ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ– ಬಾಂಗ್ಲಾ ಬಾಂಧವ್ಯ ಬಲಪಡಿಸಿದ ಮಹತ್ವದ ಭೇಟಿ

Last Updated 10 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ
ಬಾಂಗ್ಲಾದೇಶದ ಜತೆಗಿನ ಭಾರತದ ಸ್ನೇಹಕ್ಕೆ ವಿಶಿಷ್ಟ ಹಿನ್ನೆಲೆಯೊಂದಿದೆ. ಅದು ಭಾವನಾತ್ಮಕ ಸಂಬಂಧವೂ ಹೌದು. 1971ರ ಬಾಂಗ್ಲಾ ವಿಮೋಚನೆಯ ಹೋರಾಟದಲ್ಲಿ ಭಾರತದ ಸೇನೆ ವಹಿಸಿದ ಪಾತ್ರ ಉಪಖಂಡದ ಇತಿಹಾಸಕ್ಕೆ ಹೊಸ ತಿರುವು ನೀಡಿತ್ತು.

ಈ  ಹಿನ್ನೆಲೆಯಲ್ಲಿಯೇ ಬಾಂಗ್ಲಾದ ಪ್ರಧಾನಿ ಶೇಖ್‌ ಹಸೀನಾ ಅವರ ಭಾರತ ಭೇಟಿ ಹೆಚ್ಚು ಮಹತ್ವ ಪಡೆದುಕೊಂಡಿದೆ. ನಾಲ್ಕು ದಿನಗಳ ಭೇಟಿಗಾಗಿ ಶೇಖ್‌ ಹಸೀನಾ ಅವರು ದೆಹಲಿಗೆ ಬಂದಾಗ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಶಿಷ್ಟಾಚಾರ ಬದಿಗೊತ್ತಿ, ವಿಮಾನ ನಿಲ್ದಾಣಕ್ಕೇ ಹೋಗಿ ಅವರನ್ನು ಸ್ವಾಗತಿಸಿದ್ದಾರೆ. ಇದು, ಸಕಾರಾತ್ಮಕ ಪರಿಣಾಮ ಬೀರಬಹುದಾದ ಒಂದು ಸ್ನೇಹಪೂರ್ವಕ ನಡೆ.
 
ಮಾತುಕತೆಯ ಬಳಿಕ ಉಭಯ ದೇಶಗಳ ನಡುವೆ ಬಾಂಧವ್ಯ ವೃದ್ಧಿಸಲಿರುವ ಒಟ್ಟು 22 ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಜತೆಗೆ ಬಾಂಗ್ಲಾದೇಶಕ್ಕೆ ಸೇನಾ ಸಾಮಗ್ರಿಗಳ ಖರೀದಿಗಾಗಿ ಭಾರತವು ಸುಮಾರು ₹ 3,200 ಕೋಟಿ  ಸಾಲ ನೀಡಲು ಸಮ್ಮತಿಸಿದೆ. ಆದ್ಯತೆಯ ಕ್ಷೇತ್ರದಲ್ಲಿ ಬಂಡವಾಳ ತೊಡಗಿಸಲು ಕಡಿಮೆ ಬಡ್ಡಿ ದರದಲ್ಲಿ ₹ 28,900 ಕೋಟಿಯಷ್ಟು ಸಾಲ ನೀಡಲು ಸಹ ಭಾರತ  ಒಪ್ಪಿದೆ.
 
ರಕ್ಷಣಾ ಕ್ಷೇತ್ರದಲ್ಲಿ ಪರಸ್ಪರ ಸಹಕಾರದ ಒಪ್ಪಂದವನ್ನೂ ಉಭಯ ದೇಶಗಳು ಮಾಡಿಕೊಂಡಿವೆ. ಮೋದಿ  ನೇತೃತ್ವದ ಎನ್‌ಡಿಎ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಇದೇ ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡಿರುವ ಶೇಖ್‌ ಹಸೀನಾ ಅವರದ್ದು ಯಶಸ್ವಿ ಭಾರತ ಪ್ರವಾಸ ಎನ್ನಲಡ್ಡಿಯಿಲ್ಲ.

ನೆರೆಯ ದೇಶಗಳಾದ ಪಾಕಿಸ್ತಾನ ಮತ್ತು ಚೀನಾದ ಜತೆಗೆ ನಮ್ಮ ಸಂಬಂಧ ಅಷ್ಟಕ್ಕಷ್ಟೆ ಎನ್ನುವಂತಿರುವಾಗ ಬಾಂಗ್ಲಾದ ಜತೆಗೆ ಬಾಂಧವ್ಯ ಮತ್ತಷ್ಟು ಗಟ್ಟಿಗೊಳಿಸಿರುವುದು ರಾಜತಾಂತ್ರಿಕ ನೆಲೆಯಲ್ಲೂ ಮಹತ್ವದ ನಡೆಯೇ.
 
ತಮ್ಮ ತಂದೆ, ಬಾಂಗ್ಲಾದ ಸಂಸ್ಥಾಪಕ ಶೇಖ್‌ ಮುಜಿಬುರ್‌ ರೆಹಮಾನ್‌ ಮತ್ತು ಕುಟುಂಬದ ಸದಸ್ಯರ ಕಗ್ಗೊಲೆಯಾದಾಗ ಶೇಖ್‌ ಹಸೀನಾ ಮತ್ತು ಅವರ ಸೋದರಿ ಜರ್ಮನಿಯಲ್ಲಿದ್ದರು. ಶೇಖ್‌ ಹಸೀನಾ ಅವರ ಬದುಕಿನ ಈ ಮಹತ್ವದ ಕಾಲಘಟ್ಟದಲ್ಲಿ ಅವರಿಗೆ ಮತ್ತು ಅವರ ಕುಟುಂಬಕ್ಕೆ ಆಶ್ರಯ ನೀಡಿದ್ದು ಭಾರತ. 1975ರಿಂದ ಸುಮಾರು ಆರು ವರ್ಷಗಳ ಕಾಲ ಅವರು ಭಾರತದಲ್ಲಿ ಸುರಕ್ಷಿತವಾಗಿ ವಾಸಿಸಿದ್ದರು.
 
ಭಾರತದಲ್ಲಿ ಈ ಅವಧಿಯಲ್ಲಿ ತುರ್ತುಪರಿಸ್ಥಿತಿ ಹೇರಿಕೆಯಾಗಿ ರಾಜಕೀಯ ಅಲ್ಲೋಲ ಕಲ್ಲೋಲಗಳು ಸಂಭವಿಸಿದರೂ, ಶೇಖ್‌ ಹಸೀನಾರ ಸುರಕ್ಷತೆಗೆ ಯಾವುದೇ ಭಂಗ ಬಂದಿರಲಿಲ್ಲ. ಈ ಭಾವನಾತ್ಮಕ ನಂಟೂ  ಹಸೀನಾ ಅವರ ಈ ಸಲದ ಭಾರತ ಭೇಟಿಯ ವೇಳೆ ನೆನಪಿಗೆ ಬಂದಿದ್ದರೆ ಅಚ್ಚರಿಯಿಲ್ಲ.
 
ಸೇನಾ ಸಾಮಗ್ರಿ ಖರೀದಿ ಮತ್ತು ವ್ಯಾವಹಾರಿಕ ಒಪ್ಪಂದಗಳು ಉಭಯ ದೇಶಗಳ ಆಳುವವರ ನಡುವಣ ಬಾಂಧವ್ಯವನ್ನು ವೃದ್ಧಿಸುವುದು ಸಹಜವೇ. ಆದರೆ ನೆರೆ ದೇಶಗಳ ಜನರ ನಡುವೆಯೂ ಕೊಡುಕೊಳ್ಳುವಿಕೆಯ ಬಾಂಧವ್ಯ ಹೆಚ್ಚಬೇಕು.
 
ಈ ಸಲದ ಶೇಖ್‌ ಹಸೀನಾರ ಭಾರತ ಭೇಟಿಯಲ್ಲಿ ಈ ವಿಷಯಕ್ಕೂ ಆದ್ಯತೆ ದೊರೆತಿರುವುದು ವಿಶೇಷ. ಮುಖ್ಯವಾಗಿ ಕೋಲ್ಕತ್ತದಿಂದ ಬಾಂಗ್ಲಾದ ಖುಲ್ನಾ ನಗರಕ್ಕೆ ಬಸ್‌ ಮತ್ತು ಪ್ರಯಾಣಿಕ ರೈಲು ಪ್ರಾಯೋಗಿಕ ಓಡಾಟಕ್ಕೆ ಚಾಲನೆ ನೀಡಲಾಗಿದೆ.
 
ಅಟಲ್‌ ಬಿಹಾರಿ ವಾಜಪೇಯಿಯವರು ಪ್ರಧಾನಿಯಾಗಿದ್ದಾಗ ಪಾಕಿಸ್ತಾನದ ಲಾಹೋರ್‌ಗೆ ಬಸ್‌ ಪ್ರಯಾಣಕ್ಕೆ ಚಾಲನೆ ನೀಡಿದ್ದು, ಈಗಲೂ ಉಭಯ ದೇಶಗಳ ನಡುವಣ ಜನರ ಸೌಹಾರ್ದಕ್ಕೆ ಪೂರಕವಾದ ಅಂಶವಾಗಿ ಕೆಲಸ ಮಾಡುತ್ತಿರುವುದನ್ನು ಇಲ್ಲಿ ಸ್ಮರಿಸಬಹುದು.
 
ಇದೇ ರೀತಿ ಭಾರತ ಮತ್ತು ಬಾಂಗ್ಲಾ ನಡುವಣ ಜನರ ಓಡಾಟ, ಹೊಕ್ಕುಬಳಕೆಗಳು ಹೆಚ್ಚಾದರೆ ದೇಶಗಳ ನಡುವಣ ವಿರಸಗಳ ತೀವ್ರತೆಯೂ ಕಡಿಮೆಯಾಗುತ್ತದೆ. ಮುಖ್ಯವಾಗಿ ತೀಸ್ತಾ ನದಿ ನೀರಿನ ಹಂಚಿಕೆಯ ವಿವಾದ ಭಾರತ ಮತ್ತು ಬಾಂಗ್ಲಾ ನಡುವೆ ಹಾಗೆಯೇ ಉಳಿದುಕೊಂಡಿದೆ. ಈ ಸಲದ ಶೇಖ್‌್‌ ಹಸೀನಾರ ಭೇಟಿಯಲ್ಲಿ ಈ ವಿವಾದ ಬಗೆಹರಿಯಬಹುದು ಎಂಬ ನಿರೀಕ್ಷೆ ಇತ್ತು.

ಆದರೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ತಮ್ಮ ರಾಜ್ಯದ ಹಿತಾಸಕ್ತಿಯನ್ನು ಮುಂದಿಟ್ಟು  ಈ ಒಪ್ಪಂದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆನ್ನಲಾಗಿದೆ. ಈ ನಿಟ್ಟಿನಲ್ಲಿ ಭಾರತ– ಬಾಂಗ್ಲಾದ ನಡುವೆ ಇನ್ನಷ್ಟು ಮಾತುಕತೆ ನಡೆಯುವ ಅಗತ್ಯವಿದೆ. ತೀಸ್ತಾ ನದಿ ನೀರಿಗೆ ಬದಲಾಗಿ ತೋರ್ಶಾ ನದಿ ನೀರಿನ ಬಳಕೆಯ ಬಗ್ಗೆ ಬಾಂಗ್ಲಾಕ್ಕೆ ಮನವರಿಕೆ ಮಾಡಿಕೊಡಬಹುದು.

ಹಾಗೆಯೇ ಬಾಂಗ್ಲಾದ ಅವಶ್ಯಕತೆಗಳಿಗೆ ಪಶ್ಚಿಮ ಬಂಗಾಳದಿಂದ ಹೆಚ್ಚುವರಿ ವಿದ್ಯುತ್‌ ಪೂರೈಕೆಯ ಒಪ್ಪಂದ ಮಾಡಿಕೊಳ್ಳುವ ಮೂಲಕವೂ ಈ ನಿಟ್ಟಿನಲ್ಲಿ ಕೊಡು– ಕೊಳ್ಳುವ ಪರಿಹಾರ ಕ್ರಮಗಳನ್ನು ರೂಪಿಸಬಹುದು.

ಅದೇನಾದರೂ ಇರಲಿ, ರಾಜಕೀಯ ಮತ್ತು ವ್ಯಾವಹಾರಿಕ ಒಪ್ಪಂದಗಳನ್ನೂ ಮೀರಿ ಉಭಯ ದೇಶಗಳ ಜನರ ನಡುವೆ ಸಂಬಂಧವನ್ನು ವೃದ್ಧಿಸುವುದು ಹೆಚ್ಚು ಜಾಣತನದ ಕ್ರಮವಾಗುತ್ತದೆ. ಈ ಮೂಲಕ ಪಾಕಿಸ್ತಾನ ಮತ್ತು ಚೀನಾದ ಮೇಲೂ ಬಾಂಧವ್ಯ ವೃದ್ಧಿ ಪ್ರಯತ್ನಕ್ಕೆ ಒತ್ತಡ ಹೆಚ್ಚಿಸಬಹುದು. ಒಟ್ಟಾರೆ ಉಪಖಂಡದ ನೆಮ್ಮದಿ ಮತ್ತು ಅಭಿವೃದ್ಧಿಗೆ ಈ ಕ್ರಮ ಪೂರಕವಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT