ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎತ್ತರಕ್ಕೇರುವ ಭರವಸೆ

Last Updated 9 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಶಾಲಾ ದಿನಗಳಲ್ಲಿ ಬ್ಯಾಸ್ಕೆಟ್‌ಬಾಲ್‌, ಥ್ರೋ ಬಾಲ್ ಇತ್ಯಾದಿ ಹೊರಾಂಗಣ ಆಟದಲ್ಲಿ ತೊಡಗಿಸಿಕೊಳ್ಳುತ್ತಿದ್ದ ಹುಬ್ಬಳ್ಳಿಯ ಆ ಬಾಲಕಿ ಏಳನೇ ತರಗತಿಯಲ್ಲಿದ್ದಾಗ ಹುಬ್ಬಳ್ಳಿಯ ಮಹಾರಾಷ್ಟ್ರ ಮಂಡಳ ಟೇಬಲ್‌ ಟೆನಿಸ್ ಸಂಸ್ಥೆ ಆಯೋಜಿಸಿದ್ದ ಬೇಸಿಗೆ ಶಿಬಿರದಲ್ಲಿ ಪಾಲ್ಗೊಂಡಿದ್ದಳು. ಆದರೆ ಈ ಕ್ರೀಡೆಯಲ್ಲಿ ಆಸಕ್ತಿ ಮೂಡದ ಕಾರಣ ಕೆಲವೇ ದಿನಗಳಲ್ಲಿ ವಾಪಸಾದಳು. ಆದರೂ ಪಾಲಕರು ಸುಮ್ಮನಿರಲಿಲ್ಲ. ಎರಡು ವರ್ಷಗಳ ನಂತರ ಮತ್ತೆ ಬೇಸಿಗೆ ಶಿಬಿರಕ್ಕೆ ಕರೆದುಕೊಂಡು ಬಂದರು. ಈ ಬಾರಿ ಅವರ ಭರವಸೆ ಸುಳ್ಳಾಗಲಿಲ್ಲ. ಶಿಬಿರ ಮುಗಿದ ನಂತರವೂ ನಿತ್ಯದ ತರಬೇತಿಗೆ ಹಾಜರಾಗುವಷ್ಟರ ಮಟ್ಟಕ್ಕೆ ಬಾಲಕಿ ಆಸಕ್ತಿ ಮೂಡಿಸಿಕೊಂಡಿದ್ದಳು.

ನಂತರ ನಡೆದದ್ದೆಲ್ಲವೂ ಕ್ಷಿಪ್ರ ಬೆಳವಣಿಗೆ. ಉತ್ತರ ಕರ್ನಾಟಕದ ಟೇಬಲ್‌ ಟೆನಿಸ್‌ ಕ್ರೀಡೆಯ ಪ್ರತಿಭೆಯಾಗಿ ಬೆಳೆದ ಆ ಬಾಲಕಿಯ ಹೆಸರು ಸಹನಾ ಕುಲಕರ್ಣಿ. ಈಗ ಹುಬ್ಬಳ್ಳಿ ಬಿವಿಬಿ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿ. ಉತ್ತರ ಕರ್ನಾಟಕದಲ್ಲಿ ಮಹಿಳಾ ವಿಭಾಗದ ಟೇಬಲ್ ಟೆನಿಸ್‌ನಲ್ಲಿ ಹೆಸರು ಮಾಡಿರುವ ಬೆರಳೆಣಿಕೆಯ ಕ್ರೀಡಾಪಟುಗಳಲ್ಲಿ ಸಹನಾ ಕೂಡ ಒಬ್ಬರು. ಹುಬ್ಬಳ್ಳಿಯ ಗಾಯತ್ರಿ ಟಂಕಸಾಲಿ, ಸೋನಲ್ ಪ್ರಭಾಕರ್‌, ಸೋನು ಕಲ್ಯಾಣಿ, ಅಮೃತಾ ಮತ್ತು ಬೆಳಗಾವಿಯ ಕುಮುದಿ ಪಠಾಣಕರ್‌ ಅವರ ಸಾಲಿನಲ್ಲಿರುವ ಸಹನಾ ಸದ್ಯ ರಾಷ್ಟ್ರಮಟ್ಟದಲ್ಲಿ ಹೆಚ್ಚು ಗಮನ ಸೆಳೆದಿದ್ದಾರೆ.

ಕಳೆದ ಬಾರಿ ಅಖಿಲ ಭಾರತ ವಿದ್ಯಾರ್ಥಿ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದ ಸಹನಾ ಈ ಬಾರಿ ಅಂತರ ಎಂಜಿನಿಯರಿಂಗ್ ವಿಶ್ವವಿದ್ಯಾಲಯ ಟೇಬಲ್ ಟೆನಿಸ್‌ನ ಪ್ರಶಸ್ತಿ ಕೊರಳಿಗೇರಿಸಿಕೊಂಡಿದ್ದಾರೆ. ಮಲೇಷ್ಯಾದಲ್ಲಿ ಮುಂದಿನ ತಿಂಗಳು ನಡೆಯಲಿರುವ ಅಂತರರಾಷ್ಟ್ರೀಯ ವಿದ್ಯಾರ್ಥಿ ಒಲಿಂಪಿಕ್ಸ್‌ನ ಪ್ರಶಸ್ತಿ ಮೇಲೆ ಕಣ್ಣಿಟ್ಟು ಸತತ ಅಭ್ಯಾಸ ನಡೆಸುತ್ತಿದ್ದಾರೆ.

ತಡವಾಗಿ ಆರಂಭ; ವೇಗವಾಗಿ ಕಲಿಕೆ: ಒಂಬತ್ತನೇ ತರಗತಿಯಿಂದ ಟಿ.ಟಿ ಅಭ್ಯಾಸ ಆರಂಭಿಸಿದ ಸಹನಾ ಈ ಕ್ರೀಡೆಯ ತಂತ್ರಗಳನ್ನು ಬೇಗ ಕರಗತ ಮಾಡಿ
ಕೊಂಡರು. ಆಕ್ರಮಣಕಾರಿ  ಆಟ ಪ್ರದರ್ಶಿಸುವ ಅವರು ಪಾಯಿಂಟ್‌ ಗಳಿಕೆಗಾಗಿ ರ‍್ಯಾಲಿಯನ್ನು ಹೆಚ್ಚು ಹೊತ್ತು ಮುಂದುವರಿಸಲು ಬಯಸುವುದಿಲ್ಲ. ‘ಚೆಂಡನ್ನು ಆದಷ್ಟು ಬೇಗ ‘ಕಿಲ್‌’ ಮಾಡುವುದೆಂದರೆ ಎಲ್ಲಿಲ್ಲದ ಖುಷಿ’ ಎನ್ನುತ್ತಾರೆ ಅವರು.

ಸಹನಾ ಅವರ ಬ್ಯಾಕ್‌ಹ್ಯಾಂಡ್ ಹೊಡೆತಗಳು ಅಷ್ಟು ಪರಿಣಾಮಕಾರಿಯಲ್ಲ. ಬಲಿಷ್ಠ  ಫೋರ್‌ ಹ್ಯಾಂಡ್‌ ಹೊಡೆತಗಳಿಗೆ ಅವರು ಹೆಸರುವಾಸಿ. ಚೆಂಡನ್ನು ಸ್ಪಿನ್ ಮಾಡದೆ ನೇರವಾಗಿ (ಫ್ಲ್ಯಾಟ್‌) ಹೊಡೆಯುವುದು ಅವರ ವೈಶಿಷ್ಟ್ಯ. ಎದುರಾಳಿಯನ್ನು ತಬ್ಬಿಬ್ಬಾಗಿಸುವುದು ಕೂಡ ಇಂಥ ಹೊಡೆತಗಳೇ.

ತಡವಾಗಿ ಟೇಬಲ್ ಟೆನಿಸ್ ಕ್ಷೇತ್ರಕ್ಕೆ ಪ್ರವೇಶಿಸಿದ ಸಹನಾ ಅವರ ಬಳಿ ಈಗ ರಾಷ್ಟ್ರಮಟ್ಟದ 18 ಟ್ರೋಫಿಗಳು ಸೇರಿದಂತೆ 120ಕ್ಕೂ ಹೆಚ್ಚು ಪ್ರಶಸ್ತಿಗಳು ಮಿಂಚುತ್ತಿವೆ. ಮೂರು ವರ್ಷಗಳ ಹಿಂದೆ ರಾಜ್ಯ ರ‍್ಯಾಂಕಿಂಗ್‌ ಟೂರ್ನಿಯ ಜೂನಿಯರ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದ ಅವರು ನಂತರ ಸತತ ಮೂರು ವರ್ಷ ವಿಶ್ವವಿದ್ಯಾಲಯ ತಂಡವನ್ನು ಪ್ರತಿನಿಧಿಸಿದ್ದಾರೆ.

‘ಟೇಬಲ್‌ ಟೆನಿಸ್‌ ನನಗೆ ಈಗ ಜೀವಕ್ಕೆ ಸಮಾನ. ಕಾಲೇಜಿನಲ್ಲಿ ಸಮಯ ಸಿಕ್ಕಾಗಲೆಲ್ಲ ಆಡುತ್ತೇನೆ. ಮಹಾರಾಷ್ಟ್ರ ಮಂಡಳದಲ್ಲಿ ನಿತ್ಯ ಅಭ್ಯಾಸ ನಡೆಯುತ್ತದೆ. ಮೈಗೆ ಹುಷಾರಿಲ್ಲದಿದ್ದಾಗಲೂ ಕನಿಷ್ಠ ಅರ್ಧ ತಾಸು ಆಡದಿದ್ದರೆ ಬೇನೆ ಕಾಡಿದಂತೆ ಆಗುತ್ತದೆ’ ಎನ್ನುತ್ತಾರೆ ಸಹನಾ.

‘ಟೇಬಲ್ ಟೆನಿಸ್‌ನಲ್ಲಿ ದೇಶಕ್ಕೆ ಪದಕ ತಂದುಕೊಡಬೇಕೆಂಬ ಮಹದಾಸೆ ಇದೆ. ಇದಕ್ಕಾಗಿ ಈಗ ಕಠಿಣ ಅಭ್ಯಾಸ ನಡೆಸುತ್ತಿದ್ದೇನೆ’ ಎಂದು ಅವರು ಹೇಳುತ್ತಾರೆ.

**

ಪಾಲಕರ ಆಸಕ್ತಿಯೇ ಮುಖ್ಯ
ಮಕ್ಕಳು ಕ್ರೀಡೆಯಲ್ಲಿ ಬೆಳೆಯಬೇಕಾದರೆ ಪಾಲಕರ ಆಸಕ್ತಿಯೇ ಮುಖ್ಯವಾಗುತ್ತದೆ. ಸಹನಾ ಅವರ ಪಾಲಕರು ಈ ವಿಷಯದಲ್ಲಿ ಆದರ್ಶ ಮೆರೆದಿದ್ದಾರೆ. ಎಂಜಿನಿಯರಿಂಗ್ ಓದುತ್ತಿದ್ದರೂ ನಿತ್ಯ ಟೇಬಲ್ ಟೆನಿಸ್‌ ಅಭ್ಯಾಸಕ್ಕೆ ಕಳುಹಿಸುತ್ತಿರುವುದು ಅವರ ಶ್ರೇಷ್ಠತನ –ವಿಜಯ ಪೈ, ಎಂಎಂಟಿಟಿಎ ಗೌರವ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT