ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚಿದ ಗಾಂಜಾ ಚಟ

ತೋವಿನಕೆರೆ: ಅಮಲಿನಲ್ಲಿ ತೇಲಾಡುವ ಯುವಕರು
Last Updated 10 ಏಪ್ರಿಲ್ 2017, 4:48 IST
ಅಕ್ಷರ ಗಾತ್ರ

ತುಮಕೂರು: ಕೊರಟಗೆರೆ ತಾಲ್ಲೂಕಿನ ತೋವಿನಕೆರೆ ಗ್ರಾಮದ ಕೆಲವು ವಿದ್ಯಾರ್ಥಿಗಳು ಮತ್ತು ಯುವಕರು ನಿತ್ಯ ಗಾಂಜಾ ಸೇವನೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಸ್ಥಳೀಯ ಪೊಲೀಸರು ಇದರ ಬಗ್ಗೆ ಗಮನ ಹರಿಸಿ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಗ್ರಾಮದ ಪ್ರಜ್ಞಾವಂತ ನಾಗರಿಕರು ಆಗ್ರಹಿಸಿದ್ದಾರೆ.

15 ರಿಂದ 30 ವರ್ಷ ವಯಸ್ಸಿನ ಯುವಕರು, ಹೈಸ್ಕೂಲ್, ಕಾಲೇಜುಗಳ  ವಿದ್ಯಾರ್ಥಿಗಳು ನಿತ್ಯ ಗಾಂಜಾ ಇಲ್ಲದೇ ಬದುಕು ಇಲ್ಲ ಎನ್ನುವ ಹಂತ ತಲುಪಿದ್ದಾರೆ. ಹಲವು ಯುವಕರು ಜೇಬಿನಲ್ಲಿ  ಗಾಂಜಾ ಪಾಕೆಟ್‌ ಇಟ್ಟುಕೊಂಡು ಓಡಾಡುತ್ತಿರುವ ಬಗ್ಗೆ ಸ್ನೇಹಿತರ ವರ್ಗದಿಂದಲೇ ಮಾಹಿತಿ ದೊರೆಯುತ್ತಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಸಿದ್ಧರಬೆಟ್ಟ, ಮಲ್ಲೇಕಾವು ಮತ್ತು ತುಮಕೂರಿನನ ಯಲ್ಲಾಪುರದಿಂದ ಗಾಂಜಾ ಪಾಕೆಟ್‌ಗಳನ್ನು ತಂದು ಕೊಡುತ್ತಿರುವ ಮಾಹಿತಿ ಗ್ರಾಮದ ತುಂಬಾ ಹರಡಿದೆ. ಹಲವು ಗ್ರಾಮಸ್ಥರು ಯಾರು, ಯಾರು ಗಾಂಜಾ ಉಪಯೋಗಿಸುತ್ತಿದ್ದಾರೆ, ಗಾಂಜಾ ಸಿಗುವ ಸ್ಥಳ, ಸಮಯವನ್ನು ಗುಪ್ತವಾಗಿ ಹೇಳುತ್ತಾರೆ. ಆದರೆ ಸಾರ್ವಜನಿಕವಾಗಿ ಹೇಳಲು ಸಿದ್ಧರಿಲ್ಲ.

‘ಖಾಲಿ ಬಾಟಲ್‌ನಲ್ಲಿ ಗಾಂಜಾ ಹೊಗೆಯನ್ನು ಸಂಗ್ರಹಿಸಿ ಯಾವಾಗ ಬೇಕಾದರು ಉಪಯೋಗಿಸುವುದು. ಬೇಕಾದವರಿಗೆ ನೀಡುವುದು ಮಾಡುತ್ತಿದ್ದಾರೆ. ಪೋಷಕರು ಬೇರೆ ಊರಿಗೆ ಹೋದಾಗ  ಮನೆಯಲ್ಲೆ ಕೆಲ ಯುವಕರು ಗಾಂಜಾ ಸೇವನೆ ಮಾಡುವುದು ಸಾಮಾನ್ಯವಾಗಿದೆ.

ಕೆರೆ ಅಂಗಳ, ಹಳ್ಳಗಳು, ಮರದ ತೋಪುಗಳು, ಜನನಿಬಿಡ ಪ್ರದೇಶಗಳು ಗಾಂಜಾ ಸೇವನೆ ಮಾಡುವ ತಾಣಗಳಾಗಿವೆ’ ಎಂದು ಹೇಳಲಾಗಿದೆ. ‘ಹಲವು ವರ್ಷಗಳಿಂದ ಗಾಂಜಾ ಸೇವನೆ ಗ್ರಾಮದಲ್ಲಿ ನಡೆಯುತ್ತಿದೆ’ ಎನ್ನುತ್ತಾರೆ ಹೆಸರು ಹೇಳಲು ಇಷ್ಟವಿಲ್ಲದ ಮುಖಂಡರು.

ನಿಗಾ ವಹಿಸಿ, ಕ್ರಮ ಕೈಗೊಳ್ಳಲು ಒತ್ತಾಯ
ಮೂವತ್ತು ವರ್ಷ ಮೇಲ್ಪಟ್ಟ 40–50 ಯುವಕರು ನಿತ್ಯ ಜೂಜು ಆಡುವುದನ್ನು ದಂಧೆಯನ್ನಾಗಿ ಮಾಡಿಕೊಂಡಿದ್ದಾರೆ. ತೋವಿನಕೆರೆ ಗ್ರಾಮದ ಸುತ್ತಮುತ್ತಲಿನ ಮರಗಳ ತೋಪು, ಕೆರೆ ಅಂಗಳಗಳು, ಹಳ್ಳದ ಜಾಗ, ಹಳೆಯ ಮನೆಗಳು ಇವರ ಅಡ್ಡಾಗಳಾಗಿದ್ದು, ಒಂದೊಂದು ದಿನ ಒಂದು ಕಡೆ ಜೂಜು ಆಡುತ್ತಾರೆ. ಪ್ರತಿ ನಿತ್ಯ ಇಸ್ಪೀಟ್ ಆಡುವ ಜಾಗವನ್ನು ಬದಲಾಯಿಸುತ್ತಾರೆ. ಈ ಕೂಡಲೇ ಪೊಲೀಸರು ಇದರ ಬಗ್ಗೆ ನಿಗಾ ವಹಿಸಿ, ಕ್ರಮ ಕೈಗೊಳ್ಳಬೇಕು   ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಬೇಸರ
ಮಕ್ಕಳು ನಮ್ಮಂತೆ ವ್ಯವಸಾಯ ಮಾಡುವುದು ಬೇಡ. ಚೆನ್ನಾಗಿ ಶಿಕ್ಷಣ ಪಡೆದು ಸರ್ಕಾರಿ ನೌಕರಿ ಮಾಡಲಿ ಎಂದು ಪೋಷಕರು ಹಗಲು, ರಾತ್ರಿ ಕೆಲಸ ಮಾಡಿ ಮಕ್ಕಳನ್ನು ಓದಿಸುತ್ತಿದ್ದಾರೆ. ಆದರೆ ಅವರುಗಳು  ಗಾಂಜಾ ದಾಸರಾಗುತ್ತಿದ್ದಾರೆ ಎಂದು ಪೋಷಕರೊಬ್ಬರು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT