ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೇಲೆಂಬುದು ಸೋಲಲ್ಲ ಗೆಲುವಿನ ಗೆರೆ ದೂರವಿಲ್ಲ

Last Updated 9 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಪರೀಕ್ಷೆಯಲ್ಲಿ ನಪಾಸು ಅಥವಾ ಫೇಲು – ಇದು ಏನನ್ನು ಸೂಚಿಸುತ್ತದೆ ಎಂಬುದನ್ನು ಪ್ರತಿ ವಿದ್ಯಾರ್ಥಿ (ಅವನು ಪಾಸಾಗಿರಲಿ ಇಲ್ಲವೇ ಫೇಲಾಗಿರಲಿ) ಹಾಗೂ ಪೋಷಕರು ತಿಳಿದುಕೊಳ್ಳಬೇಕು. ಸಾಮಾನ್ಯವಾಗಿ ‘ಅಯ್ಯೋ! ಕಡಿಮೆ ಅಂಕ ಬಂದವರಿಗೇ ಕಷ್ಟ, ಇನ್ನು ಇವನು ಫೇಲಾಗಿ ಹೋಗಿದ್ದಾನೆ/ಳೆ! ಭವಿಷ್ಯ ಹಾಳಾಗಿ ಹೋದ ಹಾಗೆಯೇ’ ಎಂಬ ಉದ್ಗಾರ ಕೇಳಿ ಬರುತ್ತದೆ. ಅಂದರೆ, ಒಂದು ಪರೀಕ್ಷೆಯಲ್ಲಿ ನಪಾಸಾಗುವುದು ಅಷ್ಟು ದೊಡ್ಡ ಸಂಗತಿಯೇ? ಇರಲಿಕ್ಕಿಲ್ಲ. ಇದನ್ನು ತುಸು ವಿವರವಾಗಿ ನೋಡೋಣ:

ಮೊಟ್ಟಮೊದಲನೆಯದಾಗಿ, ನಮ್ಮ ಸದ್ಯದ ಪರೀಕ್ಷಾ ವ್ಯವಸ್ಥೆಯನ್ನು ಗಮನಿಸಬೇಕು.

ಈ ವ್ಯವಸ್ಥೆಯ ಪ್ರಕಾರ ಇಡೀ ವರ್ಷ ನನ್ನ ತಿಳಿವಳಿಕೆ ಏನೇ ಇರಲಿ, ಅಂತಿಮ ಪರೀಕ್ಷೆಯಲ್ಲಿ ನಾನು ಚೆನ್ನಾಗಿ ಬರೆದುಬಿಟ್ಟರೆ ನಾನು ಏಕಮೇವಾದ್ವಿತೀಯ! ವ್ಯವಸ್ಥೆಗೆ ಇದಕ್ಕಿಂತ ದೊಡ್ಡ ಐಬು ಇರಲು ಸಾಧ್ಯವೆ?! ಇದು ಒಬ್ಬ ವಿದ್ಯಾರ್ಥಿಯ ಇಡೀ ವರ್ಷದ ಸಾಧನೆಯನ್ನು ಪರಿಗಣಿಸಿ ಮಾಡಿದ ಮೌಲ್ಯಮಾಪನವಲ್ಲ. ಹೀಗಿರುವಾಗ ಇದನ್ನು ಗಂಭೀರವಾಗಿ ತೆಗೆದುಕೊಳ್ಳುವುದೇ ನಾವು ಮಾಡುವ ಬಹುದೊಡ್ಡ ತಪ್ಪಾಗುತ್ತದೆ.

ಫೇಲಾದವರು ಏನು ಮಾಡಬೇಕು
ಹತ್ತಾರು ವರ್ಷಗಳ ಹಿಂದಿನ ಮಾತು. ನೂರಾರು ಅಪ್ರತಿಮ ವಿಜ್ಞಾನಿಗಳು, ಸಾವಿರಾರು ಕುಶಲ ತಂತ್ರಜ್ಞರು ಸೇರಿ ನೂರಾರು ಕೋಟಿ ರೂಪಾಯಿ ವೆಚ್ಚ ಮಾಡಿ, ವರ್ಷ ವರ್ಷಗಳ ಕಾಲ ಹಗಲು ರಾತ್ರಿಯೆನ್ನದೆ ದುಡಿದು ನಿರ್ಮಿಸಿದ ರಾಕೆಟ್‍, ಕಕ್ಷೆಗೆ ಉಪಗ್ರಹವನ್ನು ಸೇರಿಸುವುದರ ಬದಲು ಬಂಗಾಳಕೊಲ್ಲಿಗೆ ಬಿದ್ದುಹೋಯಿತು! ಆಗ ಬಾಹ್ಯಾಕಾಶ ಸಂಸ್ಥೆಯವರು ಏನು ಮಾಡಿದರು? ತಜ್ಞರ ಒಂದು ಸಮಿತಿಯನ್ನು ಮಾಡಿದರು. ಅದಕ್ಕೆ ‘ದೋಷ ವಿಶ್ಲೇಷಣಾ ಸಮಿತಿ’ (ಫಾಲ್ಟ್ ಅನಾಲಿಸಿಸ್ ಕಮಿಟಿ) ಎಂದು ಹೆಸರಿಟ್ಟರು. ರಾಕೆಟ್ ಏಕೆ ಬಿದ್ದುಹೋಯಿತು ಎಂದು ಕಂಡುಹಿಡಿಯಲು ಸಮಿತಿಗೆ ಹೇಳಿದರು. ಒಂದೆರೆಡು ತಿಂಗಳಲ್ಲೇ ದೋಷ ಏನೆಂದು ತಿಳಿಯಿತು. ಸರಿಪಡಿಸಲಾಯಿತು. ಇದಾದ ನಂತರ ಹಿಂದಿರುಗಿ ನೋಡಿದ್ದೇ ಇಲ್ಲ! ಈಗ ಉಪಗ್ರಹಗಳ ಮೇಲೆ ಉಪಗ್ರಹಗಳನ್ನು ಕಕ್ಷೆಗೆ ಸೇರಿಸಲಾಗುತ್ತಿದೆ! ಇಂತಹ ಸಹಸ್ರ ಸಹಸ್ರ ಉದಾಹರಣೆಗಳು ನಮಗೆ ದೊರೆಯುತ್ತವೆ.

ಅವರು ‘ದೋಷ ವಿಶ್ಲೇಷಣಾ ಸಮಿತಿ’ ರಚನೆ ಮಾಡುವುದನ್ನು ಬಿಟ್ಟು ಸಂಸ್ಥೆಯನ್ನೇ ಮುಚ್ಚಿಬಿಟ್ಟಿದ್ದರೆ? ಹಾಗೇನಾದರೂ ಆಗಿದ್ದರೆ ದೇಶಕ್ಕೆ ಬಹುದೊಡ್ಡ ನಷ್ಟವಾಗುತ್ತಿತ್ತು.

ಅಲ್ಲಿ ಹೇಗೆ ದೋಷ ವಿಶ್ಲೇಷಣಾ ಸಮಿತಿ ರಚಿತವಾಯಿತೋ ನಾವು ಸಹ ಅದೇ ಕೆಲಸವನ್ನು ಮಾಡಬೇಕು. ಫೇಲಾದುದಕ್ಕೆ ಕಾರಣಗಳನ್ನು ಕಂಡುಕೊಳ್ಳಬೇಕು. ಅದಕ್ಕೆ ಬದಲಾಗಿ ಓದನ್ನೇ ನಿಲ್ಲಿಸಿಬಿಟ್ಟರೆ? ದೇಶಕ್ಕೆ ಇನ್ನೂ ದೊಡ್ಡ ನಷ್ಟವಾಗುತ್ತದೆ.

ಬಾಹ್ಯಾಕಾಶ ಸಂಸ್ಥೆ ಹೇಗೆ ಮಾಡಿತೋ ಹಾಗೆಯೇ ನಾವು ಸಹ ಪ್ರಾಮಾಣಿಕವಾಗಿ ‘ನಾನು ಏಕೆ ನಪಾಸಾದೆ’ ಎಂಬುದನ್ನು ಕಂಡುಹಿಡಿಯಬೇಕು. ‘ನಾನು ಸರಿಯಾಗಿ ಓದಿರಲಿಲ್ಲ’ ಎಂಬ ಸರಳ ಉತ್ತರ ಸಿಕ್ಕಿಬಿಟ್ಟರೆ, ಈ ಬಾರಿ ಓದಿ ಸರಿಪಡಿಸೋಣ! ಒಂದು ವೇಳೆ ನನಗೆ ಯಾವುದೋ ವಿಷಯ ಸರಿಯಾಗಿ ಅರ್ಥವಾಗದಿದ್ದಲ್ಲಿ ಅದಕ್ಕೇನು ಮಾಡಬೇಕೆಂದು ಬಲ್ಲವರನ್ನು ತಿಳಿದು ಶಿಸ್ತುಬದ್ಧವಾಗಿ ಅವರು ಹೇಳಿದ್ದನ್ನು ಜಾರಿಗೆ ತರೋಣ.

ಈ ಪ್ರಕ್ರಿಯೆಯಲ್ಲಿ ಪೋಷಕರು, ಶಿಕ್ಷಕರು ಎಲ್ಲರೂ ತೊಡಗಿಸಿಕೊಳ್ಳಬೇಕು. ಆಗ ಯಶಸ್ಸು ಕಟ್ಟಿಟ್ಟ ಬುತ್ತಿ. ಇಷ್ಟೇ ವಿಷಯ! ಜನ ಏನನ್ನುತ್ತಾರೆ ಎನ್ನುವುದರ ಬಗ್ಗೆ ಗಮನಹರಿಸಬೇಕಿಲ್ಲ. ಇನ್ಯಾರೋ ಎಷ್ಟೋ ಅಂಕ ಗಳಿಸಿದರು ಇತ್ಯಾದಿ ಸಂಗತಿಗಳು ಪರಿಗಣನೆಗೆ ಅರ್ಹ ವಿಷಯಗಳೇ ಅಲ್ಲ! ವಿಚಾರ ಮಾಡಿ ನೋಡಿ. 
ಸೋಲು ಎಂಬುದು ಅಸ್ತಿತ್ವದಲ್ಲೇ ಇರದ ವಿಷಯ: ನಪಾಸಾಗುವುದು ಒಂದು ಹಿನ್ನಡೆ ಅಷ್ಟೇ. ಅದು ಸೋಲಲ್ಲ. ಸಾಮಾನ್ಯವಾಗಿ ನಮಗೆ ಬೇಕಾದ ಫಲಿತಾಂಶ ಸಿಗದಿದ್ದಾಗ ನಾವು ಅದನ್ನು ಸೋಲು ಎಂದುಬಿಡುತ್ತೇವೆ. ನಮಗೆ ಬೇಕಾದ ಫಲಿತಾಂಶ ಬಂದಿಲ್ಲ, ಅಷ್ಟೆ. ಸೋಲೆಂದರೇನು? ನಿಜದಲ್ಲಿ ‘ಸೋಲು’ ಎಂಬುದು ಈ ಜಗತ್ತಿನಲ್ಲಿ ಅಸ್ತಿತ್ವವೇ ಇರದ ಸಂಗತಿ.

ತೇರ್ಗಡೆ ಎಂಬುದು ನಮಗೆ ಬೇಕಾದ ಫಲಿತಾಂಶವಾಗಿತ್ತು. ಅಂದರೆ ‘ತೇರ್ಗಡೆ’ಯಾಗಲು ಬೇಕಾಗಿದ್ದ ಯಾವುದೋ ಒಂದು ಅಂಶ ನನ್ನಲ್ಲಿರಲಿಲ್ಲ, (ಇದು ನನ್ನ ತಪ್ಪಲ್ಲದಿರಬಹುದು ಕೂಡ) ಆದ್ದರಿಂದ ನಾನು ತೇರ್ಗಡೆಯಾಗಲಿಲ್ಲ. ಆ ‘ಇಲ್ಲದ ಅಂಶ’ವನ್ನು ಪತ್ತೆ ಮಾಡಿ ಇದೋ ಸೇರಿಸುತ್ತೇನೆ, ಮುಂದಿನ ಬಾರಿ ತೇರ್ಗಡೆಯಾಗುತ್ತೇನೆ. ಜಗತ್ತಿನ ಎಲ್ಲ ಯಶಸ್ಸುಗಳ ಹೂರಣವೇ ಇದು.

ಲ್ಲವೂ ಒಂದಲ್ಲ ಒಂದು ಬಾರಿ, ಒಂದಲ್ಲ ಒಂದೆಡೆಯಲ್ಲಿ ನಪಾಸಾಗಿಯೇ ಬಂದಿರುತ್ತದೆ. ಅದಕ್ಕೆ ನಮ್ಮ ಹಿರಿಯರು ‘ಮರಳಿ ಯತ್ನವ ಮಾಡು, ಮರಳಿ ಯತ್ನವ ಮಾಡು, ಮಗುವೇ’ ಎಂದಿದ್ದು. ಅವರಿಗೆ ಗೊತ್ತಿತ್ತು – ಸೋಲೆಂಬುದು ಒಂದು ಮಿಥ್ಯೆ ಎಂದು. ನಮ್ಮ ಪ್ರಾಚೀನ ಸಾಹಿತ್ಯವೋ ‘ಪ್ರಯತ್ನವೇ ಪರಮೇಶ್ವರ’ ಎಂದುಬಿಟ್ಟವು! ಹಾಗಾಗಿ, ಸೋಲನ್ನು ಒಪ್ಪಿಕೊಳ್ಳುವುದು ಎಂದರೆ ಪರಮೇಶ್ವರನನ್ನು ಹೀಗಳೆಯುವುದು!

ಪೋಷಕರ ಪಾತ್ರ ಹಿರಿದು: ನಪಾಸಾದ ವಿದ್ಯಾರ್ಥಿಗಳ ತಂದೆ ತಾಯಿಗಳು ಹಾಗೂ ಶಿಕ್ಷಕರ ಪಾತ್ರ ಬಹುದೊಡ್ಡದು. ಪ್ರತಿಬಾರಿಯೂ ನಪಾಸಾದ ವಿದ್ಯಾರ್ಥಿಗಳನ್ನು ಪ್ರತ್ಯೇಕವಾಗಿ ಕೂರಿಸಿಕೊಂಡು ಮಾತನಾಡಿ, ಹುರಿದುಂಬಿಸಿ ಮತ್ತೆ ಪರೀಕ್ಷೆಗೆ ಕೂರಿಸಿ ಜಯಭೇರಿ ಹೊಡೆಸುವ ಅನೇಕ ಶಿಕ್ಷಕರಿದ್ದಾರೆ. ಇಂಥವರ ಸಂಖ್ಯೆ ಹೆಚ್ಚಬೇಕಿದೆ. (ಈ ನಿಟ್ಟಿನಲ್ಲಿ ಇತ್ತೀಚೆಗೆ ನಿಧನರಾದ ಪ್ರೊ. ಎಚ್. ಎಲ್ ಕೇಶವಮೂರ್ತಿಯವರನ್ನು ನೆನೆಯಲೇಬೇಕು).

ಷಕರು ನಮ್ಮ ಮನೆಯಲ್ಲಿ ಏನೋ ಆಗಬಾರದ್ದು ಆಗಿಹೋಗಿದೆ ಎಂದುಕೊಂಡು ಸೂತಕದ ಛಾಯೆಯಲ್ಲಿರುವುದು ಸರಿಯಲ್ಲ ಮಾತ್ರವಲ್ಲ, ಖಂಡನೀಯ ಕೂಡ. ಯಾವುದೇ ಕಾರಣಕ್ಕೂ ನಪಾಸಾದ ಮಗು ಮಂಕಾಗಲು ಬಿಡಬಾರದು. ಶಿಕ್ಷಿಸಲೂ ಬಾರದು. ಪ್ರೀತಿಯಿಂದ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಬೇಕು. ‘ಮುದ್ದಿಸಿದ್ದರಿಂದಲೇ ಅವನು ಹಾಳಾಗಿದ್ದು!’ ಎಂದು ಗುಡುಗುವ ಪೋಷಕರುಂಟು. ಪ್ರೀತಿಯೆಂದರೆ ಮುದ್ದಿಸಿ ಹಾಳುಮಾಡುವುದಲ್ಲ. ಪ್ರೀತಿಯೆಂದರೆ ಅವನ ಜವಾಬ್ದಾರಿಯ ಅರಿವನ್ನು ಅವನಿಗೆ ಮೂಡಿಸುವುದು! ಪ್ರೀತಿಯೆಂಬುದೊಂದು ಪ್ರಚಂಡ ಶಕ್ತಿ! ಅದರಿಂದ ಅಸಾಧ್ಯವಾದುದೇ ಇಲ್ಲ.

ಇನ್ನು ಸ್ವಂತ ಮಕ್ಕಳಲ್ಲದೆ, ಬೇರೆಯವರ ಮಕ್ಕಳನ್ನು ನೋಡಿಕೊಳ್ಳುತ್ತಿರುವವರ ಜವಾಬ್ದಾರಿ ಇನ್ನೂ ಹೆಚ್ಚು.  ಆ ಮಕ್ಕಳು ಮಾನಸಿಕವಾಗಿ ಹೆಚ್ಚು ಸೂಕ್ಷ್ಮವಾಗಿರುತ್ತಾರೆ. ಪೋಷಕರ ಬದ್ಧತೆ ಇಲ್ಲಿ ಇನ್ನೂ ಹೆಚ್ಚಿನದನ್ನು ಬೇಡುತ್ತದೆ. ಈ ಎಲ್ಲ ಸಂದರ್ಭಗಳಲ್ಲಿ ಮಕ್ಕಳೊಂದಿಗೆ ಮಾತನಾಡಿ ಮೊದಲು ಅವರಿಗೆ ಸಮಾಧಾನ ಮಾಡಿ, ಅನಾಹುತವೇನೂ ಆಗಿಲ್ಲ ಎಂಬುದನ್ನು ಮನಗಾಣಿಸಬೇಕು.

ರ‍್ಯಾಂಕ್‌ ಬಂದಾಗ ಹೇಗೆ ಶಾಲೆ, ಪೋಷಕರು ಮತ್ತು ಇಲಾಖೆಗೆ ಯಶಸ್ಸಿನಲ್ಲಿ ಪಾಲಿದೆಯೋ ಹಾಗೇ ನಪಾಸಾದಾಗಲೂ ಈ ಎಲ್ಲರಿಗೂ ಪಾಲಿದೆ! ಅನಂತರ ಶಾಲೆಗೆ ಭೇಟಿ ನೀಡಿ, ಶಿಕ್ಷಕರೊಂದಿಗೆ ಮಾತನಾಡಿ ಮಗುವಿನ ಕೊರತೆಯನ್ನು ತಿಳಿದು ಸರಿಪಡಿಸುವ ಕಡೆ ಗಮನ ಕೊಡಬೇಕು. ಇದು ಮಗುವಿಗೆ ಜೀವನ ನಿರ್ವಹಣೆಯ ಕಲೆಯನ್ನು ಕಲಿಸುವ ಕಾರ್ಯವೂ ಆಗಬೇಕು. ಆಗುವುದೆಲ್ಲವೂ ಒಳ್ಳೆಯದಕ್ಕೇ!

‘ಮಗ ಫೇಲಾಯಿತೆಂದು ಸಪ್ಪೆ ಮುಖ ಮಾಡಿಕೊಂಡು ಕೂತಿದ್ದ. ದುಡ್ಡು ಕೊಟ್ಟು ಸಿನಿಮಾ ನೋಡಿ ಬಾ ಎಂದು ಓಡಿಸಿದೆ’ – ಇದು ಬೀಚಿಯವರ ಮಾತು! ಅವರು ಅಷ್ಟಕ್ಕೇ ಬಿಡಲಿಲ್ಲ. ಮುಂದೆ ಸಮರ್ಥ ಶಿಕ್ಷಕರಿಂದ ಪಾಠ ಹೇಳಿಸಿ ನಪಾಸಾದ ವಿಷಯಗಳಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆದು ತೇರ್ಗಡೆಯಾಗುವಂತೆ ಮಾಡುತ್ತಾರೆ. ಇದು ನಮಗೆ ಮಾರ್ಗದರ್ಶಿಯಾಗಬೇಕು.

ಸೌಲಭ್ಯಗಳ ಕೊರತೆ: ಎಲ್ಲ ಶಾಲಾ ಕಾಲೇಜುಗಳಿಗೂ ಎಲ್ಲ ಬಗೆಯ ಸೌಲಭ್ಯಗಳನ್ನು ಒದಗಿಸಲಾಗುವುದಿಲ್ಲ. ಒದಗಿಸುವ ಹೊತ್ತಿಗೆ ಹೊಸ ಬಗೆಯ ಸೌಲಭ್ಯಗಳು ನನಗೆಲ್ಲಿ ಸ್ಥಳ ಎಂದು ಸಾಲಿನಲ್ಲಿ ಕಾಯುತ್ತಿರುತ್ತವೆ. ಸೌಲಭ್ಯಗಳಿದ್ದ ಮಾತ್ರಕ್ಕೆ ಎಲ್ಲವೂ ಸರಿಯಾಗುತ್ತದೆ ಎಂದೇನೂ ಅಲ್ಲವಲ್ಲ! ಆದ್ದರಿಂದ ಇರುವ ಸೌಲಭ್ಯವನ್ನು ಯುಕ್ತವಾಗಿ ಬಳಸಿಕೊಂಡು ನಪಾಸನ್ನು ತಗ್ಗಿಸುವ ತಂತ್ರವನ್ನು ಇಲಾಖೆ ಕಂಡುಕೊಳ್ಳಬೇಕಾಗಿದೆ.

ಸರಿಸುಮಾರು ಶೇ 80ಕ್ಕೂ ಹೆಚ್ಚು ಶಿಕ್ಷಕರು ತಮ್ಮ ಕಾರ್ಯದಲ್ಲಿ ಸಮರ್ಥರಿದ್ದಾರೆ. ಇವರಿಗೆ ಸ್ಫೂರ್ತಿ ತುಂಬಿ ಹೊಸ ಹಾದಿ ತುಳಿಯುವಂತೆ ಇಲಾಖೆ ಪ್ರೇರೇಪಿಸಬೇಕಿದೆ, ಮಾತ್ರವಲ್ಲ ಆ ಹೊಸ ಹಾದಿಯನ್ನೂ ನಿರ್ಮಿಸಬೇಕಿದೆ.  ಇದು ಸುಲಭದ ಕೆಲಸವೇನೂ ಅಲ್ಲ, ಹಾಗೆಯೇ ಅಸಾಧ್ಯವೂ ಅಲ್ಲ.

***

ಶಿಕ್ಷಣ ಇಲಾಖೆ ಪಾಲೂ ಇದೆ
ವಿದ್ಯಾರ್ಥಿಗಳು ನಪಾಸಾಗುವುದನ್ನು ಕುರಿತಾಗಿ ಸಾಕಷ್ಟು ಚರ್ಚೆಗಳು ನಡೆಯಬೇಕಾಗಿದೆ. ಬಹಳ ಮುಖ್ಯವಾಗಿ ಶಿಕ್ಷಣ ತಜ್ಞರು ಸದ್ಯದ ಪರೀಕ್ಷಾ ವ್ಯವಸ್ಥೆಯ ಮೌಲ್ಯಮಾಪನ ನಡೆಸಬೇಕಾಗಿದೆ. ಕೇವಲ ಒಂದು ಪರೀಕ್ಷೆಯಲ್ಲಿ ಚೆನ್ನಾಗಿ ಬರೆದುಬಿಟ್ಟರೆ ಆ ತರಗತಿಯಿಂದ ತೇರ್ಗಡೆ ಎಂಬುದು ನಗೆಪಾಟಲಿನ ವಿಷಯ. ಜೊತೆಗೆ, ಇದು ಪ್ರಶ್ನೋತ್ತರ ಮಾಲಿಕೆ, ಅಪ್-ಟು-ಡೇಟ್‌ಗಳನ್ನು ಓದಿಸಿ ತೇರ್ಗಡೆಯಾಗಿಸುವ ಕೆಟ್ಟ ಪರಂಪರೆಗೆ ದಾರಿ ಮಾಡಿಕೊಟ್ಟಿದೆ. ಇದು ತೊಲಗಬೇಕು.

ಇನ್ನು ನಮ್ಮ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಸಾಮಾನ್ಯವಾಗಿ ರಾಜ್ಯದ ಒಟ್ಟಾರೆ ಫಲಿತಾಂಶ ಶೇ.50ರ ಆಸುಪಾಸಿನಲ್ಲಿರುತ್ತದೆ. ಅಂದರೆ ಅರ್ಧದಷ್ಟು ಜನ ನಪಾಸು! ಇದಕ್ಕೆ ಕಾರಣವೇನು? ನಪಾಸಾದ ವಿದ್ಯಾರ್ಥಿಗಳಲ್ಲಿ ಅನೇಕರ ಓದು ಆ ನಪಾಸಿಗೇ ಮುಕ್ತಾಯವಾಗುತ್ತದೆ. ಅವರೆಲ್ಲ ಮುಂದೇನು ಮಾಡುತ್ತಾರೆ? ಇದೊಂದು ಬಹಳ ಗಂಭೀರವಾದ ಪ್ರಶ್ನೆ. ಇಲಾಖೆ ತನ್ನನ್ನು ತಾನು ತೀವ್ರವಾಗಿ ವಿಮರ್ಶಿಸಿಕೊಳ್ಳಬೇಕಾದ ಪ್ರಶ್ನೆಯಿದು. ಹೀಗೇಕೆ? ಎಂಬುದನ್ನು ವಿಶ್ಲೇಷಿಸಿ ಕಾರಣ  ಕಂಡುಕೊಳ್ಳಬೇಕಾದ ತುರ್ತು ಅಗತ್ಯವಿದೆ. ಬಹಳ ಮುಖ್ಯವಾಗಿ ಪರೀಕ್ಷಾ ಪದ್ಧತಿಯನ್ನು ಬದಲಿಸುವ ನಿಟ್ಟಿನಲ್ಲಿ ತಜ್ಞರೊಡನೆ ಚಿಂತನೆಗಳನ್ನು ನಡೆಸಬೇಕಾಗಿದೆ. ಇದು ತುಸು ಸಮಯ ತೆಗೆದುಕೊಳ್ಳುವ ಕಾರ್ಯವೇ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT