ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಲೆಂಜ್‌ಗಳ ಸುಳಿಯಲ್ಲಿ ರಾಯಲ್

Last Updated 9 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

‘ಆರ್‌ಸಿಬಿ ತಂಡ ಈ ಸಲ ಕ್ವಾಲಿಫೈಯರ್ ಸುತ್ತು ತಲುಪಬಹುದಾ..’

ಏಪ್ರಿಲ್ 5ರ ನಂತರ ಬೆಂಗಳೂರಿನ ಕ್ರಿಕೆಟ್‌ ಪ್ರೇಮಿಗಳ ಚಾವಡಿಯಲ್ಲಿ ಚರ್ಚೆಯಾಗುತ್ತಿರುವ ವಿಷಯ ಇದು. ಟೂರ್ನಿ ಆರಂಭವಾಗುವವರೆಗೂ ‘ಈ ಸಲ ಆರ್‌ಸಿಬಿನೇ ಚಾಂಪಿಯನ್‌’ ಅನ್ನುತ್ತಿದ್ದವರ ಧ್ವನಿಯೂ ನಡುಗುತ್ತಿದೆ.

2008ರ ಐಪಿಎಲ್ ಆರಂಭವಾದಗಿನಿಂದಲೂ ಗೆಲ್ಲುವ ನೆಚ್ಚಿನ ತಂಡವೆಂದರೆ ಆರ್‌ಸಿಬಿಯೇ. ಆದರೆ, ಒಂಬತ್ತು ಟೂರ್ನಿಗಳಲ್ಲಿ ಪ್ರಶಸ್ತಿ ಗೆಲ್ಲಲು ತಂಡಕ್ಕೆ ಸಾಧ್ಯವೇ ಆಗಿಲ್ಲ. ಮೂರು ಬಾರಿ (2009, 2011, 2016) ರನ್ನರ್ಸ್ ಅಪ್ ಆಗಿದ್ದೇ ಉನ್ನತ ಸಾಧನೆ. ಯು.ಬಿ. ಸಮೂಹದ ಆರ್‌ಸಿಬಿ ಫ್ರಾಂಚೈಸ್‌ ಆರಂಭದಿಂದಲೂ ಖ್ಯಾತನಾಮ ಆಟಗಾರರೊಂದಿಗೆ ಕಣಕ್ಕಿಳಿಯುತ್ತಿರುವುದರಿಂದ ಅಭಿಮಾನಿಗಳಲ್ಲಿ ಇಂತಹ ನಿರೀಕ್ಷೆ ಮೂಡಲು ಕಾರಣವಾಗಿತ್ತು.

ರಾಹುಲ್ ದ್ರಾವಿಡ್. ಅನಿಲ್ ಕುಂಬ್ಳೆ, ಡೇನಿಯಲ್ ವೆಟೋರಿ, ಕೆವಿನ್ ಪೀಟರ್ಸನ್ ಮತ್ತು ಈಗ ವಿರಾಟ್ ಕೊಹ್ಲಿ ಅವರಂತಹ ದಿಗ್ಗಜರು ನಾಯಕರಾಗಿ ಮುನ್ನಡೆಸಿದ ತಂಡ ಇದು. ಆದರೆ ಪ್ರಶಸ್ತಿ ಅಂಚಿನಲ್ಲಿ ನಿರಾಸೆ ಅನುಭವಿಸುತ್ತಿದೆ.  

ಆದರೆ, ಭಾರತ ತಂಡವನ್ನು ಟೆಸ್ಟ್ ಕ್ರಿಕೆಟ್‌ನಲ್ಲಿ ಅಗ್ರಸ್ಥಾನಕ್ಕೇರಿಸಿರುವ ನಾಯಕ ವಿರಾಟ್ ಮೇಲೆ ಹೋದ ವರ್ಷ ಅಪಾರ ನಿರೀಕ್ಷೆಗಳಿದ್ದವು ಅವರು ಬಹುತೇಕ ಅದರಲ್ಲಿ ಯಶಸ್ವಿಯೂ ಆಗಿದ್ದರು. ತಂಡವನ್ನು ಫೈನಲ್‌ ವರೆಗೆ ತರುವಲ್ಲಿ ಅವರ ಕಾಣಿಕೆಯದ್ದೇ ಸಿಂಹಪಾಲು. ನಾಲ್ಕು ಸ್ಫೋಟಕ ಶತಕಗಳು ಇದ್ದ 973 ರನ್‌ಗಳನ್ನು ಕೊಳ್ಳೆ ಹೊಡೆದಿದ್ದರು. ಆದರೆ ಫೈನಲ್‌ನಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ತಂಡದ ಡೇವಿಡ್ ವಾರ್ನರ್ ನಾಯಕತ್ವ ಬಳಗವು ಬೌಲಿಂಗ್‌ನಲ್ಲಿ ಮೇಲುಗೈ ಸಾಧಿಸಿತ್ತು.  ಬ್ಯಾಟಿಂಗ್ ದೈತ್ಯ ಶಕ್ತಿ ಇಟ್ಟುಕೊಂಡಿದ್ದ ಆರ್‌ಸಿಬಿ ಬೌಲಿಂಗ್ ಮತ್ತು ಫೀಲ್ಡಿಂಗ್‌ನಲ್ಲಿ ಪೆಟ್ಟು ತಿಂದಿತ್ತು. ಆದರೆ ಈ ಬಾರಿ ‘ಗಾಯ’ದ ಸಮಸ್ಯೆ ತಂಡವನ್ನು ಕಾಡುತ್ತಿದೆ.

(ಎ.ಬಿ ಡಿವಿಲಿಯರ್ಸ್‌)

ಬಾರ್ಡರ್‌–ಗಾವಸ್ಕರ್ ಟ್ರೋಫಿ ಕ್ರಿಕೆಟ್ ಸರಣಿಯಲ್ಲಿ ಭುಜದ ಗಾಯ ಅನುಭವಿಸಿದ್ದ ವಿರಾಟ್ ಕೊಹ್ಲಿ, ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಎ.ಬಿ. ಡಿವಿಲಿಯರ್ಸ್‌, ಕೆ.ಎಲ್. ರಾಹುಲ್, ವೇಗದ ಬೌಲರ್ ಮಿಷೆಲ್ ಸ್ಟಾರ್ಕ್‌, ಇತ್ತೀಚೆಗೆ ಅಭ್ಯಾಸ ಮಾಡುವಾಗ ಬಿದ್ದು ಗಾಯಗೊಂಡ ಸರ್ಫರಾಜ್ ಖಾನ್ ಅವರು ಅಲಭ್ಯರಾಗಿದ್ದಾರೆ.

ಆದ್ದರಿಂದ ಆಲ್‌ರೌಂಡರ್ ಶೇನ್ ವಾಟ್ಸನ್‌ ಅವರು ಟೂರ್ನಿಯ ಮೊದಲ ಪಂದ್ಯದಲ್ಲಿತಂಡವನ್ನು ಮುನ್ನಡೆಸಿದ್ದರು. ಸದ್ಯದ ಪರಿಸ್ಥಿತಿಯಲ್ಲಿ ಕ್ರಿಸ್‌ ಗೇಲ್ ಮಾತ್ರ ಎದುರಾಳಿಗಳ ಎದೆಯಲ್ಲಿ ನಡುಕ ಹುಟ್ಟಿಸಬಲ್ಲ ಆಟಗಾರ. ಅವರೊಂದಿಗೆ ಮನದೀಪ್ ಸಿಂಗ್, ಕೇದಾರ್ ಜಾಧವ್, ಟ್ರಾವಿಸ್ ಹೆಡ್ ತಮ್ಮ ಸಾಮರ್ಥ್ಯವನ್ನು ತೋರಿದ್ದಾರೆ. ಆದರೆ ಕೆಳಕ್ರಮಾಂಕದಲ್ಲಿ ತಂಡಕ್ಕೆ ಆಸರೆಯಾಗಬಲ್ಲವರ ಕೊರತೆ ಕಾಡುತ್ತಿದೆ. ಸನ್‌ರೈಸರ್ಸ್‌ ತಂಡದ ಬಲಿಷ್ಠ ಬ್ಯಾಟ್ಸ್‌ಮನ್‌ಗಳ ಎದುರು ಟೈಮಲ್ ಮಿಲ್ಸ್‌ ಕೂಡ ಸಫಲರಾಗಲಿಲ್ಲ. ಈ ಬಾರಿ ₹ 12 ಕೋಟಿ ಪಡೆದು ತಂಡ ಸೇರಿರುವ ಮಿಲ್ಸ್‌ ಮೇಲೆ ಅಪಾರ ನಿರೀಕ್ಷೆ ಇದೆ. ತಂಡದಲ್ಲಿರುವ ಅನಿಕೇತ್ ಚೌಧರಿ, ಎಸ್. ಅರವಿಂದ್ ಅವರಿಗಿಂತಲೂ ಮಿಲ್ಸ್‌ ಉತ್ತಮ ಬೌಲರ್ ಎಂದು ಬಿಂಬಿಸಲಾಗಿತ್ತು. ಮೊದಲ ಪಂದ್ಯದಲ್ಲಿ ಸ್ಟುವರ್ಟ್‌ ಬಿನ್ನಿ ಬೌಲಿಂಗ್‌ನಲ್ಲಿ ಉತ್ತಮವಾಗಿ ಆಡಿದರೂ, ಬ್ಯಾಟಿಂಗ್‌ನಲ್ಲಿ ವಿಫಲರಾಗಿದ್ದರು.

(ಶೇನ್ ವಾಟ್ಸನ್‌)

ಯುವ ಆಟಗಾರರಿಗೆ ಸುವರ್ಣಾವಕಾಶ

ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲಿ ಆಡುವ ಅವಕಾಶ ಪಡೆಯುತ್ತಿರುವ ಯುವ ಆಟಗಾರರು ಮಿಂಚಿಬಿಟ್ಟರೆ ಅವರ ಕ್ರಿಕೆಟ್ ಜೀವನ ಉತ್ತುಂಗಕ್ಕೇರುವುದು ಖಚಿತ. ಅಂತಹ ಒಂದು ಅವಕಾಶ ಆರ್‌ಸಿಬಿ ತಂಡದ ಬೆಂಚಿನ ಹುಡುಗರಿಗೆ ಇದೆ.

ಸ್ಟಾರ್ಕ್ ಬದಲು ಸ್ಥಾನ ಪಡೆದಿರುವ ಅನಿಕೇತ್ ಚೌಧರಿ ಈ ನಿಟ್ಟಿನಲ್ಲಿ ಭರವಸೆ ಮೂಡಿಸಿದ್ದಾರೆ. ಅದೇ ರೀತಿ ಮನದೀಪ್ ಸಿಂಗ್, ಟ್ರಾವಿಸ್ ಹೆಡ್ ಕೂಡ ತಮ್ಮ ಪಾತ್ರವನ್ನು ನಿರ್ವಹಿಸಿದ್ದಾರೆ. ರಾಹುಲ್ ಬದಲಿಗೆ ಆಡುತ್ತಿರುವ ಕೇದಾರ್ ಕೂಡ ಕೀಪಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ಮಿಂಚಿದ್ದಾರೆ.

(ಕ್ರಿಸ್ ಗೇಲ್‌)

ಆದರೆ, ವಿರಾಟ್, ಎಬಿಡಿ ಅವರಂತೆ ದೊಡ್ಡ ಮೊತ್ತ ಕಲೆಹಾಕುವ ಮತ್ತು ಬೆನ್ನತ್ತುವ ದಿಟ್ಟತನದ  ಆಟಗಾರರ ಕೊರತೆಯಂತೂ ಇದೆ. ಕ್ರಿಸ್ ಗೇಲ್ ಮತ್ತು ಶೇನ್ ವಾಟ್ಸನ್‌ ಮಾತ್ರ ಆ ಹೊಣೆಯನ್ನು ನಿರ್ವಹಿಸಬಲ್ಲ ಸಮರ್ಥರು.

ಆದರೆ, ಗೇಲ್ ಅವರ ಫೀಲ್ಡಿಂಗ್ ಬಗ್ಗೆ ಈಗಲೂ ಟೀಕೆಗಳು ಇವೆ. ಅದೇ ರೀತಿ ಬಿನ್ನಿ ಬ್ಯಾಟಿಂಗ್ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಲು ಸಮರ್ಥರಾಗಿಲ್ಲ ಎಂದೂ ಹೇಳಲಾಗುತ್ತಿದೆ. ಈ ಲೋಪಗಳು ಸರಿಯಾದರೆ ದಿಗ್ಗಜರಿಲ್ಲದೆಯೂ ಆರಂಭಿಕ ಪಂದ್ಯಗಳಲ್ಲಿ ಗೆಲುವು ಸಾಧಿಸುವುದು ಸಾಧ್ಯವಾಗಬಹುದು.

ಎ.ಬಿ. ಡಿವಿಲಿಯರ್ಸ್‌ ಈ ಟೂರ್ನಿಯ ಬಹುತೇಕ ಪಂದ್ಯಗಳಿಂದ ಹೊರಗುಳಿಯುವುದು ಖಚಿತ, ಆರಂಭದ ಕೆಲವು ಪಂದ್ಯಗಳ ನಂತರ ವಿರಾಟ್, ರಾಹುಲ್, ಸರ್ಫರಾಜ್ ತಂಡಕ್ಕೆ ಮರಳಬಹುದು. ಅದಕ್ಕೂ ಮುನ್ನ ಆಯ್ಕೆದಾರರ ಕಣ್ಮನ ಸೆಳೆಯುವಂತಹ ಆಟವನ್ನು ಯುವ ಆಟಗಾರರು ಆಡಿದರೆ, ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಲು ಮರಳಿ ಬಂದವರೊಂದಿಗೆ ಪೈಪೋಟಿಯೊಡ್ಡುವ ಅವಕಾಶವೂ ಇದೆ. ಇಂತಹ ಬೆಳವಣಿಗೆಯೇನಾದರೂ ಆದರೆ, ಈ ಬಾರಿ ಪ್ರಶಸ್ತಿ ಗೆಲ್ಲುವುದರಿಂದ ಆರ್‌ಸಿಬಿಯನ್ನು ತಡೆಯಲು ಯಾರಿಂದಲೂ ಸಾಧ್ಯವಾಗಲಿಕ್ಕಿಲ್ಲ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT