ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇವೆಯ 15ನೇ ವರ್ಷಕ್ಕೆ ಬಡ್ತಿ ನೀಡಿ

ರಸ್ತೆ ಸಾರಿಗೆ ಮಜ್ದೂರ್‌ ಸಂಘದ ಅಧಿವೇಶನದಲ್ಲಿ ಒತ್ತಾಯ
Last Updated 9 ಏಪ್ರಿಲ್ 2017, 20:09 IST
ಅಕ್ಷರ ಗಾತ್ರ

ಬೆಂಗಳೂರು: ‘ಸಾರಿಗೆ ನಿಗಮಗಳ ನೌಕರರು ಸೇವೆಗೆ ಸೇರಿ 15  ವರ್ಷ ತುಂಬಿದ ಕೂಡಲೇ  ಬಡ್ತಿ ನೀಡಬೇಕು’ ಎಂದು  ಕರ್ನಾಟಕ ರಸ್ತೆ ಸಾರಿಗೆ ಮಜ್ದೂರ್‌ ಸಂಘ ಒತ್ತಾಯಿಸಿದೆ.

ನಗರದಲ್ಲಿ ಭಾನುವಾರ ನಡೆದ ಸಂಘದ 9ನೇ ತ್ರೈವಾರ್ಷಿಕ ಅಧಿವೇಶನದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಆರ್‌.ಪಿ. ದಯಾನಂದ ಸಾಗರ್‌ ಅವರು  ನಿರ್ಣಯಗಳನ್ನು ಮಂಡಿಸಿದರು.

‘ಚಾಲಕರು ಕೆಲಸಕ್ಕೆ ಸೇರಿದ 25 ವರ್ಷದ ಬಳಿಕ ಬಡ್ತಿ ನೀಡುವ ಪರಿಪಾಠವಿದೆ. ಅದನ್ನು 15 ವರ್ಷಕ್ಕೆ ಇಳಿಸಬೇಕು. ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಭವಿಷ್ಯನಿಧಿಯಲ್ಲಿ ಆಗಿರುವ ಲೋಪಗಳನ್ನು ಸರಿಪಡಿಸಬೇಕು. ಬಸ್‌ ಘಟಕ ಮತ್ತು ನಿಲ್ದಾಣಗಳನ್ನು ನಿರ್ಮಿಸಲು ರಾಜ್ಯದ ನಾಲ್ಕು ಸಾರಿಗೆ ನಿಗಮಗಳಿಗೆ ಉಚಿತವಾಗಿ ಜಮೀನು ನೀಡಬೇಕು. ಘಟಕದ ಕಟ್ಟಡಗಳ ನಿರ್ಮಾಣಕ್ಕೆ ಅನುದಾನ ನೀಡಬೇಕು’ ಎಂದು ಒತ್ತಾಯಿಸಿದರು.

‘ನಷ್ಟದ ಲೆಕ್ಕ ತೋರಿಸಿ ಬಿಎಂಟಿಸಿ ಸಂಸ್ಥೆಯ ಆಸ್ತಿಯನ್ನು ಮಾರಾಟ ಮಾಡಬಾರದು. ಈಶಾನ್ಯ ಮತ್ತು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳಿಗೆ ನೀಡಿದಂತೆ ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿಗೂ ತೆರಿಗೆ ವಿನಾಯಿತಿ ನೀಡಬೇಕು’ ಎಂದು ಕೋರಿದರು.

‘ಪ್ರತಿ ಬಜೆಟ್‌ನಲ್ಲಿ ನಿಗಮಗಳಿಗೆ ₹ 500 ಕೋಟಿ ಮೀಸಲಿಡಬೇಕು. ಉತ್ತಮ ಚಾಲಕ ಮತ್ತು ನಿರ್ವಾಹಕರಿಗೆ ಪ್ರತಿವರ್ಷ ಚಿನ್ನ ಮತ್ತು ಬೆಳ್ಳಿ ಪದಕಗಳನ್ನು ನೀಡಬೇಕು.  ನೌಕರರ ಮಕ್ಕಳಿಗಾಗಿ ಶಿಶುಪಾಲನಾ ಕೇಂದ್ರಗಳನ್ನು ಆರಂಭಿಸಬೇಕು’ ಎಂದು ಹೇಳಿದರು.
‘2016ರ ಜನವರಿ 1ರಿಂದ ಅನ್ವಯ ಆಗುವಂತೆ ಮೂಲವೇತನವನ್ನು ಶೇ 12.5 ರಷ್ಟು ಹೆಚ್ಚಳ ಮಾಡಲಾಗಿದೆ.  ಹಿಂಬಾಕಿ ಮೊತ್ತವನ್ನು ಬಿಡುಗಡೆ ಮಾಡಬೇಕು’ ಎಂದರು.

ಶಾಸಕ ಎಸ್‌.ಸುರೇಶ್‌ ಕುಮಾರ್‌, ‘ಕಾರ್ಮಿಕ ಸಂಘಟನೆಗಳು ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಳ್ಳಬೇಕು. ಅದಕ್ಕೆ ತಕ್ಕಂತೆ ಕೆಲಸವೂ ಮಾಡಬೇಕು’ ಎಂದು ಸಲಹೆ ನೀಡಿದರು. ಯುವ ಬ್ರಿಗೇಡ್‌ನ ಸಂಚಾಲಕ ಚಕ್ರವರ್ತಿ ಸೂಲಿಬೆಲೆ, ‘ಸಂಘಟನೆಗಳ ಮುಖಂಡರಲ್ಲಿ ಶ್ರದ್ಧೆ ಕಡಿಮೆಯಾಗುತ್ತಿದೆ. ನಾಯಕತ್ವಕ್ಕಾಗಿ ಪೈಪೋಟಿ ಇಲ್ಲದಿದ್ದಾಗ ಗುರಿಯನ್ನು ಸುಲಭವಾಗಿ ತಲುಪಬಹುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT