ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಗಿದ ಮತದಾನ: ಬೆಟ್ಟಿಂಗ್‌ ಜೋರು

Last Updated 11 ಏಪ್ರಿಲ್ 2017, 9:53 IST
ಅಕ್ಷರ ಗಾತ್ರ

ಮೈಸೂರು: ಮುಂದಿನ ಮಹಾ ಚುನಾವಣೆಗೆ ದಿಕ್ಸೂಚಿ ಎಂದೇ ಪರಿಗಣಿತವಾಗಿರುವ ನಂಜನಗೂಡು ಉಪಚುನಾವಣೆಗೆ ಮತದಾನ ಮುಗಿದ ಮಾರನೇ ದಿನವೇ ಸೋಲು ಗೆಲುವಿನ ಲೆಕ್ಕಾಚಾರ ಶುರುವಾಗಿದೆ. ಗ್ರಾಮಸ್ಥರು, ಕಾರ್ಯಕರ್ತರು ಬೆಟ್ಟಿಂಗ್‌ನಲ್ಲಿ ತೊಡಗಿದ್ದಾರೆ.

ಅಭ್ಯರ್ಥಿಗಳ ಭವಿಷ್ಯ ಹೊರಬೀಳಲು ಎರಡು ದಿನ ಬಾಕಿ ಇದ್ದು, ಯಾರು ಗೆಲ್ಲಬಹುದೆಂದು ಗ್ರಾಮಾಂತರ ಪ್ರದೇಶದಲ್ಲಿ ಚರ್ಚೆ ಜೋರಾಗಿದೆ. ದೊಡ್ಡಕವಲಂದೆ, ಹುಲ್ಲಹಳ್ಳಿ ಸುತ್ತಮುತ್ತ ₹ 10,000ದಿಂದ ₹ 1 ಲಕ್ಷದವರೆಗೆ ಬೆಟ್ಟಿಂಗ್‌ ನಡೆಯುತ್ತಿದೆ. ಏ. 13ರಂದು ಮತ ಎಣಿಕೆ ನಡೆಯಲಿದೆ.

ಹುರಾ ಭಾಗದಲ್ಲಿ ರೈತರು ಒಡವೆ, ಕುರಿಗಳು ಹಾಗೂ ವಾಹನಗಳನ್ನು ಪಣವಾಗಿ ಇಡುತ್ತಿದ್ದಾರೆ. ಗೆಲ್ಲುವ ಅಭ್ಯರ್ಥಿ ಎಷ್ಟು ಮತಗಳ ಮುನ್ನಡೆ ಪಡೆಯಬಹುದು ಎಂಬುದರ ಮೇಲೂ ಬೆಟ್ಟಿಂಗ್‌ ನಡೆಸುತ್ತಿದ್ದಾರೆ.

‘ಬಿಜೆಪಿ ಅಭ್ಯರ್ಥಿ 5 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂದು ಭಾವನೆ ನಮಗಿತ್ತು. ಆದರೆ, ಮತದಾನದ ಹಿಂದಿನ  ಎರಡು ದಿನ ಕಾಂಗ್ರೆಸ್‌ನವರು ಹಣ ಹಂಚಿದ್ದಾರೆ. ಹೀಗಾಗಿ, ಫಲಿತಾಂಶ ಏನಾಗುತ್ತೆ ಎಂಬು ದನ್ನು ಹೇಳಲಾಗದು’ ಎಂದು ಹುಲ್ಲಹಳ್ಳಿ ಬಿಜೆಪಿ ಕಾರ್ಯಕರ್ತರೊಬ್ಬರು ಆತಂಕ ವ್ಯಕ್ತಪಡಿಸಿದರು.

ಬೂತ್‌ಮಟ್ಟದಲ್ಲಿಯೇ ಬೆಟ್ಟಿಂಗ್‌ ಜೋರಾಗಿದೆ. ತಮ್ಮ ಬೂತ್‌ಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ಎಷ್ಟು ಮತಗಳು ಪಡೆಯಲಿವೆ, ಯಾರು ಮುನ್ನಡೆ ಪಡೆಯುತ್ತಾರೆ ಎಂಬ ಬಗ್ಗೆ ಚರ್ಚೆ, ವಾಗ್ವಾದ ನಡೆಯುತ್ತಿದೆ. ಸೋಮವಾರ ಬೆಳಿಗ್ಗೆಯಿಂದಲೇ ಜನ ಅಂಗಡಿ, ಹೋಟೆಲ್‌, ಸಮುದಾಯ ಭವನ, ಗ್ರಾಮ ಪಂಚಾಯಿತಿ ಕಚೇರಿ ಮುಂದೆ ನಿಂತು ಚರ್ಚಿಸುತ್ತಿದ್ದ ದೃಶ್ಯಗಳು ಕಂಡು ಬಂದವು. ಕಪ್ಪಸೋಗೆ, ಹರದನಹಳ್ಳಿ, ಗಟ್ವಾಡಿಪುರ, ಗೋಳೂರು, ವೀರದೇವನಪುರದಂಥ ಗ್ರಾಮಗಳಲ್ಲಿ ಉಭಯ ಪಕ್ಷಗಳ ಕಾರ್ಯಕರ್ತರು ಬೆಟ್ಟಿಂಗ್‌ನಲ್ಲಿ ತೊಡಗಿದ್ದಾರೆ.

‘ಈ ಕ್ಷೇತ್ರ ಕಾಂಗ್ರೆಸ್‌ ಭದ್ರಕೋಟೆ. ಆದರೆ, ಬಿಜೆಪಿಯ ಮುಖಂಡರು ಗ್ರಾಮಗಳಲ್ಲಿ ಹಣ ಹಂಚಿದ್ದಾರೆ. ಹಣ ಕಾಸಿನಲ್ಲಿ ಬಲಿಷ್ಠವಾಗಿರುವ ನಾಯಕ ರನ್ನೇ ಪ್ರಚಾರಕ್ಕೆ ನಿಯೋಜಿಸಿದ್ದರು. ಹೀಗಾಗಿ, ಯಾರು ಗೆದ್ದರೂ ಮತಗಳ ಅಂತರ 1,000 ದಾಟಲ್ಲ’ ಎಂದು ವೀರದೇವನಪುರದ ಕಾಂಗ್ರೆಸ್‌ ಕಾರ್ಯಕರ್ತರೊಬ್ಬರು ಹೇಳಿದರು.

ಉಪಚುನಾವಣೆಯನ್ನು ಪ್ರತಿಷ್ಠೆ ಯಾಗಿ ಸ್ವೀಕರಿಸಿದ್ದ ಕಾಂಗ್ರೆಸ್‌ ಹಾಗೂ ಬಿಜೆಪಿ ಭರ್ಜರಿಯಾಗಿಯೇ ಪ್ರಚಾರ ನಡೆಸಿದ್ದವು. ಪ್ರಮುಖವಾಗಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಹಾಗೂ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರು ಕ್ಷೇತ್ರವಿಡೀ ತಿರುಗಾಡಿ ಮತಯಾಚಿಸಿದ್ದಾರೆ.ಆಯಾ ಜಾತಿಗಳ ನಾಯಕರನ್ನು ಅಖಾಡಕ್ಕಿಳಿಸಿ ಸಮುದಾಯದ ಮತ ದಾರರನ್ನು ಓಲೈಸುವ ಪ್ರಯತ್ನ ನಡೆ ದಿತ್ತು. ಜೊತೆಗೆ ಹಣ ಹಂಚಿರುವ ಬಗ್ಗೆಯೂ ಆರೋಪಗಳಿವೆ.

ಕ್ಷೇತ್ರದಲ್ಲಿ ಭರ್ಜರಿ ಮತದಾನ ನಡೆದಿದ್ದು, ಮತದಾರರು ಹಿಂದೆಂದಿ ಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಹಕ್ಕು ಚಲಾಯಿಸಿದ್ದಾರೆ.ಉಪಚುನಾವಣೆಯು ಬಿಜೆಪಿ ಹಾಗೂ ಕಾಂಗ್ರೆಸ್‌ ಪಾಲಿಗೆ ಸತ್ವಪರೀಕ್ಷೆ ಯಾಗಿದ್ದು, ತನ್ನ ತೆಕ್ಕೆಯಲ್ಲಿರುವ ಕ್ಷೇತ್ರ ವನ್ನು ಉಳಿಸಿಕೊಳ್ಳುವ ಅನಿವಾರ್ಯ ಕಾಂಗ್ರೆಸ್‌ಗೆ ಎದುರಾಗಿದೆ. ಚೊಚ್ಚಲ ಗೆಲುವಿನ ತವಕದಲ್ಲಿ ಬಿಜೆಪಿ ಇದೆ. ಕಣ ದಲ್ಲಿ 11 ಅಭ್ಯರ್ಥಿಗಳು ಇದ್ದರೂ ಕಾಂಗ್ರೆಸ್‌ ಅಭ್ಯರ್ಥಿ ಕಳಲೆ ಕೇಶವ ಮೂರ್ತಿ ಹಾಗೂ ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸಪ್ರಸಾದ್‌ ನಡುವೆಯೇ ನೇರ ಹಣಾಹಣಿ ಏರ್ಪಟ್ಟಿತ್ತು.

ಏ. 13ರಂದು ಬೆಳಿಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗಲಿದ್ದು, 11 ಗಂಟೆ ವೇಳೆಗೆ ಅಭ್ಯರ್ಥಿಗಳ ಭವಿಷ್ಯ ಗೊತ್ತಾಗಲಿದೆ. ವಿದ್ಯುನ್ಮಾನ ಮತಯಂತ್ರಗಳನ್ನು ನಂಜನಗೂಡು ಪಟ್ಟಣದ ಜೆಎಸ್‌ಎಸ್‌ ಪ್ರಥಮದರ್ಜೆ ಕಾಲೇಜಿನಲ್ಲಿ ಸ್ಥಾಪಿಸಿರುವ ಭದ್ರತಾ ಕೊಠಡಿಯಲ್ಲಿ ಇಟ್ಟಿದ್ದು, ಬಿಗಿ ಭದ್ರತೆ ಒದಗಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT