ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಬೇಡ್ಕರ್ ವಿಚಾರಧಾರೆಗೊಂದು ‘ಜ್ಞಾನದರ್ಶನ ಅಭಿಯಾನ’

Last Updated 10 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಸದ್ಯದ ವಿಷಮ ಕಾಲದಲ್ಲಿ ಸಮಾನತೆಯ ಹರಿಕಾರ ಡಾ.ಬಿ.ಆರ್.ಅಂಬೇಡ್ಕರ್ ಅವರ ವಿಚಾರಧಾರೆಯ ಚೈತ್ರಕಾಲ ಆರಂಭಗೊಂಡಿದ್ದು, ರಾಜ್ಯದ ಮೂಲೆ ಮೂಲೆಯಲ್ಲೂ ಅರಿವಿನ ಪಸೆ ಮೂಡತೊಡಗಿದೆ.

ಹೌದು; ಅಂಬೇಡ್ಕರ್ ಕುರಿತ ಓದು, ಹೊಸಗ್ರಹಿಕೆ ಎಲ್ಲಾ ಸಮುದಾಯಗಳ ಯುವಜನರಿಗೆ ಮುಟ್ಟಿಸಲು ರಾಜ್ಯದ ಪ್ರತಿ ಜಿಲ್ಲೆಯ ಕಾಲೇಜು–ಹಾಸ್ಟೆಲ್‌ಗಳಲ್ಲಿ  ‘ಅಂಬೇಡ್ಕರ್ ಜ್ಞಾನದರ್ಶನ ಅಭಿಯಾನ’ ಕಳೆದ ಅಕ್ಟೋಬರ್‌ನಿಂದ ಆರಂಭಗೊಂಡಿದ್ದು, ಇದುವರೆಗೂ ಭಾರತೀಯ ಸಮಾಜಕ್ಕೆ ಪರಿಚಯವಾಗದ ಅವರ ಸಮಗ್ರ ಕೊಡುಗೆಯನ್ನು ವಿಚಾರ ಸಂಕಿರಣಗಳ ಮುಖೇನ ಪರಿಚಯಿಸುವ ಅರಿವಿನ ಆಂದೋಲನವು ಸಮಾಜ ಕಲ್ಯಾಣ ಇಲಾಖೆಯಿಂದ ನಡೆದಿದೆ.

ನಿರಂತರ ವಿಚಾರ ಸಂಕಿರಣ: ಅಂಬೇಡ್ಕರ್ ಅವರ 125ನೇ ವರ್ಷಾಚರಣೆ ಕೇವಲ ಒಂದು ದಿನ ನೆನೆಯು­ವುದು ಸರಿಯಲ್ಲವೆಂದು ಪ್ರತಿ ಜಿಲ್ಲೆಯ ಐದು ಕಾಲೇಜುಗಳು ಹಾಗೂ ಐದು ವಿದ್ಯಾರ್ಥಿ ಹಾಸ್ಟೆಲ್ ಹಾಗೂ ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಉಪನ್ಯಾಸ, ವಿಚಾರ ಸಂಕಿರಣ ನಿರಂತರವಾಗಿ ನಡೆದಿದೆ.

ವಿದ್ಯಾರ್ಥಿ ಯುವ ಜನರು ಅಂಬೇಡ್ಕರ್ ಅವರನ್ನು  ‘ಸಂವಿಧಾನ ಶಿಲ್ಪಿ’, ‘ಸಂತ ಸುಧಾರಕ’ ಇತ್ಯಾದಿ ಸಿದ್ಧ ಮಾದರಿಗಳಾಚೆಗೆ ಹೊಸ ಬಗೆಯಲ್ಲಿ ಅರ್ಥ ಮಾಡಿಕೊಳ್ಳುವುದು ಈ ವಿಚಾರ ಸಂಕಿರಣದ ಉದ್ದೇಶವಾಗಿದೆ. ಸಾಮಾಜಿಕ ಚಳವಳಿಯಲ್ಲಿ ತೊಡಗಿಸಿಕೊಂಡಿರುವ ವಿವಿಧ ಸ್ತರದ ಕಾರ್ಯಕರ್ತರು, ಸಂಶೋಧನಾರ್ಥಿಗಳು, ಪ್ರಾಧ್ಯಾಪಕರು ವಿಚಾರ ಸಂಕಿರಣದ ಜವಾಬ್ದಾರಿ ಹೊತ್ತು, ಇದುವರೆಗೂ ಮುನ್ನೆಲೆಗೆ ಬಾರದ ಅಂಬೇಡ್ಕರ್ ಪ್ರತಿಪಾದಿಸಿದ ಶಿಕ್ಷಣ, ಕೃಷಿ, ನೈಸರ್ಗಿಕ ಸಂಪತ್ತಿನ ರಾಷ್ಟ್ರೀಕರಣ, ಹಿಂದೂ ಕೋಡ್ ಬಿಲ್, ಮಹಿಳಾ ಸಮಾನತೆ, ಆಸ್ತಿಯ ಹಕ್ಕು, ಕಾರ್ಮಿಕ ಕಲ್ಯಾಣ ಯೋಜನೆಗಳು,
ಆರ್ಥಿಕಾಭಿವೃದ್ಧಿ, ರಾಜಕೀಯ ಹಕ್ಕುಗಳ ಕುರಿತ ಚಿಂತನೆಗಳ ಒಳನೋಟವನ್ನು ಯುವಜನರಿಗೆ ವಿಮರ್ಶಾತ್ಮಕವಾಗಿ ಅರ್ಥ ಮಾಡಿಸುವ ರಚನಾತ್ಮಕ ಕೆಲಸದಲ್ಲಿ ತೊಡಗಿದ್ದಾರೆ.

ಚಿಂತನೆ ಹಂಚುವ ಕೆಲಸ: ಅಂಬೇಡ್ಕರ್ ಅವರ ‘ಜಾತಿ ವಿನಾಶ’,  ‘ಪ್ರಾಚೀನ ಭಾರತದಲ್ಲಿ ಕ್ರಾಂತಿ, ಪ್ರತಿ ಕ್ರಾಂತಿ’ ಮತ್ತು ‘ಪ್ರಭುತ್ವ ಮತ್ತು ಅಲ್ಪಸಂಖ್ಯಾತರು, ‘ ಹಿಂದೂ ಕೋಡ್ ಬಿಲ್’ ಕೃತಿಗಳಲ್ಲಿ ವಿದ್ವತ್ ಪೂರ್ಣ ಸಾಮಾಜಿಕ, ರಾಜಕೀಯ, ಆರ್ಥಿಕ ವಿಶ್ಲೇಷಣೆ ಮತ್ತು ವರ್ಗ, ಜಾತಿ, ಲಿಂಗ ಸಮಾನತೆಗೆ ಅವರು ಸೂಚಿಸಿರುವ ಪ್ರಜಾತಂತ್ರ ಆಯಾಮಗಳನ್ನು ವಿದ್ಯಾರ್ಥಿ ಯುವಜನರಿಗೆ ಅರ್ಥ ಮಾಡಿಸುವ ಸಾಂಘಿಕ ಪ್ರಯತ್ನ ನಡೆದಿದೆ.

ನೆಲದಲ್ಲಿ ನಿಜವಾದ ಸ್ವಾತಂತ್ರ್ಯ– ಸಮಾನತೆ ನೆಲೆಗೊಳ್ಳಬೇಕಾದರೆ ಜಾತಿ ವಿನಾಶವಾಬೇಕು ಎಂದು ಅಂಬೇಡ್ಕರ್ ಪ್ರತಿಪಾದಿಸಿದ ಸ್ಪಷ್ಟ ಚಿಂತನೆಗಳನ್ನು ಹಂಚುವ ಕೆಲಸ ಹುರುಪಿನಿಂದ ಸಾಗಿದೆ. ಅಂಬೇಡ್ಕರ್ ಅವರು 1947ರಲ್ಲಿ  ‘ಪ್ರಭುತ್ವ  ಮತ್ತು ಅಲ್ಪಸಂಖ್ಯಾತರು’ ಕೃತಿಯಲ್ಲಿ ಸ್ಪಷ್ಟಪಡಿಸಿದಂತೆ ರಾಜಕೀಯ ಸ್ವಾತಂತ್ರ್ಯದಂತೆ ಸಾಮಾಜಿಕ – ಆರ್ಥಿಕ ಸಮಾನತೆ ಒಂದು ಮೂಲಭೂತ ಹಕ್ಕಾಗದಿದ್ದರೆ ಸಮಾಜದಲ್ಲಿನ ಬಲ್ಲಿದವರಿಗೆ ಶೋಷಣೆ  ಮುಂದುವರಿಸಲು ನೀಡುವ ಪರವಾನಗಿ ಆಗಿಬಿಡುತ್ತದೆಂದು ಸ್ಪಷ್ಟ ನುಡಿಗಳಲ್ಲಿ ವಿಮರ್ಶೆ ಮಾಡಿದ್ದರು. ದೇಶದ ಮಹಿಳೆಯರಿಗೆ ಸಮಾನಹಕ್ಕು ನೀಡುವ ‘ಹಿಂದೂ ಕೋಡ್ ಬಿಲ್’ ಅನ್ನು ವಿರೋಧಿಸಿದ ಸಂಸತ್ತಿನ ನಡಾವಳಿಯನ್ನು ಪ್ರತಿಭಟಿಸಿ ತಮ್ಮ ಕಾನೂನುಸಚಿವ ಪದವಿಗೆ ರಾಜೀನಾಮೆ ಕೊಟ್ಟು, ಸರ್ಕಾರದಿಂದ ಹೊರಬಂದ ಇತಿಹಾಸದ ಘಟನಾವಳಿಗಳ ಬಗ್ಗೆಯೂ ಈ ವಿಚಾರ ಸಂಕಿರಣಗಳಲ್ಲಿ ಮರು ಚಿಂತನೆ ನಡೆದಿದೆ.

ಎಲ್ಲ ಸಮುದಾಯಗಳ ನೇತಾರ: ಅವರ ಬರಹ ಮತ್ತು ಭಾಷಣಗಳನ್ನು ಕೇವಲ ದಲಿತ ಸಮುದಾಯದ ವಿದ್ಯಾರ್ಥಿಗಳಷ್ಟೇ ಅರ್ಥ ಮಾಡಿಕೊಂಡರೆ ಸಾಲದು; ಎಲ್ಲಾ ವರ್ಗದ ವಿದ್ಯಾರ್ಥಿಗಳು ಅರ್ಥ ಮಾಡಿಕೊಳ್ಳಬೇಕು ಎಂದು ಅನ್ಯ ಕೋಮು ಮತ್ತು ಜಾತಿ ಹಿನ್ನೆಲೆಯ ವಿದ್ಯಾರ್ಥಿಗಳಾದ ಯಾದಗಿರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹುಸೇನ್, ಗದಗ ಮೆಟ್ರಿಕ್ ಬಾಲಕಿಯರ ವಿದ್ಯಾರ್ಥಿನಿಲಯದ ಅಶ್ವಿನಿ, ಚಾಮರಾಜನಗರದ ಜೆಎಸ್‌ಎಸ್ ಮಹಿಳಾ ಕಾಲೇಜಿನ ಕವಿತಾ, ಕೊಳ್ಳೆಗಾಲ ನಿಸರ್ಗ ಮ್ಯಾನೇಜ್‌ಮೆಂಟ್ ಕಾಲೇಜಿನ ಮೂರ್ತಿ, ಕೊಡಗಿನ  ಸತೀಶ್, ಮಂಗಳೂರಿನ ಭರತ್ ಹೀಗೆ ನೂರಾರು ಸಂಖ್ಯೆಯ ವಿದ್ಯಾರ್ಥಿಗಳ ಒಕ್ಕೊರಲ ಅಭಿಪ್ರಾಯ.

‘ಅಂಬೇಡ್ಕರ್ ಅವರನ್ನು ಜಾತಿಯ ಕೋಣೆಯೊಳಗೆ ಕೂಡಿ ಹಾಕಲಾಗಿದೆ. ಅವರು ಮಂಡಿಸಿದ ಜನಕಲ್ಯಾಣ ಯೋಜನೆಗಳು ಎಲ್ಲಾ ಸಮುದಾಯಗಳಿಗೂ ಅನ್ವಯ. ಪಠ್ಯದಲ್ಲಿ ಅವರೊಬ್ಬ ‘ಸಂವಿಧಾನ ಶಿಲ್ಪಿ’ ಎಂದೆಷ್ಟೇ ಬಿಂಬಿಸಲಾಗಿದೆ. ಆರ್ಥಿಕ ತಜ್ಞರಾಗಿ, ಸಮಾಜ ವಿಜ್ಞಾನಿಯಾಗಿ ಅವರು ನೀಡಿರುವ ಅಮೂಲ್ಯ ಕೊಡುಗೆಗಳ ಬಗ್ಗೆ ಎಲ್ಲೂ ಪ್ರಸ್ತಾಪ ಇಲ್ಲ’ ಎಂದು ಯುವಜನರು ಆಕ್ಷೇಪ ವ್ಯಕ್ತಪಡಿಸುತ್ತಾರೆ.

ಉದಾರೀಕರಣ ನೀತಿಯಿಂದ ಉದ್ಯೋಗದ ಪಲ್ಲಟ, ಖಾಸಗೀಕರಣದಲ್ಲೂ ಮೀಸಲಾತಿ ಅನಿವಾರ್ಯತೆ ಸೇರಿದಂತೆ  ಪ್ರಸಕ್ತ ಸಮಸ್ಯೆಗಳನ್ನು ಅಂಬೇಡ್ಕರ್ ಚಿಂತನೆಯ ಹಿನ್ನೆಲೆಯಲ್ಲಿ ಗ್ರಹಿಸುವ ಕ್ರಮದ ಬಗ್ಗೆಯೂ ವಿಚಾರ ಸಂಕಿರಣದಲ್ಲಿ ಗಮನ ನೀಡಲಾಗಿದೆ ಎನ್ನುತ್ತಾರೆ ‘ಅಂಬೇಡ್ಕರ್ ಜ್ಞಾನದರ್ಶನ’ ಅಭಿಯಾನದ ಸಂಚಾಲಕ ಪ್ರೊ. ಎಸ್.ಜಾಫೆಟ್. 

ಬೇರೆ ಬೇರೆ ಹಿನ್ನೆಲೆಯಿಂದ ಬಂದ ಯುವಜನರು ಅಂಬೇಡ್ಕರ್ ಅವರನ್ನು ಹೊಸ ಬಗೆಯಲ್ಲಿ ಅಧ್ಯಯನ ನಡೆಸಲು 60 ಜನರಿಗೆ ಫೆಲೋಶಿಷ್ ನೀಡುವ ಬಗ್ಗೆ ಚಿಂತನೆ ನಡೆದಿದೆ. ಸಾಹಿತಿ ದೇವನೂರ ಮಹದೇವ ಅವರ ಆಶಯದಂತೆ ಅಧ್ಯಯನದ ಮಾಹಿತಿ ಪುಸ್ತಕ ರೂಪದಲ್ಲಿ ಮುಂದಿನ ಪೀಳಿಗೆಗೆ ಕಾಪಿಡುವ ಮಹತ್ತರ ಕೆಲಸಕ್ಕೆ ಚಾಲನೆ ನೀಡಲಾಗುವುದು ಎಂದು ಜಾಫೆಟ್ ಅಭಿಯಾನದ ರೂಪುರೇಷೆ ವಿವರಿಸಿದರು.

ಸರ್ಕಾರದ ಅನುದಾನದಲ್ಲಿ ಈ ವಿಚಾರ ಸಂಕಿರಣ ನಡೆದರೂ, ಜನ ಚಳವಳಿಯಾಗಿ ಪರಿವರ್ತನೆಗೊಂಡಿದೆ.  ಸರ್ಕಾರದ ಹಸ್ತಕ್ಷೇಪವಿಲ್ಲದೆ ಸ್ವಾತಂತ್ರ್ಯವಾಗಿ ನಡೆಯುತ್ತಿದೆ ಎನ್ನುತ್ತಾರೆ ಕಾರ್ಯಕ್ರಮ ಸಂಯೋಜಕ ಡಾ.ಆರ್.ವಿ ಚಂದ್ರಶೇಖರ್. ಕಾರ್ಯಕ್ರಮದ ಸಂಯೋಜಕರಾದ ನೀಲಯ್ಯ, ಸುನೀಲ್, ಶಾಬಿನ್ ಜಾನ್, ಪುಷ್ಪಲತಾ, ದೀಪಶ್ರೀ ಸೇರಿದಂತೆ ಯುವಪಡೆಯ ಹಗಲಿರುಳ ಶ್ರಮ ಅಭಿಯಾನದ ಯಶಸ್ಸಿನ ಹಿಂದೆ ಅಡಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT