ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೃಗಾಲಯ 125

Last Updated 10 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಪ್ರತಿವರ್ಷವೂ 30ಲಕ್ಷಕ್ಕೂ ಅಧಿಕ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುವ ಪ್ರವಾಸಿ ತಾಣವೆಂದರೆ ಅದು ಸಾಂಸ್ಕೃತಿಕ ನಗರಿ ಮೈಸೂರು. ಹತ್ತು ಹಲವು ಆಕರ್ಷಕ ಸ್ಥಳಗಳನ್ನು ತನ್ನ ತೆಕ್ಕೆಯಲ್ಲಿ ಸೇರಿಸಿಕೊಂಡಿರುವ ಮೈಸೂರಿನ ಚಾಮರಾಜೇಂದ್ರ ಮೃಗಾಲಯಕ್ಕೀಗ 125 ವರ್ಷಗಳ ಸಂಭ್ರಮ.

ಸುಮಾರು 170 ಎಕರೆ ಪ್ರದೇಶದಲ್ಲಿ ಚಾಚಿಕೊಂಡಿರುವ  ಈ ಮೃಗಾಲಯ, ವಿಶ್ವದ ಪ್ರಾಚೀನ ಪ್ರಸಿದ್ಧ ಮೃಗಾಲಯಗಳ ಪಟ್ಟಿಯಲ್ಲಿ ಗುರುತಿಸಿಕೊಂಡಿದೆ. 25 ದೇಶಗಳ ವಿವಿಧ ಪಕ್ಷಿ, ಪ್ರಾಣಿಗಳನ್ನು ಇಲ್ಲಿ ಕಾಣಬಹುದು. ಈಚೆಗೆ ಎಚ್‌1ಎನ್‌1 ಮುಂಜಾಗ್ರತೆಗಾಗಿ ಮುಚ್ಚಲಾಗಿದ್ದ ಮೃಗಾಲಯ ಇದೀಗ ಮತ್ತೆ ತನ್ನ ಮೂಲರೂಪ ಪಡೆದು 126ನೇ ವಸಂತವನ್ನು ಬರಮಾಡಿಕೊಳ್ಳುವ ಸಂತಸದಲ್ಲಿದೆ. 125ನೇ ವರ್ಷದ ಸಂಭ್ರಮಾಚರಣೆಯನ್ನು ವರ್ಷದುದ್ದಕ್ಕೂ ಆಚರಿಸಬೇಕೆಂದು ಮೃಗಾಲಯ ನಿರ್ಧರಿಸಿದೆ.

ಇದರ ಅಂಗವಾಗಿ ಮೃಗಾಲಯದೊಳಗೆ ವಿಶೇಷ ವಿನ್ಯಾಸದ ಬಯಲು ರಂಗಮಂದಿರ ಉದ್ಘಾಟನೆಗೆ ಸಜ್ಜಾಗಿದೆ. ₹2.3 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದು, 1,100 ಚದರ ಮೀಟರ್‌ ವಿಸ್ತೀರ್ಣದಲ್ಲಿದೆ. ಒಟ್ಟು 500 ಆಸನಗಳ ಸಾಮರ್ಥ್ಯವಿದ್ದು, ಗೋಡೆಗಳ ಮೇಲೆ ವಿವಿಧ ಪ್ರಾಣಿಗಳ ಚಿತ್ರಗಳು ಗಮನ ಸೆಳೆಯುತ್ತವೆ. ಕಾಡು, ಪ್ರಾಣಿ ರಕ್ಷಣೆ ಕುರಿತು ಅರಿವು ಮೂಡಿಸುವ ಸಾಕ್ಷ್ಯಚಿತ್ರ, ಕಿರುಚಿತ್ರ ಪ್ರದರ್ಶನ ಸೇರಿದಂತೆ ಅನೇಕ ಕಾರ್ಯಕ್ರಮ ಇಲ್ಲಿ ನಡೆಯಲಿದೆ.

ವನ್ಯಜೀವಿ ಸಿನಿಮಾ ನಿರ್ಮಾಣದ ಶೇಖರ್‌ ದತ್ತಾತ್ರಿ ಅವರು ‘ಎ ಡೇ ವಿತ್‌ ಮೈಸೂರು ಝೂ’ ಎಂಬ ಕಿರುಚಿತ್ರವನ್ನು ನಿರ್ಮಿಸಿದ್ದಾರೆ. ಇದು 25 ನಿಮಿಷಗಳ ಅವಧಿಯದು. ₹40 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಈ ಕಿರುಚಿತ್ರ ಬಿಡುಗಡೆಗೊಂಡ ಕೂಡಲೇ ಇದರ ಸಿ.ಡಿ ಮಾರಾಟಕ್ಕೆ ಲಭ್ಯವಾಗಲಿದೆ.

ರಾಜ್‌ಕೋಟ್‌ ಮೃಗಾಲಯದಿಂದ ಈಚೆಗೆ ಬಂದಿರುವ ಶೌರ್ಯ ಎಂಬ ಸಿಂಹ ವೀಕ್ಷಕರನ್ನು ಆಕರ್ಷಿಸುತ್ತಿದೆ. ಇದರೊಂದಿಗೆ ಶೀಘ್ರದಲ್ಲೇ ಸಿಂಗಪುರದಿಂದ ಒಂದು ಗಂಡು, ಒಂದು ಹೆಣ್ಣು ಘೇಂಡಾಮೃಗ ಬರಲಿವೆ. ಇವು ಪ್ರಾಣಿ ವಿನಿಮಯ ಯೋಜನೆಯಡಿ ಬರಲಿದ್ದು, ಈ ಮೃಗಾಲಯದಿಂದ ಜೋಡಿ ಆನೆಯೊಂದು ಸಿಂಗಪುರಕ್ಕೆ ತೆರಳಲಿದೆ. ಹೀಗೆಯೇ ಒಡಿಶಾದಿಂದ ಚಿಂಪಾಂಜಿ ಜೋಡಿ, ಶ್ರೀಲಂಕಾದಿಂದ 3 ಜೋಡಿ ಅನಕೊಂಡ, ಚೆನ್ನೈನಿಂದ ಸಿಂಗಳೀಕ ಕೋತಿ, ಜೀಬ್ರಾ ಜೋಡಿಯೊಂದು ಬರಲಿವೆ. ಇದರೊಂದಿಗೆ ಹಿಮಾಲಯ ಕರಡಿಯ ಮನೆ ಆವರಣ ನವೀಕರಣಗೊಳ್ಳಲಿದೆ. ಅಲ್ಲದೆ, ಮೃಗಾಲಯದ ಎಲ್ಲ ಮಾಹಿತಿಗಳನ್ನು ಒಳಗೊಂಡ ಹೊಸ ವೆಬ್‌ಸೈಟ್‌ ಕೂಡ ಆರಂಭವಾಗಲಿದೆ.

ವರ್ಷಾಚರಣೆ ಅಂಗವಾಗಿ 60 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ವೈಫೈ ಕ್ಯಾಮೆರಾಗಳಿದ್ದು, ಇವು ಪ್ರಾಣಿಗಳ ಚಲನವಲನ, ಅನಾರೋಗ್ಯ ಗಮನಿಸುತ್ತವೆ. ಟಾರ್ಚ್‌, ದೀಪ ಹಾಕಿ ನೋಡುವ ಬದಲು ನೈಟ್‌ ವಿಷನ್‌ ಕ್ಯಾಮೆರಾಗಳು ಪ್ರಾಣಿಗಳ ಚಲನವಲನಗಳನ್ನು ಸೆರೆ ಹಿಡಿಯುತ್ತವೆ.

ಮೃಗಾಲಯದ ಕುರಿತು...

ಮೈಸೂರು ಸಂಸ್ಥಾನದ ಮಹಾರಾಜ ಚಾಮರಾಜೇಂದ್ರ ಒಡೆಯರ್‌ 1892ರಲ್ಲಿ ಸ್ಥಾಪಿಸಿದರು. ಇದನ್ನು ವಿನ್ಯಾಸಗೊಳಿಸಿದ್ದು ತೋಟಗಾರಿಕಾ ತಜ್ಞ ಜರ್ಮನಿಯ ಜಿ.ಎಚ್. ಕ್ರೆಂಬಿಜೆಲ್‌. ಆಸ್ಟ್ರೇಲಿಯಾದ ಹ್ಯೂಜ್‌ ಅವರು ಮುಖ್ಯಸ್ಥರಾಗಿ ಅಭಿವೃದ್ಧಿಪಡಿಸಿದರು. ಹಸಿರಿನ ಹುಲ್ಲು, ಪೊದೆಗಳನ್ನು ಸಿದ್ಧಗೊಳಿಸಿ ಪ್ರಾಣಿ, ಪಕ್ಷಿಗಳಿಗಾಗಿ ಕಾಡಿನ ವಾತಾವರಣವನ್ನು ಕಟ್ಟಿಕೊಡಲಾಯಿತು. ಚಾಮರಾಜೇಂದ್ರ ಒಡೆಯರ್‌ ಅವರು ಯುರೋಪ್‌, ಆಫ್ರಿಕಾ ದೇಶಗಳಲ್ಲಿ ಪ್ರವಾಸ ಕೈಗೊಂಡಾಗ ಚಿಂಪಾಂಜಿ, ಜಿರಾಫೆ, ಜಿಂಕೆ, ಕರಡಿಗಳನ್ನು ತಂದು ಈ ಮೃಗಾಲಯವನ್ನು ಬೆಳೆಸಿದರು. 1902ರಿಂದ ಸಾರ್ವಜನಿಕ ವೀಕ್ಷಣೆಗೆ ಅವಕಾಶ ನೀಡಲಾಯಿತು. ತೋಟಗಾರಿಕೆ ಇಲಾಖೆ ವ್ಯಾಪ್ತಿಗೆ ಇದ್ದ ಇದನ್ನು 1972ರಲ್ಲಿ ಅರಣ್ಯ ಇಲಾಖೆಯ ವ್ಯಾಪ್ತಿಗೆ ಸೇರಿಸಲಾಯಿತು. 1992ರಲ್ಲಿ ಮೃಗಾಲಯ ಶತಮಾನೋತ್ಸವ ಆಚರಿಸಿತು.

ಪ್ಲಾಸ್ಟಿಕ್‌ ಮುಕ್ತ: ಸದಾ ಹಸಿರನ್ನು ಕಾಯ್ದುಕೊಳ್ಳಲು ನಿರಂತರವಾಗಿ ಯತ್ನಿಸಲಾಗುತ್ತಿದೆ. ಈ ಬೇಸಿಗೆಯಲ್ಲಿ ಪ್ರಾಣಿ, ಪಕ್ಷಿಗಳು ತಾಪಮಾನದಿಂದ ಬಳಲಬಾರದೆಂದು ಅತ್ಯಂತ ಮುತುವರ್ಜಿ ವಹಿಸಲಾಗಿದೆ. ಮುಖ್ಯವಾಗಿ ಪ್ಲಾಸ್ಟಿಕ್‌ ಮುಕ್ತಗೊಳಿಸಲಾಗಿದೆ. ಪ್ಲಾಸ್ಟಿಕ್‌ಗೆ ಕಡಿವಾಣ ಹಾಕುವ ಉದ್ದೇಶದಿಂದ ಪ್ರತಿಯೊಬ್ಬರೂ ತೆಗೆದುಕೊಂಡು ಹೋಗುವ ನೀರಿನ ಬಾಟಲಿಗೆ ಸಂಖ್ಯೆ ಹಾಕಲಾಗುತ್ತದೆ. ಅವರು ವಾಪಸು ಬಂದು ಬಾಟಲಿ ತೋರಿಸದಿದ್ದರೆ ದಂಡ ಹಾಕುವ ಯೋಜನೆ ರೂಪಿಸಲಾಗಿದೆ.

ಅಳಿವಿನ ಅಂಚಿನಲ್ಲಿರುವ ಪ್ರಾಣಿ, ಪಕ್ಷಿಗಳ ಸಂತತಿ ಸಂರಕ್ಷಿಸಲು, ಹೆಚ್ಚಿಸಲು ಆದ್ಯತೆ ನೀಡಿದ ಪರಿಣಾಮ 150ಕ್ಕೂ ಅಧಿಕ ಪ್ರಭೇದದ ಪ್ರಾಣಿ, ಪಕ್ಷಿಗಳು ವೃದ್ಧಿಯಾಗಿವೆ. ಇದರೊಂದಿಗೆ ಐದು ಎಕರೆಯಲ್ಲಿ ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂ ನಿರ್ಮಿಸಲಾಗಿದೆ.

ದತ್ತು ಸ್ವೀಕಾರ: ಮೃಗಾಲಯಕ್ಕೆ ಭೇಟಿ ನೀಡುವ ಪ್ರವಾಸಿಗರಲ್ಲಿ ವಜ್ಯಜೀವಿಗಳ ಕುರಿತು ಪ್ರೀತಿಯ ಅಭಿವ್ಯಕ್ತಿಗೆ ‘ಪ್ರಾಣಿಗಳ ದತ್ತು ಸ್ವೀಕಾರ’ ಯೋಜನೆಯಿದೆ. 2001ರಲ್ಲಿ ಈ ಅಭಿಯಾನ ಆರಂಭಗೊಂಡಿದೆ. ಸುತ್ತೂರು ಮಠದ ರಾಜೇಂದ್ರ ಸ್ವಾಮೀಜಿ ಜನ್ಮದಿನವಾದ ಆಗಸ್ಟ್ 29ರಂದು ಪ್ರಾಣಿ, ಪಕ್ಷಿಗಳ ಆಹಾರಕ್ಕೆಂದು ಪ್ರತಿ ವರ್ಷ  ಒಂದು ಲಕ್ಷ ರೂಪಾಯಿ ನೀಡಲಾಗುತ್ತಿದೆ. ಈ ಯೋಜನೆಯಿಂದ ಪ್ರತಿವರ್ಷ ₹25ರಿಂದ 30 ಲಕ್ಷದವರೆಗೆ ದೇಣಿಗೆ ಸಿಗುತ್ತಿರುವುದರಿಂದ ಆರ್ಥಿಕವಾಗಿಯೂ ಮೃಗಾಲಯ ಸ್ವಾವಲಂಬನೆ ಸಾಧಿಸಿದೆ. ಈ ಮೃಗಾಲಯದಲ್ಲಿ ಮೂವರು ಪ್ರಾಣಿವೈದ್ಯರಿದ್ದಾರೆ. ಸುಸಜ್ಜಿತ ಆಸ್ಪತ್ರೆಯಿದೆ, ಪ್ರಯೋಗಾಲಯವಿದೆ, ಸತತವಾಗಿ ಸಂಶೋಧನಾ ಚಟುವಟಿಕೆಗಳು ನಡೆಯುತ್ತಿವೆ. ವನ್ಯಜೀವಿ ಸಪ್ತಾಹ ಆಚರಿಸಲಾಗುತ್ತಿದೆ. ವಿದ್ಯಾರ್ಥಿಗಳಲ್ಲಿ ವನ್ಯಜೀವಿಗಳ ಕುರಿತು ಅರಿವು ಮೂಡಿಸಲು ಶಿಬಿರಗಳನ್ನು, ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತಿದೆ.

ಪ್ರತಿ ಮಂಗಳವಾರ ರಜೆ ಇರುವ ಮೃಗಾಲಯಕ್ಕೆ ಸರ್ಕಾರಿ ರಜೆ, ದಸರಾ, ಬೇಸಿಗೆ ರಜೆಯಲ್ಲಿ ತೆರೆದಿರುತ್ತದೆ. ಮಕ್ಕಳಿಗೆ ₹25, ದೊಡ್ಡವರಿಗೆ ₹50 ಪ್ರವೇಶ ಶುಲ್ಕವಿದೆ. ಟಿಕೆಟುಗಳನ್ನು ಮುಂಗಡವಾಗಿ www.mysorezoo.info ಇಲ್ಲಿ ಕಾದಿರಿಸಬಹುದು.

**

ಮೊದಲ ನಿರ್ದೇಶಕಿ
1979ರಿಂದ ಮೃಗಾಲಯಕ್ಕೆ ನಿರ್ದೇಶಕರನ್ನು ನೇಮಿಸಲಾಗುತ್ತಿದೆ. ಇದುವರೆಗೆ ನಿರ್ದೇಶಕರಾದವರ ಪೈಕಿ 13 ಮಂದಿ ಪುರುಷರೇ. ಈಗ ಕಮಲಾ ಕರಿಕಾಳನ್ ನೇಮಕವಾಗಿದ್ದು ಇವರು ಪ್ರಥಮ ಮಹಿಳಾ ನಿರ್ದೇಶಕರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT