ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಧವ್‌ಗೆ ಗಲ್ಲು ಶಿಕ್ಷೆ: ಪಾಕ್‌ ಕ್ರಮಕ್ಕೆ ಭಾರತದ ಖಂಡನೆ

ಸೇನಾ ನ್ಯಾಯಾಲಯದ ತೀರ್ಪು
Last Updated 10 ಏಪ್ರಿಲ್ 2017, 20:23 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌ / ನವದೆಹಲಿ : ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ, ಪಾಕಿಸ್ತಾನದಲ್ಲಿ ಸೆರೆಯಲ್ಲಿರುವ ಕುಲಭೂಷಣ್‌ ಜಾಧವ್‌ ಅವರಿಗೆ ಅಲ್ಲಿನ ಸೇನಾ ನ್ಯಾಯಾಲಯ ಮರಣದಂಡನೆ ವಿಧಿಸಿದೆ.

ಈ ನಿರ್ಧಾರವನ್ನು ಭಾರತ ಬಲವಾಗಿ ಖಂಡಿಸಿದೆ. ಪಾಕಿಸ್ತಾನವು ಮರಣ ದಂಡನೆ ಜಾರಿಗೊಳಿಸಲು ಮುಂದಾದರೆ ಅದನ್ನು ‘ಪೂರ್ವಯೋಜಿತ ಕೊಲೆ’ ಎಂದೇ ಪರಿಗಣಿಸಲಾಗುವುದು ಎಂದು ಹೇಳಿದೆ.

ಭಾರತದಲ್ಲಿರುವ ಪಾಕಿಸ್ತಾನದ ಹೈಕಮಿಷನರ್‌ ಅಬ್ದುಲ್‌ ಬಸಿತ್‌ ಅವರನ್ನು ಕರೆಸಿಕೊಂಡ ವಿದೇಶಾಂಗ ಕಾರ್ಯದರ್ಶಿ ಎಸ್‌. ಜೈಶಂಕರ್‌ ಅವರು  ಪ್ರತಿಭಟನೆ ದಾಖಲಿಸಿದ್ದಾರೆ.

ಜಾಧವ್‌ ವಿರುದ್ಧದ ಇಡೀ ವಿಚಾರಣೆ ‘ಪ್ರಹಸನ’ದಂತೆ ನಡೆದಿದೆ. ಅವರ ವಿರುದ್ಧ ಯಾವುದೇ ‘ವಿಶ್ವಾಸಾರ್ಹ ಪುರಾವೆ’ಯನ್ನು ಪಾಕಿಸ್ತಾನ ಹೊಂದಿಲ್ಲ  ಎಂದು ಕಠಿಣ ಪದಗಳ ಈ ಪ್ರತಿಭಟನಾ ಪತ್ರದಲ್ಲಿ ಹೇಳಲಾಗಿದೆ.

ಜಾಧವ್‌ ಅವರನ್ನು ಕಳೆದ ವರ್ಷ ಇರಾನ್‌ನಿಂದ ಅಪಹರಿಸಲಾಗಿತ್ತು. ಅವರು ಪಾಕಿಸ್ತಾನಕ್ಕೆ ಹೇಗೆ ತಲುಪಿದರು ಮತ್ತು ಅವರು ಅಲ್ಲಿ ಹೇಗಿದ್ದರು ಎಂಬ ಬಗ್ಗೆ ನಂಬಿಕೆ ಬರುವ ಯಾವುದೇ ವಿವರಣೆಯನ್ನು ಪಾಕಿಸ್ತಾನ ನೀಡಿಲ್ಲ ಎಂದೂ ಭಾರತ ಆಕ್ಷೇಪ ವ್ಯಕ್ತಪಡಿಸಿದೆ.

‘ಭಾರತದ ಗುಪ್ತಚರ ಸಂಸ್ಥೆ ‘ರಾ’ ಪರವಾಗಿ ಬೇಹುಗಾರಿಕಾ ಕೆಲಸಗಳಲ್ಲಿ ತೊಡಗಿದ್ದ ಹಾಗೂ ಪಾಕಿಸ್ತಾನದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿದ್ದಕ್ಕಾಗಿ ಮರಣದಂಡನೆ ವಿಧಿಸಲಾಗಿದೆ. ಅವರ ವಿರುದ್ಧದ ಎಲ್ಲ ಆರೋಪಗಳೂ ಸಾಬೀತಾಗಿವೆ’ ಎಂದು ಪಾಕಿಸ್ತಾನದ ಸೇನೆ ಮುಖ್ಯಸ್ಥ ಜ. ಕಮರ್‌ ಜಾವೇದ್‌ ಬಾಜ್ವಾ ಹೇಳಿದ್ದಾರೆ.

ಈ ಬೆಳವಣಿಗೆಯಿಂದ ಭಾರತ– ಪಾಕಿಸ್ತಾನ ನಡುವಣ ಸಂಬಂಧ ಇನ್ನಷ್ಟು ಬಿಗಡಾಯಿಸುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗಿದೆ.
‘ಪಾಕಿಸ್ತಾನ ಸೈನ್ಯ ಕಾಯ್ದೆ ಅಡಿಯಲ್ಲಿ ಫೀಲ್ಡ್‌ ಜನರಲ್‌ ಕೋರ್ಟ್‌ ಮಾರ್ಷಲ್‌ (ಎಫ್‌ಗಿಸಿಎಂ) ಮೂಲಕ ವಿಚಾರಣೆ ನಡೆಸಿ ಈ ತೀರ್ಪು ನೀಡಲಾಗಿದೆ’ ಎಂದು ಅಲ್ಲಿನ ಸೇನೆಯ ಸಾರ್ವಜನಿಕ ಸಂಪರ್ಕ ಇಲಾಖೆಯ ತಿಳಿಸಿದೆ.

‘ಬಲೂಚಿಸ್ತಾನ ಹಾಗೂ ಕರಾಚಿಯಲ್ಲಿ ವಿಧ್ವಂಸಕ ಕೃತ್ಯಗಳಿಗೆ ಪ್ರೇರಣೆ ನೀಡುವ ಮೂಲಕ ಶಾಂತಿ ಸುವ್ಯವಸ್ಥೆ ಭಂಗಗೊಳಿಸಲು ಭಾರತೀಯ ಗೂಢಚರ ಸಂಸ್ಥೆ ‘ರಾ’ನನ್ನನ್ನು ನಿಯೋಜಿಸಿದೆ ಎಂದು  ನ್ಯಾಯಾಧೀಶರ ಮುಂದೆ ಜಾಧವ್‌ ಒಪ್ಪಿಕೊಂಡಿದ್ದಾರೆ’ ಎಂದು ಪಾಕಿಸ್ತಾನ ನೀಡಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಜಾಧವ್‌ ಅವರನ್ನು 2016ರ ಮಾರ್ಚ್‌ 3ರಂದು ಭದ್ರತಾ ಅಧಿಕಾರಿಗಳು ಬಲೂಚಿಸ್ತಾನದಲ್ಲಿ ಬಂಧಿಸಿದ್ದರು ಎಂದು ಪಾಕಿಸ್ತಾನ ಹೇಳುತ್ತಿದೆ.
ಜಾಧವ್‌ ಅವರು ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಎಂದು ಭಾರತ ದೃಢಪಡಿಸಿತ್ತು. ಆದರೆ ಸರ್ಕಾರದೊಂದಿಗೆ ಅವರಿಗೆ ಯಾವುದೇ ಸಂಪರ್ಕವಿಲ್ಲ ಎಂದು ಕೂಡ ಹೇಳಿತ್ತು.

ನೆರವಿಗೆ ಕೊಟ್ಟಿಲ್ಲ ಅವಕಾಶ: ಜಾಧವ್‌ ಅವರಿಗೆ ಕಾನ್ಸುಲ್‌ ಕಚೇರಿಯಿಂದ ನೆರವು ಪಡೆಯಲು ಅವಕಾಶ ಕೊಡಬೇಕು ಎಂದು ಪಾಕಿಸ್ತಾನದಲ್ಲಿರುವ ಹೈಕಮಿಷನ್‌ ಕಚೇರಿ ಮೂಲಕ ಭಾರತ ಕೋರಿತ್ತು. ಅಂತರರಾಷ್ಟ್ರೀಯ ಕಾನೂನು ಪ್ರಕಾರ ಅದಕ್ಕೆ ಅವಕಾಶ ಇದೆ. ಆದರೆ 13 ಮನವಿ ಸಲ್ಲಿಸಿದರೂ ಪಾಕಿಸ್ತಾನ ಅದಕ್ಕೆ ಅವಕಾಶ ಕೊಟ್ಟಿಲ್ಲ.

ಪಾಕಿಸ್ತಾನದ ಆರೋಪಗಳು
* 2016ರ ಮಾರ್ಚ್‌ 3ರಂದು ಬಲೂಚಿಸ್ತಾನದಲ್ಲಿ ಜಾಧವ್‌ ಅವರನ್ನು ಬಂಧಿಸಲಾಗಿದೆ.
* ಭಾರತದ ನೌಕಾಪಡೆಯ ಉದ್ಯೋಗಿಯಾಗಿರುವ ಜಾಧವ್‌ ಅವರನ್ನು ಗೂಢಚರ ಸಂಸ್ಥೆ ‘ರಾ’ ಪಾಕಿಸ್ತಾನದಲ್ಲಿ ನಿಯೋಜಿಸಿದೆ
* ಬಲೂಚಿಸ್ತಾನದಲ್ಲಿ ವಿಧ್ವಂಸಕ ಕೃತ್ಯ ನಡೆಸುವುದು ಅವರ ಉದ್ದೇಶ
* ಬಂಧನದ ನಂತರ ಅವರ ‘ತಪ್ಪೊಪ್ಪಿಗೆ ವಿಡಿಯೊ’ವನ್ನು ಪಾಕ್‌ ಸೇನೆ ಬಿಡುಗಡೆಗೊಳಿಸಿದೆ

ಭಾರತದ ವಾದ
* ಜಾಧವ್‌ ನೌಕಾಪಡೆಯಲ್ಲಿದ್ದರು. ಆದರೆ ಅವಧಿಗೆ ಮುನ್ನವೇ ನಿವೃತ್ತಿ ಪಡೆದಿದ್ದಾರೆ. ಅವರೊಂದಿಗೆ ಭಾರತದ ಸೇನೆಗೆ ಈಗ ಯಾವ ಸಂಬಂಧವೂ ಇಲ್ಲ
* ಜಾಧವ್‌ ವಿರುದ್ಧ ಯಾವುದೇ ‘ವಿಶ್ವಾಸಾರ್ಹ ಪುರಾವೆ’ ಇಲ್ಲ
*   ಅವರ ಬಂಧನದ ಬಗ್ಗೆ ಪಾಕಿಸ್ತಾನ ನೀಡುವ ವಿವರಣೆಯೇ ನಂಬಿಕೆಗೆ ಅರ್ಹವಲ್ಲ
* ಜಾಧವ್‌ ಅವರ ವಿಚಾರಣೆ ಆರಂಭ ಆಗಿರುವುದರ ಮಾಹಿತಿಯನ್ನೂ ಭಾರತದ ಹೈಕಮಿಷನ್‌ಗೆ ಪಾಕಿಸ್ತಾನ ನೀಡಿಲ್ಲ

ಆಮ್ನೆಸ್ಟಿ ಆಕ್ಷೇಪ
ಜಾಧವ್‌ ಅವರಿಗೆ ಮರಣ ದಂಡನೆ ವಿಧಿಸಿರುವುದನ್ನು ಆಮ್ನೆಸ್ಟಿ ಇಂಟರ್‌ನ್ಯಾನಷಲ್‌ ಸಂಸ್ಥೆ ಖಂಡಿಸಿದೆ. ಇದು ಅಂತರರಾಷ್ಟ್ರೀಯ ಕಾನೂನಿನ ಉಲ್ಲಂಘನೆ ಎಂದು ಹೇಳಿದೆ.

‘ಸೇನಾ ನ್ಯಾಯಾಲಯಗಳು ಆರೋಪಿಯ ಹಕ್ಕುಗಳನ್ನು ನಿರಾಕರಿಸುತ್ತವೆ ಮತ್ತು ಅನುಮಾನಾಸ್ಪದವಾದ ರೀತಿಯಲ್ಲಿ ಕಾರ್ಯನಿರ್ವಹಿಸುತ್ತವೆ. ಸೇನೆಗೆ ಸಂಬಂಧಿಸಿದ ವಿಚಾರಗಳನ್ನು ಬಿಟ್ಟು ಬೇರೆ ಯಾವ ಆರೋಪಿಗಳನ್ನೂ ಇಂತಹ ನ್ಯಾಯಾಲಯಗಳಲ್ಲಿ ವಿಚಾರಣೆ ನಡೆಸಬಾರದು’ ಎಂದು ಆಮ್ನೆಸ್ಟಿ ದಕ್ಷಿಣ ಏಷ್ಯಾದ ನಿರ್ದೇಶಕ ಬೀರಜ್‌ ಪಟ್ನಾಯಕ್‌ ಹೇಳಿದ್ದಾರೆ.
* * *
ಕಾನೂನು ಮತ್ತು ನ್ಯಾಯದ ಮೂಲ ನಿಯಮಗಳನ್ನೇ ಉಲ್ಲಂಘಿಸಿ ನೀಡಿರುವ ತೀರ್ಪು ಜಾರಿ ಮಾಡಿದರೆ ಅದನ್ನು ಪೂರ್ವಯೋಜಿತ ಕೊಲೆ ಎಂದು ಪರಿಗಣಿಸಲಾಗುವುದು
ಭಾರತದ ವಿದೇಶಾಂಗ ಸಚಿವಾಲಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT