ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವನಹಳ್ಳಿ:ನಿರುಪಯುಕ್ತ ಕೊಳವೆ ಬಾವಿ ಹೆಚ್ಚಳ

ಭವಿಷ್ಯದಲ್ಲಿ ನೀರಿಗೆ ಹಾಹಾಕಾರ ಸಾಧ್ಯತೆ?–ಜನರಲ್ಲಿ ಆತಂಕ, ನೀರಿಗಾಗಿ ಖಾಸಗಿ ಪಂಪ್‌ಸೆಟ್‌ಗಳ ಮೊರೆ
Last Updated 10 ಏಪ್ರಿಲ್ 2017, 6:16 IST
ಅಕ್ಷರ ಗಾತ್ರ

ದೇವನಹಳ್ಳಿ: ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಪ್ರಸ್ತುತ ಕುಡಿಯುವ ನೀರಿನ ಕೊರತೆ ಉಂಟಾಗಿದೆ. ಅಂತರ್ಜಲ ಮಟ್ಟ ಕುಸಿತ, ಭವಿಷ್ಯದಲ್ಲಿ ನೀರಿನ ಹಾಹಾಕಾರ ಉಂಟಾಗುವ ಸಾಧ್ಯತೆಯನ್ನು ಇದು ಪುಷ್ಟೀಕರಿಸುತ್ತದೆ ಎಂದು ಜನರು ಆತಂಕ ಸೂಚಿಸಿದ್ದಾರೆ.

ಅನೇಕ ಗ್ರಾಮಗಳಲ್ಲಿ ಟಾಸ್ಕ್‌ ಫೋರ್ಸ್‌ ಅಡಿಯಲ್ಲಿ ಕೊಳವೆ ಬಾವಿ ಕೊರೆಯಲಾಗುತ್ತಿದೆ. ರೈತರು ಕೃಷಿ ಹಾಗೂ ತೋಟಗಾರಿಕೆ ಬೆಳೆಗಳಿಗೆ ಕೊಳವೆ ಬಾವಿ ಕೊರೆಯಿಸುತ್ತಿದ್ದಾರೆ. ಇದರ ನಡುವೆ ಅಸಮರ್ಪಕ ವಿದ್ಯುತ್ ಕಡಿತದಿಂದ ಸಮಸ್ಯೆ ಇನ್ನಷ್ಟು ಉಲ್ಬಣವಾಗುವ ಲಕ್ಷಣ ನಿಚ್ಚಳವಾಗಿ ಕಂಡು ಬರುತ್ತಿದೆ ಎಂಬುದು ನಾಗರಿಕರ ದೂರು.

ಸಾರ್ವಜನಿಕರು ಮತ್ತು ಜಾನುವಾರುಗಳ ನಿತ್ಯ ಬಳಕೆ ನೀರಿಗೂ ಖಾಸಗಿ ಪಂಪ್‌ಸೆಟ್‌ಗಳ ಮೊರೆ ಹೋಗುವಂತಾಗಿದೆ. ಗ್ರಾಮದ ಸುತ್ತಲಿನ ತೋಟಗಳಿಗೆ ಜನರು ಅಲೆಯುತ್ತಿದ್ದಾರೆ. ಕೊಯಿರಾ, ದಿನ್ನೆಸೊಲೂರು ಸೇರಿದಂತೆ ಕೆಲವು ಗ್ರಾಮಗಳಲ್ಲಿ 10 ರಿಂದ 15 ದಿನಗಳಿಗೊಮ್ಮೆ ನೀರು ಪಡೆಯಲು ಚಾತಕ ಪಕ್ಷಿಯಂತೆ ಕಾಯುವ ಸ್ಥಿತಿ ಇದೆ.

ಪುರಸಭೆ ವ್ಯಾಪ್ತಿಯಲ್ಲಿ ಕಳೆದ ವರ್ಷ 12 ರಿಂದ 15 ದಿನಗಳಿಗೊಮ್ಮೆ ಪೂರೈಕೆಯಾಗುತ್ತಿದ್ದ ಕುಡಿಯುವ ನೀರು ಪ್ರಸ್ತುತ 7ರಿಂದ 8 ದಿನಗಳಿಗೊಮ್ಮೆ ಕೊಳಾಯಿಗಳಲ್ಲಿ ಬರುತ್ತಿದೆ. ಇದು ಎಷ್ಟು ದಿನ ಹೀಗೆ ಎಂಬುದು ಸ್ಥಳೀಯರ ಪ್ರಶ್ನೆ.

2011ರ ಜನಗಣತಿಯಂತೆ ಪುರಸಭೆ ವ್ಯಾಪ್ತಿಯಲ್ಲಿ 48 ಸಾವಿರ ಜನಸಂಖ್ಯೆ ಇದೆ, ಪಟ್ಟಣದ ನಾಗರಿಕರಿಗೆ ನಿತ್ಯ ಕನಿಷ್ಠ 18 ರಿಂದ 20 ಲಕ್ಷ ಲೀಟರ್‌ ನೀರಿನ ಬಳಕೆಯ ಅವಶ್ಯಕತೆ ಇದೆ.

ಪ್ರಸ್ತುತ 12 ರಿಂದ 15 ಲಕ್ಷ ಲೀಟರ್‌ ಪೂರೈಕೆ ಮಾಡುತ್ತಿದೆ; ಇದು ಬಳಕೆಗೆ ಸಾಲದು. ಪೂರೈಕೆಯಾಗುತ್ತಿರುವ ಒಂದೆರಡು ಕೊಳವೆ ಬಾವಿಗಳಲ್ಲಿ ಅಂತರ್ಜಲದ ಮಟ್ಟ ಕುಸಿದರೆ ನೀರಿನ ಸಮಸ್ಯೆ ತೀವ್ರವಾಗಲಿದೆ ಎಂಬುದು ಪಟ್ಟಣದ ನಾಗರಿಕರ ಆತಂಕ.

ಪಟ್ಟಣದಲ್ಲಿರುವ ವಿವಿಧ ಪಕ್ಷಗಳ ಪ್ರಭಾವಿ ಮುಖಂಡರು ಸಂಘ ಸಂಸ್ಥೆಗಳ ಮುಖ್ಯಸ್ಥರು ತಮ್ಮ ಮನೆಗಳಿಗೆ ಮನಸೋ ಇಚ್ಛೆ ಕೊಳಾಯಿ ಸಂಪರ್ಕ  ಕಲ್ಪಿಸಿಕೊಂಡಿದ್ದಾರೆ. ಪೂರೈಕೆಯಾಗುವ ನೀರು ಬೀದಿಯಲ್ಲಿನ ಕೊನೆಯ ಬಡಾವಣೆಗಳಿಗೆ ತಲುಪುತ್ತಿಲ್ಲ.  ಕೆಲ ಸದಸ್ಯರು ಹಲವು ಕೊಳಾಯಿ ಸಂಪರ್ಕ ಪಡೆದಿದ್ದು ಅಕ್ರಮ ಕೊಳಾಯಿಗೆ ಕಡಿವಾಣ ಹೇಗೆ ಸಾಧ್ಯವಾಗಲಿದೆ ಎಂಬುದು ಸ್ಥಳೀಯರ ಪ್ರಶ್ನೆ.

ಕುಡಿಯುವ ನೀರಿನ ಶಾಶ್ವತ ಯೋಜನೆಯಿಂದ ವಂಚಿತವಾಗಿರುವ ತಾಲ್ಲೂಕಿನಲ್ಲಿ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿ 14 ಮತ್ತು ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿ 110 ಕೆರೆಗಳಿವೆ. 20 ವರ್ಷಗಳಿಂದ ಯಾವುದೇ ಕೆರೆ ಕೋಡಿ ಹರಿದಿಲ್ಲ, ಒಂದೆರಡು ಕೆರೆಯಲ್ಲಿ ಸಣ್ಣ ಪ್ರಮಾಣದಲ್ಲಿ ಹರಿದ ನೀರು ತಿಂಗಳಲ್ಲಿ ಖಾಲಿಯಾಗಿದೆ.

ತಾಲ್ಲೂಕಿನ ಅನೇಕ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಕೆರೆಯಂಗಳದಲ್ಲೇ  ಕೊಳವೆಬಾವಿ ಕೊರೆಯಿಸುತ್ತಿದ್ದರೂ ಅಕ್ರಮ ಮರಳು ಮಾಫಿಯಾ ಅಡ್ಡೆಯಿಂದಾಗಿ ಅಂತರ್ಜಲ ಬರಿದಾಗುತ್ತಿದೆ. ಇದರಿಂದಾಗಿ ಜನ ಜಾನುವಾರುಗಳಿಗೆ ಹನಿ ನೀರು ಸಿಗದೆ ಪರದಾಡುವಂತಾಗಿದೆ ಎಂಬುದು ಕೆರೆಯಂಚಿನ ಗ್ರಾಮಸ್ಥರ ಅಳಲು.

ಪುರಸಭೆ ವ್ಯಾಪ್ತಿಯ ಕೊಳಾಯಿ ಸಂಪರ್ಕ: ವಾಸದ ಉದ್ದೇಶಕ್ಕಾಗಿ 1,496, ವಾಣಿಜ್ಯ ಉದ್ದೇಶಕ್ಕಾಗಿ 60, ಸಾರ್ವಜನಿಕರ ಬೀದಿ ಕೊಳಾಯಿ ಸಂಪರ್ಕ 225 ಒಟ್ಟು 1771 ಇದ್ದರೂ ಶೇ 25 ರಷ್ಟು ಕೊಳಾಯಿಗಳಲ್ಲಿ ನೀರು ಬರುತ್ತಿಲ್ಲ ಎಂಬುದು ಜನರ ದೂರು.

ತಾಲ್ಲೂಕಿನ ಕೊಳವೆಬಾವಿಗಳ ಸ್ಥಿತಿ: ತಾಲ್ಲೂಕಿನಲ್ಲಿ ಕೃಷಿ ಮತ್ತು ವಾಣಿಜ್ಯ ಸೇರಿದಂತೆ ಒಟ್ಟು 19,596 ಕೊಳವೆಬಾವಿ ಪೈಕಿ 14,306 ಕೊಳವೆ ಬಾವಿಗೆ ವಿದ್ಯುತ್ ಸಂಪರ್ಕವಿದೆ. 6,903 ನಿರುಪಯುಕ್ತವೆಂದು ವಿದ್ಯುತ್ ಸಂಪರ್ಕ ಕಡಿತ ಮಾಡಲಾಗಿದೆ.

ಉಳಿದ ಕೊಳವೆ ಬಾವಿಗಳಲ್ಲಿ ಎಷ್ಟರ ಮಟ್ಟಿಗೆ ನೀರಿದೆ ಎಂಬುದು ಗೊತ್ತಿಲ್ಲ. ಕೊಳವೆ ಬಾವಿ ಕೊರೆಯಿಸಿದ ಆರಂಭದಲ್ಲೇ ಅಂತರ್ಜಲ ಸಿಗದೆ ಇರುವ ಬಗ್ಗೆ ಮಾಹಿತಿ ಇಲ್ಲ ಎಂಬುದು ಬೆಸ್ಕಾಂ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಕುಂದಾಣ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಉಗನವಾಡಿ ಒಂದೇ ಗ್ರಾಮದಲ್ಲಿ ನಾಲ್ಕು ಕೊಳವೆ ಬಾವಿಯನ್ನು 1200ರಿಂದ 1350 ಅಡಿ ಕೊರೆಯಿಸಿದರೂ ನೀರು ಸಿಕ್ಕಿಲ್ಲ, ಮತ್ತೊಂದು ಕೊಳವೆ ಬಾವಿ ಕೊರೆಯಿಸಬೇಕು ಎನ್ನುತ್ತಾರೆ ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಸಿ.ಮಂಜುನಾಥ್.

ಹಿಂದೆ ತಾಲ್ಲೂಕಿನ ಬಾಲೇಪುರ ಗ್ರಾಮದ ಪಕ್ಕದಲ್ಲಿ ಕೊಳವೆಬಾವಿ ಕೊರೆಯಿಸಿ ದೇವನಹಳ್ಳಿ ಪುರಸಭೆಗೆ ನೀರು ಪೂರೈಕೆ ಮಾಡಲಾಗುತ್ತಿತ್ತು. ಎಲ್ಲಾ ಕೊಳವೆ ಬಾವಿ ಬತ್ತಿ ಹೋಗಿದ್ದು ಪ್ರಸ್ತುತ ದೇವನಹಳ್ಳಿ ಚಿಕ್ಕ ಸಿಹಿ ನೀರಿನ ಕೆರೆಯಂಗಳದಲ್ಲಿ ನಾಲ್ಕು ಕೊಳವೆ ಬಾವಿ ಪೈಕಿ ಮೂರರಲ್ಲಿ ನೀರು ಜಲಸಂಗ್ರಹಗಾರಕ್ಕೆ ತುಂಬಿಕೊಂಡು ಶುದ್ಧೀಕರಿಸಿ ನಂತರ ಸಾರ್ವಜನಿಕರಿಗೆ ಪೂರೈಕೆ ಮಾಡಲಾಗುತ್ತಿದೆ ಎಂದು ಪುರಸಭೆ ಅಧ್ಯಕ್ಷ ನರಸಿಂಹಮೂರ್ತಿ ತಿಳಿಸಿದ್ದಾರೆ. ಬಯಾಪಗೆ ₹3.5 ಕೋಟಿ ಕುಡಿಯುವ ನೀರಿಗೆ ಅನುದಾನ ನೀಡಿ ಎಂದು ಮನವಿ ಮಾಡಲಾಗಿದೆ ಎಂದು  ಹೇಳಿದ್ದಾರೆ.
–ವಡ್ಡನಹಳ್ಳಿ ಭೋಜ್ಯಾನಾಯ್ಕ್

ಎಲ್ಲೆಡೆ ಟ್ಯಾಂಕರ್‌ ನೀರಿನ ದರ ಏರಿಕೆ
ತಾಲ್ಲೂಕಿನಲ್ಲಿ ಐದು ವರ್ಷಗಳಿಂದ ವಾಡಿಕೆ ಮಳೆ ಬಿದ್ದಿಲ್ಲ. ಬರಗಾಲದಲ್ಲಿನ ನೀರಿನ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡಿರುವ ಖಾಸಗಿ ನೀರು ಮಾರಾಟ ದಂಧೆಕೋರರು, ಪ್ಯಾಕೇಜ್‌ ಮಾರಾಟ ವ್ಯವಸ್ಥೆ ವಿಸ್ತರಿಸಿಕೊಂಡಿದ್ದು ಪ್ರತಿ ಬಿಂದಿಗೆಗೆ ₹3ರಿಂದ 4, ಒಂದು ಟ್ಯಾಂಕರ್‌ಗೆ ₹650ರಿಂದ 750ರಂತೆ ಮಾರಾಟ ಮಾಡುತ್ತಿದ್ದಾರೆ.

ಕಳೆದ ವರ್ಷದ ವಿಧಿಸುತ್ತಿದ್ದ ದರಕ್ಕಿಂತ 25ರಷ್ಟು ಹೆಚ್ಚು ಬೆಲೆ ನೀಡಬೇಕಾಗಿದೆ. ಇದು ನಾಗರಿಕರಲ್ಲಿ ಆತಂಕ ಹೆಚ್ಚಿಸಿದೆ. ಮರಳು ದಂಧೆಯಿಂದ ಅಂತರ್ಜಲ ಕುಸಿತ  ಅಂತರ್ಜಲ ಮಟ್ಟ ಕುಸಿಯಲು ಮರಳು ದಂಧೆಯೂ ಕಾರಣ ಎನ್ನುತ್ತಾರೆ ಸ್ಥಳೀಯ ನಿವಾಸಿ ಎಂ.ಆಂಜಿನಪ್ಪ.

ತಾಲ್ಲೂಕಿನ ಕುಂದಾಣ ಹೋಬಳಿ ವ್ಯಾಪ್ತಿಯ ಮುದ್ದನಾಯಕನಹಳ್ಳಿ, ತೈಲಗೆರೆ, ಮಿಸಗಾನಹಳ್ಳಿ, ಚಿಕ್ಕಗೊಲ್ಲಹಳ್ಳಿ, ಸೊಣ್ಣೆನಹಳ್ಳಿ, ಬಿದಲೂರು ಸೇರಿ ಅನೇಕ ಗ್ರಾಮಗಳ ಸುತ್ತಮುತ್ತ ಸರ್ಕಾರಿ ಜಾಗ ಮತ್ತು ಗೋಮಾಳಗಳಲ್ಲಿ, ಖಾಸಗಿ ಭೂಮಿಗಳಲ್ಲಿ ಮರಳು ಅಕ್ರಮ ದಂಧೆ ನಡೆಯುತ್ತಿದೆ ಎಂದು ಜನರು ಆರೋಪಿಸಿದ್ದಾರೆ.

ಯಾವುದೇ ರೀತಿಯಿಂದ ಇದಕ್ಕೆ ಕಡಿವಾಣವಿಲ್ಲ, ವಿಮಾನ ನಿಲ್ದಾಣ ಆರಂಭಗೊಂಡ ನಂತರ ಮರಳು ಎಗ್ಗಿಲ್ಲದೆ ಲೂಟಿಯಾಗುತ್ತಿದೆ. ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ ಎನ್ನುತ್ತಾರೆ.

*
ಪರಿಸ್ಥಿತಿ ಬಹಳ ಕಷ್ಟಕರವಾಗುತ್ತಿದೆ. ಈ ಬಾರಿ ಮುಂಗಾರು ಕೈಕೊಟ್ಟರೆ ಪ್ರತಿನಿತ್ಯ ನೀರಿಗಾಗಿ ಗಲಾಟೆ ತಪ್ಪಿದ್ದಲ್ಲ.
-ಕೆ.ಸಿ.ಮಂಜುನಾಥ್, ಜಿಲ್ಲಾ ಪಂಚಾಯಿತಿ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT