ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಲು ಲೆಕ್ಕಿಸದೆ ಹಕ್ಕು ಚಲಾಯಿಸಿದ ಮತದಾರರು

Last Updated 10 ಏಪ್ರಿಲ್ 2017, 8:45 IST
ಅಕ್ಷರ ಗಾತ್ರ

ಚಾಮರಾಜನಗರ: ಬಂಡೀಪುರ ರಾಷ್ಟ್ರೀಯ ಉದ್ಯಾನದ ಬಳಿಯ ಹಂಗಳ ಗ್ರಾಮದ ರಸ್ತೆಯಲ್ಲಿ ದೂಳು ಎದ್ದಿತ್ತು. ಈ ದೂಳಿಗೆ ರಸ್ತೆಬದಿ ಗುಂಪುಗೂಡಿದ್ದ ಜನರು ದಿಕ್ಕೆಟ್ಟಿದ್ದರು. ಜನರ  ಸಮಾಧಾನಕ್ಕಾಗಿ ದೂಳು ಶಮನ ಮಾಡಲು ಟ್ಯಾಂಕರ್‌ ಹರಸಾಹಸಪಟ್ಟು ರಸ್ತೆಗೆ ನೀರು ಸುರಿಸುತ್ತಿತ್ತು.

ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತೆರೆದಿದ್ದ ಮತಗಟ್ಟೆಯಲ್ಲಿ ಮತ ಚಲಾಯಿಸಿ ಮಲ್ಲಮ್ಮ ಮನೆಯತ್ತ ಹೆಜ್ಜೆ ಹಾಕುತ್ತಿದ್ದರು. ನಿಮ್ಮೂರಲ್ಲಿ ಚುನಾವಣೆಯ ಕಾವು ಹೇಗಿದೆ? ಎಂಬ ಪ್ರಶ್ನೆಗೆ ಅವರು, ‘ಕುಡಿಯಲು ನೀರಿಲ್ಲ. ನಮ್ಮ ಕಷ್ಟ ಕೇಳೋರು ಯಾರು?’ ಎಂಬ ಪ್ರಶ್ನೆ ಎಸೆದರು.

‘ಎರಡು ವಾರಕ್ಕೊಮ್ಮೆ ಕುಡಿಯಲು ನೀರು ಬಿಡುತ್ತಾರೆ. ನೀರಿಲ್ಲದೆ ಪ್ರತಿದಿನ ತೊಂದರೆ ಅನುಭಸುತ್ತೇವೆ. ಚುನಾವಣೆ ಬಳಿಕ ಈ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ. ಹಾಗಾಗಿ, ಮತ ಚಲಾಯಿಸಿದ್ದೇನೆ’ ಎನ್ನುತ್ತಾ ಮನೆಯತ್ತ ಹೊರಟರು.

ಮತ ಚಲಾಯಿಸಲು ಸಾಲಿನಲ್ಲಿ ನಿಂತಿದ್ದ ನಾಗರಾಜು ಅವರೂ ಕುಡಿಯುವ ನೀರಿನ ಸಮಸ್ಯೆ ತೆರೆದಿಟ್ಟರು. ‘ಗ್ರಾಮ ದಲ್ಲಿ ನೀರು ಲಭಿಸುತ್ತಿಲ್ಲ. ಕೃಷಿ ಪಂಪ್‌ಸೆಟ್‌ಗಳ ಬಳಿಗೆ ತೆರಳಿ ನೀರು ಸಂಗ್ರಹಿಸಲು ಹಣ ನೀಡಬೇಕು. 1,000 ಲೀಟರ್ ನೀರಿಗೆ ₹ 100 ನೀಡಬೇಕಿದೆ. ನಮ್ಮ ಕಷ್ಟ ಯಾರಿಗೂ ಬೇಡ’ ಎಂದು ನೋವು ತೋಡಿಕೊಂಡರು. ಇದಕ್ಕೆ ಪಕ್ಕದಲ್ಲಿಯೇ ನಿಂತಿದ್ದ ಮಂಜು ಧ್ವನಿಗೂಡಿಸಿದರು.

ಬಂಡೀಪುರ ವ್ಯಾಪ್ತಿಯಲ್ಲಿರುವ ಗಿರಿಜನರ ಕಾಲೊನಿ ಗಳಾದ ಯಲಚೆಟ್ಟಿ, ಜಕ್ಕಳ್ಳಿ, ಮಂಗಲ ಗ್ರಾಮದಲ್ಲೂ ಜನರು ಉತ್ಸಾಹದಿಂದ ಮತ ಚಲಾಯಿಸಿದರು. ಯಲಚೆಟ್ಟಿ ಗ್ರಾಮ ದಲ್ಲಿ ಮಾತಿಗೆ ಸಿಕ್ಕಿದ ಮಹದೇವ, ‘ಇನ್ನೂ ಸಂಜೆವರೆಗೂ ಮತದಾನಕ್ಕೆ ಅವಕಾಶವಿದೆ. ಕೊನೆಯ ಕ್ಷಣದಲ್ಲಿ ಮತ ಚಲಾಯಿಸಬಹುದಲ್ಲವೇ’ ಎಂಬ ನಿಗೂಢವಾದ ಪ್ರಶ್ನೆ ಮುಂದಿಟ್ಟರು.

ಕೈಸನ್ನೆಯ ಪ್ರಚಾರ: ಉಪ ಚುನಾವಣೆ ಯಲ್ಲಿ ಕ್ಷೇತ್ರದ ವ್ಯಾಪ್ತಿ 250 ಮತ ಗಟ್ಟೆ ತೆರೆಯಲಾಗಿತ್ತು. ಸೂಕ್ಷ್ಮ ಮತಗಟ್ಟೆಗಳಲ್ಲಿ ಬಿಗಿ ಬಂದೋಬಸ್ತ್‌ ಮಾಡಲಾಗಿತ್ತು. ಮತದಾನದ ಸಂಪೂರ್ಣ ಪ್ರಕ್ರಿಯೆಯನ್ನು ಎಲ್ಲ ಮತಗಟ್ಟೆಗಳಲ್ಲೂ ವಿಡಿಯೊ ಚಿತ್ರೀಕರಣ ಮಾಡಲಾಗುತ್ತಿತ್ತು. ಹಾಗಾಗಿ, ಘರ್ಷಣೆಗೆ ಅವಕಾಶ ಇರಲಿಲ್ಲ.

ಮತಗಟ್ಟೆ ಮುಂಭಾಗ ಗಲಾಟೆ ನಡೆಸಿದರೆ ವಿಡಿಯೊ ಚಿತ್ರೀಕರಿಸಿ ಪ್ರಕರಣ ದಾಖಲಿಸುತ್ತಾರೆಂಬ ಭಯ ರಾಜಕೀಯ ಪಕ್ಷದ ಮುಖಂಡರಿಗೆ ಕಾಡುತ್ತಿತ್ತು. ಮತಗಟ್ಟೆಯಿಂದ 100 ಮೀಟರ್ ದೂರದಲ್ಲಿ ಪ್ರಚಾರಕ್ಕೆ ನಿಷೇಧ ಹೇರಲಾಗಿತ್ತು. ಈ ಪ್ರದೇಶದಿಂದ ಅನತಿ ದೂರದಲ್ಲಿ ರಾಜಕೀಯ ಪಕ್ಷದ ಮುಖಂಡರು ಗುಪ್ತವಾಗಿ ಪ್ರಚಾರ ನಡೆಸುತ್ತಿದ್ದುದು ಕಂಡು ಬಂದಿತು.

ಮತ ಕೇಂದ್ರದೊಳಗೆ ತೆರಳುತ್ತಿದ್ದ ಮತದಾರರಿಗೆ ಸದ್ದಿಲ್ಲದೆ ಕೈಸನ್ನೆಯ ಮೂಲಕ ಮತ ನೀಡುವಂತೆ ಕೋರುತ್ತಿ ದ್ದರು. ಕೆಲವೆಡೆ ಬಹಿರಂಗವಾಗಿ ರಾಜಕೀಯ ಪಕ್ಷದ ಮುಖಂಡರು ತಮ್ಮ ಪಕ್ಷದ ಅಭ್ಯರ್ಥಿಗೆ ಮತ ಚಲಾಯಿಸುವಂತೆ ದುಂಬಾಲು ಬೀಳುತ್ತಿದ್ದರು.ಬೆಳಿಗ್ಗೆ ಮತದಾನ ಮಂದಗತಿಯಲ್ಲಿ ಸಾಗಿತು. ಮಧ್ಯಾಹ್ನ ಚುರುಕುಗೊಂಡಿತು. ಜನರು ಬಿಸಿಲು ಲೆಕ್ಕಿಸದೆ ಮತಗಟ್ಟೆಗೆ ತೆರಳಿ ಮತದಾನ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT