವುದಾದರೂ ಒಂದು ಮಕ್ಕಳ ವಿಡಿಯೊ ತೋರಿಸುತ್ತಾರಷ್ಟೆ.
 
ಅವರ ಮಗಳಿಗೆ ಕಾರ್ಟೂನ್‌ಗಳು ಇಷ್ಟವಾಗುವುದಿಲ್ಲವಂತೆ. ಹಿನ್ನೆಲೆ ಸಂಗೀತ, ಹಸನಾದ ಸಂಕಲನ, ಮನಸೂರೆಗೊಳ್ಳುವಂಥ ಡಬ್ಬಿಂಗ್... ಇವೆಲ್ಲ ಇದ್ದರೂ ಮಗಳಿಗೆ ಆ ಕಾರ್ಟೂನ್‌ಗಳೆಂದರೆ ಬೋರೋ ಬೋರು. ಯಾವುದೋ ಮಗುವಿನ ಎಡಿಟ್ ಆಗದಂಥ ವಿಡಿಯೊ ನೋಡಿದರೆ ಅವಳಿಗೆ ಇಷ್ಟವಾಗುತ್ತದಂತೆ.
 
ಶಾಟ್ ಇಡಲು ಗೊತ್ತಿಲ್ಲದ, ಸಂಕಲನದ ಗಂಧ–ಗಾಳಿ ಅರಿಯದ ಅಮ್ಮಂದಿರು ಯೂಟ್ಯೂಬ್‌ಗೆ ಹಾಕುವ ವಿಡಿಯೊಗಳು ಈಗೀಗ ಜನಪ್ರಿಯವಾಗುತ್ತಿವೆ. ಇನ್ನೊಂದು ಕಡೆ ಮೊಬೈಲ್, ಟ್ಯಾಬ್, ಲ್ಯಾಪ್‌ಟಾಪ್, ಕಂಪ್ಯೂಟರ್ ಪರದೆಗೆ ಕಣ್ಣು ಕೀಲಿಸಿ ಕುಳಿತವರಿಗೂ ‘ಎಡಿಟ್’ ಆಗದ ಸರಕೇ ಮೆಚ್ಚು; ಅದೇ ಜನಪ್ರಿಯ.
 
ಫೇಸ್‌ಬುಕ್, ಟ್ವಿಟರ್‌ನಂಥ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತಗೊಳ್ಳುವ ಅಭಿಪ್ರಾಯ, ನಡೆಯುವ ಚರ್ಚೆಗಳಿಗೆ ಸಂಕಲನದ (ಎಡಿಟಿಂಗ್‌ನ) ಮೂಗುದಾರವಿಲ್ಲ. ‘ಅಡ್ಮಿನ್’ನ ಹಂಗಿನಲ್ಲಿ ಇದ್ದರೂ ವಾಟ್ಸ್‌ ಆ್ಯಪ್‌ ಮೆಸೇಜುಗಳಿಗೂ ಎಗ್ಗಿಲ್ಲ ಸಿಗ್ಗಿಲ್ಲ. ಅವುಗಳ ವ್ಯಸನದಲ್ಲಿ ಕಣ್ಣರಳಿಸಿ ಕುಳಿತವರ ಸಂಖ್ಯೆಯಂತೂ ದಿನೇದಿನೇ ದೊಡ್ಡದಾಗುತ್ತಿದೆ. 
 
‘ಬಹುಶಃ ರಿಯಲಿಸ್ಟಿಕ್ ಆದಂಥವು ಈ ಕಾಲದವರಿಗೆ, ಈ ದಿನಮಾನದ ಮಕ್ಕಳಿಗೆ ಇಷ್ಟವಾಗುತ್ತಿರಬೇಕು. ಅದಕ್ಕೇ ಎಡಿಟ್ ಆಗದ ರೋಮಾಂಚನ ಬೇಕಾಗಿದೆಯೇನೋ? ನನ್ನಂಥ ಸಿನಿಮಾ ನಿರ್ದೇಶಕರಿಗೂ ಇದು ಸವಾಲೇ’ ಎನ್ನುತ್ತಾರೆ ಪವನ್.  
 
ನಮ್ಮದು ಹರಿಕಥಾ ಪರಂಪರೆ. ನಾಟಕಗಳು, ಯಕ್ಷಗಾನ, ಬಯಲಾಟ, ಜನಪದ ಕಲೆಗಳು ಎಲ್ಲವುಗಳಲ್ಲೂ ಸಂಕಲನವಿತ್ತು. ಸಿನಿಮಾದ ಅವಧಿಯೂ ಮೂರು ಗಂಟೆ ಮೀರಿದ್ದು ವಿರಳ. ಇಂತಿಷ್ಟು ಅವಧಿಗೆ ಎಂದು ಅವೆಲ್ಲ ನಿಗದಿಯಾಗಿದ್ದವು. ರೇಡಿಯೊ ಕಾರ್ಯಕ್ರಮಗಳು ಜನಪ್ರಿಯವಾದಾಗ ಶ್ರಾವ್ಯ ಸಂಕಲನದ ಸವಿ ಕಂಡೆವು. ಟೀವಿ ಬಂತು.
 
ಹದಿಮೂರು ಕಂತುಗಳ ಧಾರಾವಾಹಿಯ ಕಾಲ ಶುರುವಾಯಿತು. ಅಲ್ಲಿಯೂ ಸಂಕಲನವಿತ್ತು. ಹೆಚ್ಚು ವಿಷಯಗಳನ್ನು ಕಡಿಮೆ ಸಮಯದಲ್ಲಿ ತೋರಿಸುವ ಸವಾಲಿದ್ದ ಸಂಕಲನ ಅದು. ಮೆಗಾ ಧಾರಾವಾಹಿಗಳು ಆ ಸಂಕಲನ ತತ್ತ್ವವನ್ನು ಧಿಕ್ಕರಿಸಿದವು. ಕಥೆ ನಿಂತಲ್ಲೇ ನಿಂತಿತು.
 
ಪಾತ್ರಗಳ ಮಾತಿನ ಮಂಟಪದಲ್ಲಿ ಮೆಗಾ ಧಾರಾವಾಹಿಗಳು ಚಲನಶೀಲ ಸಂಕಲನದ ವಿರುದ್ಧ ದಿಕ್ಕಿನಲ್ಲಿ ಸಾಗಿದವು. ‘ಇದೂ ಎಡಿಟ್ ಆಗದ ಸರಕು’ ಎಂದು ಹಳೆಯ ತರ್ಕ ಮುಂದಿಟ್ಟು ಟೀಕಿಸುವವರೂ ಇದ್ದಾರೆ. 
 
‘ಕಾಲವೇ ಹಾಗೆ. ಏನಾದರೂ ಹೊಸತು ಬೇಕು ಎಂದು ಪ್ರೇಕ್ಷಕರೂ ಬಯಸುತ್ತಿರುತ್ತಾರೆ. ಈಗ ಎಡಿಟ್ ಆಗದ ಕಚ್ಚಾ ಸರಕಿಗೆ ಕಾಲ. ಅದಕ್ಕೆ ಮಾರುಕಟ್ಟೆಯೂ ಒದಗಿದೆ ಎಂದಿಟ್ಟುಕೊಳ್ಳೋಣ. ಇದು ಹೀಗೇ ಇರದು. ಬದಲಾವಣೆ ಜಗದ ನಿಯಮ. ಜನರಿಗೆ ಆಯ್ಕೆಗಳು ಹೆಚ್ಚಾಗಿವೆ.
 
ಮುಂದೆ ಅದು ಇನ್ನಷ್ಟು, ಮತ್ತಷ್ಟು ಹೆಚ್ಚಾಗಲಿದೆ. ಆಗ ಎಡಿಟ್ ಆಗದ ಸರಕಿಗೆ ಮಾರುಕಟ್ಟೆ ಇಲ್ಲದೆಯೂ ಹೋಗಬಹುದು. ಸಂಭವನೀಯತೆಗಳು ಹೆಚ್ಚಾಗುತ್ತಿವೆ’ ಎನ್ನುತ್ತಾರೆ ಚಿತ್ರರಂಗದ ಹಿರಿಯ ಸಂಕಲನಕಾರ ಸುರೇಶ್ ಅರಸ್.    
 
‘ಧಾರಾವಾಹಿ ಮಟ್ಟಿಗೆ ಇದು ಈಗಿನ ಸೂತ್ರ ಆಗಿರಬಹುದು’ ಎನ್ನುವ ಅವರು, ಜನ ಅವುಗಳನ್ನು ನೋಡುತ್ತಾರೆನ್ನುವ ಸಮರ್ಥನೆಯನ್ನೂ ಒಪ್ಪುತ್ತಾರೆ. ಆದರೆ, ಇಂಥ ಎಡಿಟ್ ಆಗದ ವಿಷಯಗಳನ್ನು ನೋಡುವ ಪ್ರೇಕ್ಷಕರು ಯಾರೆನ್ನುವುದೂ ಮುಖ್ಯವಲ್ಲವೇ ಎಂಬ ಇನ್ನೊಂದು ಪ್ರಶ್ನೆಯನ್ನು ಸುರೇಶ್ ಮುಂದಿಡುತ್ತಾರೆ. 
 
‘ನನ್ನ ದೊಡ್ಡಪ್ಪ ನನಗೆ ಆದರ್ಶ. ಅವರು ಬೆಳಿಗ್ಗೆ ಎದ್ದವರೇ ಮೊದಲು ನಡೆದು ಹೋಗಿ, ಹಾಲು ತರುತ್ತಿದ್ದರು. ಮನೆಗೆ ಬಂದು, ಕಾಫಿ ಮಾಡಿಸಿಕೊಂಡು ಕುಡಿಯುತ್ತಿದ್ದರು. ಮತ್ತೆ ಹೋಗಿ ದಿನಪತ್ರಿಕೆ ತರುತ್ತಿದ್ದರು.
 
ಹಾಲು, ದಿನಪತ್ರಿಕೆ ಎರಡನ್ನೂ ಒಮ್ಮೆಗೇ ತರಬಹುದಿತ್ತಾದರೂ, ಕಾಲ್ನಡಿಗೆಯ ಅವಕಾಶಗಳನ್ನು ಹೆಚ್ಚು ಸೃಷ್ಟಿಸಿಕೊಳ್ಳುವುದು ಅವರಿಗೆ ಬೇಕಿತ್ತು. ಅದಕ್ಕೇ ಹಾಗೆ ಮಾಡುತ್ತಿದ್ದರು. ಈಗ ಧಾರಾವಾಹಿಗೆ ಕಣ್ಣು ಕೀಲಿಸಿ ಕುಳಿತ ವೃದ್ಧರು ಇಂಥ ಮುದ ಕೊಡುವ ಕೆಲಸಗಳನ್ನು ಮಾಡುವುದು ಕಡಿಮೆಯಾಗಿದೆ. ಇದರ ಫಲಶ್ರುತಿಯೇ ಎಡಿಟಿಂಗ್ ತತ್ತ್ವಕ್ಕೆ ವಿರುದ್ಧ ಎನ್ನಬಹುದಾದ ಮೆಗಾ ಧಾರಾವಾಹಿಗಳ ಯಶಸ್ಸು’ ಎಂದು ಸುರೇಶ್ ಅರಸ್ ವಿಶ್ಲೇಷಿಸುತ್ತಾರೆ. 
 
ಈಗ ಪ್ರಯಾಣದಲ್ಲಿ ಮಗು ಅತ್ತರೆ, ಅಮ್ಮ ಯೂಟ್ಯೂಬ್ ವಿಡಿಯೊ ತೋರಿಸಿ ರಮಿಸುತ್ತಾಳೆ. ಜೋತಾಡಿಕೊಂಡು ಸಾಗುವ ಮೆಟ್ರೊ ರೈಲಿನ ಸಣ್ಣ ಅವಕಾಶದಲ್ಲಿಯೂ ಸಂಕಲನಕ್ಕೆ ಒಳಪಡದ ಕಂಟೆಂಟಿನ ಮೇಲೆಯೇ ಹದಿಹರೆಯದವರ ಕಣ್ಣು.
 
ಆ ಸರಕನ್ನು ಓದುತ್ತಲೇ ಅವರ ಮುಖಭಾವದಲ್ಲಿ ಬದಲಾವಣೆಗಳಾಗುತ್ತವೆ. ತಂತಾವೇ ನಗುತ್ತಾರೆ, ಸಣ್ಣದೊಂದು ಆತಂಕವೂ ಕಾಣುತ್ತದೆ, ಲೈಕು, ಡಿಸ್‌ಲೈಕುಗಳ ವ್ಯಸನ ಅಂಥವರ ಪಾಲಿಗೆ ಡಿಜಿಟಲ್ ಸ್ವಾತಂತ್ರ್ಯವೇ ಸರಿ. ಸೆನ್ಸಾರ್ ಕೂಡದು, ಸಂಕಲನವೂ ಸಲ್ಲದು – ಅದೇ ಈಗ ಜನಪ್ರಿಯ. ಅದು ಸುದ್ದಿಮೂಲವೂ ಹೌದು!
***
ಕಾಲವೇ ವಿವೇಕ ಕಲಿಸೀತು
ನೈತಿಕತೆಗೂ ಸೃಜನಶೀಲತೆಗೂ ಸಂಬಂಧ ಇರಬಾರದು. ಬಹುಶಃ ಇದೂ ಅದೇ ರೀತಿ. ಎಡಿಟಿಂಗ್‌ ಏಕೆ ಬೇಕು ಎನ್ನುವ ಪ್ರಶ್ನೆ ಕೆಲವರಿಗೆ ಇರಬಹುದು.
 
ಸಂಕಲನದ ಹಳೆಯ ಮಾದರಿಯ ಹಂಗಿಲ್ಲದ ಇಂಥ ವಸ್ತುವಿಷಯಗಳನ್ನು ಓದುತ್ತಿರುವ, ಕೇಳುತ್ತಿರುವ, ನೋಡುತ್ತಿರುವ ಜನಸಮುದಾಯ ಯಾವುದೆನ್ನುವುದನ್ನು ವೈಜ್ಞಾನಿಕವಾಗಿ ಅರಿತರೆ ಸತ್ಯ ಗೊತ್ತಾಗಬಹುದು. ಸಂಕಲನಗೊಳ್ಳದ ವಸ್ತುಗಳು ಸರಿಯಲ್ಲ ಎಂದು ಟೀಕಿಸುವ ವರ್ಗವೂ ಇರುತ್ತದೆ.

ಪರಂಪರೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ನಾವು ಈ ಬೆಳವಣಿಗೆಯನ್ನು ಅವಲೋಕಿಸುವುದರಿಂದ ಜನಪ್ರಿಯ ಎನಿಸುತ್ತದೆ. ಎಲ್ಲವೂ ತಂತ್ರಜ್ಞಾನದ ಮೂಲಕ ದಕ್ಕುತ್ತಿರುವ ಕಾಲವಿದು. ಅವಕಾಶ ಹೆಚ್ಚಾದಂತೆ ‘ಬೇಕು’ಗಳ ವ್ಯಾಪ್ತಿಯೂ ಹಿಗ್ಗುತ್ತದೆ.
 
ಅವುಗಳಲ್ಲಿ ಯಾವುದು ‘ಬೇಡ’ ಎನ್ನುವ ವಿವೇಕವನ್ನೂ ಅನುಭವವೇ ರೂಢಿಸುತ್ತದೆ. ಈಗ ಜನಪ್ರಿಯವಾಗಿರುವ ಅನ್‌ಎಡಿಟೆಡ್, ಅನ್‌ಸೆನ್ಸಾರ್ಡ್‌ ಸರಕು ಮುಂದೆ ಯಾವುದೋ ನಿಕಷಕ್ಕೆ ಒಳಪಡಬಹುದು. ಹೊಸತು ಹಾಗೂ ಬಹು ಆಯ್ಕೆಗಳು ಈ ಜನಪ್ರಿಯತೆಗೆ ಇಂಬುಗೊಟ್ಟಿರಲಿಕ್ಕೂ ಸಾಕು. ಈ ಮನಸ್ಥಿತಿ ಕಲಾ ಮಾಧ್ಯಮದಲ್ಲೂ ಇದೆ.
  –ಕೆ.ವಿ. ಸುಬ್ರಹ್ಮಣ್ಯ, ಕಲಾ ವಿಮರ್ಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT