ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಗದಾಚೆಗಿನ ಭಾವಯಾನ

Last Updated 8 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ
ಶ್ರೀಮತಿದೇವಿ
ಹಿಂದೂಸ್ತಾನಿ ಸಂಗೀತದ ಭಾವಸೌಂದರ್ಯ ದರ್ಶನಕ್ಕಿರುವ ಇನ್ನೊಂದು ಹೆಸರೇ ಗಾನ ಸರಸ್ವತಿ ಕಿಶೋರಿ ಅಮೋಣಕರ್. ಭಾರತೀಯ ಅಭಿಜಾತ ಸಂಗೀತಕ್ಕೆ ಒಂದು ಹೊಸ ವಿಶ್ವದ ದರ್ಶನ ಮಾಡಿಸಿದ್ದು, ಸಂಗೀತವನ್ನು ಆನಂದದ ಯಾತ್ರೆಯನ್ನಾಗಿಸಿದ್ದು ಅವರ ಅಗ್ಗಳಿಕೆ.
 
ಕಿಶೋರಿ ಅಮೋಣಕರ್ ಅವರ ಬಗ್ಗೆ ಮಾತಾಡದೆ, ಸಂಗೀತದ ಯಾವ ಚರ್ಚೆಯೂ ಪೂರ್ಣವಾಗಲು ಸಾಧ್ಯವಿಲ್ಲ. ಅವರು ಸ್ವಾತಂತ್ರ್ಯೋತ್ತರ ಆಧುನಿಕ ಕಾಲದ ಚಿಂತನಶೀಲ, ಸಂಶೋದನಾಶೀಲರಾದ ಅಪ್ರತಿಮ ಗಾಯಕಿ.
 
ನವಯುಗದ ಭಾವಸೌಂದರ್ಯವಾದವನ್ನು (romanticism) ಸಂಗೀತದಲ್ಲಿ ಬೆಳೆಸಿದವರು. ಪಂಡಿತ್ ಓಂಕಾರನಾಥ ಠಾಕೂರರು ಈ ವಿಚಾರವನ್ನು ಹೊಂದಿದ್ದರೂ ಅದನ್ನು ಜನರಿಗೆ ತಲುಪಿಸುವಲ್ಲಿ ಯಶಸ್ಸು ದೊರೆತದ್ದು ಪಂ.ಕುಮಾರ ಗಂಧರ್ವ ಹಾಗೂ ಕಿಶೋರಿ ಅಮೋಣಕರ್ ಅವರಿಗೆ. 
 
ಕಿಶೋರಿ ಅವರ ತಾಯಿ ಜೈಪುರ್–ಅತ್ರೌಲಿ ಘರಾಣೆಯ ಹೆಸರಾಂತ ಹಿರಿಯ ಗಾಯಕಿ ಮೋಗುಬಾಯಿ ಕುರ್ಡೀಕರ್. ಆ ಘರಾಣೆಯ ಪ್ರವರ್ತಕರೇ ಆದ ಉಸ್ತಾದ ಅಲ್ಲಾದಿಯಾ ಖಾನರ ಶಿಷ್ಯರಾದವರು. ಅವರ ತಂದೆ ಮಾಧವದಾಸ ಭಾಟಿಯಾ. ಗೋವಾ ಮೂಲದ ಇವರ ಕುಟುಂಬ ಗೋಮಂತಕೀಯ ಸಮಾಜಕ್ಕೆ ಸೇರಿದ್ದಾಗಿತ್ತು.

ಸಂಗೀತಕ್ಕೇ ಹೆಸರಾದ ಈ ಕುಟುಂಬದಲ್ಲಿ 1932ರ ಏಪ್ರಿಲ್ 10ರಂದು ಕಿಶೋರಿ ಜನಿಸಿದರು. ಮೋಗುಬಾಯಿ, ಚಿಕ್ಕಂದಿನಿಂದಲೇ ಕಿಶೋರಿಯಲ್ಲಿರುವ ಸಾಂಗೀತಿಕ ಗುಣಗಳನ್ನು ಕಂಡು, ತಾವೂ ಹೆಚ್ಚಿನ ಗಮನ ನೀಡುವುದರೊಂದಿಗೆ, ಅವರಿಗೆ ಬೇರೆ ಬೇರೆ ಘರಾಣೆಯ ಗುರುಗಳಿಂದಲೂ ಪಾಠಕ್ಕೆ ವ್ಯವಸ್ಥೆ ಮಾಡಿದ್ದರು.

ಇದರಿಂದಾಗಿ ಕಿಶೋರಿಯವರಿಗೆ ಬೆಂಡಿಬಜ಼ಾರ್ ಘರಾಣೆಯ ಅಂಜನಾಬಾಯಿ ಮಾಲ್ಪೇಕರ್, ಆಗ್ರಾ ಘರಾಣೆಯ ಅನ್ವರ್ ಹುಸೇನ್ ಖಾನ್, ಗ್ವಾಲಿಯರ್ ಘರಾಣೆಯ ಶರತ್‌ಚಂದ್ರ ಅರೋಳ್ಕರ್ ಹಾಗೂ ಮೋಹನ್‌ರಾವ್ ಪಾಲೇಕರ್ – ಇವರೆಲ್ಲರಿಂದಲೂ ಕಲಿಯುವ ಅವಕಾಶ ದೊರಕಿತು. ಕಿಶೋರಿಯವರ ಸಂಗೀತದ ಮೇಲೆ ಬಾಲಕೃಷ್ಣಬುವಾ ಪಟವರ್ಧನ್ ಪ್ರಭಾವವೂ ಇತ್ತು. 
 
ಮೊದಲಿನಿಂದಲೂ ಸಂಗೀತದಲ್ಲಿನ ಭಾವಾತ್ಮಕತೆಯೆಡೆಗೆ ಹೆಚ್ಚಿನ ಸೆಳೆತ ಹೊಂದಿದ್ದ ಕಿಶೋರಿಗೆ ಸುಗಮಸಂಗೀತದ ಬಗ್ಗೆ ತುಂಬಾ ಒಲವಿತ್ತು. ಮೊದಲ ಬಾರಿಗೆ ಅವರು ವಿ. ಶಾಂತಾರಾಂ ನಿರ್ದೇಶನದ ‘ಗೀತ್ ಗಾಯಾ ಪಥರೋನೆ’ ಚಲನಚಿತ್ರಕ್ಕಾಗಿ ಒಂದು ಹಾಡು ಹಾಡಿದರು.
 
ಇದರಿಂದಾಗಿ ಅವರು ತಮ್ಮ ತಾಯಿಯ ಉಗ್ರ ಸಿಟ್ಟನ್ನು ಎದುರಿಸಬೇಕಾಗಿ ಬಂದಿತು. ತಾಯಿಯ ಆಸೆಯಂತೆ ಸುಗಮ ಸಂಗೀತವನ್ನು ಬಿಟ್ಟು ಶಾಸ್ತ್ರೀಯ ಸಂಗೀತದ ಹಾದಿಯನ್ನು ಸ್ವೀಕರಿಸಿದರು.
 
ಜೈಪುರ ಘರಾಣೆಯ ಎಲ್ಲಾ ಮೂಲೆ–ಮುಡುಕುಗಳನ್ನು ತಾಯಿಯ ಮೂಲಕ ಅರಿಯುತ್ತಾ ಸಂಗೀತಾಭ್ಯಾಸ ನಡೆಸುತ್ತಿದ್ದ ಕಿಶೋರಿ, 1950ರಲ್ಲಿ ಅಚಾನಕ್ ಆಗಿ ತಮ್ಮ ಧ್ವನಿಯನ್ನು ಕಳೆದುಕೊಂಡರು.

ಎರಡು ವರ್ಷಗಳ ಕಾಲ ಹಾಡಲಾಗದೆ ಒದ್ದಾಡಿದ ಅವರು, ಈ ಏಕಾಂತದಲ್ಲೇ ತನ್ನೊಳಗಿರುವ ಸಂಗೀತ ಎಂಥಾದ್ದು ಮತ್ತು ಅದರ ಅಭಿವ್ಯಕ್ತಿ ಹೇಗೆ ಸಾಧ್ಯ ಎಂಬುದನ್ನು ಗುರುತಿಸಿಕೊಂಡರು. ಇದೇ ಸಮಯದಲ್ಲಿ ಸರದೇಶಮುಖ್ ಮಹಾರಾಜ್ ಎಂಬ ಆಧ್ಯಾತ್ಮಿಕ ಗುರುವಿನ ಮಾರ್ಗದರ್ಶನ ದೊರೆತು, ಅವರಿಂದಲೇ ಧ್ವನಿಯನ್ನು ಮತ್ತೆ ಪಡೆದರು.
 
ಅನಂತರ ಕಿಶೋರಿಯ ಗಾಯನದ ವರ್ಚಸ್ಸೇ ಬೇರೆಯಾಯಿತು. ತಾಯಿಯಿಂದ ಪಡೆದ ಪರಂಪರೆಯ ತಾಲೀಮಿನೊಂದಿಗೆ, ಸತತ ವಿಚಾರ ಮಂಥನದಿಂದ ಪಡೆದ ತಮ್ಮ ಶೈಲಿಯನ್ನು ಬೆರೆಸಿ ಅನ್ಯಾದೃಶವಾಗಿ ಹಾಡತೊಡಗಿದರು.
 
ಸ್ವರ–ಸಂವಾದ, ಸ್ವರ–ಭಾವ, ಸ್ವರ–ಲಯಗಳ ಜಗತ್ತನ್ನು ಕಂಡುಬಿಟ್ಟಿದ್ದರು ಅವರು. ಸ್ವರ ಸಂವಾದವನ್ನು ಹುಡುಕುತ್ತಾ, ಭಾವದ ಲೋಕದಲ್ಲಿ, ಲಯದೊಂದಿಗಿನ ಯಾತ್ರೆ ಅವರ ಸಂಗೀತ. ಅವರು ಸ್ವರಾನುಸಾರಿಯಾದ ರಾಗವಿಸ್ತಾರವನ್ನು ಬಯಸಿದ್ದರು.
 
ಹೆಚ್ಚಾಗಿ ಕಿರಾಣಾ–ಗ್ವಾಲಿಯರ್ ಘರಾಣೆಯಲ್ಲಿರುವಂತೆ ಸ್ವರದಿಂದ ಸ್ವರಕ್ಕೆ ಆಲಾಪ ಬೆಳೆಸುತ್ತಾ ಹೋಗುವ ಕ್ರಮ ಜೈಪುರ್‌ನಲ್ಲಿ ಇರುವುದಿಲ್ಲ. ಇಲ್ಲಿ ಆಲಾಪ ಸ್ವರಗಳ ಗುಂಪಿನಿಂದ ಗುಂಪಿಗೆ (phrase by phrase) ಸಾಗುತ್ತದೆ ಹಾಗೂ ತಾಳದ ಬಿಗಿ ಹೆಚ್ಚು ಇರುತ್ತದೆ.

ಇದಕ್ಕೆ ಈ ಘರಾಣೆಯನ್ನು ಹುಟ್ಟುಹಾಕಿದ ಅಲ್ಲಾದಿಯಾ ಖಾನರ ಧ್ವನಿಯಲ್ಲಿನ ತೊಂದರೆಯೂ ಒಂದು ಕಾರಣ ಎಂದು ವಿದ್ವಾಂಸರುಗಳು ಅಭಿಪ್ರಾಯಪಡುತ್ತಾರೆ. ಖಾನರ ಶಿಷ್ಯರೆಲ್ಲರೂ ಇದೇ ಶೈಲಿಯನ್ನು ಒಪ್ಪಿಕೊಂಡು, ಪ್ರಮಾಣೀಕೃತ (standardise) ಮಾಡಿಬಿಟ್ಟಿದ್ದರೆ, ಕಿಶೋರಿಗೆ ಇದು ಬಂಧನ ಎಂದು ಅನಿಸಿತು.
 
ಈ ಶೈಲಿಯಲ್ಲಿ ಸ್ವರಗಳ ಮಧ್ಯದ ಹುಡುಕಾಟ, ರಸದ ಆವಿಷ್ಕಾರ ಸಾಧ್ಯವಾಗುವುದಿಲ್ಲ ಎಂಬ ಅರಿವಾಯ್ತು. ಅವರಿಗೆ ತಾಳದ ಒಳಗಿದ್ದೇ ಸ್ವಾತಂತ್ರ್ಯ ಪಡೆಯುವ ಹಂಬಲವಿತ್ತು, ಸಂಗೀತದಲ್ಲಿನ ಏಕತಾನತೆಯನ್ನು ಒಡೆಯುವ ಅನಿವಾರ್ಯತೆ ಇತ್ತು.

ಆದ್ದರಿಂದ ಅವರು ತಮ್ಮ ಸಂಗೀತಕ್ಕೆ ಬೇಕಾದ ದೊಡ್ಡ ಗಾಯನದ ಚೌಕಟ್ಟನ್ನು ಹಾಕಿಕೊಂಡರು. ಸಂಗೀತ ಗ್ರಂಥಗಳ ವಿಸ್ತೃತವಾದ ಅಧ್ಯಯನ ಮಾಡಿದರು. ಜೈಪುರ–ಅತ್ರೌಲಿ ಘರಾಣೆಯಲ್ಲಿರುವ ತಮ್ಮ ಸಂಗೀತದ ಮೂಲದ ಅರಿವನ್ನು ಇಟ್ಟುಕೊಂಡೇ ಭಾವನೆಯಿಂದ ಸಂಗೀತವನ್ನು ಪಡೆಯುವ ಶೋಧಕ್ಕೆ ಹೊರಟರು.
 
ಎಲ್ಲಾ ಜೈಪುರ ಘರಾಣೆಯ ಸಂಗೀತಗಾರರ ಹಾಗೆಯೇ ಮೋಗೂಬಾಯಿ ಅವರಿಗೂ ಛೋಟಾಖ್ಯಾಲ್ ಹಾಡುವುದು ಅಷ್ಟೇನೂ ಇಷ್ಟವಿಲ್ಲದ ವಿಚಾರವಾಗಿತ್ತು. ಆದರೆ ಬೇರೆ ಬೇರೆ ವಿಧದ ಭಾವನಾಲೋಕವನ್ನು ಸೃಷ್ಟಿಸಲು ಇದು ಅಗತ್ಯ ಎಂಬುದು ಕಿಶೋರಿ ಅವರ ಅಭಿಪ್ರಾಯವಾಗಿತ್ತು. ಇದರಲ್ಲಿನ ಸಾಹಿತ್ಯದ ಮೂಲಕವೂ ಸಂಗೀತದಲ್ಲಿ ರಸಾನುಭೂತಿ ಸಾಧ್ಯ ಎಂದವರು ನಂಬಿದ್ದರು.

ಅದಕ್ಕಾಗಿಯೇ ಹಲವಾರು ಸುಂದರ ಬಂದಿಶ್‌ಗಳನ್ನು ಕಿಶೋರಿಯವರು ರಚಿಸಿದರು. ಅದರಲ್ಲಿನ ಶಬ್ದಗಳ ಆಯ್ಕೆ, ಲಯದ ವಿನ್ಯಾಸ, ಭಾವಾತ್ಮಕತೆಗಳಿಂದ ಕಿಶೋರಿಯವರ ಬಂದಿಶ್‌ಗಳು ಸರಿಸಾಟಿ ಇಲ್ಲದವುಗಳಾಗಿವೆ.
 
ಕಿಶೋರಿ ಅಮೋಣಕರ್ ಅವರು ಜೈಪುರ ಘರಾಣೆಯ ರಾಗಗಳಾದ ಶುದ್ಧನಟ್, ಖೇಮ್, ಬಸಂತಿ–ಕೇದಾರ್, ಖಟ್ ಇವುಗಳನ್ನು ಹಾಡುತ್ತಾರಾದರೂ ಅವರಿಗೆ ಹೆಚ್ಚಾಗಿ ರಾಗದ ವಿಸ್ತಾರಕ್ಕೆ ಜಾಸ್ತಿ ಅವಕಾಶವಿರುವ ಯಮನ್, ಭೀಂಪಲಾಸಿ, ಮಲ್ಹಾರ್, ರಾಗೇಶ್ರೀಗಳಂಥ ಪಾರಂಪರಿಕ ರಾಗಗಳನ್ನು ಹಾಡುವುದೇ ಇಷ್ಟ.

ಸಂಪೂರ್ಣ ಮಾಲ್‌ಕೌಂಸ್ ರಾಗಕ್ಕೆ ಅವರು ವಿಸ್ತಾರವಾದ ಒಂದು ಹೊಸ ಆಯಾಮ ಕೊಟ್ಟದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಕರ್ನಾಟಕಿ ರಾಗವಾದ ಹಂಸಧ್ವನಿಯನ್ನೂ ಅವರು ಅತ್ಯಂತ ಸುಂದರವಾಗಿ ಹಾಡಿದ್ದಾರೆ.

ಅವರ ಭೂಪ್, ಶಾಸ್ತ್ರೀಯ ಸಂಗೀತದ ಇತಿಹಾಸದಲ್ಲೇ ನೆಟ್ಟ ಒಂದು ಮೈಲಿಗಲ್ಲು. ಅಮೀರ ಖಾನರ ಮಾರವಾ ಇದ್ದಂತೆ, ಕಿಶೋರಿ ಅಮೋನಕರ್ ಅವರ ಭೂಪ್. ಈ ಧ್ವನಿಪೂರ್ಣವಾದ ಭೂಪ್‌ನಲ್ಲಿನ ಶಾಂತತೆ, ಮಧುರತೆ, ಭವ್ಯತೆ, ಸಮತೋಲನಗಳನ್ನು ಅನುಭವಿಸಲು ನಮ್ಮಲ್ಲಿ ರಸಾನುಭವ ಶಕ್ತಿಯಿದ್ದರಷ್ಟೇ ಸಾಧ್ಯ.
 
ಆತ್ಮದ ಹುಡುಕಾಟಕ್ಕೆ ಹೊರಟಂತಿರುವ ಅವರ ಧ್ವನಿ ಜೇನಿನಷ್ಟೇ ಸಿಹಿಯಾದದ್ದು. ಸ್ವರಗಳನ್ನು ಮಧುರತೆಯ ತುತ್ತತುದಿಗೆ ಕರೆದೊಯ್ಯುವ ರೇಷ್ಮೆಯ ದಾರದಂತಹ ನಾಜೂಕಿನ ಧ್ವನಿ ಅದು. ಅವರ ಧ್ವನಿ ವಜ್ರದಷ್ಟು ಹರಿತ ಹಾಗೂ ಶಕ್ತಿಯುತವೂ ಹೂವಿನಷ್ಟು ಮೃದುವೂ ಹೌದು.
 
 ಕಿಶೋರಿಯವರು ಹಲವು ಠುಮ್ರಿಗಳನ್ನೂ, ಹಿಂದಿ ಹಾಗೂ ಮರಾಠಿ ಭಜನ್‌ಗಳನ್ನೂ ಹಾಡಿದ್ದಾರೆ. ಹಲವಾರು ವರ್ಷಗಳ ನಂತರ, 1990ರಲ್ಲಿ ‘ದೃಷ್ಟಿ’ ಎಂಬ ಹಿಂದಿ ಚಲನಚಿತ್ರಕ್ಕಾಗಿ ಒಂದು ಹಾಡನ್ನೂ ಹಾಡಿದ್ದಾರೆ. ಇಂಗ್ಲಿಷ್, ಹಿಂದಿ, ಮರಾಠಿ– ಮೂರೂ ಭಾಷೆಗಳಲ್ಲಿ ಹಿಡಿತ ಹೊಂದಿದ್ದ ಅವರು, ಹಲವಾರು ಉಪನ್ಯಾಸ–ಪ್ರಾತ್ಯಕ್ಷಿಕೆಗಳನ್ನು ನೀಡಿದ್ದಾರೆ.
 
ಸಂಗೀತವೆಂದರೆ ಕೇವಲ ಶಬ್ದ ಹಾಗೂ ತಾಳಗಳ ಕೂಟವಲ್ಲ. ಅದರೊಳಗಿನ ಭಾವವೂ ಸೇರಿದ ರಸಪಾಕ ಎಂಬುದು ಕಿಶೋರಿಯವರು ನಂಬಿಕೊಂಡು ಬಂದ ಸತ್ಯ. ಅವರಿಗೆ ಭಾರತೀಯ ಸಂಗೀತವು ಕೇವಲ ಮನರಂಜನೆಗಾಗಿ ಇರುವ ಸಾಧನವಲ್ಲ.

ಅದೊಂದು ಆತ್ಮದ ಧ್ಯಾನ–ಶೋಧ, ಜೀವನದ ದಾರಿ, ಸ್ವಾತಂತ್ರ್ಯದೆಡೆಗಿನ ಪಯಣ, ಆತ್ಯಂತಿಕವಾದ ಗುರಿಯನ್ನು ತಲುಪುವ ಪವಿತ್ರವಾದ ಹಾದಿ. ತಾವು ನಂಬಿದ ಸಂಗೀತ ತತ್ವಗಳ ಬಗ್ಗೆ ಯಾವುದೇ ರಾಜಿಗೂ ಒಪ್ಪದೇ, ಜೀವನದುದ್ದಕ್ಕೂ ತಮ್ಮ ಸ್ವರಯಾತ್ರೆಯ ಮೂಲಕ ಆನಂದವನ್ನು ಹರಿಯಬಿಟ್ಟವರು ಕಿಶೋರಿ. ‘Music is meant to creat peace, not war’ ಎನ್ನುವುದು ಅವರ ಮಾತು–ನಂಬಿಕೆ.
 
ಒಂದು ಸಂಗೀತ ರಚನೆಯ ಆತ್ಮವನ್ನು ತೆರೆದಿಡುವುದಕ್ಕಾಗಿ ಕೇವಲ 7 ಸ್ವರಗಳ ಬಳಕೆ ಸಾಕಾಗುವುದಿಲ್ಲ. ಅವುಗಳ ನಡುವಿನ ನೂರಾರು ಸಣ್ಣ–ಪುಟ್ಟ ಸ್ವರಗಳ ಸಹಾಯವಿದ್ದರೆ ಮಾತ್ರ ಭಾವಸ್ಫುರಣೆ ಸಾಧ್ಯ ಎಂಬುದನ್ನು ಕಂಡುಕೊಂಡವರು ಕಿಶೋರಿ. ಆದ್ದರಿಂದಲೇ ಒಂದು ರಾಗದಲ್ಲಿ ಅವರು ಹುಟ್ಟುಹಾಕುವ ಪ್ರತಿಯೊಂದು ಸಂಚಾರವೂ ಪ್ರಭಾವಶಾಲಿಯಾಗಿರುತ್ತದೆ. 
 
ಕರ್ನಾಟಕಿ ಸಂಗೀತಗಾರ, ಚಿಂತಕ ಟಿ.ಎಂ. ಕೃಷ್ಣ ಅವರು ಕಿಶೋರಿ ಅವರ ಬಗ್ಗೆ ಬರೆದ ಸುಂದರವಾದ ಲೇಖನವೊಂದರಲ್ಲಿ, ಕಿಶೋರಿಯವರ ಗಾಯನದಲ್ಲಿನ ಧ್ಯಾನಸ್ಥ ಗುಣದ ಬಗ್ಗೆ, ಅವರ ಷಡ್ಜಕ್ಕಿರುವ ತಾಕತ್ತಿನ ಬಗ್ಗೆ ಬರೆಯುತ್ತಾ, ‘ಅವರ ರಾಗದ ಪ್ರಸ್ತುತಿ, ಉಳಿದೆಲ್ಲರ ಪ್ರಸ್ತುತಿಗಿಂತ ಭಿನ್ನವಾಗುವುದು ಅವರು ಆ ರಾಗದಲ್ಲಿ ಬಳಸುವ ವಿಶೇಷ ಸಂಗತಿಗಳಿಂದ ಮಾತ್ರವಲ್ಲ, ಬದಲಿಗೆ ತಾವು ಹಾಡುವ ಪ್ರತಿಯೊಂದು ಸ್ವರ ಹಾಗೂ ಸ್ವರಗುಂಪುಗಳಲ್ಲಿ ಅವರು ತುಂಬುವ ಗುಣಾತ್ಮಕತೆ (quality)ಯಿಂದ’ ಎನ್ನುತ್ತಾರೆ.

ಟಿಎಂಕೆ ಅವರ ಮಾತಿನಂತೆ ‘Her music is true to herself’. ಅವರ ಸಂಗೀತ ಪ್ರಾಮಾಣಿಕವಾದದ್ದು ಮತ್ತು ಅವರು ತಂದ ಹೊಸತನ ಅವರ ಅಂತರಂಗದ ಅನಿವಾರ್ಯತೆಯಾಗಿ ಬಂದದ್ದು.
 
ಕಿಶೋರಿ ಅಮೋಣಕರ್ ಅವರ ಉದ್ವೇಗಕ್ಕೊಳಗಾದ, ಸಿಟ್ಟಿನ (temparamental) ಸ್ವಭಾವದ ಬಗ್ಗೆಯೂ ಕೃಷ್ಣ ಅವರು ಬರೆಯುತ್ತಾ – ‘ಹೊರಗಿನ ಲೋಕದ ಏನನ್ನೂ ಯೋಚಿಸದೆ, ಯಾವಾಗಲೂ ಸ್ವರಗಳ ಲೋಕದಲ್ಲೇ ಇರುವ, ಕಿಶೋರಿಯವರಂತಹ ಸಂಗೀತಗಾರರಿಗೆ ಸಣ್ಣ–ಪುಟ್ಟ ತೊಂದರೆಗಳೂ ಅವರ ಆಲೋಚನಯ ಹರಿವಿಗೆ ಧಕ್ಕೆಯನ್ನು ತರುವುದು ಸಹಜ’ ಎನ್ನುತ್ತಾರೆ.
 
ಭಾರತೀಯ ಸಂಗೀತ ಪ್ರಪಂಚ ಕಂಡ ಅಪೂರ್ವ ರತ್ನ, ಕಿಶೋರಿ ಅಮೋಣಕರ್. ಸಂಗೀತ ಕ್ಷೇತ್ರದಲ್ಲಿನ ಅವರ ಯಾತ್ರೆ ಹೋಲಿಕೆಗೆ ಮೀರಿದ್ದು ಹಾಗೂ ಸಂಗೀತಕ್ಕೆ ಅವರ ಕೊಡುಗೆ ಊಹೆಗೂ ಎಟುಕದ್ದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT