ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಾಯದ ನೆರಳಿನಲ್ಲಿ 15 ಗುಡಿಸಲುಗಳು

Last Updated 9 ಏಪ್ರಿಲ್ 2017, 10:33 IST
ಅಕ್ಷರ ಗಾತ್ರ

ಬೈಂದೂರು:  ಕುಂದಾಪುರ ತಾಲ್ಲೂಕಿನ ಹೊಸಾಡು ಗ್ರಾಮದ ಮುಳ್ಳಿಕಟ್ಟೆಯಲ್ಲಿ ಆಲೂರು–ಗುಜ್ಜಾಡಿ ರಸ್ತೆಗಳು ರಾಷ್ಟ್ರೀ ಯ ಹೆದ್ದಾರಿ ಸೇರುವ ಜಂಕ್ಷನ್‌ ಬಳಿ ಚತುಷ್ಪಥ ಹೆದ್ದಾರಿ ನಿರ್ಮಾಣಕ್ಕಾಗಿ ಎತ್ತರದ ಗುಡ್ಡವನ್ನು ಕಡಿದಾಗ ಪ್ರಪಾತ ನಿರ್ಮಾಣವಾಗಿದೆ. ಇದರ ಅಂಚಿನಲ್ಲೇ 15 ಟೆಂಟ್‌ಗಳಲ್ಲಿ ಪುಟ್ಟ ಮಕ್ಕಳೊಂದಿಗೆ ಹಲವು ಕುಟುಂಬಗಳು ಅಪಾಯದ ಅಂಚಿನಲ್ಲಿ ಬದುಕು ಸಾಗಿಸುತ್ತಿವೆ. ಮೊದಲೇ ಆರ್ಥಿಕವಾಗಿ ದುರ್ಬಲರಾಗಿ ರುವ ಈ ಸಂಸಾರಗಳು ಈಗ, ವಾಸ್ತವವಾಗಿಯೂ ಬೀದಿಗೆ ಬೀಳುವ ಆತಂಕದಲ್ಲಿವೆ.

ಇಲ್ಲಿ ನೆಲೆಸಿರುವ ಕುಟುಂಬಗಳು ಹಾವೇರಿಯ ಶಿಗ್ಗಾಂವ್, ರಾಣೆಬೆನ್ನೂರು, ಶಿವಮೊಗ್ಗದ ಸಾಗರದಿಂದ 20 ವರ್ಷಗಳ ಹಿಂದೆ ವಲಸೆ ಬಂದವು. ‘ತಾವು ಪರಿಶಿಷ್ಟ ಜಾತಿಗೆ ಸೇರಿದವರು ಮತ್ತು ತಮ್ಮ ಬಳಿ ಬಿಪಿಎಲ್ ಕಾರ್ಡು ಇದೆ’ ಎಂದು ಹೇಳುತ್ತಾರೆ. ಈ 15 ಟೆಂಟ್‌ನಲ್ಲಿರುವ ಒಟ್ಟು 70 ಮಂದಿ ವಾಸವಿದ್ದಾರೆ. ಅವರಲ್ಲಿ 5 ಮಕ್ಕಳು ಸ್ಥಳೀಯ ಅಂಗನವಾಡಿಗೆ, 18 ಮಕ್ಕಳು ಸ್ಥಳೀಯ ಶಾಲೆಗೆ ಹೋಗುತ್ತಿದ್ದಾರೆ. ಗಂಡಸರಲ್ಲಿ ಹಲವರು ಸಂಗೀತಗಾರರು. ಹಾರ್ಮೋನಿಯಂ, ತಬಲ ಕುತ್ತಿಗೆಗೆ ಜೋತು ಹಾಕಿಕೊಂಡು ಮನೆಮನೆಗೆ ಹೋಗಿ ಹಾಡು ಹಾಡುತ್ತಾ ಹಣ ಸಂಪಾದಿಸುತ್ತಾರೆ. ಇನ್ನೂ ಕೆಲವರು ಕೂಲಿ ಮಾಡುತ್ತಾರೆ. ಮಹಿಳೆಯರು ಕೂಡ ಕೂಲಿ ಕೆಲಸ ಮಾಡಿ ಬದುಕು ಸಾಗಿಸುತ್ತಿದ್ದಾರೆ.

ಅವರೆಲ್ಲ ಹಲವು ವರ್ಷ ಸನಿಹದ ಖಾಸಗಿ ಜಮೀನಿನಲ್ಲಿ ನೆಲೆಸಿದ್ದರು. ಚತುಷ್ಪಥ ಹೆದ್ದಾರಿ ನಿರ್ಮಾಣದ ಕಾಮಗಾರಿ ನಿರ್ವಹಿಸುತ್ತಿರುವ ಐಆರ್‌ಬಿ ಇನ್ಫ್ರಸ್ಟ್ರಕ್ಚರ್ ಡೆವಲಪರ್ಸ್ ಸಂಸ್ಥೆ ಆ ಜಮೀನನ್ನು ಮಿಕ್ಸಿಂಗ್ ಸ್ಥಾವರಕ್ಕಾಗಿ ಲೀಸ್‌ಗೆ ಪಡೆದಾಗ ನಿರ್ವಸಿತರಾದ ಈ ಕುಟುಂಬಗಳು ಹೆದ್ದಾರಿಯ ಇನ್ನೊಂದು ದಿಕ್ಕಿನ ಎತ್ತರ ಪ್ರದೇಶದಲ್ಲಿ ವಸತಿ ಹೂಡಿದ್ದವು.

ಹೆದ್ದಾರಿ ವಿಸ್ತರಣೆಗಾಗಿ ಗುಡಿಸಲು ಗಳು ಇರುವ ಸ್ಥಳದ ವರೆಗೆ ಈ ಜಮೀನನ್ನು ಕೆಳಮಟ್ಟಕ್ಕೆ ನೇರವಾಗಿ ಕತ್ತರಿಸಿ ತಗ್ಗಿಸಿದ ಕಾರಣ ಗುಡಿಸಲುಗಳು ‘ಪ್ರಪಾತ’ದ ಅಂಚಿಗೆ ಬಂದಿವೆ. ಅವರಿರುವ ನೆಲಕ್ಕೆ ತಗಲಿಕೊಂಡು ಸ್ಥಳೀಯ ಪರಿಶಿಷ್ಟ ಜಾತಿಯ ಜನರ ವಸತಿಗಳಿವೆ. ಹಾಗಾಗಿ ಅವರು ಅತ್ತ ಸರಿಯುವಂತಿಲ್ಲ. ಅನ್ಯ ಸೂಕ್ತ ಸ್ಥಳ ಲಭ್ಯವಿಲ್ಲ. ಅದೃಷ್ಟವಶಾತ್ ಉತ್ತರದಲ್ಲಿ ಮಾತ್ರ ಓಡಾಡಲು ದಾರಿ ಇದೆ. 

ಕೋಲುಗಳನ್ನು ನೆಟ್ಟು, ಹಳೆಯ ಬಟ್ಟೆ, ಪ್ಲಾಸ್ಟಿಕ್ ಶೀಟ್ ಹೊದೆಸಿ ಮಾಡಿಕೊಂಡಿರುವ ಈ ಗುಡಿಸಲುಗಳಲ್ಲಿ ಈ ಕುಟುಂಬಗಳು ಬದುಕು ಕಳೆಯು ತ್ತಿದ್ದಾರೆ. ಅವುಗಳಲ್ಲೆ ಅವರ ದಿನಚರಿ ಸಾಗಬೇಕು. ಪುಟ್ಟ ಪುಟ್ಟ ಮಕ್ಕಳು ಇಲ್ಲಿವೆ. ಗುಡಿಸಲಿನ ಹೊರಕ್ಕೆ ಒಂದು ಅಡಿ ಮುಂದೆ ಕಾಲಿಟ್ಟರೆ ಅಥವಾ ಮಲಗಿದಾಗ ಪಕ್ಕಕ್ಕೆ ಹೊರಳಿದರೆ ಪ್ರಪಾತದಂತಹ ತಗ್ಗಿಗೆ ಬೀಳುವ ಅಪಾಯವೂ ಇದೆ. ಈ ಜನರ ಸಾವು– ಬದುಕಿನ ನಡುವಿನ ಅಂತರ ಒಂದೇ ಅಡಿ. ಇವರು ಕೆಲವು ಮೀಟರ್ ದೂರದ ಬೋರ್‌ವೆಲ್‌ನಿಂದ ನೀರು ತರುತ್ತಾರೆ. ಹತ್ತಿರದ ಗೇರುತೋಟ ಪುರುಷರ ಮತ್ತು ಮಹಿಳೆಯರ ಶೌಚಾಲಯ.

ಈಚೆಗೆ ತ್ರಾಸಿಯಲ್ಲಿ ನಡೆದ ಮಹಿಳೆಯರ ಮತ್ತು ಮಕ್ಕಳ ರಕ್ಷಣೆ ಕುರಿತ ಸಂವಾದ ಕಾರ್ಯಕ್ರಮಕ್ಕೆ ಈ ವಸತಿ ಪ್ರದೇಶದ ಜಂಬಣ್ಣ ಮಹಂತ, ಅಯ್ಯಪ್ಪ, ಚೆನ್ನಪ್ಪ ವಿಭೂತಿ, ಮಾರುತಿ, ಬಸವರಾಜ ಮಹಂತ ತೆರಳಿದ್ದರು. ‘ನಮಗೆ ನಿವೇಶನ, ಮನೆ ಕೊಡಿ’ ಎಂಬ ಅಹವಾಲು ಮುಂದಿಟ್ಟಿದ್ದರು.ಅಲ್ಲಿದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷ ಚಂದ್ರಶೇಖರ ಪೂಜಾರಿ ಅವರಿಂದ ಸೂಕ್ತ ಸ್ಪಂದನದ ಭರವಸೆ ದೊರಕಿತ್ತು. ಈ ಕುಟುಂಬಗಳು ಅಂಚಿನಿಂದ ಸಮು ದಾಯದ ನಡುವಿಗೆ ಬರುವುದು ಯಾವಾಗ ಎನ್ನುವುದನ್ನು ಕಾದು ನೋಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT