ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದುಕು ಕಳೆದುಕೊಳುವ ಭೀತಿಯಲ್ಲಿ ಭಿತ್ತಿಚಿತ್ರ...

Last Updated 10 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

-ಲಕ್ಷ್ಮೀ ಮೂರ್ತಿ, ರವಿ ಹೆಗಡೆ

**

‘ಕಲಾನಾಂ ಪ್ರವರಂ ಚಿತ್ರಂ, ಧರ್ಮಕಾಮಾರ್ಥಮೋಕ್ಷದ’...

ಕಲೆಗಳಲ್ಲಿ ಚಿತ್ರಕಲೆ ಶ್ರೇಷ್ಠ. ಧರ್ಮ, ಅರ್ಥ, ಕಾಮ, ಮೋಕ್ಷಕ್ಕೆ ಸಾಧನವಾದದ್ದು ಎಂದು ಸಾರಿದೆ ವಿಷ್ಣುಧರ್ಮೋತ್ತರ ಪುರಾಣ. ಸಂಸ್ಕೃತಿಯನ್ನು ಅಭಿವ್ಯಕ್ತಿಗೊಳಿಸುವ, ಮನುಷ್ಯನ ಸೃಜನಶೀಲತೆಯನ್ನು ವ್ಯಕ್ತಪಡಿಸುವ ವಿಭಿನ್ನ ಕಲಾಪ್ರಕಾರಗಳಲ್ಲಿ ಚಿತ್ರಕಲೆ ಮೊದಲನೆಯದು.

ಆದಿಮಾನವ ಗುಹೆಯ ಗೋಡೆಗಳ ಮೇಲೆ, ಬಂಡೆಗಳ ಮೇಲೆ ರೇಖಾಚಿತ್ರಗಳನ್ನು ಬಿಡಿಸುವುದರ ಮೂಲಕ ಪ್ರಾರಂಭವಾದ ಭಿತ್ತಿಚಿತ್ರಕಲೆ ಮುಂದೆ ಅನೇಕ ಬೆಳವಣಿಗೆ ಕಂಡು ರಾಜ-ಮಹಾರಾಜರ ಕಾಲದಲ್ಲಿ ಪರಾಕಾಷ್ಠೆ ಮುಟ್ಟಿತು. ಅನಾದಿಕಾಲದಿಂದಲೂ ಕಲಾಶ್ರೀಮಂತಿಕೆಗೆ ಹೆಸರಾದ ಭಾರತದಲ್ಲಿ ನಮ್ಮ ರಾಜಪರಂಪರೆ ಸಹಸ್ರಾರು ಕಲಾವಿದರನ್ನು ಪ್ರೋತ್ಸಾಹಿಸಿತು. ಪುರಾತನ ದೇವಸ್ಥಾನಗಳು ಧಾರ್ಮಿಕ ಕೇಂದ್ರಗಳಷ್ಟೇ ಅಲ್ಲದೆ ವಿವಿಧ ತೆರನ ಕಲೆಗಳನ್ನು ಪೋಷಿಸುವ ಸಾಂಸ್ಕೃತಿಕ ಕೇಂದ್ರಗಳೂ ಆಗಿದ್ದವು.

ಕರ್ನಾಟಕದ ದೇವಾಲಯಗಳಲ್ಲಿ ಭಿತ್ತಿಚಿತ್ರಗಳನ್ನು ಬಿಡಿಸುವ ಸಂಪ್ರದಾಯ ಬಾದಾಮಿ ಚಾಲುಕ್ಯರಿಂದ ಪ್ರಾರಂಭವಾಗಿ ಮುಂದೆ ಕಲ್ಯಾಣಿಚಾಲುಕ್ಯರಿಂದ ಬೆಳೆಯಿತು. ವಿಜಯನಗರ ಅರಸರ ಕಾಲದಲ್ಲಿ ಭಿತ್ತಿಚಿತ್ರ ಪರಂಪರೆ ಮುಂದುವರೆದು ಮೈಸೂರು ಸಂಸ್ಥಾನದ ರಾಜಮನೆತನದವರಿಂದ ಪ್ರೋತ್ಸಾಹಿತಗೊಂಡು ಇಂದು ‘ಮೈಸೂರು ಶೈಲಿ’ ಎಂದೇ ವಿಶ್ವವಿಖ್ಯಾತವಾಗಿದೆ ಮತ್ತು ಅತ್ಯದ್ಭುತ ದೃಶ್ಯ ನಿರೂಪಣೆಗೆ ಹೆಸರಾಗಿದೆ. ಮೈಸೂರು ಶೈಲಿ ವರ್ಣಚಿತ್ರಕಲೆ ದಕ್ಷಿಣ ಭಾರತದ ಶಾಸ್ತ್ರೀಯ ಚಿತ್ರಕಲೆಗಳಲ್ಲಿ ಪ್ರಮುಖವಾದದ್ದು. ಮುಮ್ಮಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ತನ್ನದೇ ಆದ ವೈಶಿಷ್ಟ್ಯಗಳನ್ನು ರೂಢಿಸಿಕೊಂಡು ಪ್ರಸಿದ್ಧಿ ಪಡೆಯಿತು.

ಕನ್ನಡ ಕಾವ್ಯಗಳಲ್ಲಿ ಉಲ್ಲೇಖಿಸಿರುವ ಇಂಥ ಅಪರೂಪದ ಇತಿಹಾಸವುಳ್ಳ ಎಷ್ಟೋ ಭಿತ್ತಿಚಿತ್ರಗಳು ಇಂದು ಕಣ್ಮರೆಯಾಗಿವೆ. ಈಗ ಸ್ವಲ್ಪ ಮಟ್ಟಿಗೆ ಲಭ್ಯವಿರುವುದು 18–19ನೇ ಶತಮಾನದ ಕೆಲವೇ ಭಿತ್ತಿಚಿತ್ರಗಳು. ಅವುಗಳಲ್ಲಿ ಚಾಮರಾಜನಗರದ ಚಾಮರಾಜೇಶ್ವರ ದೇವಸ್ಥಾನದಲ್ಲಿರುವ ಭಿತ್ತಿಚಿತ್ರಗಳು ಪ್ರಮುಖವಾದವು.
ಮುಮ್ಮಡಿ ಕೃಷ್ಣರಾಜ ಒಡೆಯರು ತಮ್ಮ ತಂದೆ ಚಾಮರಾಜ ಒಡೆಯರ್ ಮತ್ತು ತಾಯಿ ಕೆಂಪನಂಜ ಅಮ್ಮಣ್ಣಿ ಅವರ ಜ್ಞಾಪಕಾರ್ಥವಾಗಿ 1826ರಲ್ಲಿ ಕಟ್ಟಿಸಿದ್ದೇ ಚಾಮರಾಜೇಶ್ವರ ದೇವಾಲಯ. ಊರಿನ ಮೂಲ ಹೆಸರಾದ ‘ಅರಿಕೊಟ್ಟಾರ’ವನ್ನು ಚಾಮರಾಜನಗರ ಎಂದು ಬದಲಾಯಿಸಿದ್ದು ಅವರೇ. ಚಾಮರಾಜೇಶ್ವರ ದೇವಸ್ಥಾನದ ಎಡಪಕ್ಕದಲ್ಲಿ ಕೆಂಪನಂಜಾಂಬ ಎಂದು ಕರೆಯಲಾಗುವ ಪಾರ್ವತಿ ಗುಡಿ ಮತ್ತು ಬಲಗಡೆ ಚಾಮುಂಡೇಶ್ವರಿ ಗುಡಿಯಿದೆ.

ಚಾಮರಾಜೇಶ್ವರ ದೇವಸ್ಥಾನದಲ್ಲಿ ಒಟ್ಟು ಎಂಟು ಭಿತ್ತಿಚಿತ್ರಗಳಿದ್ದು ಅವುಗಳಲ್ಲಿ ಆರು ಕೆಂಪನಂಜಾಂಬ ದೇವಸ್ಥಾನದ ಗೋಡೆಗಳ ಮೇಲೂ ಇನ್ನುಳಿದ ಎರಡು ಚಾಮುಂಡೇಶ್ವರಿ ಗುಡಿಯ ಗೋಡೆಗಳ ಮೇಲೂ ಇವೆ. ಇವುಗಳಲ್ಲಿ ಒಂದು ಸಂಪೂರ್ಣ ಜೀರ್ಣಾವಸ್ಥೆಯಲ್ಲಿದ್ದು, ಉಳಿದವು ನಿರ್ವಹಣೆಯ ಕೊರತೆಯಿಂದ ನಶಿಸುವ ಹಂತದಲ್ಲಿವೆ. ಗಿರಿಜಾಕಲ್ಯಾಣ, ಸಮುದ್ರ ಮಂಥನ ಮತ್ತು ಮಹಿಷಾಸುರ ಮರ್ದಿನಿ ವರ್ಣಚಿತ್ರಗಳು ಅತ್ಯಂತ ಸುಂದರವಾಗಿವೆ.

ಕರ್ನಾಟಕ ರಾಜ್ಯ ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯ ಇಲಾಖೆಯ ನಿಯಂತ್ರಣದಲ್ಲಿರುವ ಚಾಮರಾಜೇಶ್ವರ ದೇವಸ್ಥಾನದ ಪುನರುಜ್ಜೀವನ ಕಾರ್ಯ ಭರದಿಂದ ನಡೆಯುತ್ತಿದೆ. ಅಪೂರ್ವ ಭಿತ್ತಿಚಿತ್ರಗಳ ಕುರಿತ ಇಲಾಖೆಯ ಕಾಳಜಿ ಪ್ರಶ್ನಾರ್ಹ. ಶಿಲಾಮೂರ್ತಿಗಳ, ಕಂಬಗಳ ಸೌಂದರ್ಯ ಹೆಚ್ಚಿಸಲು ಅವುಗಳ ಮೇಲ್ಪದರವನ್ನೇ ಕೆತ್ತಲು ಹೊರಟಿರುವುದು ಮತ್ತು ಅದರಿಂದ ಆದ ದೂಳು ದೇವಸ್ಥಾನದ ಆವರಣದೆಲ್ಲೆಡೆ ಹರಡಿರುವುದು ಭಿತ್ತಿಚಿತ್ರಗಳಿಗೆ ಹಾನಿ ಮಾಡುತ್ತಿವೆ. ನೈಸರ್ಗಿಕ ಪ್ರತಿಕೂಲತೆಗಳಾದ ಮಳೆ, ಬಿಸಿಲು, ಗಾಳಿ ಮತ್ತು ಬೆಂಕಿ ಮೊದಲಾದವಲ್ಲದೆ ಯುದ್ಧ ಮತ್ತು ಲೂಟಿಯ ಕಾರಣದಿಂದ ಸಾಕಷ್ಟು ಭಿತ್ತಿಚಿತ್ರಗಳು ನಶಿಸಿಹೋದವಲ್ಲದೆ ಅವುಗಳ ಕುರಿತ ಮಾಹಿತಿಯೂ ಲಭ್ಯವಿಲ್ಲದಾಯಿತು. ಅಳಿದುಳಿದ ಭಿತ್ತಿಚಿತ್ರಗಳ ಕುರುಹುಗಳನ್ನು ಕರ್ನಾಟಕದ ಕೆಲವೆಡೆ ಕಾಣಬಹುದಾಗಿದೆ. ಮೈಸೂರು, ನಂಜನಗೂಡು, ಟಿ. ನರಸೀಪುರ, ಶ್ರವಣಬೆಳಗೊಳ, ಚಾಮರಾಜನಗರ ಮುಂತಾದೆಡೆ ದೇವಾಲಯಗಳಲ್ಲಿ ಭಿತ್ತಿಚಿತ್ರಗಳನ್ನು ನೋಡಬಹುದು.

ಆದರೆ ರಕ್ಷಣೆ ಹೆಸರಿನಲ್ಲಿ ಈ ಭಿತ್ತಿಚಿತ್ರಗಳಿಗೆ ಹೊಸದಾಗಿ ಬಣ್ಣ ಬಳಿದು ಸೌಂದರ್ಯ ಹೆಚ್ಚಿಸಲು ಹೊರಟಿರುವುದು ಮಾತ್ರ ದುರ್ದೈವ. ರಾಜಸ್ಥಾನದಿಂದ ಕಲಾವಿದರನ್ನು ಕರೆಸುವರೆಂಬ ಮಾಹಿತಿ ತಿಳಿದ ತಕ್ಷಣ ನಾವು ರಾಜ್ಯ ಪ್ರಾಚ್ಯವಸ್ತು ಇಲಾಖೆಯ ಆಯುಕ್ತರಿಗೆ ಮತ್ತು ಚಾಮರಾಜನಗರ ಜಿಲ್ಲಾಧಿಕಾರಿಗೆ ವಿಶೇಷ ಮನವಿ ಸಲ್ಲಿಸಿದೆವು. ತಜ್ಞರ ಸಮಿತಿ ರಚಿಸಿ, ಅದರ ವರದಿ ಆಧರಿಸಿ ಸಂರಕ್ಷಣಾ ಕಾರ್ಯ ಕೈಗೊಳ್ಳಬೇಕಾದ ಅಗತ್ಯವನ್ನು ಮನವರಿಕೆ ಮಾಡಲಾಗಿದೆ. ಹಿಂದೊಮ್ಮೆ ಮಂಗಳೂರಿನ ಪುರಾತನ ಚರ್ಚ್‌ನ ಭಿತ್ತಿಚಿತ್ರಗಳಿಗೂ ಬಣ್ಣ ಬಳಿಯಲು ಹೊರಟಾಗ ಖ್ಯಾತ ಪುರಾತತ್ವ ತಜ್ಞ ಡಾ. ಎ.ಸುಂದರ್ ಅವರು ಅದನ್ನು ತಡೆದಿದ್ದು ಇಲ್ಲಿ ಉಲ್ಲೇಖಾರ್ಹ. ಚಂದ ಕಾಣಲು ಬಣ್ಣ ಬಳಿಯುವುದು ಈ ಪುರಾತತ್ವ ಆಸ್ತಿಯ ಸಂರಕ್ಷಣೆ ಎನಿಸಲಾರದು ಎಂಬುದು ನಮ್ಮ ಆಡಳಿತಕ್ಕೆ ಅರ್ಥವಾಗಬೇಕಿದೆ. ಆಗ ಮಾತ್ರ ಕರ್ನಾಟಕದ ಅತಿ ವಿರಳ ಭಿತ್ತಿಚಿತ್ರಗಳು ತಮ್ಮ ಮೂಲ ಸ್ವರೂಪ ಉಳಿಸಿಕೊಂಡಾವು. ಇಲ್ಲದಿದ್ದಲ್ಲಿ ಈ ಅಪೂರ್ವ ಆಸ್ತಿಯನ್ನು ಶಾಶ್ವತವಾಗಿ ಕಳೆದುಕೊಳ್ಳುತ್ತೇವೆ.

ಪುರಾತತ್ವ ಸಂರಕ್ಷಣೆಯ ಮೂಲತತ್ವಗಳ ಅನುಸಾರ ಐತಿಹಾಸಿಕ ಭಿತ್ತಿಚಿತ್ರಗಳನ್ನು ಮರುಪರಿಷ್ಕರಿಸುವುದು ಮತ್ತು ಅಳಿಸಿಹೋದ ಭಾಗದಲ್ಲಿ ಮತ್ತೆ ಬಣ್ಣ ಬಳಿದು ಮೊದಲಿನ ಸ್ವರೂಪಕ್ಕೆ ತರುವ ಪ್ರಯತ್ನ ಮಾಡುವುದು ಸರ್ವಥಾ ಸರಿಯಲ್ಲ, ಅಪೇಕ್ಷಣೀಯವಲ್ಲ. ಅಮೂಲ್ಯ ವರ್ಣಚಿತ್ರಗಳ ಮೂಲ ಸ್ವರೂಪ ಎಂದಿಗೂ ಬದಲಾಗದಂತೆ ಯಥಾಸ್ಥಿತಿ ಉಳಿಸಿ ಸಂರಕ್ಷಣೆ ಕಾರ್ಯ ಕೈಗೊಳ್ಳಬೇಕು’ ಎನ್ನುತ್ತಾರೆ ಪುರಾತತ್ವ ತಜ್ಞರಾಗಿರುವ ಡಾ. ಎ. ಸುಂದರ.

ಮೈಸೂರಿನ ಭಿತ್ತಿಚಿತ್ರಗಳ ಕುರಿತು: ​ಮೈಸೂರು ಭಿತ್ತಿಚಿತ್ರ ಶೈಲಿಯ ವಸ್ತು, ವಿಷಯ ಆಯಾಯ ಸ್ಥಳಗಳ ವಿಶೇಷತೆ ಮತ್ತು ಕಟ್ಟಡಗಳ ಮಹತ್ವ ಬಿಂಬಿಸುವಂಥದು. ಅರಮನೆಯಲ್ಲಿ ಕಾಣಸಿಗುವ ವರ್ಣಚಿತ್ರಗಳು ಮುಖ್ಯವಾಗಿ ಕುಲದೇವತೆ ಚಾಮುಂಡೇಶ್ವರಿ, ರಾಜರ ದಸರೆ ದರ್ಬಾರು, ಮೆರವಣಿಗೆ, ನವರಾತ್ರಿ ಉತ್ಸವ, ರಾಣಿವಾಸದ ಚಿತ್ರಗಳು, ರಾಜರ ವ್ಯಕ್ತಿಚಿತ್ರಣ ಇವನ್ನೇ ಮುಖ್ಯ ವಸ್ತುವಾಗಿಟ್ಟುಕೊಂಡು ಮಾಡಿದಂಥವು. ದೇವಾಲಯಗಳಲ್ಲಿ ಕಾಣಸಿಗುವ ಭಿತ್ತಿಚಿತ್ರಗಳು ಶಿವಪುರಾಣ, ವಿಷ್ಣುಪುರಾಣ, ದಶಾವತಾರ, ರಾಮಾಯಣ, ಮಹಾಭಾರತ ಮತ್ತು ಭಾಗವತದಿಂದ ಆಯ್ದ ಪ್ರಮುಖ ಪ್ರಸಂಗಗಳನ್ನೊಳಗೊಂಡಿದೆ.

ಕಲೋಪಾಸಕರೂ, ಕಲಾಭಿಮಾನಿಗಳೂ ಆಗಿದ್ದ ಮುಮ್ಮಡಿ ಕೃಷ್ಣರಾಜ ಒಡೆಯರು ಅನೇಕ ದೇವಾಲಯಗಳನ್ನು ಕಟ್ಟಿಸಿದ್ದುದಲ್ಲದೆ ಅಲ್ಲಿ ಭಿತ್ತಿಚಿತ್ರಗಳನ್ನು ಬಿಡಿಸುವುದರ ಮೂಲಕ ಚಿತ್ರಕಾರರ ನೈಪುಣ್ಯ, ಚಿತ್ರದ ರಸಭಾವ, ಆಯಾಮ ಮತ್ತು ವರ್ಣಕ್ರಮದ ಕುರಿತು ವಿಶೇಷತೆ ಮೆರೆಯಲು ಅವಕಾಶ ಒದಗಿಸಿದರು.

ಮೈಸೂರು ಶೈಲಿಯ ಭಿತ್ತಿಚಿತ್ರಕಲೆ ಹಲವಾರು ಹಂತಗಳನ್ನೊಳಗೊಂಡಿದೆ. ಮೊದಲಿಗೆ ಚಿತ್ರ ಬಿಡಿಸುವ ಗೋಡೆ ಸಮತಟ್ಟಾಗಿ, ನವಿರಾಗಿ ಇರಬೇಕು. ಇಟ್ಟಿಗೆ ಪುಡಿ, ಜೇಡಿಮಣ್ಣು, ಬಿಲ್ವ ಹಣ್ಣಿನ ತಿರುಳು, ಗುಗ್ಗುಲ ಅಂಟು, ಜೇನುಮೇಣ, ಬೆಲ್ಲ ಮತ್ತು ಎಣ್ಣೆಯ ಹದವಾದ ಮಿಶ್ರಣವನ್ನು ಸ್ವಲ್ಪ ದಿನಗಳ ಕಾಲ ನೆನೆಯಲು ಬಿಟ್ಟು, ನಂತರ ಅದಕ್ಕೆ ಸಮುದ್ರದ ಕಪ್ಪೆಚಿಪ್ಪಿನಿಂದ ತಯಾರಿಸಿದ ಸುಣ್ಣ ಮತ್ತು ನಿರ್ದಿಷ್ಟ ಮರದ ಹೊಟ್ಟನ್ನು ಸೇರಿಸಿ ತಿಂಗಳ ಕಾಲ ನೆನೆಯಲು ಬಿಡುವರು. ಅಂಥ ಮಿಶ್ರಣವನ್ನು ಗೋಡೆಗೆ ಹಚ್ಚಿ ಅದರ ಮೇಲೆ ಚಿತ್ರ ಬಿಡಿಸುವ ರೂಢಿಯಿದೆ. ಹೀಗೆ ಹದ ಮಾಡಿದ ಗೋಡೆಯ ಮೇಲೆ ಬಿಡಿಸಿದ ಚಿತ್ರಗಳ ಬಣ್ಣ ಮಾಸದೇ ಉಳಿಯುತ್ತದೆ.
ಪ್ರಾಕೃತಿಕ ವಸ್ತುಗಳಾದ ಹಸಿರು ಎಲೆಗಳು ಮತ್ತು ಬಣ್ಣ ಬಣ್ಣದ ಹೂಗಳಿಂದ ತಯಾರಿಸಿದ ರಸ, ಹಣ್ಣಿನ, ಬೇರಿನ ರಸ, ಇದ್ದಲಿನ ಪುಡಿ ಮುಂತಾದವುಗಳಿಂದ ತಯಾರಿಸಿದ ಬಣ್ಣಗಳನ್ನೇ ಉಪಯೋಗಿಸುತ್ತಾರೆ. ಹಾಗಾಗಿ ಮೂಲ ಬಣ್ಣಗಳಾದ ಕೆಂಪು, ನೀಲಿ, ಹಸಿರು, ಕಂದು, ಕಪ್ಪು ಮತ್ತು ಬಿಳಿ ಬಣ್ಣಗಳ ಸೀಮಿತ ಛಾಯೆಗಳನ್ನು ಈ ಭಿತ್ತಿಚಿತ್ರಗಳಲ್ಲಿ ಕಾಣಬಹುದು.

**

ಸಮುದ್ರ ಮಂಥನ

ದೇವಾಸುರರು ಅಮೃತಕ್ಕಾಗಿ ಮಂದರ ಪರ್ವತಕ್ಕೆ ವಾಸುಕಿಯನ್ನು ಕಟ್ಟಿ ಕ್ಷೀರಸಾಗರ ಕಡೆಯುತ್ತಿರುವಾಗ ಸೃಷ್ಟಿಯಾದ ಉಚ್ಛೈಶ್ರವಸ್ಸು ಐರಾವತ, ಕಾಮಧೇನು, ಲಕ್ಷ್ಮೀ ಮತ್ತು ಅಮೃತವನ್ನು ಹಂಚುತ್ತಿರುವ ಮೋಹಿನಿ

**

ಅಪೂರ್ವ ದೇವ ಸಮೂಹ

ಕೈಮುಗಿದು ನಿಂತಿರುವ ಭಂಗಿಯಲ್ಲಿ ತ್ರಿಮೂರ್ತಿಗಳು, ಷಣ್ಮುಖ, ಗಣಪತಿ, ಲಕ್ಷ್ಮೀ, ಸರಸ್ವತಿ, ಸೂರ್ಯ-ಚಂದ್ರರು ಮತ್ತಿತರ ದೇವತಾ ಸಮೂಹ

**

ಮಹಿಷಾಸುರಮರ್ದಿನಿ

ರಾಕ್ಷಸ ಸೈನ್ಯದಿಂದ ಸುತ್ತುವರಿಯಲ್ಪಟ್ಟ ಸಿಂಹವಾಹಿನಿ ಚಾಮುಂಡೇಶ್ವರಿ ತನ್ನ ಹದಿನಾರು ಕೈಗಳಲ್ಲಿ ಆಯುಧಗಳನ್ನು, ಕೊರಳಲ್ಲಿ ರುಂಡಮಾಲೆಯನ್ನು ಧರಿಸಿ ಮಹಿಷಾಸುರನನ್ನು ಏಕಾಂಗಿಯಾಗಿ ವಧಿಸುತ್ತಿರುವ ದೃಶ್ಯ

**

ಗಿರಿಜಾ ಕಲ್ಯಾಣ

ಅಲಂಕೃತ ಮಂಟಪದಲ್ಲಿ ಶಿವ ಪಾರ್ವತಿಯರ ಪಾಣಿಗ್ರಹಣ. ಇಂದ್ರಾದಿದೇವತೆಗಳು, ತುಂಬುರು-ನಾರದರು, ಪತ್ನಿ ಸಮೇತರಾದ ಬ್ರಹ್ಮ-ವಿಷ್ಣು, ಕಲ್ಪವೃಕ್ಷ ಮತ್ತು ಹಿಮವಂತ ಧಾರೆಯೆರೆದು ಕನ್ಯಾದಾನ ಮಾಡುತ್ತಿರುವ ದೃಶ್ಯ

***

ಪುರಾತನ ಭಿತ್ತಿಚಿತ್ರಗಳ ರಕ್ಷಣಾ ಕಾರ್ಯ ನುರಿತ ಸಂರಕ್ಷಣಾ ತಜ್ಞರಿಂದ ಆಗಬೇಕೆ ವಿನಃ ಚಿತ್ರಕಲಾವಿದರಿಂದ ಅಲ್ಲ. ಚಾಮರಾಜನಗರದ ಭಿತ್ತಿಚಿತ್ರಗಳ ವೈಜ್ಞಾನಿಕ ಸಂರಕ್ಷಣೆಗೆ ಎಲ್ಲ ಸಹಾಯ ನೀಡಲು ನಮ್ಮ ಸಂಸ್ಥೆ ಸಿದ್ಧ.
–ಡಾ. ಬಿ. ವಿ. ಖರ್ಬಡೆ
ಡೈರೆಕ್ಟರ್ ಜನರಲ್, ಎನ್.ಆರ್.ಎಲ್.ಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT