ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಟಿಐ ಹೊಸ ನಿಯಮಗಳು ಸಂಶಯ ನಿವಾರಣೆಯಾಗಲಿ

Last Updated 9 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ
ರಾಷ್ಟ್ರದಲ್ಲಿ ಮಾಹಿತಿ ಹಕ್ಕು ಕಾಯಿದೆ (ಆರ್‌ಟಿಐ) ಜಾರಿಯಾಗಿ  12 ವರ್ಷಗಳಾಗಿವೆ. ಸಾರ್ವಜನಿಕ ಆಡಳಿತವನ್ನು ಪಾರದರ್ಶಕವಾಗಿಸಿ ಸರ್ಕಾರವನ್ನು ಉತ್ತರದಾಯಿಯಾಗಿಸುವುದು ಈ ಕಾಯಿದೆಯ ಹಿಂದಿರುವ ಆಶಯ.  

ರಾಷ್ಟ್ರದಲ್ಲಿ ಇತ್ತೀಚಿನ ವರ್ಷಗಳಲ್ಲಿ ಭಾರಿ ಸುದ್ದಿ ಮಾಡಿದ  ಟೆಲಿಕಾಂ 2ಜಿ  ತರಂಗಾಂತರ ಹಂಚಿಕೆ, ಕಾಮನ್‌ವೆಲ್ತ್‌ ಗೇಮ್ಸ್‌  ಹಾಗೂ ಆದರ್ಶ್‌ದಂತಹ ಪ್ರಮುಖ ಭ್ರಷ್ಟಾಚಾರ ಹಗರಣಗಳನ್ನು ಬಯಲಿಗೆಳೆಯುವಲ್ಲಿ ಈ ಕಾಯಿದೆ ಸಹಕಾರಿಯಾಗಿತ್ತು.
 
ತಾವು ಜನಸಾಮಾನ್ಯರ ಪರಿಧಿಯಿಂದ ದೂರ ಇರುವುದು ಸಾಧ್ಯವಿಲ್ಲ  ಎಂಬುದನ್ನು ಅಧಿಕಾರ ಸ್ಥಾನಗಳಲ್ಲಿರುವ ಅತ್ಯಂತ ಶಕ್ತಿವಂತರಿಗೆ ತಿಳಿಸಿಹೇಳುವಂತಹದ್ದು  ಈ ಮಾಹಿತಿ ಹಕ್ಕು.
 
ಈ ಕಾಯಿದೆಯಿಂದಾಗಿ ಅದೆಷ್ಟೋ ಜನಪ್ರತಿನಿಧಿಗಳು, ಅಧಿಕಾರಿಗಳು ಜನರೆದುರು ನೈತಿಕವಾಗಿ ಬೆತ್ತಲಾಗಿದ್ದಾರೆ. ಇಂತಹ ಪ್ರಬಲ ಕಾಯಿದೆಯ ಅನುಷ್ಠಾನದ ನಿಯಮಗಳನ್ನು ಪುನರ್‌ರಚಿಸಲು ನಿರ್ಧರಿಸಿರುವುದಾಗಿ ಕೇಂದ್ರದ ಎನ್‌ಡಿಎ ಸರ್ಕಾರ ಕಳೆದ ವಾರ ಪ್ರಕಟಿಸಿದೆ.
 
ಅಷ್ಟೇ ಅಲ್ಲ  2005ರ ಆರ್‌ಟಿಐ ಕಾಯಿದೆಯ ಸೆಕ್ಷನ್ 27ರ ಅನ್ವಯ ಹೊಸ ಕರಡು ನಿಯಮಗಳನ್ನು ಸಿಬ್ಬಂದಿ ಹಾಗೂ ತರಬೇತಿ ಇಲಾಖೆಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಿ ­­­ಸಾರ್ವಜನಿಕರಿಂದ ಅಭಿಪ್ರಾಯಗಳನ್ನೂ ಆಹ್ವಾನಿಸಲಾಗಿದೆ.
 
ಏಪ್ರಿಲ್ 15ರ ಒಳಗೆ  ಸಾರ್ವಜನಿಕರು ತಮ್ಮ ಅಭಿಪ್ರಾಯಗಳನ್ನು ಕಳುಹಿಸಬೇಕಾಗಿದೆ. ಆರ್‌ಟಿಐ ನಿಯಮಗಳಲ್ಲಿ ಬದಲಾವಣೆ ಮಾಡಿದರೆ ಅದರಿಂದ ನಾಗರಿಕರಿಗೆ ಮಾಹಿತಿ ಪಡೆದುಕೊಳ್ಳುವುದು ಇನ್ನಷ್ಟು ಸುಲಭವಾಗಬೇಕು ಎಂಬುದು ಆಶಯ. ಆದರೆ ಹೊಸ ಕರಡು ನಿಯಮಗಳು, ಈ ಕಾನೂನನ್ನು ಬಳಸುವ ಬಗ್ಗೆಯೇ  ಜನರಲ್ಲಿ ಭೀತಿ ಹುಟ್ಟಿಸುವಂತಿವೆ ಎಂಬುದು ವಿಪರ್ಯಾಸ.  
 
ಎರಡು ನಿರ್ದಿಷ್ಟ ವಿಚಾರಗಳ ಬಗ್ಗೆ ನಾಗರಿಕರು ಹಾಗೂ ಆರ್‌ಟಿಐ ಕಾರ್ಯಕರ್ತರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಹೊಸ ಕರಡು ನಿಯಮಗಳ ಪ್ರಕಾರ, ಮಾಹಿತಿಗಾಗಿ ಸಲ್ಲಿಸಿದ ಅರ್ಜಿಯನ್ನು ವಾಪಸು ಪಡೆದುಕೊಳ್ಳಲು  ಅವಕಾಶವಿದೆ.  ಇಂತಹದೊಂದು ವಿಚಾರವನ್ನು  ಈ ಹಿಂದೆ ಯುಪಿಎ ಸರ್ಕಾರವೂ ಮಂಡಿಸಿದ್ದಾಗ ನಾಗರಿಕ ಸಮಾಜದಿಂದ ತೀವ್ರ ಪ್ರತಿರೋಧ ವ್ಯಕ್ತವಾದ ಕಾರಣ ಅದನ್ನು ಕೈಬಿಡಲಾಗಿತ್ತು.
 
ಮತ್ತೊಂದು ಅಂಶವಂತೂ,  ಆರ್‌ಟಿಐ ಅರ್ಜಿ ಸಲ್ಲಿಸುವವರಿಗೆ ಭೀತಿ ಹುಟ್ಟಿಸುವಂತೆಯೇ ಇದೆ.  ಮಾಹಿತಿ ಕೇಳಿ ಆರ್‌ಟಿಐ ಅರ್ಜಿ ಸಲ್ಲಿಸಿದವರು  ಒಂದು ವೇಳೆ ಮೃತಪಟ್ಟಲ್ಲಿ ಸಹಜವಾಗಿಯೇ  ಆರ್ಜಿ ಸಂಬಂಧದ ಕಲಾಪ ಅಂತ್ಯವಾಗುತ್ತದೆ ಎಂಬಂತಹ ಕರಡು ನಿಯಮ ಹೆಚ್ಚಿನ  ಕಳವಳಕ್ಕೆ ಕಾರಣವಾಗಿದೆ.

ಒತ್ತಡಗಳ ಕಾರಣ ಆರ್‌ಟಿಐ ಅರ್ಜಿ ಹಿಂತೆಗೆದುಕೊಳ್ಳುವ ಸ್ಥಿತಿ ಸೃಷ್ಟಿಯಾಗುವುದಿಲ್ಲ ಎನ್ನಲು ಏನು ಗ್ಯಾರಂಟಿ? ಹಾಗೆಯೇ ಅರ್ಜಿದಾರರ ಸಾವಿನ ನಂತರ ಅರ್ಜಿ ಮುಕ್ತಾಯಕ್ಕೆ ಸರ್ಕಾರ ಅವಕಾಶ ನೀಡುವುದರಿಂದ,  ತಮ್ಮನ್ನು ತಾವು ರಕ್ಷಿಸಿಕೊಳ್ಳಲು  ಹಿತಾಸಕ್ತ ಶಕ್ತಿಗಳು ಆರ್‌ಟಿಐ ಅರ್ಜಿದಾರರ ಹತ್ಯೆಗಳಿಗೆ ಮುಂದಾಗಬಹುದು ಎಂಬಂತಹ ಸಂಶಯಗಳನ್ನು ನಿವಾರಿಸುವವರು ಯಾರು? ಆದರೆ ಮಾಹಿತಿ ಹಕ್ಕು ವ್ಯಕ್ತಿಯ ಹಕ್ಕಾಗಿದ್ದು, ಸಂಬಂಧಿಸಿದ ಪ್ರಜೆಯ ಹತ್ಯೆಯೊಂದಿಗೆ ಇದು ಮುಕ್ತಾಯವಾಗುತ್ತದೆ ಎಂಬಂತಹ ವಾದ ಮುಂದಿಡಲಾಗುತ್ತಿದೆ. ಇದರಿಂದ ಮಾಹಿತಿ ಆಯೋಗಗಳ ಮುಂದೆ ಇತ್ಯರ್ಥಕ್ಕೆ ಕಾದಿರುವ ಅಸಂಖ್ಯ ಅರ್ಜಿಗಳ ಹೊರೆ ಕಡಿಮೆಯಾಗುತ್ತದೆ ಎಂಬಂತಹ ವಿವರಣೆ ಎಷ್ಟು  ಸಮರ್ಥನೀಯ?  
 
ಹಲವು ನಿಯಮಗಳು 2012ರ ನಿಯಮಗಳ ಪುನರಾವರ್ತನೆ ಎಂಬಂಥ ಕೇಂದ್ರ ಸರ್ಕಾರದ ಪ್ರತಿಪಾದನೆಯೂ ನಿಜ. ಈ ಹಿಂದಿನಿಂದಲೂ ಆರ್‌ಟಿಐ   ಪರಿಧಿಯಿಂದ ರಾಜಕೀಯ ಪಕ್ಷಗಳನ್ನು ದೂರ ಇಡಲು ಕಾಂಗ್ರೆಸ್ ಪಕ್ಷ ಸೇರಿದಂತೆ  ಎಲ್ಲಾ   ರಾಜಕೀಯ ಪಕ್ಷಗಳೂ ಹೋರಾಡಿಕೊಂಡೇ ಬಂದಿವೆ.  
 
ಈಗ ಸಾರ್ವಜನಿಕ ಆಡಳಿತದ ಹುಳುಕುಗಳನ್ನು ಹೊರ ತೆಗೆಯಲು ಹೆದರಿಸುವ ರೀತಿ ಆರ್‌ಟಿಐ ಕಾಯಿದೆಯನ್ನು ದುರ್ಬಲಗೊಳಿಸಲು ನಡೆಸುತ್ತಿರುವ ಪ್ರಯತ್ನ ಅನಪೇಕ್ಷಣೀಯ. ಈಗಾಗಲೇ ಈ  ಕಾಯಿದೆಯ ಅನುಷ್ಠಾನ ಹಂತದಲ್ಲಿ  ಹಲವಾರು ಸಮಸ್ಯೆ, ಸವಾಲುಗಳಿವೆ.

ಸುದೀರ್ಘ ಕಾಲ ರಾಷ್ಟ್ರದಲ್ಲಿ ಕೇಂದ್ರೀಯ ಮಾಹಿತಿ ಕಮಿಷನರ್ ಹುದ್ದೆಯೇ ಭರ್ತಿಯಾಗಿರಲಿಲ್ಲ. ನಮ್ಮ ರಾಜ್ಯದಲ್ಲೂ ಇದೇ ಸ್ಥಿತಿ.  ರಾಜ್ಯ ಮಾಹಿತಿ ಆಯೋಗಗಳಲ್ಲಂತೂ ಮೂಲಸೌಕರ್ಯ ಹಾಗೂ ಮಾನವ ಸಂಪನ್ಮೂಲ ಕೊರತೆಗಳು ಢಾಳಾಗಿವೆ.

ಇಂತಹ ಪ್ರತಿಕೂಲ ಸನ್ನಿವೇಶಗಳಲ್ಲಿ ಈ ಮಹತ್ವದ ಕಾಯ್ದೆಯ ಮುಖ್ಯ ಉದ್ದೇಶ ಇನ್ನೂ ಸಂಪೂರ್ಣವಾಗಿ ಈಡೇರಿಯೇ ಇಲ್ಲ. ನ್ಯಾಯ ಪಡೆಯುವುದಕ್ಕೆ ಇದು ಸಾರ್ವಜನಿಕರ ಸಾಧನವಾಗುವ ಬದಲಾಗಿ ಸಂಘ–ಸಂಸ್ಥೆಗಳು ಹಾಗೂ ಮಾಹಿತಿ ಹಕ್ಕು ಕಾರ್ಯಕರ್ತರ ಮಟ್ಟಿಗೆ ಸೀಮಿತವಾಗಿದೆ.
 
ಆದರೆ ಆರ್‌ಟಿಐ ಜನಜಾಗೃತಿಗಾಗಿ ಸರ್ಕಾರ ಕೂಡಾ  ಯಾವ ಕಾರ್ಯಕ್ರಮಗಳನ್ನೂ ರೂಪಿಸಿಲ್ಲ. ಒಬ್ಬರ ಹೆಸರಿನಲ್ಲೇ ನೂರಾರು ಅರ್ಜಿಗಳು ಸಲ್ಲಿಕೆಯಾಗುತ್ತಿವೆ ಎಂಬುದೂ ವಾಸ್ತವ.
 
ಸ್ವತಃ ಜನರೇ ಅದನ್ನು ಬಳಸುವ ಪರಿಪಾಠ ರೂಢಿಸಿಕೊಂಡಾಗ ಕಾಯಿದೆಯು ಪರಿಪೂರ್ಣವಾಗಿ ಜಾರಿಯಾದಂತಾಗುತ್ತದೆ. ಇಂತಹ ಸನ್ನಿವೇಶ ಸೃಷ್ಟಿಗೆ ಜನಜಾಗೃತಿ ಮಾಡುವ ಬದಲು ಕಾಯಿದೆಯನ್ನೇ ದುರ್ಬಲಗೊಳಿಸುವ ಸರ್ಕಾರದ ಪ್ರಯತ್ನ ಸರಿಯಲ್ಲ. ಈ ಬಗ್ಗೆ ಸಾರ್ವಜನಿಕರು ಎಚ್ಚೆತ್ತುಕೊಳ್ಳಬೇಕು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT