ಸಂಚಾರ ದಟ್ಟಣೆಗೆ ಹೈರಾಣಾದ ವಾಹನ ಸವಾರರು

ಆಮೆಗತಿಯಲ್ಲಿ ಮೇಲ್ಸೇತುವೆ ಕಾಮಗಾರಿ

ಹೊರವರ್ತುಲ ರಸ್ತೆಯ ಹೊಸಕೆರೆಹಳ್ಳಿ ಸಮೀಪದ ಕೆ.ಇ.ಬಿ ಜಂಕ್ಷನ್‌ನಲ್ಲಿ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿದೆ.

ಸೆೇತುವೆಯ ಕಾಮಗಾರಿ ಪ್ರಗತಿಯಲ್ಲಿರುವುದು

ಬೆಂಗಳೂರು: ಹೊರವರ್ತುಲ ರಸ್ತೆಯ ಹೊಸಕೆರೆಹಳ್ಳಿ ಸಮೀಪದ ಕೆ.ಇ.ಬಿ ಜಂಕ್ಷನ್‌ನಲ್ಲಿ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿದೆ.

ಮಾರ್ಚ್‌ 1ಕ್ಕೆ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಆದರೆ, ಒಂದು ತಿಂಗಳು ಕಳೆದರೂ ಕಾಮಗಾರಿ ಪೂರ್ಣಗೊಳ್ಳುವ ಲಕ್ಷಣಗಳು ಗೋಚರಿಸುತ್ತಿಲ್ಲ.

ಮೈಸೂರು ರಸ್ತೆ ಜಂಕ್ಷನ್‌ನಿಂದ ಸಿಲ್ಕ್‌ಬೋರ್ಡ್‌ವರೆಗಿನ ಹೊರ ವರ್ತುಲ ರಸ್ತೆಯನ್ನು ಸಿಗ್ನಲ್‌ ಮುಕ್ತಗೊಳಿಸುವ ಯೋಜನೆಯನ್ನು ನಗರೋತ್ಥಾನ ಅನುದಾನದಡಿ ಕೈಗೊಳ್ಳಲಾಗಿದೆ. ಇದರ ಭಾಗವಾಗಿ 300 ಮೀಟರ್‌ ಉದ್ದದ ಸೇತುವೆ ನಿರ್ಮಾಣ ಮಾಡಲಾಗುತ್ತಿದೆ.

₹17.82 ಕೋಟಿ ವೆಚ್ಚದ  ಸೇತುವೆ ನಿರ್ಮಾಣದ ಗುತ್ತಿಗೆಯನ್ನು ಎಂ. ವೆಂಕಟರಾವ್‌ ಇನ್ಫ್ರಾ ಪ್ರಾಜೆಕ್ಟ್‌ ಕಂಪೆನಿಗೆ ನೀಡಲಾಗಿತ್ತು. 2015ರ ಸೆಪ್ಟೆಂಬರ್‌ 1ರಂದು ಕಾಮಗಾರಿಗೆ ಚಾಲನೆ ನೀಡಲಾಗಿತ್ತು. 19 ತಿಂಗಳಿಂದ ಕಾಮಗಾರಿ ನಡೆಯುತ್ತಿದ್ದು, ಸದ್ಯ ಪಿಲ್ಲರ್‌ಗಳ ಮೇಲೆ ಬೀಮ್‌ಗಳನ್ನು (ಗರ್ಡರ್‌) ಇಡುವ ಕಾರ್ಯ ಪ್ರಗತಿಯಲ್ಲಿದೆ. ರಸ್ತೆ ವಿಭಜಕ,  ತಡೆಗೋಡೆ ನಿರ್ಮಾಣ, ಡಾಂಬರೀಕರಣ ಮತ್ತು ವಿದ್ಯುತ್‌ ದೀಪಗಳ ಅಳವಡಿಕೆ ಕೆಲಸಗಳು ಬಾಕಿ ಉಳಿದಿವೆ.

ದೂಳಿನ ಮಜ್ಜನ: ಮೇಲ್ಸೇತುವೆ ಕಾಮಗಾರಿಯಿಂದಾಗಿ ಈ ಭಾಗದಲ್ಲಿ ದೂಳಿನ ಸಮಸ್ಯೆ ಹೆಚ್ಚಾಗಿದೆ. ಇದರ ಅಕ್ಕಪಕ್ಕದ ಮನೆ, ಅಂಗಡಿಗಳು ದೂಳುಮಯವಾಗಿವೆ. ‘ಒಂದೂವರೆ ವರ್ಷದಿಂದ ಕಾಮಗಾರಿ ನಡೆಯುತ್ತಿದೆ. ಇನ್ನೂ ಕೆಲಸ ಪೂರ್ಣಗೊಂಡಿಲ್ಲ. ವಾಹನ ದಟ್ಟಣೆ ಒಂದು ಕಡೆಯಾದರೆ, ದೂಳಿನ ಸಮಸ್ಯೆ ಮತ್ತೊಂದೆಡೆ. ದೂಳು ನೇರವಾಗಿ ಮೂಗಿಗೆ ಬಡಿಯುತ್ತದೆ. ಅಂಗಡಿಯಲ್ಲಿ ಸರಿಯಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ’ ಎಂದು ಸ್ಥಳೀಯ ವ್ಯಾಪಾರಿ ಜಯರಾಮ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಸಂಚಾರ ದಟ್ಟಣೆ ಕಿರಿಕಿರಿ: ಹೊರವರ್ತುಲ ರಸ್ತೆಯಲ್ಲಿ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಬನಶಂಕರಿ, ಮೈಸೂರು ರಸ್ತೆ ಜಂಕ್ಷನ್‌ ಹಾಗೂ ಗಿರಿನಗರ, ಆವಲಹಳ್ಳಿ ಕಡೆಯಿಂದ ವಾಹನಗಳು ಈ ರಸ್ತೆಯ ಮಾರ್ಗವಾಗಿ ಸಂಚರಿಸುತ್ತವೆ. ಆದರೆ, ಸೇತುವೆಯ ಎರಡೂ ಬದಿಗಳಲ್ಲಿ ಕಿರಿದಾದ ರಸ್ತೆ ಇದೆ. ಇದರಿಂದ ವಾಹನಗಳು ಸಾಲುಗಟ್ಟಿ ನಿಲ್ಲುತ್ತವೆ. ಕೆರೆಕೋಡಿ ಮುಖ್ಯರಸ್ತೆಯ ಸಿಗ್ನಲ್‌ವರೆಗೆ ವಾಹನಗಳು ನಿಂತಿರುತ್ತವೆ.

‘ಬೆಳಿಗ್ಗೆ ಹಾಗೂ ಸಂಜೆ ವೇಳೆ ಈ ಮಾರ್ಗವಾಗಿ ಬಂದರೆ ಕಿರಿಕಿರಿ ತಪ್ಪಿದ್ದಲ್ಲ. ಸೇತುವೆಯಿಂದ ಮುಂದೆ ತೆರಳಲು 15–20 ನಿಮಿಷಗಳು ಹಿಡಿಯುತ್ತವೆ. ವಾಹನಗಳು ತೆವಳುತ್ತ ಸಾಗುವುದರಿಂದ ಕಚೇರಿಗೆ ಬೇಗ ಹೋಗಲು ಸಾಧ್ಯವಾಗುತ್ತಿಲ್ಲ’ ಎಂದು ಕಂಪೆನಿಯೊಂದರ ಉದ್ಯೋಗಿ ಶ್ಯಾಮ್‌ ಅಳಲು ತೋಡಿಕೊಂಡರು.

ಮರಗಳ ಹನನ: ‘ರಸ್ತೆಯ ಮಧ್ಯದಲ್ಲಿ ಹತ್ತಾರು ಮರಗಳಿದ್ದವು. ಅವುಗಳನ್ನು ಸೇತುವೆಗಾಗಿ ಕಡಿಯಲಾಗಿದೆ’ ಎಂದು ಹೊಸಕೆರೆಹಳ್ಳಿ ನಿವಾಸಿ ಸೋಮಶೇಖರ್‌ ಬೇಸರ ವ್ಯಕ್ತಪಡಿಸಿದರು. ‘ಕೆರೆಕೋಡಿ ಮುಖ್ಯರಸ್ತೆಯ ಸಿಗ್ನಲ್‌ನಲ್ಲಿ ಹೆಚ್ಚಿನ ವಾಹನ ದಟ್ಟಣೆ ಉಂಟಾಗುತ್ತಿದೆ. ಅಲ್ಲಿ ಸೇತುವೆ ನಿರ್ಮಿಸುವ ಅಗತ್ಯವಿದೆ’ ಎಂದು ಹೇಳಿದರು.

ಗಂಟೆಗೆ 10,000 ವಾಹನಗಳು: ಕೆ.ಇ.ಬಿ ಜಂಕ್ಷನ್‌ನಲ್ಲಿ ಬೆಳಗಿನ ದಟ್ಟಣೆ ಅವಧಿಯಲ್ಲಿ ಗಂಟೆಗೆ ಸರಾಸರಿ 10,000 ವಾಹನಗಳು ಚಲಿಸುತ್ತವೆ. ಸಂಜೆ 6ರಿಂದ 7ರ ಅವಧಿ­ಯಲ್ಲಿ ಸರಾಸರಿ 9,000 ವಾಹನಗಳು ಓಡಾ­­­ಡುತ್ತವೆ ಎಂದು ಅಧ್ಯಯನ ವರದಿಗಳು ತಿಳಿ­ಸಿವೆ.

ಹೈಟೆನ್ಷನ್‌ ಕಂಬ ಸ್ಥಳಾಂತರದಿಂದ ಕಾಮಗಾರಿ ವಿಳಂಬ
‘ಬೆಸ್ಕಾಂಗೆ ಸೇರಿದ ಹೈಟೆನ್ಷನ್‌ ಕಂಬಗಳನ್ನು ಸ್ಥಳಾಂತರಿಸುವ ವಿಷಯದಲ್ಲಿ ಉಂಟಾದ ಸಮಸ್ಯೆಯಿಂದ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ವಿಳಂಬವಾಗಿದೆ’ ಎಂದು ಬಿಬಿಎಂಪಿ ಕಾರ್ಯಪಾಲಕ ಎಂಜಿನಿಯರ್‌ (ಮೂಲಸೌಕರ್ಯ) ಶ್ರೀನಿವಾಸಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ರಸ್ತೆಯ ಪಕ್ಕದಲ್ಲೇ ಹಾದು ಹೋಗಿರುವ ಹೈಟೆನ್ಷನ್‌ ಕಂಬಗಳನ್ನು ಸ್ಥಳಾಂತರಿಸಲು ಅನುಮತಿ ನೀಡುವಂತೆ ಬೆಸ್ಕಾಂಗೆ ಪತ್ರ ಬರೆದಿದ್ದೆವು. ಇದಕ್ಕೆ ಉತ್ತರಿಸಿದ್ದ ಬೆಸ್ಕಾಂ ಅಧಿಕಾರಿಗಳು, ರಸ್ತೆ ಬದಿಯ ವಿದ್ಯುತ್ ಕಂಬಗಳನ್ನು ತೆರವುಗೊಳಿಸಿ ನೆಲದಡಿ ಕೇಬಲ್‌  ಅಳವಡಿಸಲಾಗುತ್ತಿದೆ. ಅದೇ ರೀತಿ ನೀವು ಸಹ ನೆಲದಡಿ ಕೇಬಲ್‌ ಅಳವಡಿಸಬೇಕು ಎಂದು ಸೂಚನೆ ನೀಡಿದ್ದರು’ ಎಂದರು.

‘ನೆಲದಡಿ ಕೇಬಲ್‌ ಅಳವಡಿಸಲು ಅಧಿಕ ಹಣ ಖರ್ಚು ಮಾಡಬೇಕಾಗುತ್ತದೆ. ಹೀಗಾಗಿ ಕಂಬಗಳನ್ನು ಮಾತ್ರ ಸ್ಥಳಾಂತರ ಮಾಡುತ್ತೇವೆ ಎಂದು ಬೆಸ್ಕಾಂ ಅಧಿಕಾರಿಗಳಿಗೆ ತಿಳಿಸಿದ್ದೆವು’ ಎಂದು ಹೇಳಿದರು.

ಮೇ 10ಕ್ಕೆ ಗಡುವು
‘ಮುಖ್ಯಮಂತ್ರಿ ಅವರ ಪ್ರಧಾನ ಕಾರ್ಯದರ್ಶಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಮೇ 10ರೊಳಗೆ ಮೇಲ್ಸೇತುವೆ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಸೂಚಿಸಿದ್ದಾರೆ. ಅಂದು ಉದ್ಘಾಟನೆಗೆ ಬೇಕಾದ ಸಿದ್ಧತೆಯನ್ನು ಮಾಡಿಕೊಳ್ಳಲಾಗುತ್ತದೆ ಎಂದೂ ಅವರು ತಿಳಿಸಿದ್ದಾರೆ. ಹೀಗಾಗಿ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದ್ದೇನೆ’ ಎಂದು ಶ್ರೀನಿವಾಸಮೂರ್ತಿ ತಿಳಿಸಿದರು.

Comments
ಈ ವಿಭಾಗದಿಂದ ಇನ್ನಷ್ಟು
ಕದ್ದ ಆಭರಣಗಳಲ್ಲಿ ಅದ್ದೂರಿ ನಿಶ್ಚಿತಾರ್ಥ!

ಬೆಂಗಳೂರು
ಕದ್ದ ಆಭರಣಗಳಲ್ಲಿ ಅದ್ದೂರಿ ನಿಶ್ಚಿತಾರ್ಥ!

27 Jul, 2017
ವಿಧಾನಸೌಧದ ಆವರಣದಲ್ಲಿ ಮಹರ್ಷಿ ವಾಲ್ಮೀಕಿ ಪ್ರತಿಮೆ

ಬೆಂಗಳೂರು
ವಿಧಾನಸೌಧದ ಆವರಣದಲ್ಲಿ ಮಹರ್ಷಿ ವಾಲ್ಮೀಕಿ ಪ್ರತಿಮೆ

27 Jul, 2017
ಜಲಮಂಡಳಿ ಜಾಗ ಒತ್ತುವರಿ ಅಧಿಕಾರಿಗಳ ನಿರ್ಲಕ್ಷ್ಯ

ಬೆಂಗಳೂರು
ಜಲಮಂಡಳಿ ಜಾಗ ಒತ್ತುವರಿ ಅಧಿಕಾರಿಗಳ ನಿರ್ಲಕ್ಷ್ಯ

27 Jul, 2017

ಬೆಂಗಳೂರು
4 ಸಾವಿರ ಫಲಾನುಭವಿಗಳಿಗೆ ಸೌಲಭ್ಯ ವಿತರಣೆ

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ವತಿಯಿಂದ ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ವಿವಿಧ ಕಲ್ಯಾಣ ಯೋಜನೆಗಳ ಸೌಲಭ್ಯಗಳನ್ನು ಫಲಾನುಭವಿಗಳಿಗೆ ನೀಡಲಾಯಿತು. ...

27 Jul, 2017

ಬೆಂಗಳೂರು
30ಕ್ಕೆ ಡಿಎಸ್‌ಎಸ್‌ ರಾಜ್ಯ ಮಟ್ಟದ ಬೃಹತ್ ಸಮಾವೇಶ

ಅಂತರ್ಜಾತಿ ವಿವಾಹಕ್ಕೆ ಸರ್ಕಾರ ನೀಡುತ್ತಿರುವ ಪ್ರೋತ್ಸಾಹ ಧನ ಏರಿಸಬೇಕು. ಪರಿಶಿಷ್ಟ ಜಾತಿಯಲ್ಲಿ 101 ಉಪಜಾತಿಗಳಿದ್ದು, ಪರಿಶಿಷ್ಟ ಪಂಗಡದಲ್ಲಿ 54 ಉಪಜಾತಿಗಳಿವೆ.

27 Jul, 2017