ಹೊಸಪೇಟೆ

ಕರಡಿಧಾಮ: ನಿಯಮ ಉಲ್ಲಂಘಿಸಿ ಛಾಯಾಗ್ರಹಣ

ಕರಡಿಗುಡ್ಡದಿಂದ ಸುಮಾರು 500 ಮೀಟರ್‌ ದೂರದಲ್ಲಿ ಸಾರ್ವಜನಿಕರಿಗೆ ಕರಡಿಗಳ ವೀಕ್ಷಣೆಗೆ ವೀಕ್ಷಣಾ ಗೋಪುರ ನಿರ್ಮಿಸಲಾಗಿದೆ. ಯಾರೇ ವಿಡಿಯೊ, ಛಾಯಾಚಿತ್ರ ತೆಗೆಯಬೇಕಾದರೆ ಆ ಸ್ಥಳದಲ್ಲಿ ನಿಂತುಕೊಂಡೇ ತೆಗೆಯಬೇಕು...

ಕ್ಯಾಮೆರಾ ನೋಡಿ ಹೆದರಿದ ತಾಯಿ ಕರಡಿ ಹಾಗೂ ಮರಿಗಳು –ಪ್ರಜಾವಾಣಿ ಚಿತ್ರ: ಎಂ.ಆರ್‌. ಮಂಜುನಾಥ

ಹೊಸಪೇಟೆ: ಇಲ್ಲಿಗೆ ಸಮೀಪದ ದರೋಜಿ ಕರಡಿಧಾಮದಲ್ಲಿ ನಿಯಮ ಉಲ್ಲಂಘಿಸಿ ಛಾಯಾಗ್ರಹಣ ಮಾಡಿ, ಕರಡಿಗಳಿಗೆ ಕಿರಿಕಿರಿ ಉಂಟು ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ಇದೇ 7ರ ಸಂಜೆ 4 ರಿಂದ 6.30ರ ನಡುವೆ ಈ ಪ್ರಕರಣ ನಡೆದಿದೆ. ದೀಪಂಕರ ಮುಜುಂದಾರ್‌, ಯಶಪಾಲ್‌ ರಾಥೋಡ್‌ ಎನ್ನುವವರು ಛಾಯಾಗ್ರಹಣ ಮಾಡಿದ್ದಾರೆ.

ಕರಡಿಗುಡ್ಡದಿಂದ ಸುಮಾರು 500 ಮೀಟರ್‌ ದೂರದಲ್ಲಿ ಸಾರ್ವಜನಿಕರಿಗೆ ಕರಡಿಗಳ ವೀಕ್ಷಣೆಗೆ ವೀಕ್ಷಣಾ ಗೋಪುರ ನಿರ್ಮಿಸಲಾಗಿದೆ. ಯಾರೇ ವಿಡಿಯೊ, ಛಾಯಾಚಿತ್ರ ತೆಗೆಯಬೇಕಾದರೆ ಆ ಸ್ಥಳದಲ್ಲಿ ನಿಂತುಕೊಂಡೇ ತೆಗೆಯಬೇಕು. ಕರಡಿಗುಡ್ಡದ ಬಳಿ ಹೋಗಲು ಯಾರಿಗೂ ಅನುಮತಿ ಇಲ್ಲ.

ಆದರೆ, ಅಂದು ಸಂಜೆ ಕರಡಿಗುಡ್ಡದವರೆಗೆ ಹೋಗಲು ದೀಪಂಕರ, ಯಶಪಾಲ್‌ ಅವರಿದ್ದ ಕಾರಿಗೆ ಅವಕಾಶ ಕಲ್ಪಿಸಲಾಗಿದೆ. ಕರಡಿಧಾಮದ ಸಿಬ್ಬಂದಿ ಕೂಡ ನೆರವಾಗಿದ್ದಾರೆ ಎಂದು ಆ ಸಂದರ್ಭದಲ್ಲಿ ಅಲ್ಲಿದ್ದ ವನ್ಯಜೀವಿ ಛಾಯಾಗ್ರಾಹಕರಾದ ಮಂಜಪ್ಪ, ಹರಿನಾರಾಯಣ ಹಾಗೂ ಶ್ರೀಧರ್‌ ‘ಪ್ರಜಾವಾಣಿ’ಗೆ ತಿಳಿಸಿದರು. ಈ ಸಂದರ್ಭದಲ್ಲಿ ‘ಪ್ರಜಾವಾಣಿ’ ಛಾಯಾಗ್ರಾಹಕ ಎಂ.ಆರ್‌. ಮಂಜುನಾಥ್‌ ಸಹ ಸ್ಥಳದಲ್ಲಿದ್ದರು.

‘ಕರಡಿಗುಡ್ಡದ ಮೇಲೆ ಕರಡಿಗಳು ಬರುವ ಸ್ಥಳದಲ್ಲಿಯೇ ರಿಮೋಟ್‌ಚಾಲಿತ ಅತ್ಯಾಧುನಿಕ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ತಾಯಿ ಕರಡಿಯು ಮರಿಗಳೊಂದಿಗೆ ಬರುತ್ತಿದ್ದಂತೆಯೇ ಛಾಯಾಚಿತ್ರ ತೆಗೆಯಲು ಆರಂಭಿಸಿದ್ದಾರೆ. ಕ್ಯಾಮೆರಾ ಫ್ಲ್ಯಾಶ್‌ ಹಾಗೂ ಅದರ ಶಬ್ದಕ್ಕೆ ಕರಡಿಗಳು ಹೆದರಿವೆ. ಮರಿ ಕರಡಿಗಳು ಭಯದಿಂದ ತಾಯಿ ಕರಡಿಯನ್ನು ಅಪ್ಪಿಕೊಂಡು ಕೆಲಕಾಲ ಕ್ಯಾಮೆರಾವನ್ನೇ ಮಿಟುಕಿಸಿ ನೋಡಿ ಅಲ್ಲಿಂದ ಓಡಿ ಹೋದವು’ ಎಂದು ಹರಿನಾರಾಯಣ ತಿಳಿಸಿದರು.

‘ಈ ಕುರಿತು ಕರಡಿಧಾಮದ ಸಿಬ್ಬಂದಿ ಬಳಿ ಆಕ್ಷೇಪ ವ್ಯಕ್ತಪಡಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಛಾಯಾಚಿತ್ರ ಸೆರೆಹಿಡಿದವರು ಬಳ್ಳಾರಿ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿ.ಎಫ್‌.ಒ) ತಕತ್‌ ಸಿಂಗ್‌ ರಣಾವತ್‌ ಅವರ ಆಪ್ತರು ಎನ್ನುವುದು ಬಳಿಕ ತಿಳಿಯಿತು. ಹಲವು ವರ್ಷಗಳಿಂದ ವನ್ಯಜೀವಿಗಳ ಛಾಯಾಚಿತ್ರಗಳನ್ನು ನಾವು ಸೆರೆಹಿಡಿಯುತ್ತಿದ್ದೇವೆ. ಆದರೆ, ಪ್ರಾಣಿಗಳಿಗೆ ಕಿರಿಕಿರಿಯಾಗುವ ರೀತಿಯಲ್ಲಿ ಎಂದೂ ಫೋಟೋಗ್ರಫಿ ಮಾಡಿಲ್ಲ. ಈ ರೀತಿ ಮಾಡುವುದು ತಪ್ಪು. ಅದಕ್ಕೆ ಆಸ್ಪದ ಮಾಡಿಕೊಟ್ಟಿರುವುದು ಅದಕ್ಕಿಂತಲೂ ದೊಡ್ಡ ತಪ್ಪು’ ಎಂದರು.

ಈ ಕುರಿತು ಡಿ.ಎಫ್‌.ಒ ತಕತ್‌ ಸಿಂಗ್‌ ರಣಾವತ್‌ ಅವರನ್ನು ಪ್ರಶ್ನಿಸಿದರೆ, ‘ದೀಪಂಕರ್‌, ಯಶಪಾಲ್‌ ಯಾರು ಎನ್ನುವುದು ನನಗೆ ಗೊತ್ತಿಲ್ಲ. ಛಾಯಾಚಿತ್ರಕ್ಕೆ ಅವಕಾಶ ಮಾಡಿಕೊಡಬೇಕೆಂದು ಯಾರಿಗೂ ನಾನು ಹೇಳಿಲ್ಲ. ತಪ್ಪು ಯಾರು ಮಾಡಿದರೂ ತಪ್ಪೇ. ಒಂದುವೇಳೆ ಯಾರಾದರೂ ನನ್ನ ಹೆಸರು ಹೇಳಿಕೊಂಡು ಕಾನೂನು ಉಲ್ಲಂಘಿಸಿದ್ದರೆ ಅವರ ವಿರುದ್ಧ ಕ್ರಮ   ಜರುಗಿಸಲಾಗುವುದು’ ಎಂದು ಹೇಳಿದರು.

‘ಪ್ರಾಣಿಗಳ ಚಲನವಲನಕ್ಕೆ ಸಂಬಂಧಿಸಿದ ಅಧ್ಯಯನಕ್ಕೆ ಫೋಟೋಗ್ರಫಿಯೇ ಸೂಕ್ತ. 2–3 ಕಿ.ಮೀ ದೂರದಲ್ಲಿ ಇದ್ದುಕೊಂಡು ಅಧ್ಯಯನ ಮಾಡಲು ಆಗುವುದಿಲ್ಲ. ಅಧ್ಯಯನದ ಉದ್ದೇಶಕ್ಕೆ ಕೆಲವರಿಗೆ ವೀಕ್ಷಣಾ ಗೋಪುರದ ಬಳಿಯಿಂದ ಛಾಯಾಚಿತ್ರ ತೆಗೆಯಲು ಅವಕಾಶ ಕಲ್ಪಿಸಲಾಗುತ್ತದೆ’ ಎಂದು ದರೋಜಿ ಕರಡಿಧಾಮದ ವಲಯ ಅರಣ್ಯಾಧಿಕಾರಿ (ಆರ್‌.ಎಫ್‌.ಒ) ಭಾಸ್ಕರ್‌ ತಿಳಿಸಿದರು.
* * *
ಯಾರೋ, ಏನೋ ಹೇಳಿದರೆಂದು ಸುಮ್ಮನೆ ವರದಿ ಮಾಡಬೇಡಿ. ಹಾಗೇನಾದರೂ ಮಾಡಿದರೆ ನಿಮ್ಮ ವಿರುದ್ಧ  ನಿಮ್ಮ ಸಂಪಾದಕರಿಗೆ ದೂರು ಕೊಡಬೇಕಾಗುತ್ತದೆ
ತಕತ್‌ ಸಿಂಗ್‌ ರಣಾವತ್‌
ಡಿ.ಎಫ್‌.ಒ
ಬಳ್ಳಾರಿ

Comments
ಈ ವಿಭಾಗದಿಂದ ಇನ್ನಷ್ಟು
ಹತ್ಯೆಗಾಗಿ ಜಾನುವಾರು ಮಾರಾಟಕ್ಕೆ ನಿರ್ಬಂಧ: ಕೇಂದ್ರದ ಆದೇಶ ಕೈ ಸೇರಿದ ಬಳಿಕ ಕ್ರಮ–ಸಿಎಂ

ಆತುರದ ನಿರ್ಧಾರ ಇಲ್ಲ
ಹತ್ಯೆಗಾಗಿ ಜಾನುವಾರು ಮಾರಾಟಕ್ಕೆ ನಿರ್ಬಂಧ: ಕೇಂದ್ರದ ಆದೇಶ ಕೈ ಸೇರಿದ ಬಳಿಕ ಕ್ರಮ–ಸಿಎಂ

27 May, 2017
ರಾಜ್ಯದಲ್ಲಿ ಈಗಾಗಲೇ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದೆ: ಕಾನೂನು ಸಚಿವ ಟಿ.ಬಿ.ಜಯಚಂದ್ರ

ಆಹಾರದ ಹಕ್ಕಿನ ಪ್ರಶ್ನೆಯೂ ಉದ್ಭವಿಸಲಿದೆ
ರಾಜ್ಯದಲ್ಲಿ ಈಗಾಗಲೇ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದೆ: ಕಾನೂನು ಸಚಿವ ಟಿ.ಬಿ.ಜಯಚಂದ್ರ

27 May, 2017
ಬಂಟ್ವಾಳ ತಾಲ್ಲೂಕಿನಾದ್ಯಂತ ಇಂದಿನಿಂದ ಜೂನ್ 2ರವರೆಗೆ ನಿಷೇಧಾಜ್ಞೆ ಜಾರಿ

ಕಲ್ಲಡ್ಕದಲ್ಲಿ ಯುವಕನಿಗೆ ಚೂರಿ ಇರಿತ
ಬಂಟ್ವಾಳ ತಾಲ್ಲೂಕಿನಾದ್ಯಂತ ಇಂದಿನಿಂದ ಜೂನ್ 2ರವರೆಗೆ ನಿಷೇಧಾಜ್ಞೆ ಜಾರಿ

27 May, 2017
ಶಿರಸಿ: ಬಿಸಲಕೊಪ್ಪ ಬಳಿ ಬಸ್-ಅಂಬುಲೆನ್ಸ್ ಡಿಕ್ಕಿ– ಇಬ್ಬರು ಸಾವು

ಶಿರಸಿ
ಶಿರಸಿ: ಬಿಸಲಕೊಪ್ಪ ಬಳಿ ಬಸ್-ಅಂಬುಲೆನ್ಸ್ ಡಿಕ್ಕಿ– ಇಬ್ಬರು ಸಾವು

27 May, 2017
ಚರ್ಚೆಗೆ ಮಥಾಯಿ ಕರೆದ ಮುಖ್ಯ ಕಾರ್ಯದರ್ಶಿ

ಬೆಂಗಳೂರು
ಚರ್ಚೆಗೆ ಮಥಾಯಿ ಕರೆದ ಮುಖ್ಯ ಕಾರ್ಯದರ್ಶಿ

27 May, 2017