ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರಭಿ ಮುಡಿಗೆ ಪ್ರಶಸ್ತಿಯ ಮಲ್ಲಿಗೆ!

Last Updated 10 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಆಕೆ ಮಾಡಿದ್ದು ಗ್ಲಾಮರ್‌ ಇಲ್ಲದ, ವಿಧವೆಯ ಪಾತ್ರ. ಇಡೀ ಚಿತ್ರದಲ್ಲಿ ಆಕೆಯ ಹೆಸರು ಎಲ್ಲಿಯೂ ಪ್ರಸ್ತಾಪವಾಗುವುದಿಲ್ಲ. ಅಸಲಿಗೆ ಆ ಚಿತ್ರದಲ್ಲಿ ಆಕೆಗೆ ಹೆಸರೇ ಇರುವುದಿಲ್ಲ. ಆದರೆ ಪಾತ್ರವನ್ನು ಆಯ್ಕೆ ಮಾಡಿದಾಗಲೂ, ಸಿನಿಮಾ ಮಾಡಿದಾಗಲೂ ಅದೊಂದು ಐಬು ಅಂತ ಆಕೆಗೆ ಅನಿಸಲೇ ಇಲ್ಲ!

2016ರ ರಾಷ್ಟ್ರೀಯ ಪ್ರಶಸ್ತಿಗೆ ಭಾಜನವಾಗಿರುವ ‘ಮಿನ್ನಾಮಿನ್‌ಙ್‌’ ಚಿತ್ರದ ನಾಯಕಿ ಸುರಭಿಲಕ್ಷ್ಮಿಯ ಪಾತ್ರ ಅಂತಹುದು.

ಅದೊಂದು ದಿನ ಸುರಭಿ ಮನೆಯಲ್ಲಿದ್ದರು. ಚಿತ್ರ ನಿರ್ದೇಶಕ ಅನಿಲ್‌ ಥಾಮಸ್‌ ಮತ್ತು ಚಿತ್ರಕತೆ/ಸಂಭಾಷಣೆ ಬರೆದ ಮನೋಜ್‌ ರಾಮ್‌ಸಿಂಗ್‌ ಅವರು  ಮನೆಗೆ ಬಂದವರೇ ಒಂದು ಚಿತ್ರಕತೆಯನ್ನು ಸುರಭಿ ಕೈಗಿತ್ತರು.

‘ಈ ಕತೆ ಓದು. ಇಷ್ಟವಾದರೆ ಮಾತ್ರ ಪಾತ್ರ ಮಾಡು’ ಎಂದು ಹೇಳಿದರು. ಸುರಭಿ ಓದುತ್ತಾ ಹೋದಂತೆ ಚಿತ್ರ ಮತ್ತು ತಾವು ಮಾಡಬೇಕಿದ್ದ ಪಾತ್ರದ ತೂಕ ಗೊತ್ತಾಯಿತು. ಆ ಕ್ಷಣವೇ ಸೈ ಅಂದರು.

ಮಿನ್ನಾಮಿನ್‌ಙ್‌’ಗೆ ಸುರಭಿ ಆಯ್ಕೆಯಾದುದು ಹಾಗೆ. ಕೋಯಿಕ್ಕೋಡ್‌ನವರಾದ ಸುರಭಿ ಮಾತೃಭಾಷೆ ಮಲಯಾಳವೇ ಆದರೂ ಚಿತ್ರದ ವಿಧವೆ ತಿರುವನಂತಪುರ ಶೈಲಿಯಲ್ಲಿ ಮಾತನಾಡಬೇಕಿತ್ತು. ಆಗ ಅವರಿಗೆ ನೆರವಿಗೆ ಬಂದದ್ದು ಕೆಳದಿ ಶ್ರೀ ಶಂಕರಾಚಾರ್ಯ ಯುನಿವರ್ಸಿಟಿ ಹಾಸ್ಟೆಲ್‌ನ ಮೀನಾ ಮೇಟ್ರನ್‌.

‘ಮೀನಾ ಮೇಟ್ರನ್‌ ಸೀರೆ ಉಡುವ ಶೈಲಿ, ಮಾತನಾಡುವ ರೀತಿ, ಹಾವಭಾವ, ವರ್ತನೆ ಎಲ್ಲವೂ ‘ಮಿನ್ನಾಮಿನ್‌ಙ್‌’ನ ನನ್ನ ಪಾತ್ರಕ್ಕೆ ಹೋಲುತ್ತಿದ್ದವು. ಹಾಗಾಗಿ ಚಿತ್ರದಲ್ಲಿ ಅವರಂತೆಯೇ ನಟಿಸಿದ್ದೇನೆ. ಆದರೆ ಅವರು ಮಾತುಮಾತಿಗೆ ಹೇಳುತ್ತಿದ್ದ ‘ಎಂಡೆ ಪರಮಶಿವನೇ’ ಎಂಬ ಉದ್ಗಾರ ನಿರ್ದೇಶಕರಿಗೆ ಇಷ್ಟವಾಗಿರಲಿಲ್ಲ. ಹಾಗಾಗಿ ಅದನ್ನು ಕೈಬಿಟ್ಟಿದ್ದೆ’ ಎಂದು ಸುರಭಿ ನೆನಪಿಸಿಕೊಂಡಿದ್ದಾರೆ.

‘ಮಿನ್ನಾಮಿನ್‌ಙ್‌’ ಚಿತ್ರದಲ್ಲಿನ  ಸುರಭಿ ಪಾತ್ರ ಮಲಯಾಳಂ ಚಿತ್ರರಂಗದಲ್ಲಿ ಹೊಸ ಸಂಚಲನವನ್ನೇ ಮೂಡಿಸಿತ್ತು. ಆದರೆ ರಾಷ್ಟ್ರೀಯ ಪ್ರಶಸ್ತಿಯಂತಹ ಮನ್ನಣೆ ಸಿಕ್ಕೀತು ಎಂದು ಕನಸೂ ಕಂಡಿರಲಿಲ್ಲವಂತೆ.

‘ಶುಕ್ರವಾರ ಬೆಳಿಗ್ಗೆ ಹತ್ತಾರು ವಾಹಿನಿಗಳ ಓಬಿ ವ್ಯಾನ್‌ಗಳು ನಮ್ಮ ಮನೆಯತ್ತ ಬರುತ್ತಿದ್ದಂತೆ, ‘ನಿನಗೆ ಯಾವುದೋ ಪ್ರಶಸ್ತಿ ಬಂದಿದೆಯಂತೆ’ ಎಂದು ಊರವರೆಲ್ಲಾ ಹೇಳಿದರು. ಹೌದಾ ಎಂದು ಸುಮ್ಮನಾಗಿದ್ದೆ ನಾನು. ಆದರೆ  ಅದು ರಾಷ್ಟ್ರೀಯ ಪ್ರಶಸ್ತಿ ಎಂದು ವಾಹಿನಿಯವರಿಂದಲೇ ನನಗೆ ಗೊತ್ತಾಗಿದ್ದು. ಸಹಜವಾಗಿಯೇ ಖುಷಿಯಾಗಿದೆ’ ಎಂದು ಸಿಂಪಲ್ಲಾಗಿ ಪ್ರತಿಕ್ರಿಯಿಸಿದ್ದಾರೆ ಸುರಭಿ.

ರಂಗಭೂಮಿ ಮತ್ತು ಕಿರುತೆರೆಯಲ್ಲಿ  ತಮ್ಮ ಸಹಜ ಅಭಿನಯದಿಂದ ಕಲಾಸಕ್ತರ   ನೆಚ್ಚಿನ ನಟಿಯಾಗಿದ್ದ ಸುರಭಿ ಕೇರಳದಲ್ಲಿ ಮಾತ್ರವಲ್ಲದೆ ಮಲಯಾಳಿಗಳ ಮನೆಮಾತಾಗಿದ್ದು ‘ಎಂ80ಮೂಸಾ’ ಧಾರಾವಾಹಿ ಮೂಲಕ. ಅದರಲ್ಲಿನ ಅವರ ‘ಪಾತು’ ಪಾತ್ರ ಕೋಯಿಕ್ಕೋಡ್‌ನ  ಪ್ರತಿ ಗೃಹಿಣಿಯ, ಮಹಿಳೆಯ  ಪ್ರತಿನಿಧಿಯಾಗಿಯೇ ಗುರುತಿಸಿಕೊಂಡಿತ್ತು.  ಮನಸ್ಸಿನಲ್ಲಿ ಅಂದುಕೊಂಡಿದ್ದನ್ನು ನೇರವಾಗಿ ಹೇಳಿಬಿಡುವ ಪಕ್ಕಾ ಗ್ರಾಮ್ಯ ಸ್ವಭಾವದ ಹೆಣ್ಣು ಪಾತು. ಅನಕ್ಷರಸ್ಥೆ ಬೇರೆ. ಹಾಗಾಗಿ ಮನೆಮಂದಿಯೆಲ್ಲಾ ಕಾದುಕುಳಿತು ಈ ಧಾರಾವಾಹಿಯನ್ನು ವೀಕ್ಷಿಸುವಂತಾಗಿತ್ತು.

ಇದರೊಂದಿಗೆ ಅವರಿಗೆ ಹೆಸರು ತಂದುಕೊಟ್ಟಿದ್ದು ‘ಲಾಫಿಂಗ್‌ ವಿಲ್ಲಾ’ ಎಂಬ ಟಿವಿ ಶೋ.

ಮೂರರ ಹರೆಯದಲ್ಲೇ ನಟನೆಗೆ ಇಳಿದವರು ಸುರಭಿ. ಆಗ ಮಾಡಿದ ಗೀತನಾಟಕವನ್ನು ಇಡೀ ಊರೇ ಮೆಚ್ಚಿಕೊಂಡಿತ್ತು. ಅದೇ ಖುಷಿಯಲ್ಲಿ ಮಗುವಿಗೆ ಯಾರೋ ಒಂದು ಪೊಟ್ಟಣ ಕಡಲೆ ಮತ್ತು ಕಲ್ಲಂಗಡಿ ಹಣ್ಣು ಕೊಡಿಸಿದ್ದರಂತೆ. ‘ಬಾಂಬೆ ಟೈಲರ್ಸ್‌’ ನಾಟಕದಲ್ಲಿನ ಅಭಿನಯಕ್ಕೆ ರಾಜ್ಯ ಮಟ್ಟದ ಪ್ರಶಸ್ತಿ ಬಂದಿತ್ತು.

ಮಿನ್ನಾಮಿನ್‌ಙ್‌’ಗೆ ರಾಷ್ಟ್ರೀಯ ಪ್ರಶಸ್ತಿ ಬಂದಾಗ ಸುರಭಿ ಈ ನೆನಪುಗಳನ್ನೆಲ್ಲ ಮೆಲುಕು ಹಾಕಿಕೊಂಡಿದ್ದಾರೆ.

ಸುರಭಿ, ನಿರ್ದೇಶಕರ ಮರ್ಜಿಗೆ ತಕ್ಕುದಾಗಿ ಪಾತ್ರಕ್ಕೆ ಒಗ್ಗಿಕೊಳ್ಳುವ ಜಾಯಮಾನದವರು. ಚಿತ್ರರಂಗದಲ್ಲಿ ಆಕೆಯನ್ನು ಗೆಲ್ಲಿಸಿದ್ದು ಈ ಜಾಯಮಾನವೇ. ರಾಷ್ಟ್ರೀಯ ಪ್ರಶಸ್ತಿ ಅರಸಿ ಬಂದಿರುವುದೂ ಅದೇ ಕಾರಣಕ್ಕೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT