ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ ವಿವಿಧೆಡೆ ಮಳೆ: ಸಿಡಿಲಿಗೆ ನಾಲ್ಕು ಬಲಿ

Last Updated 9 ಏಪ್ರಿಲ್ 2017, 20:10 IST
ಅಕ್ಷರ ಗಾತ್ರ

ಬೆಂಗಳೂರು: ಮುಂಗಾರು ಪೂರ್ವ ಮಳೆ ಶನಿವಾರ ರಾತ್ರಿ ಹಾಗೂ ಭಾನುವಾರ ರಾಜ್ಯದ ವಿವಿಧೆಡೆ ಸುರಿದಿದೆ.

ಎನ್‌.ಆರ್‌.ಪುರ, ಹುಬ್ಬಳ್ಳಿ ತಾಲ್ಲೂಕಿನಲ್ಲಿ ತಲಾ ಒಬ್ಬರು ಹಾಗೂ ಹೊಸಪೇಟೆಯಲ್ಲಿ ಮಹಿಳೆ ಸೇರಿ ಇಬ್ಬರು ಮೃತಪಟ್ಟಿದ್ದಾರೆ. ಹಾಸನ, ಚಿಕ್ಕಮಗಳೂರು, ಕೊಡಗು,  ಮೈಸೂರು, ಶಿವಮೊಗ್ಗ, ಬಳ್ಳಾರಿ, ಧಾರವಾಡ, ಬೆಳಗಾವಿ ಮತ್ತು ಗದಗ ಜಿಲ್ಲೆಯ ವಿವಿಧೆಡೆ ಬಿರುಗಾಳಿ ಮಳೆಯಾಗಿದ್ದು, ಹಲವಾರು ಮನೆಗಳಿಗೆ ಹಾನಿಯಾಗಿದೆ.

ಚಿಕ್ಕಮಗಳೂರು ಜಿಲ್ಲೆ ಕಳಸ ಪಟ್ಟಣದಲ್ಲಿ ಭಾನುವಾರ ಸಂಜೆ  ಆಲಿಕಲ್ಲು ಸಹಿತ ಮಳೆ ಸುರಿದಿದೆ. ಭಾನುವಾರ ಸಂಜೆ ಚಿಕ್ಕಮಗಳೂರು ನಗರದ ಸುತ್ತಮುತ್ತ ಗುಡುಗು ಸಹಿತ ತುಂತುರು ಮಳೆ ಸುರಿಯಿತು.

ಮಳೆಗೆ ಹಾನಿ: ಹಾಸನ ಜಿಲ್ಲೆಯ ವಿವಿಧೆಡೆ ಶನಿವಾರ ರಾತ್ರಿ ಬಿರುಗಾಳಿ ಸಹಿತ ಸುರಿದ ಮಳೆಯಿಂದ ಸ್ವಲ್ಪಮಟ್ಟಿಗೆ ಹಾನಿಯಾಗಿದೆ. ಹಳೇಬೀಡು ಹೋಬಳಿಯ ಹಲವು ಗ್ರಾಮಗಳಲ್ಲಿ ತೆಂಗು, ಅಡಿಕೆ ಮರಗಳು, ವಿದ್ಯುತ್‌ ಕಂಬಗಳು ನೆಲಕ್ಕುರುಳಿವೆ. ಟೊಮೆಟೊ, ಮಾವು ಫಸಲಿಗೆ ಹಾನಿಯಾಗಿದೆ.

ಅರಸೀಕೆರೆ ತಾಲ್ಲೂಕಿನ ಕಣಕಟ್ಟೆ ಹೋಬಳಿಯ ಬೆಣ್ಣಿಗುಂಡಿಹಳ್ಳಿ ಹಾಗೂ ಸುತ್ತಮುತ್ತ ಶನಿವಾರ ಸಂಜೆ  ಬಿರುಗಾಳಿಸಹಿತ ಮಳೆಯಾದ ಪರಿಣಾಮ ತೆಂಗಿನಮರಗಳು ಹಾಗೂ ವಿದ್ಯುತ್‌ ಕಂಬಗಳು ಧರೆಗುರುಳಿವೆ.

ಬಾಲಕ ಸಾವು: ನರಸಿಂಹರಾಜಪುರ ತಾಲ್ಲೂಕಿನ ಸೀತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳ್ಳೂರು ಗ್ರಾಮಲ್ಲಿ ಶನಿವಾರ ರಾತ್ರಿ ಸಿಡಿಲು ಬಡಿದು 10 ವರ್ಷದ ಬಾಲಕ ಮೃತಪಟ್ಟಿದ್ದಾನೆ. ಬೆಳ್ಳೂರಿನ ಈಶ್ವರ ದೇವಸ್ಥಾನದ ಅರ್ಚಕ ಕೇಶವಮೂರ್ತಿ ಅವರ ಪುತ್ರ ಸುಬ್ರಹ್ಮಣ್ಯ ಮೃತ ಬಾಲಕ.

ಶಿವಮೊಗ್ಗ ನಗರ, ತೀರ್ಥಹಳ್ಳಿ, ಸಾಗರ, ಹೊಸನಗರ, ಶಿಕಾರಿಪುರ, ಭದ್ರಾವತಿ ತಾಲ್ಲೂಕಿನ ಹಲವೆಡೆ ಶನಿವಾರ ತಡರಾತ್ರಿ ಸಾಧಾರಣ ಮಳೆಯಾಗಿದೆ.
ಸಂತೇಬೆನ್ನೂರು ಹೋಬಳಿಯಾದ್ಯಂತ ಹಾಗೂ ಚನ್ನಗಿರಿ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಅಲ್ಪ ಪ್ರಮಾಣದಲ್ಲಿ ಮಳೆಯಾಯಿತು.

ಮಳೆಗೆ ಇಬ್ಬರು ಬಲಿ: ಶನಿವಾರ ರಾತ್ರಿ ಭಾರಿ ಬಿರುಗಾಳಿಯೊಂದಿಗೆ ಮಳೆ ಸುರಿದ ಪರಿಣಾಮ ಹೊಸಪೇಟೆ ನಗರದಲ್ಲಿ ಇಬ್ಬರು ಮೃತಪಟ್ಟಿದ್ದಾರೆ.
ಅಗಸರ ಓಣಿಯಲ್ಲಿ ಮನೆಯ ಚಾವಣಿಗೆ ಹಾಕಿದ್ದ ಶೀಟ್‌ಗಳು ಹಾರಿ ಹೋದ ಸಂದರ್ಭದಲ್ಲಿ ಕಲ್ಲು ತಲೆ ಮೇಲೆ ಬಿದ್ದು ಮಾರೆಪ್ಪ (60) ಎಂಬುವವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಸಿಡಿಲಿನ ಶಬ್ದಕ್ಕೆ ಇದೇ ಕಾಲೊನಿಯ ನಿವಾಸಿ ರಾಜೇಶ್ವರಿ (35) ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ ಎಂದು ತಹಶೀಲ್ದಾರ್‌ ಎಚ್‌. ವಿಶ್ವನಾಥ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ನಗರದ ಹೊರವಲಯದ ಆಶ್ರಯ ಕಾಲೊನಿಯಲ್ಲಿ ಭಾರಿ ಬಿರುಗಾಳಿಯಿಂದ 20 ಶೆಡ್‌ಗಳಿಗೆ ಹಾನಿಯಾಗಿದೆ. ನಗರದ ವಿವಿಧೆಡೆ100ಕ್ಕೂ ಹೆಚ್ಚು ಮರಗಳು ನೆಲಕ್ಕುರುಳಿದ್ದು, 12 ವಿದ್ಯುತ್‌ ಕಂಬಗಳು ಮುರಿದು ಬಿದ್ದಿವೆ.

ಸಿಡಿಲಿಗೆ ಯುವಕ ಬಲಿ: ಹುಬ್ಬಳ್ಳಿ ತಾಲ್ಲೂಕಿನ ದೇವರ ಗುಡಿಹಾಳ ಗ್ರಾಮದಲ್ಲಿ ಭಾನುವಾರ ಸಂಜೆ ಸಿಡಿಲು ಬಡಿದು, ಹೊಲದಲ್ಲಿದ್ದ ಮಲ್ಲಿಕಾರ್ಜುನ ಕಾಂತಯ್ಯ ಪೂಜಾರ (25) ಎಂಬ ರೈತ ಮೃತಪಟ್ಟಿದ್ದಾರೆ. 

ಶನಿವಾರ ರಾತ್ರಿ ಮಳೆ– ಬಿರುಗಾಳಿಗೆ ಹೊಸಪೇಟೆ ತಾಲ್ಲೂಕಿನ ವಿವಿಧ ಕಡೆ 120 ಎಕರೆ ಪ್ರದೇಶದಲ್ಲಿನ ಬಾಳೆ ಬೆಳೆ ಹಾನಿಯಾಗಿದೆ.
ತಾಲ್ಲೂಕಿನ ಕಮಲಾಪುರ, ಬುಕ್ಕಸಾಗರ, ಸೀತಾರಾಮ ತಾಂಡಾ, ಕಡ್ಡಿರಾಂಪುರ ಹಾಗೂ ನಿಂಬಾಪುರದಲ್ಲಿ ಬಾಳೆ ಬೆಳೆಗೆ ಹಾನಿಯಾಗಿದೆ ಎಂದು ತಹಶೀಲ್ದಾರ್‌ ಎಚ್‌. ವಿಶ್ವನಾಥ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ವಿವಿಧೆಡೆ ಮಳೆ: ಹುಬ್ಬಳ್ಳಿ ನಗರ ಮತ್ತು ಹಾವೇರಿ ಜಿಲ್ಲೆಯ ಹಂಸಭಾವಿ ಸುತ್ತಮುತ್ತ ಹಾಗೂ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲ್ಲೂಕಿನಲ್ಲಿ ಭಾನುವಾರ ಸಾಧಾರಣ ಮಳೆಯಾಗಿದ್ದು, ಓರಲಗಿ ಗ್ರಾಮದಲ್ಲಿ ಸಿಡಿಲು ಬಡಿದು ಒಂದು ಹಸು ಮತ್ತು ಒಂದು ಕರು ಮೃತಪಟ್ಟಿವೆ.

ಬೆಳಗಾವಿ ಜಿಲ್ಲೆಯ ಸವದತ್ತಿಯ ಹೊಸೂರ ಗ್ರಾಮದಲ್ಲಿ ಗಾಳಿ–ಮಳೆಯಿಂದ ಒಂದು ಮನೆಯ ಚಾವಣಿ ಕುಸಿದಿದೆ, ಕೆಲವು ಮನೆಗಳ ಚಾವಣಿಯ ಶೀಟ್‌ಗಳ ಹಾರಿಹೋಗಿವೆ. ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ಎಂ.ಕೆ. ಹುಬ್ಬಳ್ಳಿಯಲ್ಲೂ ಮಳೆಯಾಗಿದೆ.

ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಚಿಕ್ಕಮಣ್ಣೂರು ಗ್ರಾಮದಲ್ಲಿ ಶನಿವಾರ ರಾತ್ರಿ ಬಿರುಗಾಳಿ ಸಹಿತ ಭಾರಿ ಮಳೆಯಿಂದ ಗ್ರಾಮದ ಕೆಲವು ಮನೆಗಳು ಹಾನಿಗೀಡಾಗಿವೆ. ಮನೆಗಳ ಚಾವಣಿ ಹಾಕಿದ ತಗಡಿನ ಶೀಟುಗಳು ಹಾರಿಹೋಗಿದ್ದು, ಕೆಲವೆಡೆ ಮರಗಳು ಉರುಳಿಬಿದ್ದಿವೆ.

ಗುತ್ತಲ, ಬಂಕಾರಪುರದಲ್ಲಿ 42.9 ಡಿಗ್ರಿ ಸೆಲ್ಸಿಯಸ್!
ಹಾವೇರಿ: ತಾಲ್ಲೂಕಿನ ಗುತ್ತಲ ಹಾಗೂ ಶಿಗ್ಗಾವಿ ತಾಲ್ಲೂಕಿನ ಬಂಕಾಪುರದಲ್ಲಿ ಭಾನುವಾರ ದಿನದ ಗರಿಷ್ಠ ತಾಪಮಾನ 42.9 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ತಾಪಮಾನ 25.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಗುತ್ತಲದಲ್ಲಿ ಶನಿವಾರ ಗರಿಷ್ಠ ತಾಪಮಾನ 41.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಕಳೆದೆರಡು ದಿನಗಳಿಂದ ತಾಪಮಾನದಲ್ಲಿ ಏರಿಕೆ ಕಾಣುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT