ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಸ್‌ರ ‘ಚಿಕ್ಕವರಿಗೆ ತಕ್ಕಂಥ ಪಾಠಗಳು’

Last Updated 8 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ
ಬೆಂಜಮಿನ್ ಹೋಲ್ಟ್ ರೈಸ್ ರಚಿಸಿದ ‘ಚಿಕ್ಕವರಿಗೆ ತಕ್ಕಂಥ ಪಾಠಗಳು’ ಕೃತಿಯ ಮೊದಲ ಆವೃತ್ತಿ ಪ್ರಕಟವಾದ ಬಗ್ಗೆ ಮಾಹಿತಿ ಇಲ್ಲ. ‘ವರ್ನೇಕ್ಯುಲರ್ ಸೀರೀಸ್’ ಅಡಿಯಲ್ಲಿ ಪ್ರಕಟವಾದ, ಐದನೇ ಮುದ್ರಣದ ಕಲ್ಲಚ್ಚು ಪ್ರತಿಯಾದ ಇದನ್ನು 1855ರಲ್ಲಿ ಬೆಂಗಳೂರಿನ ವೆಸ್ಲಿಯನ್ ಮಿಷನ್ ಪ್ರೆಸ್ಸಿನಲ್ಲಿ ಮುದ್ರಿಸಲಾಗಿದೆ. ಈ ಆವೃತ್ತಿಯಲ್ಲಿ 2000 ಪ್ರತಿಗಳನ್ನು ಮುದ್ರಿಸಿರುವುದು ಶಾಲೆಗಳಲ್ಲಿ ಇದರ ಬಳಕೆಯ ವ್ಯಾಪಕತೆಗೆ ನಿದರ್ಶನವಾಗಿದೆ. 58 ಪುಟಗಳ ಈ ಪುಸ್ತಕದ ಬೆಲೆ ಎರಡು ಆಣೆ. 
 
ಇಂಗ್ಲೆಂಡಿನ ಹ್ಯಾರೋ ಪಟ್ಟಣದಿಂದ 1843ರಲ್ಲಿ ಮದ್ರಾಸಿಗೆ ಬಂದ ಬಿ.ಎಚ್. ರೈಸ್ 1814ರಲ್ಲಿ ಜನಿಸಿದರು. 1887ರಲ್ಲಿ ಬೆಂಗಳೂರಿನಲ್ಲಿ ತೀರಿಕೊಂಡ ಬಿ.ಎಚ್. ರೈಸ್ ಅವರು – ಜರ್ಮನ್, ಪರ್ಷಿಯನ್, ಲ್ಯಾಟಿನ್, ತಮಿಳು, ತೆಲುಗು ಹಾಗೂ ಕನ್ನಡಗಳನ್ನು ಕಲಿತಿದ್ದ ಬಹುಶ್ರುತ ವಿದ್ವಾಂಸ.
 
ಅಚ್ಚರಿಯ ಸಂಗತಿ ಎಂದರೆ, ಇವನು ಕನ್ನಡ ಭಾಷೆಯನ್ನು ಏಳು ತಿಂಗಳಲ್ಲಿ ಕಲಿತಿದ್ದಲ್ಲದೆ ಕನ್ನಡದಲ್ಲಿ ಇಪ್ಪತ್ತಾರು ಪುಸ್ತಕಗಳನ್ನು ರಚಿಸಿದ್ದಾನೆ. ಇವರ ಕಾಲದಲ್ಲಿ ‘ಲಂಡನ್ ಮಿಷನ್ ಸಂಸ್ಥೆ’ ಉತ್ಕರ್ಷದ ಹಂತವನ್ನು ಮುಟ್ಟಿತ್ತು.
 
ಕ್ರೈಸ್ತ ಮತದ ಸೇವೆ, ಶೈಕ್ಷಣಿಕ ವಿಚಾರ, ವಿದ್ಯಾಭ್ಯಾಸ ಸುಧಾರಣೆ, ಪಠ್ಯಪುಸ್ತಕ, ಸ್ತ್ರೀಯರ ಏಳಿಗೆ ಮುಂತಾದ ಕ್ಷೇತ್ರಗಳಲ್ಲಿ ಇವರ ಸೇವೆ ಗಣನೀಯವಾದುದು. ಅತ್ಯಂತ ಹೆಚ್ಚಿನ ವಿವಿಧ ಬಗೆಯ ಶಾಲೆಗಳು ಆರಂಭವಾದದ್ದು ಇವರ ನೇತೃತ್ವ ಹಾಗೂ ಕಾಲಘಟ್ಟದಲ್ಲಿ. 
 
ರೈಸ್ ರಚಿಸಿದ, ಸಂಪಾದಿಸಿದ, ಸಂಕಲಿಸಿದ ಕೆಲವು ಪುಸ್ತಕಗಳು ಹೀಗಿವೆ: ಪವಿತ್ರ ಬೈಬಲ್ (1860), ಹೊಸ ಒಡಂಬಡಿಕೆ (1863), ದ ಎಪಿಟೋಮ್ ಆಫ್ ಬೈಬಲ್ (1866), ವೇದಸಂಗ್ರಹ (1844), ದೇಶಾಂತ್ರಿಯ ಪ್ರಯಾಣ (1861), ಪ್ರಶ್ನೋತ್ತರ ಬೋಧನೆ (1860), ಕನ್ನಡ ಸಂಗೀತಗಳು (1900), ಬಾಲಗೀತ (1870), ಧರ್ಮಜ್ಞಾನ ಮತ್ತು ಸಮಾಜಜ್ಞಾನ ಹಾಗೂ ಕಥಾಸಪ್ತತಿ (1840). 
 
ಪ್ರಸಕ್ತ ಕೃತಿಯು ಚಿಕ್ಕವರಿಗೆ ತಕ್ಕಂಥ ಪಾಠಗಳಾದ್ದರಿಂದ ಮತ್ತು ಮೊದಲನೆಯ ಭಾಗವಾದ್ದರಿಂದ, ರೈಸ್ ಇಲ್ಲಿ ಮಕ್ಕಳಿಗೆ ಕನ್ನಡವನ್ನು ಕಲಿಸುವ ಒಂದು ವಿಧಾನಶಾಸ್ತ್ರವನ್ನು ರೂಪಿಸುವ ಪ್ರಯೋಗ ಮಾಡಿದ್ದಾರೆ ಎನ್ನಬಹುದು.
 
ಪುಸ್ತಕದಲ್ಲಿ ಅಲ್ಲಲ್ಲಿ ಪಾಠಗಳಿಗೆ ಪೂರಕವಾಗಿ ಚಿತ್ರಗಳನ್ನು ಮದ್ರಿಸಿರುವುದು ಮಕ್ಕಳ ಪಾಠಗ್ರಹಿಕೆಗೆ ಅನುಕೂಲಕಾರಿಯಾಗಿದೆ. ಮೊದಲ ಹದಿಮೂರು ಪ್ರಕರಣಗಳಲ್ಲಿ ಕನ್ನಡ ಲಿಪಿಯ ವೈವಿಧ್ಯವನ್ನು ಭಿನ್ನ ರೀತಿಯಲ್ಲಿ ಹೇಳಲಾಗಿದೆ.
 
ವರ್ಣಮಾಲೆ, ಅಚ್ಚುಗಳಲ್ಲಿ ರೂಪಭೇದಗಳು, ವೊತ್ತಕ್ಷರಗಳಲ್ಲಿ ರೂಪಭೇದಗಳು, ಕನ್ನಡ ಅಂಕಿಗಳು, ಮೆಲ್ಲು (ಬಿಡಿ ಅಕ್ಷರಗಳ) ಕಾಗುಣಿತ, ವೊತ್ತು ಕಾಗುಣಿತ ಇವುಗಳನ್ನು ವಿವರವಾಗಿ ನೀಡಲಾಗಿದೆ. ಕಕಾರದಿಂದ ಳಕಾರದವರೆಗಿನ ಕಾಗುಣಿತವನ್ನು ಒಂದು ಅಕ್ಷರವೂ ಬಿಡದೆ ಕೊಡಲಾಗಿದೆ. 
 
ಮಕ್ಕಳಿಗೆ ಪದೇ ಪದೇ ಒಂದು ಅಕ್ಷರ ಕಣ್ಣಿಗೆ ಬೀಳುವುದರ ಮೂಲಕ ಅದರ ಆಕಾರ ಮನಸ್ಸಿನಲ್ಲಿ ನಿಲ್ಲುತ್ತದೆ ಎನ್ನುವ ಸೂತ್ರವನ್ನು ಇಲ್ಲಿ ಅನುಸರಿಸಲಾಗಿದೆ. ಒಂದೊಂದು ವ್ಯಂಜನಗಳಿಗೂ ತಲಕಟ್ಟು, ತಲಕೊಟ್ಟಿನ ದೀರ್ಘ, ಗುಡಿಸಿ, ಗುಡಿಸಿನ ದೀರ್ಘ, ಕೊಂಬು, ಕೊಂಬಿನ ದೀರ್ಘ, ಏತ್ವ, ಏತ್ವನ ದೀರ್ಘ, ಐತ್ವ, ಓತ್ವ, ಓತ್ವನ ದೀರ್ಘ, ಔತ್ವ  ಇತ್ಯಾದಿ ಪ್ರತಿ ಗುಣಿತಾಕ್ಷರ ಸಂಕೇತವನ್ನು ಹಚ್ಚಿ ತೋರಿಸಲಾಗಿದೆ. ಪಾರಂಪರಿಕ ಈ ಕ್ರಮ ಬಾಯಿಪಾಠ ಹೇಳುವ ಮೂಲಕದ್ದು. ಆ ಕಾಲದಲ್ಲಿ, ಈ ಪದ್ಧತಿಯೇ ಚಾಲ್ತಿಯಲ್ಲಿದ್ದು, ಇದು ಆ ಕಾಲಕ್ಕೆ ಕನ್ನಡ ಕಲಿಯುವ ಉತ್ತಮ ಕ್ರಮವೇ ಆಗಿತ್ತು. ಅದನ್ನೇ ರೈಸ್ ಇಲ್ಲಿ ಪಾಲಿಸಿದ್ದಾರೆ. 
 
‘ಎರಡಕ್ಷರದ ಮಾತುಗಳು’ ಹಾಗೂ ‘ಎರಡಕ್ಷರದ ಮಾತುಗಳನ್ನು ಕೂಡಿಸಿ ಹೇಳುವದು’ ಎನ್ನುವ ಶೀರ್ಷಿಕೆಗಳ ಪಾಠಗಳಿಗೆ ವರ್ಣಮಾಲೆಯಲ್ಲಿನ ಎಲ್ಲ ಅಕ್ಷರಗಳಿಂದ ಆರಂಭವಾಗುವ ಆನೆ, ಬಂಡೆ, ಬೆಳ್ಳಿ ಬಳೆ, ಬಿಸಿ ನೀರು ಮುಂತಾದ 268 ಶಬ್ದಗಳನ್ನು ಉದಾಹರಣೆಯಾಗಿ ನೀಡುತ್ತಾನೆ.
 
ಹಾಗೆಯೇ ಮೂರು ಅಕ್ಷರದ ಮಾತುಗಳಿಗೆ ಅಂಗಡಿ, ಕಣ್ಣೀರು, ಚಿನ್ನದ ಉಂಗುರ, ಅವರು ಎಲ್ಲಿಂದ ಬಂದರು ಮುಂತಾದ 245 ಶಬ್ದಗಳನ್ನು ನೀಡಿದ್ದರೆ, ನಾಲ್ಕು ಅಕ್ಷರದ ಮಾತುಗಳಿಗೆ ಅಂಧಕಾರ, ನಮಸ್ಕಾರ, ಉರಿಯುವ ದೀಪಗಳು, ವಿದ್ವಾಂಸನು ಶಾಸ್ತ್ರವನ್ನು ಹೇಳುತ್ತಾನೆ ಮುಂತಾದ 168 ಶಬ್ದಗಳನ್ನು ಉದಾಹರಿಸಿದ್ದಾನೆ.
 
ಐದಕ್ಷರದ ಮಾತುಗಳಿಗೆ ಭಗವಂತನು, ಸೋಮಾರಿಗಳು, ಮುಂತಾದ 66 ನಿದರ್ಶನಗಳನ್ನೂ ಆರಕ್ಷರದ ಮಾತುಗಳಿಗೆ ಆಭರಣಗಳು, ಹುಣಿಸೆಯಮರ ಮುಂತಾದ 52 ನಿದರ್ಶನಗಳನ್ನೂ ಹೇಳುತ್ತಾನೆ. ಇನ್ನು ಉಳಿದ ಒಂದರಿಂದ ಹದಿನೇಳು ಪಾಠಗಳಲ್ಲಿ ವಿವಿಧ ರೀತಿಯ 151 ವಾಕ್ಯಗಳನ್ನು ನೀಡಲಾಗಿದೆ.
 
ವ್ಯಾಕರಣದ ಸೂತ್ರಗಳ ರೀತ್ಯಾ ಭಾಷಾಬೋಧನೆಯಲ್ಲಿ ಅಕ್ಷರ, ಪದ ಹಾಗೂ ವಾಕ್ಯಗಳ ನೆಲೆಯನ್ನು ಬಳಸುವರು. ಇಲ್ಲಿಯೂ ಬಿ.ಎಚ್. ರೈಸ್ ಅದೇ ಕ್ರಮವನ್ನು ಪಾಲಿಸಿದ್ದಾನೆ.
 
ಒಂದೂವರೆ ಶತಮಾನಕ್ಕೂ ಹಿಂದೆ ಮಕ್ಕಳಿಗೆ ಕನ್ನಡ ಕಲಿಕೆ ವಿಚಾರದಲ್ಲಿ ಇಷ್ಟೊಂದು ಕಾಳಜಿಯಿಂದ ರೂಪುಗೊಂಡ ಪಠ್ಯವನ್ನು ರಚಿಸಿದ ಕೀರ್ತಿ ಬೆಂಜಮಿನ್ ಹೋಲ್ಟ್ ರೈಸ್‌ಗೆ ಸಲ್ಲುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT