ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಜೆಯ ದಿನಗಳನ್ನು ಕಳೆಯೋದು ಹೇಗೆ?

Last Updated 9 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಪರೀಕ್ಷೆಗಳೆಲ್ಲಾ ಮುಗಿದು ರಜಾದಿನಗಳು ಆರಂಭವಾಗಿವೆ. ಎರಡು ತಿಂಗಳ ಈ ರಜೆಯನ್ನು ಹೇಗೆ ಕಳೆಯಬೇಕೆಂಬ ಯೋಚನೆ ಮಕ್ಕಳಲ್ಲಿ ಮೂಡುವುದು ಸಹಜ.  ಆದರೆ ರಜೆಯಲ್ಲಿ ಬರೀ ಆಟವಾಡಿಕೊಂಡು ಕಾಲಹರಣ ಮಾಡುವ ಬದಲು, ರಜೆಯನ್ನು ಸದುಪಯೋಗಪಡಿಸಿಕೊಳ್ಳುವ ಬಗ್ಗೆ ಮಕ್ಕಳು ಯೋಚಿಸಬೇಕು.

ರಜಾದಿನಗಳನ್ನು ಕ್ರಿಯಾಶೀಲರಾಗಿ ಕಳೆಯಬೇಕು. ಅದನ್ನು ಉಲ್ಲಸಿತರಾಗಿ ಕಳೆಯುವ ಜೊತೆಗೆ, ಮುಂದಿನ ಶೈಕ್ಷಣಿಕ ವರ್ಷಕ್ಕೂ ಈ ರಜೆ ತಯಾರಿಯಂತಿರಬೇಕು. ರಜೆಯನ್ನು ಅರ್ಥಪೂರ್ಣವಾಗಿ ಕಳೆಯುವ ಬಗ್ಗೆ ಕೆಲವು ದಾರಿಗಳನ್ನು ನೋಡೋಣ.

ಬಂಧುಗಳ ಮನೆಗೆ ಭೇಟಿ
ನೀವು ನಗರವಾಸಿಗಳಾಗಿದ್ದರೆ, ನಿಮ್ಮ ಪೋಷಕರ ಜೊತೆಗೆ ಹಳ್ಳಿಯ ಬಂಧುಗಳ ಮನೆಗೆ ಭೇಟಿಕೊಡಿ. ಅಲ್ಲಿ ಕೆಲವು ದಿನಗಳನ್ನು ಕಳೆಯಿರಿ. ಅಲ್ಲಿನ ಪ್ರಶಾಂತ ವಾತಾವರಣ, ಮಾಲಿನ್ಯಮುಕ್ತ ಪರಿಸರ ಹಾಗೂ ಅಲ್ಲಿಯ ಜನಗಳ ಜೀವನಶೈಲಿ ಹೇಗೆ ನಿಮ್ಮನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತದೆ ಎಂಬುದನ್ನು ಗಮನಿಸಿ. ಹಳ್ಳಿ ಮನೆಯಲ್ಲಿ ಅಜ್ಜಿ – ತಾತಾ ಇದ್ದರೆ ಅವರ ಬಳಿ ನೀತಿ ಕತೆಗಳನ್ನು ಕೇಳಿ ಹೇಳಿಸಿಕೊಳ್ಳಿ. ಹಳ್ಳಿ ಜೀವನ ನಗರದ ಯಾಂತ್ರಿಕತೆಯಿಂದ ನಿಮ್ಮನ್ನು ದೂರ ಉಳಿಯುವಂತೆ ಮಾಡಿ, ಮನಸ್ಸಿಗೆ ಸಂತಸ ದೊರೆಯುತ್ತದೆ. ನಿಮಗೆ ತಿಳಿಯದೇ ಇರುವ ಗ್ರಾಮೀಣ ಕ್ರೀಡೆಗಳನ್ನು ಕೂಡ ಹಳ್ಳಿಯಲ್ಲಿ ಕಲಿಯಬಹುದು. ಮನರಂಜನೆಯ ಜೊತೆ ಜೊತೆಗೆ ಮನಸ್ಸನ್ನು ವಿಕಾಸಗೊಳಿಸುವ ಹಲವು ಬಗೆಯ ಆಟಗಳು ಹಳ್ಳಿಗಳಲ್ಲಿ ಇಂದಿಗೂ ಚಾಲನೆಯಲ್ಲಿರುವುದನ್ನು ನೋಡಿ ನಿಮಗೆ ಅಚ್ಚರಿಯಾಗುತ್ತದೆ. ಮನಸ್ಸು ಉಲ್ಲಾಸಗೊಳ್ಳುತ್ತದೆ.

ಕಾಡ ನೋಡ ಹೋಗಿ...
ಬೇಸಿಗೆರಜದಲ್ಲಿ ನಿಮಗೆ ಪೋಷಕರೊಂದಿಗೆ ಪ್ರವಾಸಕ್ಕೆ ಹೋಗುವ ರೂಢಿಯಿದೆಯೇ?  ಹಾಗಾದರೆ ಈ ಬಾರಿ  ಪರಿಸರಕ್ಕೆ ಸಂಬಂಧಿಸಿದ ತಾಣಗಳಿಗೆ ಪ್ರವಾಸಕ್ಕೆ ಕರೆದುಕೊಂಡು ಹೋಗುವಂತೆ ಪೋಷಕರಲ್ಲಿ ವಿನಂತಿಸಿಕೊಳ್ಳಿ. ಬಂಡೀಪುರ, ನಾಗರಹೊಳೆ  ಮುಂತಾದ ವನ್ಯಜೀವಿ ಅಭಯಾರಣ್ಯ, ರಂಗನತಿಟ್ಟು ಪಕ್ಷಿಧಾಮ ಅಥವಾ ಬನ್ನೇರುಘಟ್ಟ ಉದ್ಯಾನವನಕ್ಕೆ ಪ್ರವಾಸಕ್ಕೆ ಹೋಗಿ.  ಅಲ್ಲಿ  ಸಂರಕ್ಷಣೆಗೆ ಒಳಗಾಗಿರುವ ಪ್ರಾಣಿ, ಪಕ್ಷಿಗಳ ಬಗ್ಗೆ ಹಾಗೂ ಅವುಗಳ ಸಂರಕ್ಷಣಾ ವಿಧಾನಗಳ ಬಗ್ಗೆ ಮಾಹಿತಿ ಸಂಗ್ರಹಿಸಿ. ನೀವು ಸಂಗ್ರಹಿಸಿದ ಮಾಹಿತಿಯನ್ನು ಒಂದು ನಕಾಶೆಯ ರೂಪದಲ್ಲಿ ಬರೆದು ಶಾಲೆಗೆ ಸಲ್ಲಿಸಿ. ಇಂಥ ಚಟುವಟಿಕೆಗಳು ನಿಮ್ಮಲ್ಲಿ ಪರಿಸರ ಜಾಗೃತಿಯನ್ನು ಉಂಟು ಮಾಡುವುದರ ಜೊತೆಗೆ, ಸಹಪಾಠಿಗಳಿಗೂ ಪ್ರೇರಣಾದಾಯಕವಾಗುತ್ತವೆ.

ಇದೇ ರೀತಿ ಐಸಿಹಾಸಿಕ ಪ್ರದೇಶಗಳಿಗೂ ಭೇಟಿ ನೀಡಿ, ಆ ಸ್ಥಳಗಳ ಇತಿಹಾಸವನ್ನು ತಿಳಿಯುವ ಪ್ರಯತ್ನ ಮಾಡಿ. ನೀವು ಸಂಗ್ರಹಿಸಿದ ಮಾಹಿತಿಯನ್ನು  ಪಠ್ಯವಸ್ತುವಿಗೆ ಪೂರಕವಾಗಿ ಬಳಸಿಕೊಳ್ಳಬಹುದು. ಅನುಭವಗಳನ್ನು ಸಹಪಾಠಿಗಳ ಜೊತೆಗೆ ಹಂಚಿಕೊಳ್ಳಬಹುದು.

ಬೇಸಿಗೆ ಶಿಬಿರಗಳ ಮೋಜು–ಕಲಿಕೆ
ಹಳ್ಳಿಯ ಭೇಟಿ ಸಾಧ್ಯವಾಗದೇ ಹೋದಲ್ಲಿ, ನೀವಿರುವ ಸ್ಥಳದಲ್ಲಿಯೇ ಯಾವುದಾದರೂ ಬೇಸಿಗೆ ಶಿಬಿರ ಇದೆಯೇ ಎಂಬುದನ್ನು ಪತ್ತೆ ಮಾಡಿ. ಈ ಶಿಬಿರಗಳಲ್ಲಿ ಸಾಮಾನ್ಯವಾಗಿ ಹಾಡು, ನೃತ್ಯಗಳ ಜೊತೆಗೆ ಚಿತ್ರ ಬಿಡಿಸುವುದು ಹಾಗೂ ಅನೇಕ ಬಗೆಯ ಕರಕುಶಲ ವಸ್ತುಗಳನ್ನು ತಯಾರಿಸುವುದನ್ನು ಕಲಿಸಲಾಗುತ್ತದೆ. ಓರಿಗ್ಯಾಮಿ, ಕಾಗದದ ಹೂಗಳ ತಯಾರಿಕೆ ಮುಂತಾದ ಅನೇಕ ವಿಷಯಗಳಲ್ಲಿ ತರಬೇತಿ ನೀಡಲಾಗುತ್ತದೆ. ನಿಮ್ಮ ಮಾನಸಿಕ ಬೆಳವಣಿಗೆಗೆ ಇಂಥ ಚಟುವಟಿಕೆಗಳು ಅತ್ಯವಶ್ಯ. ಬೇಸಿಗೆ ಶಿಬಿರಗಳ ವಿವರಗಳನ್ನು ಸಂಗ್ರಹಿಸಿ, ನಿಮ್ಮ ಅಭಿರುಚಿಗೆ ಪೂರಕವಾದಂಥ ಶಿಬಿರಕ್ಕೆ ಸೇರಿಕೊಳ್ಳಿ. ಇಂಥ ಶಿಬಿರಗಳಲ್ಲಿ ನೀವು ಕಲಿಯುವ ವಿಷಯಗಳು ನಿಮಗೆ ಮುಂದೆ ಎಂದಾದರೂ ಉಪಯೋಗಕ್ಕೆ ಬರಬಹುದು.

ವಿಜ್ಞಾನ ಶಿಬಿರಗಳ ಉಪಯುಕ್ತತೆ
ನಮ್ಮ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಸರ್ಕಾರ ವಿಜ್ಞಾನ ಕೇಂದ್ರಗಳನ್ನು ತರೆದಿದೆ. ಈ ಕೇಂದ್ರಗಳಲ್ಲಿ ಸಾಮಾನ್ಯವಾಗಿ ಪ್ರತಿ ವರ್ಷ ಏಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ವಿಜ್ಞಾನ ಶಿಬಿರಗಳನ್ನು ನಡೆಸಲಾಗುತ್ತದೆ. ಹತ್ತರಿಂದ ಹದಿನೈದು ದಿನಗಳ ಕಾಲ ನಡೆಯುವ ಈ ಶಿಬಿರಗಳಲ್ಲಿ ವಿಜ್ಞಾನದ ಕುತೂಹಲಕಾರಿ ವಿಷಯಗಳ ಕಡೆಗೆ ನಿಮ್ಮ ಗಮನವನ್ನು ಸೆಳೆಯುವ ಪ್ರಯತ್ನವನ್ನು ಮಾಡಲಾಗುತ್ತದೆ. ಅಲ್ಲದೆ, ನೀವೇ ನಿಮ್ಮ ಕೈಯಾರೆ ಮಾಡಬಹುದಾದ ಪ್ರಯೋಗಗಳ ಬಗ್ಗೆ ನಿಮಗೆ ಮಾಹಿತಿ ನೀಡಲಾಗುತ್ತದೆ.

ವಿಜ್ಞಾನಕ್ಕೆ ಸಂಬಂಧಿಸಿದ ಚಲನಚಿತ್ರಗಳನ್ನು ತೋರಿಸಲಾಗುತ್ತದೆ. ವಿಜ್ಞಾನಕ್ಕೆ ಸಂಬಂಧಿಸಿದ ಮಾದರಿಗಳನ್ನು ಪ್ರದರ್ಶನಕ್ಕೆ ಇಡಲಾಗಿರುತ್ತದೆ. ವಿಜ್ಞಾನದ ಬಗ್ಗೆ ನಿಮಗಿರುವ ಕುತೂಹಲಗಳನ್ನು ತಣಿಸಿಕೊಳ್ಳಲು ಈ ರೀತಿಯ ಶಿಬಿರಗಳು ನಿಮಗೆ ಅತ್ಯಂತ ಉಪಯುಕ್ತ. ನಗರ ಪ್ರದೇಶಗಳಲ್ಲಿ ಅನೇಕ ಖಾಸಗಿ ಸಂಸ್ಥೆಗಳೂ  ಇಂಥ ವಿಜ್ಙಾನದ ಶಿಬಿರಗಳನ್ನು ಏರ್ಪಡಿಸುತ್ತವೆ. ಉದಾಹರಣೆಗೆ, ಬೆಂಗಳೂರಿನಲ್ಲಿರುವ ಬೆಂಗಳೂರು ಸೈನ್ಸ್ ಫೋರಮ್ ಪ್ರತಿ ವರ್ಷ ಮಕ್ಕಳಿಗಾಗಿ ವಿಜ್ಞಾನ ಶಿಬಿರಗಳನ್ನು ನಡೆಸಿಕೊಂಡು ಬರುತ್ತಿದೆ. ಇಂಥ ಶಿಬಿರಗಳ ಬಗ್ಗೆ ಮಾಹಿತಿ ಸಂಗ್ರಹಿಸಿ, ನೋಂದಾಯಿಸಿಕೊಳ್ಳಿ. ನಿಮ್ಮ ಕುತೂಹಲಗಳನ್ನು ತಣಿಸಿಕೊಳ್ಳುವುದರ ಜೊತೆಗೆ ನಿಮ್ಮ ಬೌದ್ಧಿಕ ವಿಕಾಸವನ್ನೂ ಮಾಡಿಕೊಳ್ಳಬಹುದು.

ಸಾಹಿತ್ಯಾಸಕ್ತಿಗೆ ಇರಲಿ ಅವಕಾಶ
ಈ ರಜಾ ಅವಧಿಯಲ್ಲಿ ಕನ್ನಡದ ಕೆಲವು ಉತ್ಕೃಷ್ಟ ಕೃತಿಗಳನ್ನು ಓದುವ ನಿರ್ಧಾರ ತೆಗೆದುಕೊಳ್ಳಿ. ನಿಮ್ಮ ಪಠ್ಯಪುಸ್ತಕಗಳಲ್ಲಿ ಹೇಳಲಾಗಿರುವ ಕವಿಗಳ ಇನ್ನಿತರ ಕೃತಿಗಳನ್ನು ತರಿಸಿಕೊಂಡು ಓದಿ. ಕನ್ನಡದ ಖ್ಯಾತನಾಮರಾದ ಕುವೆಂಪು, ಶಿವರಾಮ ಕಾರಂತ ಮುಂತಾದವರ ಸಾಹಿತ್ಯ ಕೃತಿಗಳನ್ನು ಓದಿ ಆ ಮೂಲಕ ನಿಮ್ಮ ಭಾಷಾಪ್ರೌಢಿಮೆಯನ್ನು ಹೆಚ್ಚಿಸಿಕೊಳ್ಳಿ. ನಾಡಿನ ಹಲವಾರು ಸಾಧಕರ ಪರಿಚಯ ಮಾಡಿಕೊಡುವ ‘ಭಾರತ ಭಾರತಿ’ ಸಂಪುಟದ ಕಿರುಪುಸ್ತಕಗಳು ಈ ನಿಟ್ಟಿನಲ್ಲಿ ನಿಮಗೆ ಅತ್ಯಂತ ಉಪಯುಕ್ತ. ನಿಮ್ಮ ಶಾಲೆಯ ಗ್ರಂಥಾಲಯದಲ್ಲೋ ಅಥವಾ  ಸಾರ್ವಜನಿಕ ಗ್ರಂಥಾಲಯದಲ್ಲೋ ಈ ಪುಸ್ತಕ ಮಾಲಿಕೆ ನಿಮಗೆ ದೊರಕಬಹುದು.

ಹೆಚ್ಚಿನ ವಿಷಯಗಳನ್ನು ತಿಳಿದುಕೊಳ್ಳುವುದರ ಜೊತೆಗೆ ಭಾಷೆಯ ಮೇಲೆ ನಿಮ್ಮ ಹಿಡಿತವನ್ನು ಹೆಚ್ಚಿಸಿಕೊಳ್ಳುವುದಕ್ಕೂ ಇಂಥ ಅಧ್ಯಯನಗಳು ನಿಮಗೆ ನೆರವಾಗುತ್ತವೆ. ಇತ್ತೀಚಿನ ವರ್ಷಗಳಲ್ಲಿ ವಿಜ್ಞಾನದ ವಿವಿಧ ವಿಷಯಗಳಿಗೆ ಸಂಬಂಧಿಸಿದ ಅತ್ಯುತ್ತಮ ಕೃತಿಗಳು ಕನ್ನಡದಲ್ಲಿ ಪ್ರಕಟವಾಗುತ್ತಿವೆ. ವಿಜ್ಞಾನಿಗಳ ಸಂಶೋಧನೆಗೆ ಸಂಬಂಧಿಸಿದ ಕುತೂಹಲಕಾರಿ ಮಾಹಿತಿಗಳ ಜೊತೆಗೆ, ಸರಳವಾದ ಭಾಷೆಯಲ್ಲಿ ವೈಜ್ಞಾನಿಕ ವಿಷಯಗಳ ನಿರೂಪಣೆ ಕೊಡುವ ಇಂಥ ಪುಸ್ತಕಗಳನ್ನು ಓದುವುದರಿಂದ ನಿಮ್ಮ ಜ್ಞಾನ ಭಂಡಾರವನ್ನು ವಿಸ್ತರಿಸಿಕೊಳ್ಳಬಹುದು.

ಈ ರಜೆಯಲ್ಲಿ ಕನಿಷ್ಠ ಒಂದು ಕನ್ನಡದ ಸಾಹಿತ್ಯ ಕೃತಿ, ಇಂಗ್ಲಿಷ್‌ನ ಒಂದು ಕೃತಿ ಹಾಗೂ ವಿಜ್ಞಾನದ ಒಂದು ಪುಸ್ತಕವನ್ನು ಓದಿ ಮುಗಿಸುವ ನಿರ್ಧಾರ ತೆಗೆದುಕೊಂಡು ಅದನ್ನು ಜಾರಿಗೆ ತನ್ನಿ. ಇದರಿಂದ ನಿಮಗೆ ಎಷ್ಟರ ಮಟ್ಟಿಗೆ ಪ್ರಯೋಜನವಾಗುತ್ತದೆ ಎಂಬುದನ್ನು ನೀವೇ ಪರೀಕ್ಷಿಸಿಕೊಳ್ಳಿ.

ಬಿಡುವಿನ ಸಮಯವನ್ನು ಹಿಸ್ಟರಿ ಚಾನೆಲ್, ನ್ಯಾಷನಲ್ ಜಿಯೋಗ್ರಫಿಕ್ ಚಾನೆಲ್, ಅನಿಮಲ್ ಪ್ಲಾನೆಟ್ ಮುಂತಾದ ಚಾನೆಲ್‌ಗಳ ವೀಕ್ಷಣೆಗೆ ಮೀಸಲಿಡಿ. ಚಾರಿತ್ರಿಕ ಹಾಗೂ ವೈಜ್ಞಾನಿಕ ವಿಷಯಗಳ ಬಗ್ಗೆ ನಿಮ್ಮ ಆಸಕ್ತಿಯನ್ನು ಹೆಚ್ಚಿಸಿಕೊಳ್ಳಿ.

ಮುಂದಿನ ತರಗತಿಗೆ ಸಿದ್ಧತೆ
ಈ ರಜಾ ಅವಧಿಯಲ್ಲಿ ನೀವು ಮಾಡಬಹುದಾದ ಇನ್ನೊಂದು ಉಪಯುಕ್ತ ಕೆಲಸವೆಂದರೆ, ನಿಮ್ಮ ಮುಂದಿನ ತರಗತಿಗೆ ಪೂರಕವಾದ ಸಿದ್ಧತೆಯನ್ನು ಮಾಡಿಕೊಳ್ಳುವುದು. ನಿಮ್ಮ ಓರಗೆಯ ಹಿರಿಯ ವಿದ್ಯಾರ್ಥಿಗಳ ಸಹಾಯ ಪಡೆದು, ಅವರಿಂದ ನಿಮ್ಮ ಮುಂದಿನ ತರಗತಿಗಳ ಪುಸ್ತಕವನ್ನು ಎರವಲು ಪಡೆಯಬಹುದು; ನೀವು ಅಧ್ಯಯನ ಮಾಡಬೇಕಾಗಿರುವ ವಿಷಯಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಿ. ಇದರಿಂದ, ಮುಂದಿನ ತರಗತಿಯ ಅಧ್ಯಯನವನ್ನು ಯೋಜನಾಬದ್ಧವಾಗಿ ನಡೆಸಲು ನಿಮಗೆ ಸಾಧ್ಯವಾಗುತ್ತದೆ. ವಿಷಯಗಳ ಅಧ್ಯಯನ ಸುಲಭವೂ ಆಗುತ್ತದೆ. ರಜಾ ಅವಧಿಯಲ್ಲಿ ನೀವು ಈ ರೀತಿ ಗಳಿಸಿದ ಹೆಚ್ಚಿನ ಮಾಹಿತಿ ಹಾಗೂ ಜ್ಞಾನಶಾಲೆಯಲ್ಲಿ ನೀವು ವಿವಿಧ ಸ್ಪರ್ಧೆಗಳಲ್ಲಿ ಧೈರ್ಯವಾಗಿ ಭಾಗವಹಿಸಲು ನಿಮಗೆ ಪ್ರೇರೇಪಣೆ  ನೀಡುತ್ತದೆ. ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.

ಮೇಲೆ ಹೇಳಿದ ಎಲ್ಲ ಅಂಶಗಳನ್ನೂ ಈ ರಜಾ ಅವಧಿಯಲ್ಲಿ ಅಳವಡಿಸಿಕೊಳ್ಳಲು ನಿಮಗೆ ಸಾಧ್ಯವಾಗದೇ ಹೋಗಬಹುದು. ಇದರಲ್ಲಿ ಕೆಲವನ್ನಾದರೂ ಜಾರಿಗೆ ತರಲು ನಿಮಗೆ ಸಾಧ್ಯವಾದಲ್ಲಿ ನಿಮ್ಮ ವ್ಯಕ್ತಿತ್ವವನ್ನು ಅಭಿವೃದ್ಧಿಗೊಳಿಸಿಕೊಳ್ಳುವ ನಿಟ್ಟಿನಲ್ಲಿ ನೀವು ದೃಢವಾದ ಹೆಜ್ಜೆಗಳನ್ನು ಹಾಕಬಹುದು. ನಿಮ್ಮ ಮಾನಸಿಕ ಹಾಗೂ ಬೌದ್ಧಿಕ ವಿಕಾಸವನ್ನು ನೀವೇ ರೂಪಿಸಿಕೊಳ್ಳಬಹುದು. ನಿಮ್ಮಲ್ಲಿ ಉಂಟಾಗುವ ಬದಲಾವಣೆಗಳನ್ನು ನೀವೇ ಗಮನಿಸಿಕೊಳ್ಳಬಹುದು.

ರಜೆಯ ಅವಧಿಯಲ್ಲಿ ವೃಥಾ ಕಾಲಹರಣ ಮಾಡುವುದರ ಬದಲಿಗೆ ಇಂಥ ಉಪಯುಕ್ತ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ನಿಟ್ಟಿನಲ್ಲಿ ಯೋಚಿಸುತ್ತೀರಲ್ಲವೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT