ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ಓದು

Last Updated 8 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ
ಲೇಖಕಿ ಮಾಲತಿ ಪಟ್ಟಣಶೆಟ್ಟಿ ಅವರ ಮೂರನೆಯ ಕಥಾಸಂಗ್ರಹ ‘ಎಲ್ಲಾದರೂ ಬದುಕಿರು ಗೆಳೆಯಾ’. ತಮ್ಮ ಸುತ್ತಣ ಬದುಕಿನಿಂದ, ಪತ್ರಿಕೆಯ ಸುದ್ದಿಗಳಿಂದ ಕಥೆಯ ವಸ್ತುಗಳನ್ನು ತೆಗೆದುಕೊಂಡಿರುವುದಾಗಿ ಅವರು ಬರೆದುಕೊಂಡಿದ್ದಾರೆ.
 
ಸಂಕಲನಕ್ಕೆ ಹೆಸರು ಕೊಟ್ಟ ‘ಎಲ್ಲಾದರೂ ಬದುಕಿರು ಗೆಳೆಯಾ’ ಎಂಬ ಕತೆ ಕಳೆದುಹೋದ ಗೆಳೆಯನನ್ನು ಹುಡುಕುವುದಾಗಿದೆ. ಪರದೇಶದಲ್ಲಿ ನೌಕರಿಯಲ್ಲಿರುವ ಗೆಳೆಯ ಚಂದ್ರು ಕಣ್ಮರೆಯಾದ ಶೇಖರನನ್ನು ಹುಡುಕಲು ಸ್ವದೇಶಕ್ಕೆ ಬರುತ್ತಾನೆ.
 
ಗೆಳೆಯನ ಬದುಕಿನ ಕುರಿತ ವಿವರಗಳು ಸಿಗುತ್ತವೆಯೇ ಹೊರತು ಅವನು ಸಿಗುವುದಿಲ್ಲ. ಈ ಕತೆ ಅವರ ಬರವಣಿಗೆಯ ಕ್ರಮವನ್ನು ತೋರುತ್ತದೆ. ಮತ್ತು ಸಂಕಲನದ ಮಹತ್ವ, ವಿಶಿಷ್ಟ ಕಥೆಯಾಗಿದೆ.
 
ಮಾಲತಿಯವರ ಕತೆಗಳು ಮನುಷ್ಯನ ಹಲಬಗೆಯ ಹುಡುಕಾಟಗಳಾಗಿ ಪ್ರಕಟಗೊಳ್ಳುತ್ತವೆ. ಅದು ಕತೆಗಾರ್ತಿಯ ಹುಡುಕಾಟವೂ ಹೌದು. ‘ಹೊಳೆಯಿತೊಂದು ಬೆಳಕಿನ ಕಿರಣ’ ಕತೆ ವಿಜಯ ಇನಾಮದಾರ ಎಂಬ ಲೇಖಕನ ಬರವಣಿಗೆಯ ಹುಡುಕಾಟದ ಕತೆ.
 
ಆ ಲೇಖಕ ಕಾದಂಬರಿ ಬರೆಯಲು ತಟ್ಟನೆ ಸ್ಫೂರ್ತಿ ಪಡೆದುಕೊಳ್ಳುವ, ತನ್ನ ಬರವಣಿಗೆಯನ್ನು ಮತ್ತೆ ಕಂಡುಕೊಳ್ಳುವ ವಸ್ತು ಅದರದ್ದು. ಉತ್ತರ ಕರ್ನಾಟಕ ಭಾಷೆ, ಸರಳ ನಿರೂಪಣೆ ಇಲ್ಲಿನ ಕತೆಗಳಿಗೆ ಹೊಸ ಬಗೆಯ ಆವರಣವನ್ನು ಕೊಟ್ಟಿವೆ.
 
ಎಲ್ಲಾದರೂ ಬದುಕಿರು ಗೆಳೆಯಾ
(ಕಥೆಗಳು)
ಲೇ: ಮಾಲತಿ ಪಟ್ಟಣಶೆಟ್ಟಿ
ಪ್ರಕಾಶನ: ಲಡಾಯಿ ಪ್ರಕಾಶನ, ನಂ 21, ಪ್ರಸಾದ ಹಾಸ್ಟೇಲ್‌, ಗದಗ –582 101
ಪುಟ: 96
ಬೆ: ₹ 80
 
***
ಯಕ್ಷಗಾನ ಕವಿ ಕೆಂಪಣ್ಣ ಗೌಡ ಕವಿಯ ಮೂರು ಕಾವ್ಯಗಳಾದ ‘ಕರಿರಾಯ ಚರಿತ್ರೆ’, ‘ನಳ ಚರಿತ್ರೆ’, ‘ಶನಿಮಹಾತ್ಮೆ’ಗಳನ್ನು ಹಿರಿಯ ವಿದ್ವಾಂಸ ಹ.ಕ. ರಾಜೇಗೌಡ ಸಂಪಾದಿಸಿ ಕೊಟ್ಟಿದ್ದಾರೆ.

ಜನಪದ ಮೂಲದ ಕಾವ್ಯಗಳನ್ನು ಆಧರಿಸಿ ಯಕ್ಷಗಾನದ ದೇಸಿಶೈಲಿಯಲ್ಲಿ ರಚಿತವಾದ ಈ ಕಾವ್ಯಗಳ ಗಮಕಕ್ಕೆ ಅಪಾರ ಕೇಳುಗರಿದ್ದರು. ಗ್ರಾಮ್ಯ ಭಾಷೆ, ನುಡಿಗಟ್ಟು, ಜನಪದ ಪರಿಸರವನ್ನು ಬಳಸಿ ಕೆಂಪಣ್ಣ ಗೌಡ ಬರೆದಿರುವ ಈ ಕಾವ್ಯಗಳು ಭಾಷೆಯ ದೃಷ್ಟಿಯಿಂದಲೂ ಅಭ್ಯಾಸಕ್ಕೆ ಅರ್ಹವಾಗಿವೆ.
 
 
ಸಾಕಷ್ಟು ಸಂಶೋಧನೆ, ಕ್ಷೇತ್ರಕಾರ್ಯದಿಂದ ಸಂಪಾದಿತವಾಗಿರುವ ಈ ಕಾವ್ಯಸಂಪುಟ ಜನಪದ ಮತ್ತು ಕನ್ನಡ ಕಾವ್ಯದ ವಿದ್ಯಾರ್ಥಿಗಳಿಗೆ ಹಲವು ರೀತಿಯಲ್ಲಿ ಉಪಯುಕ್ತವಾಗಬಹುದು.
 
ಈ ಕಾವ್ಯಗಳಿಗೆ ವಿಸ್ತಾರವಾದ ಪ್ರವೇಶಿಕೆಯನ್ನು ಬರೆದಿರುವ ಲೇಖಕರು ಈ ಕಾವ್ಯಗಳ ಹಿನ್ನೆಲೆ, ಅವುಗಳ ಕತೆ, ಅವುಗಳ ಸೊಗಡನ್ನು ವಿವರಿಸಲು ಪ್ರಯತ್ನಿಸಿದ್ದಾರೆ.
 
ಈ ಮುನ್ನುಡಿಯಲ್ಲಿ ಕೊಟ್ಟಿರುವ ಕೆಂಪಣ್ಣ ಗೌಡ ಕವಿಯ ಕೆಲ ಹೋಲಿಕೆಗಳು ಹೀಗಿವೆ: ‘ಹುಲಿಯ ಮೀಸೆಯಲಿ ಉಯ್ಯಾಲೆಯಾಡುವ ಮೊಲನಂತೆ’, ‘ಕೆಂಡಕ್ಕೆ ಇರುವೆ ಮುತ್ತಿದಂತೆ’, ‘ಹಳೆಯ ಕೊಡೆಯಂತೆ ತಲೆಯ ಕೆದರಿದಳು’.
 
ಕೆಂಪಣ್ಣ ಗೌಡನ ಯಕ್ಷಗಾನ ಕಾವ್ಯಗಳು
ಸಂ: ಹ.ಕ. ರಾಜೇಗೌಡ
ಪ್ರಕಾಶನ: ಸಿವಿಜಿ ಪ್ರಕಾಶನ,
ನಂ. 70, 2ನೇ ಮುಖ್ಯರಸ್ತೆ,
ಜಬ್ಬಾರ್‌ ಬ್ಲಾಕ್‌, ವೈಯ್ಯಾಲಿಕಾವಲ್‌, ಬೆಂಗಳೂರು – 560 003
ಪುಟ: 740
ಬೆ: ₹ 600

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT