ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರದ್ದಿ ಪತ್ರಿಕೆಗಳಿಂದ ಸಮಾಜಸೇವೆ

Last Updated 10 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

-ಸಹನಾ ಹೆಗಡೆ

*

ಹತ್ತು ವರ್ಷಗಳ ಹಿಂದೆ ಬೆಂಗಳೂರಿನ  ವಸತಿ ಸಮುಚ್ಚಯವೊಂದರಲ್ಲಿ ಮನೆ ಮಾಡಿದೆವು. ಗಂಟು ಕಟ್ಟಿಕೊಂಡು ತಂದಿದ್ದ ಸಾಮಾನುಗಳು ತಮ್ಮ ಸ್ಥಾನಗಳನ್ನು ಅಲಂಕರಿಸತೊಡಗಿದ್ದವು.

ಒಂದು ಭಾನುವಾರ ಬೆಳಿಗ್ಗೆ, ಕರೆಗಂಟೆಯ ಸದ್ದು. ಎದ್ದು ಬಾಗಿಲು ತೆರೆದರೆ ಸೆಣಬಿನ ಎರಡು ದಾರಗಳನ್ನು ಹಿಡಿದು ನಿಂತಿದ್ದ ಮಕ್ಕಳು. ಏನು, ಎತ್ತ, ಏಕೆ ಈ ದಾರ ಎಂದೆಲ್ಲ ಯೋಚಿಸುತ್ತಿದ್ದೆ. ಅಷ್ಟರಲ್ಲಿ ಹಿಂದಿನಿಂದ ಬಂದ ಪಕ್ಕದ ಮನೆಯ ಆಂಟಿ ನನ್ನ ಸಂದೇಹ ನಿವಾರಿಸಿದರು.

‘ಸೌತ್ ಸಿಟಿ’ ನಿವಾಸಿಗಳಾಗಿದ್ದ  ನಳಿನಿ, ಎಲ್.ವಿ.ಸುಬ್ರಮಣಿಯನ್ ಹಾಗೂ  ರಾಧಾ ಅನಂತ್ 2002ರಲ್ಲಿ ಸಮುಚ್ಚಯದ ನಿವಾಸಿಗಳಿಂದ ಹಳೆಯ ದಿನಪತ್ರಿಕೆಗಳನ್ನು, ಪುಸ್ತಕಗಳನ್ನು  ತಿಂಗಳಿಗೊಮ್ಮೆ ಸಂಗ್ರಹಿಸಿ ರದ್ದಿ ಅಂಗಡಿಗೆ ಮಾರುವ ಕ್ರಮ ಆರಂಭಿಸಿದರು. ಬಂದ ಹಣವನ್ನು  ಅಗತ್ಯವಿರುವ ಬಡವರಿಗೆ, ಸಂಘ ಸಂಸ್ಥೆಗಳಿಗೆ ಹಂಚುವುದು ಈ ಯೋಜನೆಯ ಭಾಗ.

ಈ ವಿಷಯ ತಿಳಿದ ತಕ್ಷಣ ನನಗೆ ಖುಷಿಯಾಯಿತು. ‘ಮುಂದಿನ ತಿಂಗಳಿನಿಂದ ನನ್ನ ಮಗಳೂ ನಿಮ್ಮೊಂದಿಗೆ ಬರುತ್ತಾಳೆ. ಅವಳಿಗೆ ತೊಂದರೆಯಿದ್ದಾಗ ನಾನು ಬರುತ್ತೇನೆ’ ಎಂದು ಹೇಳಿದೆ.

ಇಂಥ ಚಟುವಟಿಕೆಯೊಂದು ಬೇಡುವ ಪರಿಶ್ರಮ, ಸಹನೆ, ತಾಳ್ಮೆ, ಸೇವಾ ಮನೋಭಾವ ಅಗಾಧ. ಹೀಗೆ ಸಮಾನ ಮನಸ್ಕರನ್ನು ಒಗ್ಗೂಡಿಸಿಕೊಂಡು ಅಂದು ನಿರ್ಮಿಸಲ್ಪಟ್ಟಿದ್ದ ಕೆಲವೇ ಬ್ಲಾಕ್‌ಗಳಲ್ಲಿ ಸಂಗ್ರಹಣೆಯನ್ನು ಆರಂಭಿಸಿದಾಗ ಆದ  ಮೊದಲ ಸಂಗ್ರಹ ಒಂದು ಕ್ವಿಂಟಲ್. ಬಂದ ಹಣ ₹300. ಇದರಿಂದ ಅಕ್ಕಿ, ಕಿರಾಣಿ ಸಾಮಾನುಗಳನ್ನು ಕೊಂಡು ತಂದು ಒಂದೆರಡು ಸಮಾಜಸೇವಾ ಸಂಸ್ಥೆಗಳಿಗೆ ಕೊಟ್ಟಿದ್ದಾಯಿತು.

(ರದ್ದಿ ಕಾಗದ ಸಂಗ್ರಹಿಸುವ ಸ್ವಯಂ ಸೇವಕರು)

ಸುಬ್ರಹ್ಮಣಿಯನ್‌ ಅವರಿಗೆ ಆರು ತಿಂಗಳು ಸಿಂಗಪುರಕ್ಕೆ ಹೋಗಬೇಕಾಗಿ ಬಂದಾಗ ಈ ಕಾರ್ಯದ ಸಂಪೂರ್ಣ ಹೊಣೆಯನ್ನು ತಮ್ಮ ಹೆಗಲಿಗೇರಿಸಿಕೊಂಡವರು ಹಾಗೂ ಇಂದಿನವೆರಗೂ ಅದೇ ಶ್ರದ್ಧೆ, ನಿಷ್ಠೆಯಿಂದ ನಡೆಸಿಕೊಂಡು ಬರುತ್ತಿರುವವರು  ಅನಂತನಾರಾಯಣ ಮತ್ತು ರಾಧಾ.

ಹೊಸ ಅಪಾರ್ಟ್‌ಮೆಂಟ್‌ಗಳು ಕಟ್ಟಲ್ಪಟ್ಟಂತೆ, ಕೆಲಸದ ಜತೆಗೆ ಸ್ವಯಂಸೇವಕರ ಸಂಖ್ಯೆಯೂ ಹೆಚ್ಚಿತು. ಪ್ರಿಯಾ ವಿನೋದ್, ಭಾರತಿ ಸಂತೂರ್ಕರ್, ಲಲಿತಾ ಕಾಮತ್, ಶ್ಯಾಮಲಾ ಚಂದ್ರಘಟಗಿ ಹಾಗೂ ಶಾನಾಗೋಕುಲ್ ಆರಂಭದಿಂದಲೂ ಜೊತೆಗಿದ್ದು ಈ ಅಭಿಯಾನದ ಅಂಗವೇ ಆದರು. ಭಾನುವಾರದ ಬೆಳಗಿನ ಬೆಚ್ಚಗಿನ ಸವಿನಿದ್ದೆಯನ್ನು ಬಿಟ್ಟು ಮನೆಮನೆ ತಿರುಗಿ ದಾರ ಹಂಚಲು ಪತ್ರಿಕೆಗಳನ್ನು ಒಟ್ಟು ಮಾಡಲು ಮಿಂಚಿನಂತೆ ಓಡಾಡುವ ಮಕ್ಕಳು ಹಲವರಿದ್ದಾರೆ.

ರಜೆ, ಹಬ್ಬ, ಪರೀಕ್ಷೆ, ಸ್ವಯಂಸೇವಕರ ಲಭ್ಯತೆ ಇತ್ಯಾದಿಗಳನ್ನು ಗಮನದಲ್ಲಿಟ್ಟುಕೊಂಡು ನಿಯಮಿತ ಅಂತರದಲ್ಲಿ ಸಂಗ್ರಹಣೆಯ ದಿನಾಂಕವನ್ನು ನಿಗದಿಪಡಿಸಿ ಇ-ಮೇಲ್ ಹಾಗೂ ಸೂಚನಾ ಪತ್ರಗಳ ಮೂಲಕ ನಿವಾಸಿಗಳಿಗೆ ತಿಳಿಸಲಾಗುತ್ತದೆ.

ಈ ತನಕ ಇಂತಹ ಸುಮಾರು 170ಕ್ಕೂ ಹೆಚ್ಚು ಸಂಗ್ರಹಣಾ ಕಾರ್ಯಗಳು ನಡೆದಿದ್ದು ಸುಮಾರು 300 ಟನ್ (3 ಲಕ್ಷ ಕೆ.ಜಿ.) ರದ್ದಿ ಕಾಗದ ಸಂಗ್ರಹವಾಗಿದೆ. ಸಂಗ್ರಹವಾದ ಹಣ ಸುಮಾರು ₹30 ಲಕ್ಷ.  ಪ್ರಸ್ತುತ ಆಯ್ದ ಏಳು ಸಂಸ್ಥೆಗಳು ಹಾಗೂ ಪೇಪರ್‌ಬ್ಯಾಗ್‌ ತಯಾರಿಕೆಯಲ್ಲಿ ತೊಡಗಿಸಿಕೊಂಡಿರುವ ಒಂದು ಅಂಗವಿಕಲ ಕುಟುಂಬವು ನೆರವು ಪಡೆಯುತ್ತಿದೆ. ಗಾತ್ರ, ಸ್ಥಳೀಯತೆ ಹಾಗೂ ಆರ್ಥಿಕ ನೆರವಿನ ಅನಿವಾರ್ಯತೆಗಳೇ ಆಯ್ಕೆಯ ಮಾನದಂಡಗಳು. ಕೆಲವೊಮ್ಮೆ ದಾನಿಗಳು ನೀಡುವ ಹಣವೂ ಇದಕ್ಕೆ ಸೇರುವುದಿದೆ.

2009ರಲ್ಲಿ ಒಂದೇ ಸಲಕ್ಕೆ ಸುಮಾರು 4 ಟನ್ ರದ್ದಿ ಪೇಪರ್ ಸಂಗ್ರಹವಾಗಿತ್ತು. ಇದು ಈವರೆಗಿನ ದೊಡ್ಡ ದಾಖಲೆ.

‘ಈ ಕೆಲಸಕ್ಕಾಗಿ ನಾವು ವ್ಯಯಿಸಿದ ಸುಮಾರು 800 ಗಂಟೆಗಳ ಅವಧಿ ನನ್ನ ಬದುಕಿನ ಅರ್ಥಪೂರ್ಣ ಹಾಗೂ ತೃಪ್ತಿದಾಯಕ ಸಮಯ’ ಎನ್ನುವುದು ರದ್ದಿ ಕಾಗದ ಸಂಗ್ರಹದಲ್ಲಿ ತೊಡಗಿಸಿಕೊಂಡಿರುವ ಅನಂತ್ ಅವರ ಮಾತು.

‘ನಾವು ಸಂಗ್ರಹಿಸುವ ರದ್ದಿ ಕಾಗದವನ್ನು ಮಾರಲು ವಸತಿಸಮುಚ್ಚಯದ ಪಕ್ಕದಲ್ಲಿರುವ ರದ್ದಿ ವ್ಯಾಪಾರಿಯನ್ನೇ ಅವಲಂಬಿಸಿದ್ದೇವೆ.  ಬೇರೆಯವರು ನಮ್ಮನ್ನು ಸಂಪರ್ಕಿಸಿದರೂ ವ್ಯಾಪಾರಿಯನ್ನು ಬದಲಿಸಲು ಮನಸ್ಸು ಬರಲಿಲ್ಲ. ಏಕೆಂದರೆ ಈ ವ್ಯಾಪಾರ ಪರೋಕ್ಷವಾಗಿ ಆತನ ಬದುಕನ್ನೂ ಕಟ್ಟಿಕೊಟ್ಟಿದೆ. ದಾರ, ವಾಹನ ಹಾಗೂ ಸಹಾಯಕರನ್ನು ಒದಗಿಸಿಕೊಡುವ ರದ್ದಿ ವ್ಯಾಪಾರಿಯೂ ನಮ್ಮ ಧ್ಯೇಯದಲ್ಲಿ ಪಾಲುದಾರ’ ಎಂದು ಅವರು ವಿನಮ್ರವಾಗಿ ಸ್ಮರಿಸುತ್ತಾರೆ.
 

**

ನೆರವು ಪಡೆಯುತ್ತಿರುವ ಸಂಸ್ಥೆಗಳು
* ಆಶಾ ಜೀವನ ಹೋಮ್ ಫಾರ್ ದ ಏಜ್ಡ್
* ಸಮರ್ಥನಂ ಟ್ರಸ್ಟ್ ಫಾರ್ ಡಿಸೇಬಲ್ಡ್
* ಸನ್‌ಬೀಮ್ ಆರ್ಫನೇಜ್
* ಶಿವಶಕ್ತಿಹೋಮ್ಸ್
* ಚೈತನ್ಯ ಮನೋವಿಕಾಸ ಕೇಂದ್ರ
* ಪುಟ್ಟೇನಹಳ್ಳಿ ನೇಬರ್‌ಹುಡ್ ಲೇಕ್ ಇಂಪ್ರೂವ್‌ಮೆಂಟ್ ಟ್ರಸ್ಟ್, ಪ್ರೇರಣಾ ರಿಸೋರ್ಸ್ ಸೆಂಟರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT