ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜ್ಞಾನದ ಪಾಠ ರೋಚಕವಾಗಿ ಬೋಧಿಸಿ

ಪ್ರೊ. ಅನುರಾಗ್‌ ಕುಮಾರ್, ನಿರ್ದೇಶಕ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ)
Last Updated 8 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ಇತ್ತೀಚೆಗೆ ನಡೆಸಿದ ಶೈಕ್ಷಣಿಕ ಸಂಸ್ಥೆಗಳ ರ್‌್ಯಾಂಕಿಂಗ್ ಸಮೀಕ್ಷೆಯಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ದೇಶದ ನಂಬರ್ ಒನ್ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸಂಸ್ಥೆಯ ನಿರ್ದೇಶಕ ಪ್ರೊ. ಅನುರಾಗ್‌ ಕುಮಾರ್ ಸಂಸ್ಥೆಯ ಹಿರಿಮೆ ಕುರಿತು ‘ಪ್ರಜಾವಾಣಿ’ ಜೊತೆ ಮನಬಿಚ್ಚಿ ಮಾತನಾಡಿದ್ದಾರೆ.

* ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ನಡೆಸಿದ ಶೈಕ್ಷಣಿಕ ಸಂಸ್ಥೆಗಳ ರ್ಯಾಂಕಿಂಗ್‌ ಸಮೀಕ್ಷೆಯಲ್ಲಿ, ಭಾರತೀಯ ವಿಜ್ಞಾನ ಸಂಸ್ಥೆ ದೇಶದಲ್ಲೇ ಮೊದಲ ಸ್ಥಾನದ ಮನ್ನಣೆ  ಪಡೆಯಲು ಕಾರಣವಾದ ಅಂಶಗಳ ಬಗ್ಗೆ ವಿವರಿಸಿ.

ಮೂಲತಃ ನಮ್ಮದು ಸಂಶೋಧನೆ ಆಧರಿಸಿದ ಶೈಕ್ಷಣಿಕ ಸಂಸ್ಥೆ. ಸಂಶೋಧನೆಗಳನ್ನು ಹೇಗೆ ಕೈಗೊಳ್ಳಬೇಕು ಎಂಬ ನಿಟ್ಟಿನಲ್ಲಿ ಆಲೋಚಿಸುವುದನ್ನು ಹೇಳಿಕೊಡುತ್ತೇವೆ ಮತ್ತು ಆ ದಿಸೆಯಲ್ಲಿ ತರಬೇತಿ ನೀಡುತ್ತೇವೆ. ಸಂಸ್ಥೆಯ ಶ್ರೇಷ್ಠತೆಯನ್ನು ಕಾಪಾಡಿಕೊಂಡು ಬರಲು ಹಲವು ಸಂಗತಿಗಳ ಬಗ್ಗೆ ಎಚ್ಚರಿಕೆ ವಹಿಸುತ್ತಲೇ ಬಂದಿದ್ದೇವೆ. ಮುಖ್ಯವಾಗಿ ಬೋಧನಾ ಸಿಬ್ಬಂದಿ ಆಯ್ಕೆ ಪ್ರಕ್ರಿಯೆ ಬಗ್ಗೆ ಅತ್ಯಂತ ಎಚ್ಚರಿಕೆ ವಹಿಸುತ್ತೇವೆ. ವಿಶೇಷವಾಗಿ ಸಂಶೋಧಕರು, ಬೋಧಕರು ಮತ್ತು ವಿದ್ಯಾರ್ಥಿಗಳಿಗೆ ಒಂದು ಬಗೆಯ ಸ್ವಾತಂತ್ರ್ಯವಿರುತ್ತದೆ. ಒಬ್ಬ ಬೋಧಕ ತನ್ನದೇ ಆದ ಸ್ವತಂತ್ರ ವಿಧಾನದಲ್ಲಿ ಬೋಧಿಸುತ್ತಾನೆ, ಪರೀಕ್ಷೆಯನ್ನು ನಡೆಸುತ್ತಾನೆ. ವಿದ್ಯಾರ್ಥಿಗಳಿಗೆ ನಿಗದಿತ ಪಠ್ಯಕ್ರಮ, ಪರೀಕ್ಷಾ ವಿಧಾನ ಇರುವುದಿಲ್ಲ. ಯಾವುದೇ ಆಸಕ್ತ ಕ್ಷೇತ್ರ, ವಿಷಯದ ಮೇಲೆ ಸಂಶೋಧನೆ ನಡೆಸಬಹುದು.

* ಸಂಶೋಧನೆ ಮತ್ತು ಶೈಕ್ಷಣಿಕ ವಲಯದಲ್ಲಿ ಇನ್ನಷ್ಟು ಸುಧಾರಣೆಗೆ ಸಂಸ್ಥೆಯ ಮುಂದಿರುವ ಯೋಜನೆಗಳೇನು? ಯಾವುದಾದರೂ ಹೊಸ ಕ್ಷೇತ್ರ ಅಥವಾ ತಂತ್ರಜ್ಞಾನ ವಿಭಾಗದಲ್ಲಿ ಸಂಶೋಧನೆ ನಡೆಸಲು ಸಂಸ್ಥೆ ಉದ್ದೇಶಿಸಿದೆಯೇ?

ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ನಾವು ಹೊಸ ಹೊಸ ಸಂಶೋಧನೆ ಹಾಗೂ ಆವಿಷ್ಕಾರಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುತ್ತೇವೆ. ಹೊಸದಾಗಿ ಸೈಬರ್ ಭೌತಿಕ ವ್ಯವಸ್ಥೆ ಅಥವಾ ಸೈಬರ್ ಫಿಸಿಕಲ್ ಸಿಸ್ಟಮ್ ಬಗ್ಗೆ ಗಮನ ಕೇಂದ್ರೀಕರಿಸಿದ್ದೇವೆ. ನಮ್ಮದೇ ಆದ ಒಂದು ಕೇಂದ್ರವನ್ನು ಸ್ಥಾಪಿಸಿದ್ದೇವೆ. ಸೈಬರ್ ರಕ್ಷಣೆ ಕುರಿತು ಸಂಶೋಧನೆಗಳು ನಡೆಯುತ್ತಿವೆ. ಸೈಬರ್‌ ಫಿಸಿಕಲ್‌ ಸಿಸ್ಟಮ್‌ಗೆ ಹೆಚ್ಚಿನ ಆದ್ಯತೆ ನೀಡಲು ಪ್ರಧಾನಿ ನರೇಂದ್ರ ಮೋದಿ ಸಲಹೆ ನೀಡಿದ್ದಾರೆ. ಈ ಕ್ಷೇತ್ರವನ್ನು ಹೆಚ್ಚು ಸಶಕ್ತಗೊಳಿಸಲು ಸೂಚಿಸಿದ್ದಾರೆ. ಆ ನಿಟ್ಟಿನಲ್ಲಿ ಸಂಶೋಧನೆಗಳು ನಡೆದಿವೆ. ಅಲ್ಲದೆ, ಕ್ವಾಂಟಮ್ ತಂತ್ರಜ್ಞಾನ ಮತ್ತು ಕ್ವಾಂಟಮ್ ಕಂಪ್ಯೂಟಿಂಗ್, ನ್ಯಾನೊ ಸೈನ್ಸ್, ವಸ್ತು ವಿಜ್ಞಾನ, ಕಾಂಪಿಟೇಷನಲ್ ಸೈನ್ಸ್ ವಿಭಾಗಗಳನ್ನು ಬಲಪಡಿಸುವ ಕಾರ್ಯವೂ ನಡೆದಿದೆ. ಪ್ರಾಯೋಗಿಕವಾಗಿ ಎಲ್ಲ ಕ್ಷೇತ್ರಗಳಲ್ಲಿ ಹೊಸತನದ ಗಾಳಿ ಬೀಸುತ್ತಿದೆ.

* ಇತ್ತೀಚಿನ ದಿನಗಳಲ್ಲಿ ಮೂಲ ವಿಜ್ಞಾನ ಅಧ್ಯಯನದತ್ತ ಹೆಚ್ಚಿನ ಸಂಖ್ಯೆಯಲ್ಲಿ ಯುವಜನ ಆಕರ್ಷಿತರಾಗುತ್ತಿದ್ದಾರೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಿಂದ ವಿಮುಖರಾಗುತ್ತಿದ್ದಾರೆ. ಈ ಹಂತದಲ್ಲಿ ಮೂಲ ವಿಜ್ಞಾನ ಅಧ್ಯಯನ ನಡೆಸಲು ಸರ್ಕಾರ ಅಥವಾ ಶೈಕ್ಷಣಿಕ ಸಂಸ್ಥೆಗಳಿಗೆ ಐಐಎಸ್‌ಸಿ ಯಾವ ಸಲಹೆಗಳನ್ನು ನೀಡಲು ಬಯಸುತ್ತದೆ?

ಮಾಹಿತಿ ತಂತ್ರಜ್ಞಾನದ ಹಿಂದೆ ವಿಜ್ಞಾನ ಇದೆ ಎಂಬ ಸತ್ಯವನ್ನು ಮೊದಲಿಗೆ ಅರ್ಥ ಮಾಡಿಕೊಳ್ಳಬೇಕು. ಶುದ್ಧ ವಿಜ್ಞಾನ ಕ್ಷೇತ್ರದಲ್ಲಿರುವವರು ಯುವಜನರಿಗೆ ತಿಳಿಸಬೇಕಾದ ಬಹುಮುಖ್ಯ ಸಂಗತಿ ಎಂದರೆ, ಅಮೆರಿಕ, ಯುರೋಪ್ ಮತ್ತು ಚೀನಾದಲ್ಲಿ ನಡೆಯುತ್ತಿರುವ ಆವಿಷ್ಕಾರಗಳು ನಮ್ಮಲ್ಲೂ ಆಗಬೇಕೆಂದರೆ ಮೂಲ ವಿಜ್ಞಾನದತ್ತ ಗಮನಕೊಡಬೇಕು. ವಿಜ್ಞಾನ ಮತ್ತು ಎಂಜಿನಿಯರಿಂಗ್ ಬಗೆಗೆ ಸಕಾರಾತ್ಮಕ ಧೋರಣೆ ಬೆಳೆಯಬೇಕು. ಅಂದಹಾಗೆ, ಅಲ್ಲಿ ನಡೆಯುತ್ತಿರುವಂತೆ ಆವಿಷ್ಕಾರಗಳು ನಮ್ಮಲ್ಲಿ ನಡೆಯುತ್ತಿಲ್ಲ. ಇದು ಸಾಧ್ಯ ಆಗಬೇಕಿದ್ದರೆ ಮೂಲ ವಿಜ್ಞಾನಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು.

ನಾನು ವಿಜ್ಞಾನಿ ಅಲ್ಲ ಎಂಜಿನಿಯರ್. ಆದರೂ ನಾನು ಮೂಲ ವಿಜ್ಞಾನದ ಕೆಲಸವನ್ನೇ ಮಾಡುತ್ತೇನೆ. ದುರದೃಷ್ಟವೆಂದರೆ, ನಮ್ಮ ದೇಶದಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿರುವವರು ಪ್ರೋಗ್ರಾಮಿಂಗ್ ಬಗ್ಗೆ ಮಾತ್ರ ಹೆಚ್ಚಿನ ಗಮನ ಹರಿಸಿದ್ದಾರೆ. ಐ.ಟಿ.ಯಲ್ಲಿ ವಿಜ್ಞಾನದ ಅನ್ವಯದ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಮೂಲ ವಿಜ್ಞಾನದ ಬಗ್ಗೆ ಕೆಲಸವನ್ನೇ ಮಾಡುತ್ತಿಲ್ಲ. ಇದರಿಂದಾಗಿ ನಮ್ಮಲ್ಲಿ ಗೂಗಲ್, ಮೈಕ್ರೊಸಾಫ್ಟ್‌ನಂತಹ ಕಂಪೆನಿಗಳು ಬರಲಿಲ್ಲ. ಆದರೆ, ಐಐಎಸ್‌ಸಿ ಭಿನ್ನ ದಾರಿಯಲ್ಲಿ ಸಾಗುತ್ತಿದೆ. ಉದಾಹರಣೆಗೆ, ಲಘು ಯುದ್ಧ ವಿಮಾನದ (ಎಲ್‌ಸಿಎ)  ಆರಂಭಿಕ ಮಾದರಿ ಅಭಿವೃದ್ಧಿಪಡಿಸಿದ್ದು ನಾವೇ. ವಿಮಾನದ ವಿನ್ಯಾಸ ಮತ್ತು ಪರೀಕ್ಷೆ ಇಲ್ಲೇ ನಡೆಯಿತು. ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಕ್ಷಿಪಣಿ ತಂತ್ರಜ್ಞಾನ ಅಭಿವೃದ್ಧಿಪಡಿಸಲು ಆರಂಭಿಕ ಪ್ರಯೋಗಾಲಯವನ್ನು ಇದೇ ಕ್ಯಾಂಪಸ್‌ನಲ್ಲಿ ಆರಂಭಿಸಿದ್ದರು. ಸೂಪರ್‌ಸಾನಿಕ್ ಕ್ಷಿಪಣಿ ಬ್ರಹ್ಮೋಸ್ ಸಂಶೋಧನೆ ಮತ್ತು ಅಭಿವೃದ್ಧಿ ಇಲ್ಲೇ ಆಗಿದ್ದು. ಈಗ ಹೊಸದಾಗಿ ಹೈಪರ್‌ಸಾನಿಕ್‌ ಕ್ಷಿಪಣಿಯ ಸಂಶೋಧನೆ ನಡೆಯುತ್ತಿದೆ. ಮೆದುಳು ಸಂಶೋಧನಾ ಕೇಂದ್ರವೂ ಇದೆ. ವಿಜ್ಞಾನದ ಕೆಲಸಗಳು ಆಗಬೇಕಾಗಿರುವುದು ಈ ಧಾಟಿಯಲ್ಲಿ.

* ಸಾಕಷ್ಟು ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ವಿಜ್ಞಾನ ಬೋಧಿಸಲಾಗುತ್ತಿದೆ. ಆದರೆ, ಉದ್ಯೋಗಾವಕಾಶಗಳು ಕಡಿಮೆ ಇರುವುದರಿಂದ ಪ್ರತಿಭಾವಂತರು ಹೆಚ್ಚಿನ ಸಂಖ್ಯೆಯಲ್ಲಿ ವಿಜ್ಞಾನದ ಕೋರ್ಸ್‌ಗಳನ್ನು ಸೇರುತ್ತಿಲ್ಲ. ವಿಜ್ಞಾನ ಆಕರ್ಷಣೀಯವೆನಿಸಲು ಐಐಎಸ್‌ಸಿ ಈ ಸಂಸ್ಥೆಗಳಿಗೆ ನೀಡುವ ಸಲಹೆಗಳೇನು?

ವಿಜ್ಞಾನದ ವಿಷಯವನ್ನು ಶುಷ್ಕವಾಗಿ ಬೋಧಿಸಲಾಗುತ್ತಿದೆ ಮತ್ತು ಹೆಚ್ಚು ಪಠ್ಯ ಅಧಾರಿತವಾಗಿದೆ. ಆಕರ್ಷಣೀಯವಾಗಿ ವಿಜ್ಞಾನವನ್ನು ಬೋಧಿಸುತ್ತಿಲ್ಲ. ಅದರಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಹೇಳುತ್ತಿಲ್ಲ. ಹೀಗಾಗಿ ವಿಜ್ಞಾನ ಬೋರ್ ಹೊಡೆಸುತ್ತದೆ. ರೋಚಕತೆ ಮತ್ತು ಆಸಕ್ತಿ ಹುಟ್ಟಿಸುವ ವಿಧಾನದಲ್ಲಿ ವಿಜ್ಞಾನದ ಪಾಠ ಹೇಳಬೇಕಾಗುತ್ತದೆ. ರಾಜ್ಯದಲ್ಲಿ ಆರು ವರ್ಷಗಳ ಹಿಂದೆ ಶಿಕ್ಷಕರಿಗೆ ವಿಜ್ಞಾನದ ಪಾಠವನ್ನು ಹೇಗೆ ಹೇಳಿಕೊಡಬೇಕು ಎಂಬ ತರಬೇತಿ ಕಾರ್ಯಕ್ರಮವನ್ನು ಚಳ್ಳಕೆರೆಯಲ್ಲಿ ಆರಂಭಿಸಿದೆವು. ಈ ಕಾರ್ಯಕ್ರಮ ಯಶಸ್ವಿ ಆಗಿದೆ. ಪ್ರಯೋಗದ ಆಧಾರದಲ್ಲಿ ಹೇಗೆ ಬೋಧಿಸಬೇಕು ಎಂಬುದನ್ನು ಹೇಳಿಕೊಡುತ್ತಿದ್ದೇವೆ. ಪ್ರಯೋಗಗಳಿಗೆ ಹೆಚ್ಚಿನ ಒತ್ತು ನೀಡಿರುವುದರಿಂದ ಶಿಕ್ಷಣದ ಬೋಧನೆಯಲ್ಲಿ ಗಮನಾರ್ಹ ಸಕಾರಾತ್ಮಕ ಬದಲಾವಣೆ ಕಾಣಬಹುದಾಗಿದೆ. ಇಲ್ಲಿ ಕಲಿತು ಹೋದ ಶಿಕ್ಷಕರು ಶಾಲೆಗಳಲ್ಲಿ ಪ್ರಯೋಗಗಳ ಮೂಲಕ ಆಸಕ್ತಿದಾಯಕವಾಗಿ ಬೋಧಿಸುತ್ತಿದ್ದಾರೆ. ಈ ಕಾರ್ಯಕ್ರಮವನ್ನು ಇನ್ನಷ್ಟು ಬಲಪಡಿಸಲು ಪ್ರಧಾನಿ ಸಲಹೆ ನೀಡಿದ್ದು, ದೇಶದಲ್ಲಿ ಇನ್ನೂ 2-3 ಕಡೆಗಳಲ್ಲಿ ತರಬೇತಿ ಕೇಂದ್ರಗಳನ್ನು ಆರಂಭಿಸಲು ಉದ್ದೇಶಿಸಲಾಗಿದೆ.

* ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳ ನಡುವಿನ ಸಂಬಂಧ ಹೇಗಿದೆ? ಸಂಶೋಧನಾ ವಿದ್ಯಾರ್ಥಿಗಳಿಗೆ ಸ್ಫೂರ್ತಿ ನೀಡುವಲ್ಲಿ ಪ್ರಾಧ್ಯಾಪಕರ ಪಾತ್ರ ವಿವರಿಸಿ?

ನಮ್ಮ ಸಂಸ್ಥೆ ಇತರ ಸಂಸ್ಥೆಗಳಂತೆ ಅಲ್ಲ. ಭಾರತೀಯ ವಿಜ್ಞಾನ ಸಂಸ್ಥೆ ಗುರುಕುಲ ಮಾದರಿಯಲ್ಲಿ ಕೆಲಸ ಮಾಡುತ್ತದೆ. ಇಲ್ಲಿ ಬೋಧಕರು ವಿದ್ಯಾರ್ಥಿಗಳಿಗೆ ಅವರ ಆಸಕ್ತಿಯ ವಿಷಯದ ಬಗ್ಗೆ ಬೋಧಿಸುತ್ತಾರೆ. ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿ ಎಂಬ ಅಂತರ ಇರುವುದಿಲ್ಲ. ಮುಕ್ತ ಮತ್ತು ತೆರೆದ ವಾತಾವರಣದಲ್ಲಿ ವಿಷಯ ಕಲಿಕೆಗೆ ಮತ್ತು ಸಂಶೋಧನೆಗೆ ಅವಕಾಶವಿದೆ. ನಮ್ಮ ಸಂಸ್ಥೆ ವಿಶ್ವಗುಣಮಟ್ಟದ್ದು ಅಲ್ಲದಿದ್ದರೂ, ದೇಶದ  ಶ್ರೇಷ್ಠ ಸಂಸ್ಥೆಯಾಗಿ ಬೆಳೆದಿದೆ. ಸರ್ಕಾರದಿಂದ ಉತ್ತಮ ಪ್ರೋತ್ಸಾಹ ಸಿಗುತ್ತಿದೆ.

* ಮೂಲ ವಿಜ್ಞಾನದ ಮಹತ್ವ ಮತ್ತು ಅವಕಾಶಗಳ ಬಗ್ಗೆ ಯುವಜನರಲ್ಲಿ ಅರಿವು ಮೂಡಿಸುವ ವಿಶಿಷ್ಟ ಕಾರ್ಯಕ್ರಮಗಳ ಅನುಷ್ಠಾನ ಸಂಸ್ಥೆಯಿಂದ ಆಗಿದೆಯೇ?

ಈ ನಿಟ್ಟಿನಲ್ಲಿ ಸಂಸ್ಥೆ ವತಿಯಿಂದ ಸಾಕಷ್ಟು ಕೆಲಸಗಳು ನಡೆದಿವೆ. ಸಂಸ್ಥೆಯಲ್ಲಿ ನಡೆದ ಕೆಲಸಗಳನ್ನು  ಹೊರ ಜಗತ್ತಿಗೆ ತಲುಪಿಸುವ ಕೆಲಸವನ್ನೂ ಮಾಡಿದ್ದೇವೆ. ಓಪನ್ ಡೇ ಮೂಲಕ ಸ್ಥಳೀಯರು ಸಂಸ್ಥೆಗೆ ಬಂದು ಇಲ್ಲಿನ ಚಟುವಟಿಕೆಗಳನ್ನು ನೋಡಿ ತಿಳಿದುಕೊಳ್ಳಲು ಅವಕಾಶವಿದೆ. ಸಂಸ್ಥಾಪಕರ ದಿನಕ್ಕೂ ಸಾರ್ವಜನಿಕರು ಬರುತ್ತಾರೆ. ಹವಾಮಾನ ಬದಲಾವಣೆ ಕುರಿತು ಕಾಲೇಜು ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಕಾರ್ಯಕ್ರಮ ನಡೆಸುತ್ತೇವೆ. ನ್ಯಾನೊ ವಿಜ್ಞಾನ ವಿಭಾಗದವರು ದೇಶದ 200 ಕಾಲೇಜುಗಳಿಗೆ ತೆರಳಿ ಅವರಿಗೆ ನ್ಯಾನೊ ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆಗಳ ಬಗ್ಗೆ ಸಾಕಷ್ಟು ಮಾಹಿತಿ ನೀಡುವ ಕೆಲಸ ಆಗಿದೆ.

* ದೇಶದ ವಿಭಿನ್ನ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳ ಜತೆ ಸೇರಿ ಸಂಶೋಧನಾ ಚಟುವಟಿಕೆಗಳನ್ನು ವಿಸ್ತರಿಸುವ ಕಾರ್ಯ ನಡೆದಿದೆಯೇ?
ರಾಷ್ಟ್ರ ಮತ್ತು ಅಂತರ ರಾಷ್ಟ್ರೀಯ ಮಟ್ಟದ ಸಂಸ್ಥೆಗಳ ಜತೆ ಸೇರಿ ಸಾಕಷ್ಟು ಸಂಶೋಧನೆಗಳನ್ನು ನಡೆಸಿದ್ದೇವೆ. ಇಂಡೊ- ಫ್ರೆಂಚ್ ಸಹಯೋಗದಲ್ಲಿ ಶುದ್ಧ ಕುಡಿಯುವ ನೀರಿನ ಲಭ್ಯತೆ ಬಗ್ಗೆ ಸಂಶೋಧನೆಗಳು ನಡೆದಿವೆ. ಇಂತಹ ಸಾಕಷ್ಟು ಕೆಲಸಗಳು ನಡೆದಿವೆ.

* ಸಂಸ್ಥೆಯ ಚಟುವಟಿಕೆಗಳನ್ನು ವಿಸ್ತರಿಸಲು ಕೇಂದ್ರ ಸರ್ಕಾರದಿಂದ ಹೆಚ್ಚಿನ ಹಣಕಾಸು ನೆರವಿನ ನಿರೀಕ್ಷೆ ಇದೆಯೆ?
ಸರ್ಕಾರ ಸಾಕಷ್ಟು ನೆರವು ನೀಡುತ್ತಿದೆ. ಆದರೆ, ವಿಜ್ಞಾನ ಕ್ಷೇತ್ರಕ್ಕೆ ನೀಡುವ ಅನುದಾನದಲ್ಲಿ ಸಿಂಹಪಾಲು ಬಾಹ್ಯಾಕಾಶ ಮತ್ತು ರಕ್ಷಣಾ ವಲಯಕ್ಕೆ ಹೋಗುತ್ತದೆ.  ಶೈಕ್ಷಣಿಕ ವಲಯಕ್ಕೆ ಸಿಗುವುದು ಅತ್ಯಲ್ಪ. ಐಐಎಸ್‌ಸಿ ಮತ್ತು ಐಐಟಿಗಳಿಗೆ ಹೆಚ್ಚಿನ ಅನುದಾನ ನೀಡುವುದಾಗಿ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್ ಭರವಸೆ ನೀಡಿದ್ದಾರೆ.

ಚಿತ್ರ: ಮಂಜುನಾಥ ಎಂ.ಎಸ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT