ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜಾಗತೀಕರಣದಿಂದ ದಿಕ್ಕು ತಪ್ಪುತ್ತಿರುವ ಸಮಾಜ’

ಅಂಬೇಡ್ಕರ್‌ ಜ್ಞಾನದರ್ಶನ ಅಭಿಯಾನ ಕಾರ್ಯಾಗಾರ
Last Updated 10 ಏಪ್ರಿಲ್ 2017, 6:12 IST
ಅಕ್ಷರ ಗಾತ್ರ

ರಾಮನಗರ: ‘ಜಾಗತೀಕರಣದಿಂದ ಸಮಾಜ ಮತ್ತಷ್ಟು ದಿಕ್ಕು ತಪ್ಪುತ್ತಿದೆ’ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್‌ ಅಮಿನ್ ಮಟ್ಟು ಅಭಿಪ್ರಾಯಪಟ್ಟರು.

ಸಮಾಜ ಕಲ್ಯಾಣ ಇಲಾಖೆ ಸಮ್ಮೇಳನ ಆಯೋಜನಾ ಸಮಿತಿ ವತಿಯಿಂದ ಡಾ.ಬಿ.ಆರ್. ಅಂಬೇಡ್ಕರ್‌ ಅವರ 125ನೇ ಜಯಂತಿಯ ವರ್ಷಾಚರಣೆಯ ಅಂಗವಾಗಿ ‘ಅಂಬೇಡ್ಕರ್‌ ಜ್ಞಾನದರ್ಶನ ಅಭಿಯಾನ’ ಪ್ರಯುಕ್ತ ಸಾಮಾಜಿಕ ಕಾರ್ಯರ್ತರಿಗೆ ಭಾನುವಾರ ಸಂಜೆ ಹಮ್ಮಿಕೊಂಡಿದ್ದ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಜಾತೀಯತೆಯನ್ನು ತೊಲಗಿಸುವ ದೃಷ್ಟಿಯಿಂದ ಜಾಗತೀಕರಣ ಅವಶ್ಯಕ ಎನ್ನುವ ಕೆಲ ಬಂಡವಾಳಶಾಹಿಗಳು ಈ ಬಗ್ಗೆ ನೈತಿಕವಾಗಿ ಪ್ರಶ್ನಿಸಿಕೊಳ್ಳಬೇಕು. ಇವುಗಳನ್ನು ಮುಂದೆ ಇಟ್ಟುಕೊಂಡು ಬಂಡವಾಳಶಾಹಿಗಳು ಸಮಾಜದ ಶಾಂತಿ ಕದಡುತ್ತಿದ್ದಾರೆ. ಹೋರಾಟಗಳು ಕೇವಲ ಪುಸ್ತಕಗಳಿಗೆ ಮಾತ್ರ ಸಿಮೀತಗೊಂಡಿದೆ’ ಎಂದು ವಿಷಾದಿಸಿದರು.

‘ಅಂಬೇಡ್ಕರ್ ಅವರ ತತ್ವ-ಆದರ್ಶಗಳು ಎಲ್ಲರಿಗೂ ಮಾದರಿಯಾಗಬೇಕು. ಮಹಿಳೆಯರು ಹೆಚ್ಚಾಗಿ ಸಮಾಜದ ಮುಖ್ಯವಾಹಿನಿಗೆ ಬರಬೇಕು’ ಎಂದು ತಿಳಿಸಿದರು.

‘ಅಂಬೇಡ್ಕರ್‌ ಅವರನ್ನು ಬಹಿರಂಗವಾಗಿ ಟೀಕಿಸುತ್ತಿದ್ದವರು ಇಂದು ಅಂಬೇಡ್ಕರ್ ಅವರನ್ನು  ಅಪ್ಪಿಕೊಳ್ಳುವಂತೆ ನಟಿಸುತ್ತಿದ್ದಾರೆ.  ಹೀಗಾಗಿ ಇಂತಹ ಚಿಂತಕರ ಬಗ್ಗೆ ಸಮಾಜ ಎಚ್ಚರ ವಹಿಸಬೇಕು’ ಎಂದರು.

ಜಾನಪದ ವಿದ್ವಾಂಸ ಕುರುವ ಬಸವರಾಜ್‌ ‘ಅಂಬೇಡ್ಕರ್ ಒಂದು ಸಮುದ್ರವಿದ್ದಂತೆ, ಅವರನ್ನು ಪೂರ್ಣ ತಿಳಿಯಬೇಕಾದರೆ ಆಳ ಅಧ್ಯಯನ ಮಾಡಬೇಕು’ ಎಂದು ತಿಳಿಸಿದರು.

ಮಂಡ್ಯ ಜಿಲ್ಲಾ ಪಂಚಾಯಿತಿ ಕಾರ್ಯಪಾಲಕ ಎಂಜಿನಿಯರ್‌ ಚಂದ್ರಹಾಸ್‌ ಮಾತನಾಡಿ ‘ದಲಿತ ಸಮುದಾಯದವರು ಜಾಗೃತಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಈ ಬಡ್ತಿ ಮೀಸಲಾತಿಯನ್ನು ಬೇಡ ಎನ್ನುತ್ತಿರುವವರು ಮೀಸಲಾತಿ ಕೊಡುವುದು ಬೇಡ ಎಂದು ನಿರ್ಧರಿಸುತ್ತಾರೆ’ ಎಂದರು.

ಸಹಾಯಕ ಪ್ರಾಧ್ಯಾಪಕ ಪ್ರಕಾಶ್‌ ಮಂಟೇದ ಮಾತನಾಡಿ ‘ಅಂಬೇಡ್ಕರ್ ಚಿಂತನೆಗಳು ಜಗತ್ತಿಗೆ ಸಂದೇಶವನ್ನು ಸಾರುತ್ತವೆ’ ಎಂದು ತಿಳಿಸಿದರು. ಹಾರೋಹಳ್ಳಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಸಿದ್ದಗಂಗಮ್ಮ ಮಾತನಾಡಿದರು. ಪ್ರತಿಭಾನ್ವಿತ ವಿದ್ಯಾರ್ಥಿನಿ ಅರುಣಾಕುಮಾರಿ ಅವರನ್ನು ಸನ್ಮಾನಿಸಲಾಯಿತು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಂ.ರಾಜು, ಚಿಂತಕ ಶಿವಸುಂದರ್‌, ಅಂಬೇಡ್ಕರ್ ಜ್ಞಾನದರ್ಶನ ಅಭಿಯಾನದ ವಲಯ ಸಂಯೋಜಕಿ ರೂಪ ಕೆ.ಮತ್ತೀಕೆರೆ, ಜಿಲ್ಲಾ ಸಂಯೋಜಕಿ ಕೆ.ಆರ್. ಸೌಮ್ಯ ಇತರರು ಇದ್ದರು. ಸಾಮಾಜಿಕ ಕಾರ್ಯರ್ತೆ ರಾಣಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT