ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರೇಗಾ: ನೌಕರರ ಪ್ರತಿಭಟನೆ

Last Updated 11 ಏಪ್ರಿಲ್ 2017, 10:35 IST
ಅಕ್ಷರ ಗಾತ್ರ

ಕೋಲಾರ: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ನರೇಗಾ) ಕಾಮಗಾರಿಗಳ ಅನುಷ್ಠಾನ ಸಂಬಂಧ ಅಧಿಕಾರಿಗಳು ಹಾಗೂ ಸಿಬ್ಬಂದಿ ಎದುರಿಸುತ್ತಿರುವ ತೊಂದರೆಗಳನ್ನು ನಿವಾರಿಸಬೇಕು ಎಂದು ಒತ್ತಾಯಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ ಅಧಿಕಾರಿಗಳು ಮತ್ತು ನೌಕರರ ಸಂಘದ ಸದಸ್ಯರು ಇಲ್ಲಿನ ಜಿಲ್ಲಾ ಪಂಚಾಯಿತಿ ಎದುರು ಸೋಮವಾರ ಪ್ರತಿಭಟನೆ ಮಾಡಿದರು.

‘ಜನಪ್ರತಿನಿಧಿಗಳ ಹಸ್ತಕ್ಷೇಪ ಹೆಚ್ಚಿದೆ. ಸ್ಥಳೀಯ ಜನಪ್ರತಿನಿಧಿಗಳು ಸರ್ಕಾರದ ನಿಯಮದಂತೆ ಕಾಮಗಾರಿಗಳನ್ನು ನಿರ್ವಹಿಸಲು ಅವಕಾಶ ಕೊಡುವುದಿಲ್ಲ. ಬದಲಿಗೆ ಒತ್ತಡ ಹೇರಿ ನಿಯಮಗಳನ್ನು ಉಲ್ಲಂಘಿಸಿ ಕಾಮಗಾರಿ ನಡೆಸುವಂತೆ ಬೆದರಿಕೆ ಹಾಕುತ್ತಾರೆ’ ಎಂದು ಪ್ರತಿಭಟನಾಕಾರರು ದೂರಿದರು.

‘ಜನಪ್ರತಿನಿಧಿಗಳ ಒತ್ತಡಕ್ಕೆ ಮಣಿದು ಕಾಮಗಾರಿಗಳನ್ನು ಅನುಷ್ಠಾನಗೊಳಿಸಿದ್ದರಿಂದ ಸಾಕಷ್ಟು ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾನೂನಾತ್ಮಕ ತೊಡಕು ಎದುರಿಸುವಂತಾಗಿದೆ. ಸರ್ಕಾರ 2007ರಿಂದ 2012ರವರೆಗೆ ನಡೆದಿರುವ ನರೇಗಾ ಕಾಮಗಾರಿಗಳನ್ನು ಲೋಕಾಯುಕ್ತ ತನಿಖೆಗೆ ವಹಿಸಿದೆ’ ಎಂದುಸಂಘದ ಅಧ್ಯಕ್ಷ ಎನ್.ಸಂಪರಾಜ್ ಹೇಳಿದರು.

‘ಕಾಮಗಾರಿಗಳಲ್ಲಿನ ಅಕ್ರಮದ ನೆಪ ಮಾಡಿಕೊಂಡು ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಇಲಾಖಾ ತನಿಖೆ ನಡೆಸಲಾಗುತ್ತಿದೆ. ಸಾಮಾಜಿಕ ಲೆಕ್ಕ ಪರಿಶೋಧನೆ ವರದಿ ಆಧರಿಸಿ ನೌಕರರ ಸೇವಾ ಸೌಲಭ್ಯಗಳು ಮತ್ತು ಬಡ್ತಿ ತಡೆ ಹಿಡಿಯಲಾಗಿದೆ. ಜತೆಗೆ ಕೆಲ ನೌಕರರನ್ನು ಅಮಾನತುಗೊಳಿಸಿ ಲೋಕಾಯುಕ್ತ ತನಿಖೆ ನಡೆಸಲಾಗುತ್ತಿದೆ’ ಎಂದರು.

ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾಯ್ದೆ ಹಾಗೂ ಮಾರ್ಗಸೂಚಿ ಅನ್ವಯ ಯೋಜನೆ ಅನುಷ್ಠಾನಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಆದರೆ, ಸ್ಥಳೀಯ ಜನಪ್ರತಿನಿಧಿಗಳು ಇದಕ್ಕೆ ಅವಕಾಶ ಕೊಡುತ್ತಿಲ್ಲ ಎಂದು ಪ್ರತಿಭಟನಾಕಾರರು ಅಳಲು ತೋಡಿಕೊಂಡರು.

ಗ್ರಾ.ಪಂ ನೌಕರರ ಕನಿಷ್ಠ ವೇತನಕ್ಕೆ ಸರ್ಕಾರದಿಂದಲೇ ಅನುದಾನ ನೀಡಬೇಕು.  ನರೇಗಾ ಯೋಜನೆ ಬೇಡಿಕೆ ಆಧಾರಿತವಾಗಿರುವುದರಿಂದ ಮಾನವದಿನ ಸೃಜಿಸಲು ಗುರಿ ನಿಗದಿಪಡಿಸಬಾರದು. ನಿಯಮಾನುಸಾರವಾಗಿ ಮಾತ್ರ ಕಾಮಗಾರಿಗಳನ್ನು ನಿರ್ವಹಿಸಲು ಅವಕಾಶ ಕೊಡಬೇಕು. ಕೂಲಿ ಕಾರ್ಮಿಕರಿಗೆ ಸ್ಥಳದಲ್ಲೇ ಬಯೋಮೆಟ್ರಿಕ್ ಹಾಜರಾತಿ ಕಡ್ಡಾಯಗೊಳಿಸಬೇಕು. ವಾರ್ಷಿಕ ಅವಧಿಯಲ್ಲಿ ಪದೇ ಪದೇ ಹೊಸ ಕಾಮಗಾರಿ ಸೇರ್ಪಡೆ ಮಾಡಬಾರದು ಎಂದು ಒತ್ತಾಯಿಸಿದರು.ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ಚಂಗಲರಾಯಗೌಡ, ಖಜಾಂಚಿ ಲಕ್ಷ್ಮಿ, ಸದಸ್ಯರಾದ ಪಿ.ನಾರಾಯಣಪ್ಪ, ಶಿವಾ ನಂದ್, ರಾಮಕೃಷ್ಣ, ಕಮಲಾ, ವೇಣು, ಕಾಶಿ, ನಾಗರಾಜ್  ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT